ಬೆಳಗಾವಿ(ಚಿಕ್ಕೋಡಿ): ಲೋಕಸಭಾ ಚುನಾವಣೆಯ ಫಲಿತಾಂಶ ಗುರುವಾರ ಹೊರಬೀಳಲಿದೆ. ಈ ಹಿನ್ನೆಲೆ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ಗೆಲುವಿಗೆ ಅಭಿಮಾನಿಯೊಬ್ಬರು ತಮ್ಮ ಮೀಸೆಯನ್ನೇ ಪಣಕ್ಕಿಟ್ಟಿದ್ದಾರೆ.
ಹೌದು. ಚುನಾವಣೆ ವೇಳೆ ಹಣ, ಆಸ್ತಿ ಬೆಟ್ಟಿಂಗ್ ಕಟ್ಟೋದನ್ನ ನೋಡಿದ್ದೀವಿ ಇದೇನಪ್ಪ ಮೀಸೆ ಬೆಟ್ಟಿಂಗ್ ಎಂದು ಆಶ್ಚರ್ಯವಾಗಬಹುದು. ಆದರೆ ಇದು ನಿಜ. ಚಿಕ್ಕೋಡಿ ಮಾಜಿ ಪುರಸಭೆ ಸದಸ್ಯ ರವಿ ಮಾಳಿ ಕಳೆದ 20 ವರ್ಷಗಳಿಂದ ಪ್ರೀತಿಯಿಂದ ಬೆಳೆಸಿರುವ ಮೀಸೆ-ಗಡ್ಡ ಪಣಕ್ಕೆ ಇಟ್ಟಿದ್ದಾರೆ. ಪ್ರಕಾಶ್ ಹುಕ್ಕೇರಿ ಅವರು ಈ ಭಾರಿ ಲೋಕಸಮರದಲ್ಲಿ ಗೆಲ್ಲದಿದ್ದರೆ ಅರ್ಧ ಮೀಸೆ ಅರ್ಧ ಗಡ್ಡ ತೆಗೆಯುತ್ತೇನೆ. ಹಾಗೆಯೇ ಚಿಕ್ಕೋಡಿಯಲ್ಲಿ ಪಟ್ಟಣದಲ್ಲಿ ಓಡಾಡುತ್ತೇನೆ ಎಂದು ಚಾಲೆಂಜ್ ಕಟ್ಟಿದ್ದಾರೆ.
Advertisement
Advertisement
ಈ ಬಗ್ಗೆ ರವಿ ಅವರನ್ನ ಕೇಳಿದರೆ, ಚಿಕ್ಕೋಡಿಯಲ್ಲಿ ಪ್ರಕಾಶ ಹುಕ್ಕೇರಿ ಗೆದ್ದೇ ಗೆಲ್ಲುತ್ತಾರೆ ಎಂಬ ವಿಶ್ವಾಸವಿದೆ. ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಯಾವುದೇ ಕಾರಣಕ್ಕೂ ಗೆಲ್ಲುವದಿಲ್ಲ ಎನ್ನುವುದು ಗೊತ್ತು. ಆದ್ದರಿಂದ ನಮ್ಮ ನಾಯಕರಿಗಾಗಿ ಈ ಮೀಸೆ ಬೆಟ್ಟಿಂಗ್ ಕಟ್ಟಿದ್ದೇನೆ ಎಂದು ಹೇಳಿದ್ದಾರೆ.
Advertisement
Advertisement
ನಾಳೆ ಪ್ರಕಟವಾಗುವ ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ಇಡೀ ದೇಶವೇ ಕಾತುರದಿಂದ ಕಾಯುತ್ತಿದೆ. ಈ ನಡುವೆ ಯಾವ ಕ್ಷೇತ್ರದಲ್ಲಿ ಯಾವ ಅಭ್ಯರ್ಥಿ ಗೆಲ್ಲುತ್ತಾರೆ ಎಂಬ ಬೆಟ್ಟಿಂಗ್ ಕೂಡ ಭರ್ಜರಿಯಾಗಿ ನಡೆಯುತ್ತಿದೆ. ಈ ಮಧ್ಯೆ ಈ ಮೀಸೆ ಬೆಟ್ಟಿಂಗ್ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಫಲಿತಾಂಶದ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.