ರಾಮನಗರ: ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ತಮ್ಮ ಪ್ರತಿ ಹುಟ್ಟುಹಬ್ಬದ ದಿನದಂದು ರಾಮನಗರ ಜಿಲ್ಲೆಗೆ ಆಗಮಿಸಿ ಆಚರಿಸಿಕೊಳ್ಳುತ್ತಿದ್ದರು. ಆದರೆ ಇದೇ ಮೊದಲ ಬಾರಿಗೆ ಜಿಲ್ಲೆಯ ಜನರಿಂದ ಅಂತರ ಕಾಯ್ದುಕೊಂಡು ಹುಟ್ಟುಹಬ್ಬದ ದಿನವೂ ಜಿಲ್ಲೆಗೆ ಆಗಮಿಸದಿರುವುದು ಅಭಿಮಾನಿಗಳು, ಕಾರ್ಯಕರ್ತರಲ್ಲಿ ನಿರಾಸೆಯನ್ನುಂಟು ಮಾಡಿದೆ.
ಸಾಮಾನ್ಯವಾಗಿ ತಮ್ಮ ಹುಟ್ಟುಹಬ್ಬದಂದು ರಾಮನಗರಕ್ಕೆ ಆಗಮಿಸುತ್ತಿದ್ದ ಕುಮಾರಸ್ವಾಮಿ ಅವರು ಅಭಿಮಾನಿಗಳನ್ನು ಮಾತನಾಡಿಸಿ, ನಾಡದೇವತೆ ಚಾಮುಂಡೇಶ್ವರಿಯ ಆಶೀರ್ವಾದ ಪಡೆಯುತ್ತಿದ್ದರು. ಅಲ್ಲದೇ ಲೂರ್ದ್ ಚರ್ಚ್, ಪಿರಾನ್ ಷಾ ವಲಿ ದರ್ಗಾ, ಪಂಚಮುಖಿ ಗಣೇಶ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ, ಪೂಜೆ ಸಲ್ಲಿಸುತ್ತಿದ್ದರು. ಆದರೆ ಈ ಬಾರಿ ಎಲ್ಲವನ್ನೂ ಕೈ ಬಿಟ್ಟು ಗೋವಾ ಸೇರಿಕೊಂಡಿದ್ದಾರೆ.
Advertisement
Advertisement
ತಮ್ಮ ನೆಚ್ಚಿನ ನಾಯಕನ ಹುಟ್ಟುಹಬ್ಬದಂದು ನಗರದ ಹಳೆ ಬಸ್ ನಿಲ್ದಾಣದಲ್ಲಿ ಆರ್ಕೆಸ್ಟ್ರಾ ನಡೆಸಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಜೆಡಿಎಸ್ ಮುಖಂಡರು ಆಯೋಜಿಸುತ್ತಿದ್ದರು. ಅಲ್ಲದೆ ಕಾರ್ಯಕ್ರಮಕ್ಕೆ ಬರುವ ಜನರಿಗೆ ಸಿಹಿ ತಿನಿಸು ಹಾಗೂ ಊಟದ ವ್ಯವಸ್ಥೆಯನ್ನು ಸಹ ಮಾಡುತ್ತಿದ್ದರು. ಆದರೆ ಕುಮಾರಣ್ಣನೇ ಬರದಿದ್ದ ಮೇಲೆ ಅದೆಲ್ಲಾ ಮಾಡುವುದು ಏಕೆ ಎಂದು ಮುಖಂಡರು ಕೂಡ ಸುಮ್ಮನಾಗಿದ್ದಾರೆ.
Advertisement
ಪ್ರತಿ ವರ್ಷ ತಮ್ಮ ಹುಟ್ಟುಹಬ್ಬದಂದು ರಾತ್ರಿ ಎಷ್ಟು ಗಂಟೆಯಾದರೂ ಸರಿಯೇ ಚಾಮುಂಡೇಶ್ವರಿ ದೇವಿ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸುತ್ತಿದ್ದರು. ಆದರೆ ಈ ಬಾರಿ ಗೋವದಲ್ಲಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವುದು ಅವರ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.
Advertisement
ಅಧಿಕಾರ ಕಳೆದುಕೊಂಡ ಬಳಿಕ ಕ್ಷೇತ್ರಕ್ಕೆ ಬರುವುದೇ ಅಪರೂಪವಾಗಿದ್ದ ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಮೇಲೆ ರಾಮನಗರಕ್ಕಿಂತ ಚನ್ನಪಟ್ಟಣವನ್ನೇ ಹೆಚ್ಚು ಆಶಯಿಸಿದ್ದರು. ಆದರೆ ಉಪಚುನಾವಣೆ ಫಲಿತಾಂಶದ ಬಳಿಕ ಎಲ್ಲವನ್ನು ಬಿಟ್ಟು ಗೋವಾ ಸೇರಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಕುಮಾರಸ್ವಾಮಿ ಗೈರಾದರೂ, ಅವರ ಕುಟುಂಬದ ಸದಸ್ಯರಲ್ಲಿ ಒಬ್ಬರಾದರೂ, ಚಾಮುಂಡೇಶ್ವರಿ ಆರ್ಶಿವಾದಕ್ಕೆ ಬರುತ್ತಿದ್ದರು. ಆದರೆ ಈ ಬಾರಿ ಯಾರೂ ಸಹ ರಾಮನಗರದತ್ತ ಸುಳಿಯದಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.