ತುಮಕೂರು: ಚಂದ್ರಗ್ರಹಣದಿಂದಾಗಿ ಕೊರಟಗೆರೆ ತಾಲೂಕಿನ ಸುಪ್ರಸಿದ್ಧ ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯವನ್ನು ಶುಕ್ರವಾರ ಮುಚ್ಚಲಾಗುತ್ತದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ಖಗ್ರಾಸ ಚಂದ್ರಗ್ರಹಣ ಹಿನ್ನೆಲೆಯಲ್ಲಿ ಗೊರವನಹಳ್ಳಿಯ ಮಹಾಲಕ್ಷ್ಮೀ ದೇವಾಲಯವು ಬಂದ್ ಆಗಲಿದ್ದು, ಶುಕ್ರವಾರ ಮಧ್ಯಾಹ್ನ 12.30 ರಿಂದ ಶನಿವಾರ ಮುಂಜಾನೆಯವರೆಗೂ ದೇವಸ್ಥಾನವನ್ನು ಸಂಪೂರ್ಣವಾಗಿ ಮುಚ್ಚಲಾಗುತ್ತದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
Advertisement
ನಾಳೆ ಆಷಾಢ ಮಾಸದ ಶುಕ್ರವಾರ ನಿಮಿತ್ತ ಭಕ್ತರು ಹೆಚ್ಚಾಗಿ ದೇವಾಲಯಕ್ಕೆ ಆಗಮಿಸುವ ನಿರೀಕ್ಷೆ ಇದ್ದು, ಭಕ್ತರಿಗೆ ದೇವರ ದರ್ಶನ ಸಿಗದೇ ತೊಂದರೆಯುಂಟಾಗಬಾರದೆಂದು ಆಡಳಿತ ಮಂಡಳಿಯು, ಮುಂಜಾನೆಯಿಂದ ಮಧ್ಯಾಹ್ನ 12-30ರವರೆಗೆ ದೇವಿಯ ದರ್ಶನಕ್ಕೆ ಅನುವುಮಾಡಿಕೊಟ್ಟಿದೆ. ಬಳಿಕ ಮಧ್ಯಾಹ್ನದ ಮಹಾಮಂಗಳಾರತಿಯ ನಂತರ ದೇವಸ್ಥಾನವನ್ನು ಸಂಪೂರ್ಣವಾಗಿ ಮುಚ್ಚಿ, ರಾತ್ರಿ ನಡೆಯಬೇಕಿದ್ದ ಪೂಜೆಗಳನ್ನು ನಾಳಿನ ಮಟ್ಟಿಗೆ ನಿಲ್ಲಿಸಲಾಗುತ್ತದೆ ಎಂದು ಹೇಳಿದ್ದಾರೆ.
Advertisement
Advertisement
ಶನಿವಾರ ಮುಂಜಾನೆ 5 ಗಂಟೆಗೆ ಎಂದಿನಂತೆ ದೇವಸ್ಥಾನದ ಬಾಗಿಲು ತೆರೆಯಲಾಗುತ್ತದೆ. ಗ್ರಹಣ ದೋಷ ಮುಕ್ತಿಗೆ ದೇವಾಲಯದ ಶುಚಿತ್ವ ಬಳಿಕ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತದೆ. ಈಗಾಗಲೇ ಆಡಳಿತ ಮಂಡಳಿಯಿಂದ ಶುಕ್ರವಾರ ದೇವಾಲಯ ಮುಚ್ಚುವ ಕುರಿತು ಪ್ರಕಟಣೆಯನ್ನ ದೇವಾಲಯದ ಆವರಣದ ಅಂಟಿಸಿದೆ. ಶನಿವಾರ ಶುಚಿತ್ವ ಬಳಿಕ ಎಂದಿನಂತೆ ದೇವಿಗೆ ಅಭಿಷೇಕ, ಅಷ್ಟೋತ್ತರ, ಸಹಸ್ರನಾಮ ಹಾಗೂ ಅಷ್ಟಾವಧಾನ ಸೇವೆಗಳು ನಡೆಯಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.