CinemaDharwadDistrictsKarnatakaLatestSandalwood

ದೇವಸ್ಥಾನದಲ್ಲಿ ಅಭಿಮಾನಿಯಿಂದ ಸುಮಲತಾ, ಅಭಿಷೇಕ್‍ಗೆ ಸಕ್ಕರೆ-ತುಪ್ಪದ ತುಲಾಭಾರ

ಧಾರವಾಡ: ಮಂಡ್ಯ ಸಂಸದೆ ಸುಮಲತಾ ಅವರ ಪುತ್ರ ಅಭಿಷೇಕ್ ಅಂಬರೀಶ್ ಚೊಚ್ಚಲ ‘ಅಮರ್’ ಚಿತ್ರದ ಪ್ರಚಾರಕ್ಕಾಗಿ ಧಾರವಾಡಕ್ಕೆ ಭೇಟಿ ನೀಡಿದ್ದಾರೆ.

ಧಾರವಾಡ ಹೊರವಲಯದ ನುಗ್ಗಿಕೇರೆ ಹನುಮಂತ ದೇವಸ್ಥಾನದಲ್ಲಿ ತುಪ್ಪ ಮತ್ತು ಸಕ್ಕರೆ ತುಲಾಭಾರ ಮಾಡಿಸಿದ್ದಾರೆ. ಸುಮಲತಾ ಅಂಬರೀಶ್ ಗೆ 75 ಕೆಜಿ ಸಕ್ಕರೆ, 15 ಕೆಜಿ ತುಪ್ಪದಿಂದ ತುಲಾಭಾರ ಮಾಡಿದರೆ, ಅಭಿಷೇಕ್ ಅವರಿಗೆ 100 ಕೆಜಿ ಸಕ್ಕರೆ, 15 ಕೆಜಿ ತುಪ್ಪದಲ್ಲಿ ತುಲಾಭಾರ ಮಾಡಿಸಲಾಗಿದೆ. ಅಭಿಮಾನಿ ನಾರಾಯಣ್ ಕಲಾಲ್ ಅಪೇಕ್ಷೆ ಮೇರೆಗೆ ಈ ತುಲಾಭಾರ ನಡೆದಿದೆ. ಈ ವೇಳೆ ನಟ ದೊಡ್ಡಣ್ಣ, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ನಿರ್ದೇಶಕರಾದ ಯೋಗರಾಜ್ ಭಟ್, ನಾಗಶೇಖರ್ ಉಪಸ್ಥಿತರಿದ್ದರು.

ಇದೇ ವೇಳೆ ಮಾತಾನಾಡಿದ ಅಭಿಷೇಕ್, ತುಲಾಭಾರ ಕಾರ್ಯಕ್ರಮ ಇರುವುದು ನನಗೆ ಗೊತ್ತಿರಲಿಲ್ಲ. ಇಲ್ಲಿ ಬಂದ ಮೇಲೆ ಗೊತ್ತಾಯಿತು. ನನ್ನ ತುಲಾಭಾರ ಮಾಡುವುದಕ್ಕೆ ಮೂರು ಸರಿ ಯೋಚಿಸಬೇಕು. ಏಕೆಂದರೆ ನನ್ನ ಭಾರಕ್ಕೆ ಎಷ್ಟು ಅಕ್ಕಿ ಬೇಕು ಎಂದು ಯೋಚನೆ ಮಾಡಬೇಕು. ಆದರೂ ಸಹ ಅವರು ಮಾಡಿದ್ದಾರೆ. ನನಗೆ ತುಂಬಾ ಖುಷಿಯಾಯಿತು. ಚುನಾವಣೆಯಾಗಲಿ, ಸಿನಿಮಾವಾಗಲಿ ಅವರು ಇದು ಮಾಡಿಲ್ಲ. ಅವರು ಪಕ್ಕಾ ಅಂಬರೀಶಣ್ಣನ ಅಭಿಮಾನಿ. ನಮ್ಮ ಕುಟುಂಬಕ್ಕೆ ಒಳ್ಳೆಯದಾಗಲಿ ಎಂದು ತುಲಾಭಾರ ಮಾಡಿದ್ದಾರೆ. ಅಮರ್ ಸಿನಿಮಾಗೆ ಇಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಲೈಫ್‍ನಲ್ಲಿ ಮೊದಲ ಸಲ ಹುಬ್ಬಳ್ಳಿ ಕಡೆ ಬಂದಿದ್ದೇನೆ. ಈ ಕಡೆ ಜನ ಕೇಳಿಕೊಂಡ ಹಿನ್ನೆಲೆಯಲ್ಲಿ ನಾನು ಅಮರ ಚಿತ್ರದ ಪ್ರಚಾರಾರ್ಥ ಬಂದಿದ್ದೇವೆ ಎಂದರು.

ಸುಮಲತಾ ಅವರು ಕೂಡ ಮಾತನಾಡಿ, ಅಂಬರೀಶ್ ಅವರ ಜೊತೆ ಸುಮಾರು ಆರೇಳು ವರ್ಷಗಳ ಹಿಂದೆ ಹುಬ್ಬಳ್ಳಿ-ಧಾರವಾಡ ಕಡೆ ಬಂದಿದ್ದೆ. ಅದಾದ ಬಳಿಕ ನಾನು ಇಂದು ಬಂದಿದ್ದೇನೆ. ನನ್ನ ಚುನಾವಣೆ ವೇಳೆ ಸಾಕಷ್ಟು ಜನ ಹುಬ್ಬಳ್ಳಿ ಕಡೆಯಿಂದಲೂ ಬೆಂಬಲ ನೀಡಲು ಮಂಡ್ಯಕ್ಕೆ ಬಂದಿದ್ದರು. ಅಂಬರೀಶ್ ಅವರ ಅಭಿಮಾನಿಗಳು ನನ್ನ ಗೆಲುವಿಗೆ ಈ ಕಡೆಯಲ್ಲೂ ಪೂಜೆ ಸಲ್ಲಿಸಿ ಆಶೀರ್ವಾದ ಮಾಡಿದ್ದರು. ಹಾಗಾಗಿ ಅವರನ್ನು ಭೇಟಿ ಮಾಡೋಣ ಎಂದು ಇಲ್ಲಿಗೆ ಬಂದಿದ್ದೇವೆ ಎಂದರು.

ಬಳಿಕ ಮಾತನಾಡಿದ ಅವರು, ಅಮರ್ ಚಿತ್ರದ ಪ್ರಚಾರಕ್ಕೆ ಬೇರೆ ಕಡೆ ಹೋಗಿದ್ದೇವು. ಉತ್ತರ ಕರ್ನಾಟಕ ಭಾಗಕ್ಕೆ ಬಂದಿರಲಿಲ್ಲ. ಹುಬ್ಬಳ್ಳಿ ವಿಶೇಷವಾದ ಊರು. ಹಾಗಾಗಿ ಮೊದಲ ಬಾರಿಗೆ ಹುಬ್ಬಳ್ಳಿಗೆ ಬಂದಿದ್ದೇವೆ. ಹೀಗಾಗಿ ಇಲ್ಲಿಂದ ಉತ್ತರ ಕನ್ನಡ ಚಿತ್ರದ ಪ್ರಮೋಷನ್ ಆರಂಭಿಸುತ್ತಿದ್ದೇವೆ. ಅಭಿಷೇಕ್ ಒಂದಿಷ್ಟು ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಜೊತೆ ಮಾತುಕತೆ ನಡೆಸಲಿದ್ದಾರೆ. ನಾನು ಚುನಾವಣೆಯಲ್ಲಿ ಯಾವುದೇ ಹರಕೆ ಹೊತ್ತಿರಲಿಲ್ಲ. ಆದರೆ ನನ್ನ ಪರವಾಗಿ ಸಾಕಷ್ಟು ಜನ ಹರಕೆ ಹೊತ್ತಿದ್ದರು. ಅವರ ಆಸೆಯಂತೆ ಧಾರವಾಡದಲ್ಲಿ ತುಲಾಭಾರ ನಡೆದಿದೆ ಎಂದು ಸುಮಲತಾ ಹೇಳಿದರು.

Leave a Reply

Your email address will not be published. Required fields are marked *

Back to top button