ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಗುರುವಾರ ತಮ್ಮ 56ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಇದೇ ವೇಳೆ ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಲು ಕುಂದಾ ನಗರಿ ಬೆಳಗಾವಿಯಿಂದ ಅಭಿಮಾನಿಯೊಬ್ಬರು ಸೈಕಲ್‍ನಲ್ಲಿ ಬಂದಿದ್ದರು.
ಫಕೀರಪ್ಪ ಶಿವಣ್ಣನನ್ನು ಭೇಟಿ ಮಾಡಲು ಬೆಳಗಾವಿಯಿಂದ 500 ಕಿ.ಮೀ ಸೈಕಲ್ ಯಾತ್ರೆ ಮಾಡಿ ಬೆಂಗಳೂರಿಗೆ ಬಂದಿದ್ದರು. ಭಾನುವಾರ ಬೆಳಗಾವಿ ಚನ್ನಮ್ಮ ವೃತ್ತದಿಂದ ಫಕೀರಪ್ಪ ಯಾತ್ರೆ ಆರಂಭಿಸಿ ಗುರುವಾರ ರಾತ್ರಿ ಬೆಂಗಳೂರಿಗೆ ಆಗಮಿಸಿದ್ದರು.
Advertisement
ತಂದೆ-ತಾಯಿ ಪ್ರೀತಿ ಇಲ್ಲದೆ ಬೆಳೆದಿದ್ದ ಫಕೀರಪ್ಪ ಅವರಿಗೆ ಶಿವಣ್ಣ ಅವರ ‘ಆನಂದ್’ ಸಿನಿಮಾ ಇವರಿಗೆ ತುಂಬ ಹತ್ತಿರವಾಗಿತ್ತು. ಆ ಚಿತ್ರ ನೋಡಿದ ಮೇಲೆ ಶಿವಣ್ಣ ಅವರ ದೊಡ್ಡ ಅಭಿಮಾನಿಯಾಗಿಬಿಟ್ಟಿದ್ದಾರೆ.
Advertisement
ಪಿಯುಸಿ ಓದಿ, ಊರಿನಲ್ಲಿ ಗಾರೆ ಕೆಲಸ ಮಾಡಿಕೊಂಡಿರುವ ಫಕೀರಪ್ಪ ಭಾನುವಾರ ಬೆಳಗಾವಿ ಚನ್ನಮ್ಮ ವೃತ್ತದಿಂದ ಯಾತ್ರೆ ಆರಂಭಿಸಿ ಹುಬ್ಬಳ್ಳಿ, ಹರಿಹರ, ಚಿತ್ರದುರ್ಗ, ಹಿರಿಯೂರು, ತುಮಕೂರು ಮಾರ್ಗದಲ್ಲಿ ಬೆಂಗಳೂರಿಗೆ ಬಂದಿದ್ದಾರೆ.
Advertisement
Advertisement
ಸತತ ಮೂರನೇ ಬಾರಿ ಫಕೀರಪ್ಪ ಶಿವಣ್ಣ ಹುಟ್ಟುಹಬ್ಬದಲ್ಲಿ ಭಾಗಿಯಾಗಿದ್ದು ವಿಶೇಷ. ಫಕೀರಪ್ಪ ಮೊದಲ ಬಾರಿಗೆ ಶಿವಣ್ಣ ಅವರನ್ನು ಭೇಟಿ ಮಾಡಲು ಕಾಲು ನಡಿಗೆಯಲ್ಲಿ ಬಂದಿದ್ದರು. ನಂತರ ಸೈಕಲ್‍ನಲ್ಲಿ ಬರಲು ಆರಂಭಿಸಿದ್ದರು. ಶಿವಣ್ಣ ಮೇಲೆ ಎಷ್ಟು ಅಭಿಮಾನ ಎಂದರೆ ಪ್ರತಿ ವರ್ಷ ಬರುವಾರ ಹುಬ್ಬಳ್ಳಿ ಹಾಗೂ ತುಮಕೂರು ಸಿದ್ಧಗಂಗಾ ಮಠದಲ್ಲಿ ಶಿವಣ್ಣ ಅವರ ಹೆಸರಿನಲ್ಲಿ ಪೂಜೆ ಮಾಡುತ್ತಾರೆ.
ಯಾತ್ರೆಗೆ ಬಳಸಿದ ಸೈಕಲ್ ಮೇಲೆ ಶಿವರಾಜ್ ಕುಮಾರ್ ಅಭಿನಯದ ಎಲ್ಲಾ ಚಿತ್ರಗಳ ಹೆಸರನ್ನು ಬರೆಸಿದ್ದಾರೆ. ಆನಂದ್ ಚಿತ್ರದಿಂದ ದಿ-ವಿಲನ್ ಚಿತ್ರದ ವರೆಗೂ ಶಿವಣ್ಣ ನಟಿಸಿದ ಎಲ್ಲ ಹೆಸರು ಸೈಕಲ್ ಮೇಲೆ ಬರೆಸಿಕೊಂಡಿದ್ದಾರೆ. ಬೆಂಗಳೂರಿಗೆ ತಲುಪುತ್ತಿದ್ದಂತೆ ಫಕೀರಪ್ಪ ತನಗೆ ಪರಿಚಯ ಇರುವವರಿಂದ ಶಿವಣ್ಣ ಅವರ ಟ್ಯಾಟೂ ಹಾಕಿಸಿಕೊಂಡಿದ್ದರು.
ಎದೆ ಮೇಲೆ ಶಿವಣ್ಣ ಅವರ ಮುಖಚಿತ್ರವನ್ನು ಟ್ಯಾಟೂ ಹಾಕಿಸಿ ನಂತರ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದರು. ದೊಡ್ಡ ಅಭಿಮಾನಿಯನ್ನು ಕಂಡು ಖುಷಿಯಾದ ಶಿವಣ್ಣ, ಫಕೀರಪ್ಪ ಅವರಿಗೆ ಸಹಾಯ ಮಾಡುತ್ತೇನೆ ಎಂದು ಹೇಳಿದ್ದಾರೆ. ಫಕೀರಪ್ಪ ಕೂಡ ನನ್ನ ಜೀವ ಹಾಗೂ ಜೀವನ ಎರಡು ಶಿವಣ್ಣನೇ, ಅವರು ಬಿಟ್ಟು ನನಗೆ ಬೇರೆ ದಾರಿ ಇಲ್ಲ ಎಂದು ಅಭಿಮಾನ ಮೆರೆದಿದ್ದಾರೆ.