ಶಿವಮೊಗ್ಗ: ಅಕ್ರಮ ಹಣ ವರ್ಗಾವಣೆಯ ಆರೋಪದ ಮೇಲೆ ತಿಹಾರ್ ಜೈಲು ಸೇರಿದ್ದ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಿ ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದು, ಶಿವಮೊಗ್ಗದಲ್ಲಿ ಗಣಪತಿಗೆ ವಿಶೇಷ ಪೂಜೆ ಹಾಗೂ 108 ತೆಂಗಿನಕಾಯಿ ಒಡೆದು ಅಭಿಮಾನಿಗಳು ಹರಕೆ ತೀರಿಸಿದ್ದಾರೆ.
ಒಂದು ತಿಂಗಳಿಗೂ ಅಧಿಕ ಕಾಲ ಜಾರಿ ನಿರ್ದೇಶನಾಲಯ (ಇಡಿ) ಬಂಧನದ ಬಳಿಕ ತಿಹಾರ್ ಜೈಲುವಾಸದಲ್ಲಿದ್ದ ಡಿಕೆ ಜೈಲಿನಿಂದ ಹೊರ ಬಂದಿದ್ದು, ಶಿವಮೊಗ್ಗದ ರಾಮಣ್ಣ ಶ್ರೇಷ್ಠಿ ಪಾರ್ಕ್ ಗಣಪತಿ ದೇವಸ್ಥಾನದಲ್ಲಿ ಜಿಲ್ಲಾಪಂಚಾಯತ್ ಉಪಾಧ್ಯಕ್ಷೆ ವೇದಾ ವಿಜಯ್ ಕುಮಾರ್ ನೇತೃತ್ವದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ವಿಶೇಷ ಪೂಜೆಯಲ್ಲಿ ಹಾಪ್ ಕಾಮ್ಸ್ ಅಧ್ಯಕ್ಷ ವಿಜಯಕುಮಾರ್, ವಿಧಾನ ಪರಿಷತ್ ಸದಸ್ಯ ಆರ್ ಪ್ರಸನ್ನ ಕುಮಾರ್, ಜಿಲ್ಲಾಧ್ಯಕ್ಷ ಸುಂದರೇಶ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ಇದನ್ನೂ ಓದಿ:ಡಿಕೆಶಿ ಸ್ಟೈಲಿಶ್ ಗಡ್ಡಕ್ಕೆ ಅಭಿಮಾನಿಗಳು ಫಿದಾ
ಡಿ.ಕೆ.ಶಿ ಅವರಿಗೆ ಆರೋಗ್ಯ, ಆಯುಷ್ಯ ಪ್ರಾಪ್ತಿಗೆ ಅಭಿಮಾನಿಗಳು ಪ್ರಾರ್ಥಿಸಿ, ವಿಶೇಷ ಪೂಜೆ ನೆರವೇರಿಸಿದರು. ಈ ವೇಳೆ ತಮ್ಮ ನೆಚ್ಚಿನ ನಾಯಕನಿಗೆ ಅಭಿಮಾನಿಗಳು ಜೈಕಾರ ಹಾಕಿ ಸಂಭ್ರಮಿಸಿದರು.
ಇತ್ತ ನಾಳೆ ಬೆಂಗಳೂರಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಡಿಕೆಶಿಗೆ ಕಾಂಗ್ರೆಸ್‍ನಿಂದ ಅದ್ಧೂರಿ ಸ್ವಾಗತ ಕೋರಲಾಗುತ್ತದೆ. 2 ತಿಂಗಳ ಬಳಿಕ ನಾಳೆ ಮಧ್ಯಾಹ್ನ ಕೆಂಪೇಗೌಡ ಏರ್‌ಪೋರ್ಟ್ ಗೆ ಆಗಮಿಸಲಿದ್ದಾರೆ. ದೇವನಹಳ್ಳಿಯಿಂದ ಕಾಂಗ್ರೆಸ್ ಯುವ ಕಾರ್ಯಕರ್ತರ ರ‌್ಯಾಲಿ ನಡೆಸಿ ನಂತರ ಡಿಕೆಶಿ ಕೆಪಿಸಿಸಿ ಎದುರು ಕಾರ್ಯಕರ್ತರನ್ನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈ ವೇಳೆ ಕಾಂಗ್ರೆಸ್‍ನ ಹಿರಿಯ ನಾಯಕರೆಲ್ಲ ಈ ವೇಳೆ ಭಾಗಿಯಾಗಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳಿಂದ ತಿಳಿದುಬಂದಿದೆ.