ಬೆಂಗಳೂರು: ತಮಿಳುನಾಡಿನ ಮಾಜಿ ಸಿಎಂ ಕರುಣಾನಿಧಿ ವಿಧಿವಶರಾದ ಹಿನ್ನೆಲೆ ತಮಿಳುನಾಡು ಸಂಪೂರ್ಣ ಬಂದ್ ಆಗಿದ್ದು ಅಭಿಮಾನಿಗಳು ನೆಚ್ಚಿನ ನಾಯಕನಿಗೆ ಮೂರು ಟನ್ ಹೂವನ್ನು ಅರ್ಪಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು.
ಆನೇಕಲ್ ಗಡಿಭಾಗವಾದ ಹೊಸೂರಿನಲ್ಲಿ ಇರುವಂತಹ ಹೂವಿನ ಮಾರುಕಟ್ಟೆಯ ವ್ಯಾಪಾರಿಗಳು ಮೂರು ಟನ್ ವಿಧವಿಧವಾದ ಹೂವನ್ನು ಕರುಣಾನಿಧಿ ಅವರ ಭಾವಚಿತ್ರಕ್ಕೆ ಅರ್ಪಿಸುವ ಮೂಲಕ ತಮ್ಮ ನೆಚ್ಚಿನ ನಾಯಕನಿಗೆ ಶ್ರದ್ಧಾಂಜಲಿ ಸಲ್ಲಿಸಿರುವುದಾಗಿ ವ್ಯಾಪಾರಿ ಚಂದ್ರಶೇಖರ್ ಹೇಳಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಹೂವಿನ ಮಾರುಕಟ್ಟೆಯನ್ನು ಈವರೆಗೂ ಎಂದೂ ಬಂದ್ ಮಾಡಿಲ್ಲ. ಆದ್ರೆ ಇಂದು ಮಾರುಕಟ್ಟೆಯನ್ನು ಬಂದ್ ಮಾಡಲಾಗಿದೆ. ಹೀಗಾಗಿ ಸುಮಾರು 3ರಿಂದ 4 ಟನ್ ಹೂವುಗಳಿಂದ ಕರುಣಾನಿಧಿ ಅವರ ಫೋಟೋಗೆ ಅಲಂಕಾರ ಮಾಡಿ ಶ್ರದ್ಧಾಂಜಲಿ ಕೋರುತ್ತಾ ಇದ್ದೇವೆ. ಯಾಕಂದ್ರೆ 80 ವರ್ಷ ಜನಕ್ಕೋಸ್ಕರ ಹೋರಾಡಿದ ವ್ಯಕ್ತಿ ಅವರಾಗಿದ್ದಾರೆ. ಹಾಗೆಯೇ 50 ವರ್ಷ ಬರೀ ರಾಜಕೀಯದಲ್ಲೇ ಕಾಲ ಕಳೆದ ವ್ಯಕ್ತಿಯೂ ಆಗಿದ್ದಾರೆ. 25 ವರ್ಷ ಮುಖ್ಯಮಂತ್ರಿಯಾಗಿದ್ದು, ಜನಗಳಿಗೆ ಬೇಕಾದಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಅವರ ಈ ಕಾರ್ಯದಿಂದ ಇಂದು ಎಲ್ಲೆಲ್ಲಿ ತಮಿಳಿಗರು ಇದ್ದಾರೆಯೋ ಅವರೆಲ್ಲರೂ ಕರುಣಾನಿಧಿಗೆ ಸಂತಾಪ ಸೂಚಿಸುತ್ತಿದ್ದಾರೆ ಅಂದ್ರು.
ಕರ್ನಾಟಕ ತಮಿಳುನಾಡು ಗಡಿಭಾಗವಾದ ಅತ್ತಿಬೆಲೆಯಲ್ಲಿ ನೆನ್ನೆಯಿಂದಲೇ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಿದ್ದು ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಹೊಸೂರಿನಾದ್ಯಂತ ಸರ್ಕಾರಿ ಹಾಗು ಖಾಸಗಿ ಬಸ್ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ. ಕರ್ನಾಟಕದ ಯಾವುದೇ ವಾಹನಗಳನ್ನು ತಮಿಳುನಾಡಿಗೆ ಹೋಗದಂತೆ ನಿರ್ಬಂಧ ಹೇರಿದ್ದು ಗಡಿಭಾಗದಿಂದಲ್ಲೇ ಎಲ್ಲಾ ಕರ್ನಾಟಕ ವಾಹನಗಳನ್ನು ತಡೆಯೊಡ್ಡಿ ಹಿಂದಿರುಗಿಸಿ ಕಳುಹಿಸುತ್ತಿದ್ದಾರೆ. ಇನ್ನು ಕರುಣಾನಿಧಿ ಅವರ ಸಾವಿನ ವಿಷಯ ತಿಳಿಯುತ್ತಿದ್ದಂತೆ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತರಾಗಿ ಮುಚ್ಚಿ ಅಗಲಿದ ನೆಚ್ಚಿನ ನಾಯಕನಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ತಮಿಳುನಾಡಿನ ಮಾಜಿ ಸಿಎಂ ಮತ್ತು ಡಿಎಂಕೆ ಮುಖ್ಯಸ್ಥ ಎಂ. ಕಲೈನರ್ ಕರುಣಾನಿಧಿ(94) ಅವರು ಉಸಿರಾಟದ ತೊಂದರೆ, ಜ್ವರ ಹಾಗೂ ಮೂತ್ರನಾಳದ ಸೋಂಕಿನಿಂದ ಬಳಲುತ್ತಿದ್ದ ಅವರನ್ನು ಜುಲೈ 22ರ ರಾತ್ರಿ ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜುಲೈ 22ರ ಬಳಿಕ ಕರುಣಾನಿಧಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು. ಆದರೆ ಆರೋಗ್ಯದಲ್ಲಿ ಮತ್ತೇ ಏರಿಳಿತ ಕಂಡು ಬಂದ ಹಿನ್ನೆಲೆಯಲ್ಲಿ ಕರುಣಾನಿಧಿ ಅವರನ್ನು ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಸಂಜೆ ವಿಧಿವಶರಾದ್ರು.
ಕರುಣಾನಿಧಿ ಅವರು 1924 ಜೂನ್ 3ರಂದು ಮದ್ರಾಸ್ ನ ನಾಗಪಟ್ಟಿನಂ ಜಿಲ್ಲೆಯ ಥಿರುಕ್ಕುವಲೈ ನಲ್ಲಿ ಜನಿಸಿದ್ದರು. ತಮಿಳುನಾಡಿನ ಮೂರನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಇವರು ತಮಿಳುನಾಡಿನ ರಾಜಕೀಯ ಪಕ್ಷವಾದ ದ್ರಾವಿಡ ಮುನ್ನೇತ್ರ ಕಳಗಂ ನ ಅಧ್ಯಕ್ಷರಾಗಿದ್ದರು. 1969 ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಮತ್ತೆ 2006 ಮೇ 13 ರಂದು ಐದನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದರು.