-ಮರೆಯಾಯ್ತು ಬಡವರ ಪಾಲಿನ ಆಶಾಕಿರಣ
ಕೊಪ್ಪಳ: ರೋಗಿಗಳನ್ನು ಎಂತಹ ಸಂಧರ್ಭದಲ್ಲೂ ಅವರಿಗೆ ಚಿಕಿತ್ಸೆ ನೀಡಿ ಪ್ರಾಣಾಪಾಯದಿಂದ ಪಾರು ಮಾಡುತ್ತಿದ್ದ ಕೊಪ್ಪಳದ ಹಿರಿಯ ವೈದ್ಯರೊಬ್ಬರು ಶನಿವಾರ ಕೊನೆಯುಸಿರೆಳೆದಿದ್ದಾರೆ.
ಡಾ.ಬಾಬುರಾವ್ ಮೃತ ವೈದ್ಯರು. ಇವರು ಕೊಪ್ಪಳದ ಗಂಗಾವತಿ ತಾಲೂಕಿನ ಶ್ರೀರಾಮನಗರದಲ್ಲಿ ವೈದ್ಯ ವೃತ್ತಿಯನ್ನು ಆರಂಭಿಸಿದ್ದು, ಹೈದರಾಬಾದ್ ಕರ್ನಾಟಕದಲ್ಲಿ ಖ್ಯಾತಿ ಪಡೆದಿದ್ದರು. ಯಾರಿಗೆ ಹಾವು, ಚೇಳು ಕಚ್ಚಿದರೆ ಥಟ್ ಅಂತ ನೆನಪಾಗುವ ಹೆಸರೇ ಬಾಬುರಾವ್ ಅವರದ್ದು. ಎಂತಹ ಸಂದರ್ಭದಲ್ಲೂ ವ್ಯಕ್ತಿಯ ಪ್ರಾಣವನ್ನು ಬದುಕಿಸುತ್ತಿದ್ದರು. ಈ ಕಾರಣದಿಂದಲೇ ಬಾಬುರಾವ್ ಇಲ್ಲಿ ಮನೆ ಮನೆಗೂ ಚಿರಪರಿಚಿತರು.
Advertisement
Advertisement
ಈ ಭಾಗದಲ್ಲಿ ಗದ್ದೆಗೆ ಬಳಸುವ ಎಣ್ಣೆಯನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ಹೆಚ್ಚಿವೆ. ಯಾರು ಎಲ್ಲೆ ರಾಸಾಯನಿಕ ಎಣ್ಣೆ ಕುಡಿದಿದ್ದಾರೆ ಅಂದರೆ ಅವರು ಎಲ್ಲೆ ಇರಲಿ ಮೊದಲು ಬಾಬುರಾವ್ ಹತ್ತಿರ ಬರುತ್ತಿದ್ದರು. ಹೈದರಾಬಾದ್ ಕರ್ನಾಟಕ, ಉತ್ತರ ಕರ್ನಾಟಕದ ಮೂಲೆ ಮೂಲೆಯಿಂದ ಈ ವೈದ್ಯರ ಹತ್ತಿರ ಚಿಕಿತ್ಸೆ ಪಡೆಯಲು ಜನ ಆಗಮಿಸುತ್ತಿದ್ದರು. ಬಡವರ ಪಾಲಿನ ಆಶಾಕಿರಣ ಅಂದರೆ ತಪ್ಪಾಗಲಾರದು. ಅವರ ಹತ್ತಿರ ದುಡ್ಡು ಇಲ್ಲದಿದ್ದರೂ ಉಚಿತವಾಗಿ ಚಿಕಿತ್ಸೆ ನೀಡಿ ಕಳುಹಿಸುತ್ತಿದ್ದರು.
Advertisement
1975ರಲ್ಲಿ ಶ್ರೀರಾಮನಗರಕ್ಕೆ ಆಗಮಿಸಿದ ಬಾಬುರಾವ್ ಅವರು ಅಂದಿನಿಂದ ಇಂದಿನವರೆಗೆ ಕೇವಲ 10 ರೂಪಾಯಿ ಮಾತ್ರ ಪಡೆದು ಚಿಕಿತ್ಸೆ ನೀಡುತ್ತಿದ್ದರು. ಹುಬ್ಬಳ್ಳಿ ಧಾರವಾಡ, ರಾಯಚೂರಿನಿಂದ ಬಂದು ಇಲ್ಲಿ ಚಿಕಿತ್ಸೆ ಪಡೆದುಕೊಂಡು ಹೋಗಿದ್ದರು. ಇದೀಗ ಬಾಬುರಾವ್ ಅವರ ಅಕಾಲಿಕ ಅಗಲಿಕೆಯಿಂದ ಇಡೀ ಶ್ರೀರಾಮನಗರವೇ ಕಂಬನಿ ಮಿಡಿಯುತ್ತಿದೆ.
Advertisement
ಇಂದು ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಬಾಬುರಾವ್ ಅವರ ಅಂತಿಮ ಯಾತ್ರೆಯಲ್ಲಿ ಸ್ಥಳೀಯರು ಪಾಲ್ಗೊಳುತ್ತಿದ್ದಾರೆ. ನಮ್ಮ ಶ್ರೀರಾಮನಗರಕ್ಕೆ ಇಂತಹ ಮತ್ತೊಬ್ಬ ವೈದ್ಯರು ಬರಲಿ ಬಾಬುರಾವ್ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರು ಮತ್ತೆ ಹುಟ್ಟಿಬರಲಿ ಎಂದು ಎಲ್ಲರು ಆಶಿಸುತ್ತಿದ್ದಾರೆ.