ಲಂಡನ್‌ನಲ್ಲಿ ಭವಿಷ್ಯದ ಕನಸು ಕಟ್ಟಿ ವಿಮಾನದಲ್ಲಿ ಹಾರಿದ್ದ ಒಂದೇ ಕುಟುಂಬದ ಐವರು ದುರಂತ ಅಂತ್ಯ

Public TV
2 Min Read
Pratik Joshi Family

– ವಿಮಾನದಲ್ಲಿ ಕೊನೆಯ ಸೆಲ್ಫಿ ತೆಗೆದು ಕುಟುಂಬಸ್ಥರಿಗೆ ಕಳುಹಿಸಿ ಖುಷಿಪಟ್ಟಿದ್ದ ಕುಟುಂಬ

ಗಾಂಧೀನಗರ: ಲಂಡನ್‌ನಲ್ಲಿ ಭವಿಷ್ಯದ ಕನಸು ಕಟ್ಟಿಕೊಂಡು ಪ್ರಯಾಣ ಬೆಳೆಸಿದ್ದ ಸುಂದರ ಕುಟುಂಬವೊಂದು ಗುರುವಾರ ಅಹಮದಾಬಾದ್‌ನಲ್ಲಿ (Ahmedabad Plane Crash) ಸಂಭವಿಸಿದ ವಿಮಾನ ಅಪಘಾತದಲ್ಲಿ ದುರಂತ ಅಂತ್ಯಕಂಡಿದೆ.

ಗಂಡ-ಹೆಂಡತಿ ಹಾಗೂ ಮೂರು ಮುದ್ದಾದ ಮಕ್ಕಳ ಒಂದೇ ದಿನ ಮೃತಪಟ್ಟಿದ್ದಾರೆ. ಸಾಫ್ಟ್‌ವೇರ್‌ ವೃತ್ತಿಯಲ್ಲಿದ್ದ ಪ್ರತೀಕ್‌ ಜೋಶಿ ಕಳೆದ ಆರು ವರ್ಷಗಳಿಂದ ಲಂಡನ್‌ನಲ್ಲಿ ವಾಸವಾಗಿದ್ದರು. ಮೂರು ಮಕ್ಕಳು ಹಾಗೂ ಮಡದಿಯೊಂದಿಗೆ ಲಂಡನ್‌ನಲ್ಲಿ ಜೀವನ ಕಟ್ಟಿಕೊಳ್ಳುವ ಕನಸು ಕಂಡಿದ್ದರು. ಇದನ್ನೂ ಓದಿ: Ahmedabad | ವಿಮಾನ ದುರಂತ ನಡೆದ ಸ್ಥಳಕ್ಕೆ ಇಂದು ಮೋದಿ ಭೇಟಿ

ಮಕ್ಕಳು, ಮಡದಿಯನ್ನ ಲಂಡನ್‌ಗೆ ಕರೆಸಿಕೊಳ್ಳಲು ಹಲವು ವರ್ಷಗಳಿಂದ ಪ್ರತೀಕ್‌ ಕಾದಿದ್ದರು. ಕನಸು ಅಂತಿಮವಾಗಿ ನನಸಾಯಿತು. ಉದಯಪುರದಲ್ಲಿ ಪ್ರಸಿದ್ಧ ವೈದ್ಯೆಯಾಗಿದ್ದ ಡಾ. ಕೋಮಿ ವ್ಯಾಸ್‌ ಅವರು ಎರಡು ದಿನಗಳ ಹಿಂದಷ್ಟೇ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದರು. ಪತಿ ಪ್ರತೀಕ್ ಜೊತೆ ಲಂಡನ್‌ಗೆ ಹೊರಡಲು ಸಜ್ಜಾಗಿದ್ದರು.

ಗುರುವಾರ ಬೆಳಗ್ಗೆ ಭರವಸೆ ಮತ್ತು ಉತ್ಸಾಹದೊಂದಿಗೆ ಈ ಕುಟುಂಬ, ಏರ್ ಇಂಡಿಯಾ ವಿಮಾನ 171 ಅನ್ನು ಹತ್ತಿತ್ತು. ಭಾರತದಲ್ಲಿ ತಮ್ಮ ಜೀವನದ ಕಡೆಯ ಸೆಲ್ಫಿಯನ್ನು ಕುಟುಂಬ ಕ್ಲಿಕ್ಕಿಸಿಕೊಂಡಿತ್ತು. ಆ ಸೆಲ್ಫಿಯನ್ನ ತನ್ನ ಸಂಬಂಧಿಕರಿಗೆ ಕಳಿಸಿ ಖುಷಿಪಟ್ಟಿತ್ತು.

ಆದರೆ, ಕೆಲವೇ ಹೊತ್ತಿನಲ್ಲಿ ಅವರ ಕನಸು ನುಚ್ಚುನೂರಾಯಿತು. ಭೀಕರ ವಿಮಾನ ಅಪಘಾತದಲ್ಲಿ ಒಬ್ಬ ಪ್ರಯಾಣಿಕನನ್ನು ಹೊರತುಪಡಿಸಿ 241 ಮಂದಿ ಮೃತಪಟ್ಟರು. ಅವರಲ್ಲಿ ಈ ಕುಟುಂಬದ ಐವರು ಸೇರಿದ್ದಾರೆ. ಹಾಸ್ಟೆಲ್‌ವೊಂದಕ್ಕೆ ಬಡಿದು ಪತನಗೊಂಡಿತು. ವಿಮಾನದಲ್ಲಿದ್ದ ಈ ಕುಟುಂಬ ದಾರುಣ ಅಂತ್ಯ ಕಂಡಿತು. ಇದನ್ನೂ ಓದಿ: ಅಹಮದಾಬಾದ್‌ ವಿಮಾನ ದುರಂತದಲ್ಲಿ 241 ಮಂದಿ ಸಾವು, ಪವಾಡ ಸದೃಶವಾಗಿ ಏಕೈಕ ಪ್ರಯಾಣಿಕ ಪಾರು: ಏರ್‌ ಇಂಡಿಯಾ

Share This Article