ಕೊಪ್ಪಳ: ಮೃತ ತಂದೆಯ ಆಸೆಯಂತೆ ಇಲ್ಲೊಂದು ಕುಟುಂಬದ ಎಲ್ಲಾ ಸದಸ್ಯರು ನೇತ್ರದಾನಕ್ಕೆ ಸಹಿ ಮಾಡುವ ಮೂಲಕ ಹಿರಿಯರ ಆಸೆ ಈಡೇರಿಸಿದ್ದಾರೆ.
ಕೊಪ್ಪಳ ನಗರದ ಸುಣಗಾರ ಭಾವಿ ಹತ್ತಿರದ ಗೌರಿ ಅಂಗಳದ ನಿವಾಸಿ ದಿ. ತಿಮ್ಮಪ್ಪ ಹಡಪದ ಅವರ ಕುಟುಂಬವೇ ಈ ಮಹತ್ಕಾರ್ಯಕ್ಕೆ ಮುಂದಾಗಿದೆ. ತಿಮ್ಮಪ್ಪ ಹಡಪದ ಅವರ ಪತ್ನಿ ನಾಗರತ್ನಮ್ಮ ಹಾಗೂ ಮಕ್ಕಳಾದ ಪ್ರಕಾಶ್, ವೀರೇಶ್, ವಿಜಯಕುಮಾರ್, ಯಮನೂರಪ್ಪ ಇವರು ನೇತ್ರದಾನ ಮಾಡಿದವರು. ತಂದೆಯ ಮೊದಲ ವರ್ಷದ ಪುಣ್ಯಸ್ಮರಣೆಯ ಪ್ರಯುಕ್ತ ನೇತ್ರದಾನ ಮಾಡುವ ಪತ್ರಕ್ಕೆ ಸಹಿ ಹಾಕಿದ್ದಾರೆ. ಈ ಮೂಲಕ ಮುಂಬರುವ ದಿನಗಳಲ್ಲಿ ಹಾಗೂ ಮರಣದ ನಂತರ ತಮ್ಮ ಕಣ್ಣು ಮಣ್ಣಿನಲ್ಲಿ ಮಣ್ಣಾಗುವ ಬದಲಾಗಿ ಅಂಧರ ಬಾಳಿಗೆ ದಾರಿಯಾಗುವ ಮಹತ್ಕಾರ್ಯಕ್ಕೆ ಇಡೀ ಕುಟುಂಬ ಮುಂದಾಗಿರುವುದು ಹೆಮ್ಮೆಯ ಸಂಗತಿ.
Advertisement
Advertisement
ಕಳೆದ ವರ್ಷ ದಿವಂಗತ ತಿಮ್ಮಪ್ಪನವರು ಅನಾರೋಗ್ಯದಿಂದ ಮೃತರಾಗಿದ್ದರು. ಅವರ ಆಸೆ ನೇತ್ರದಾನ ಮಾಡಬೇಕೆನ್ನುವುದಾಗಿತ್ತು. ಮನೆಯ ಎಲ್ಲಾ ಸದಸ್ಯರಲ್ಲಿಯೂ ಈ ವಿಷಯ ಹಂಚಿಕೊಂಡಿದ್ದರು. ಅವರ ಆಸೆಯನ್ನು ಹೆಂಡತಿ, ಮಕ್ಕಳು ಸೇರಿದಂತೆ ಇಡೀ ಕುಟುಂಬ ಇಂದು ಈಡೇರಿಸುವ ಮೂಲಕ ತಿಮ್ಮಪ್ಪನ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ದಿ. ತಿಮ್ಮಪ್ಪ ಹಡಪದ ಅವರ ಮೇಲಿರುವ ಪ್ರೀತಿ ಎಂತದ್ದು ಎನ್ನುವುದು ಈ ಮಕ್ಕಳ ಕಾರ್ಯದಿಂದ ಗೊತ್ತಾಗುತ್ತದೆ. ತಂದೆಯವರ ಸಮಾಜ ಸೇವೆ, ಅವರಿಗಿದ್ದ ಸಾಮಾಜಿಕ ಕಳಕಳಿಯ ಆಧಾರದ ಮೇಲೆ ಇಂದು ಮಕ್ಕಳು ಕೂಡ ಅವರ ಹಾದಿಯಲ್ಲೇ ಸಾಗುತ್ತಿದ್ದಾರೆ.
Advertisement
ಪ್ರತಿಯೊಬ್ಬ ಮಕ್ಕಳಿಗೆ ಅವರ ತಂದೆ ತಾಯಿಯೇ ಅವರ ಪಾಲಿಗೆ ದೇವರುಗಳು. ನಮ್ಮ ಜನ್ಮಕ್ಕೆ ಕಾರಣ ಕರ್ತರಾದ ಅವರಿಗೆ ನಾವು ಕೊಡುವ ಕಾಣಿಕೆ ಎಂದರೆ ಸಮಾಜಕ್ಕೆ ಒಳ್ಳೆಯವರಾಗಿ ಬದುಕಿ ಅವರಿಗೆ ಕೀರ್ತಿ ತರುವುದು. ಹಾಗಾಗಿ ಕಣ್ಣಿಲ್ಲದವರ ಬಾಳಿಗೆ ಬೆಳಕಾಗಿ, ಅವರೂ ಕತ್ತಲಿನಿಂದ ಬೆಳಕಿಗೆ ಬರಲಿ, ಜಗತ್ತು ನೋಡಿದರೆ ಅದಕ್ಕಿಂತ ಖುಷಿ ಬೇರೆನಿದೆ. ಇದರಿಂದ ಹೆತ್ತವರಿಗೂ ಖುಷಿಯಾಗುತ್ತದೆ. ಇದಕ್ಕೆಲ್ಲ ಕಾರಣ ನಮ್ಮ ತಂದೆಯವರ ಆದರ್ಶ ಗುಣಗಳು ಎಂದು ಮೃತನ ಮಕ್ಕಳು ಹೇಳಿದ್ದಾರೆ.
Advertisement
ಪ್ರಥಮ ವರ್ಷದ ಪುಣ್ಯಸ್ಮರಣೆಗಾಗಿ ಏನಾದರೂ ಮಾಡಬೇಕೆನ್ನುವುದು ನನ್ನ ಆಸೆಯಾಗಿತ್ತು. ಮನೆಯವರೊಡನೆ ಚರ್ಚಿಸಿ ನಾವೆಲ್ಲರೂ ನೇತ್ರದಾನ ಮಾಡುವ ನಿರ್ಧಾರ ತೆಗೆದುಕೊಂಡೆವು. ಇದಕ್ಕೆ ಸ್ಪೂರ್ತಿ ನಮ್ಮ ತಂದೆಯವರು. ಅವರು ಇದ್ದಾಗಲೇ ಅವರೊಡನೆ ನಾವೆಲ್ಲರೂ ಸಹ ನೇತ್ರದಾನ ಮಾಡಲು ತೀರ್ಮಾನಿಸಿದ್ದೆವು. ಆದರೆ ಈಗ ಅವರಿಲ್ಲ, ಅವರ ಸವಿನೆನಪಿಗಾಗಿ ಇದನ್ನು ಮಾಡುತ್ತಿರುವೆವು. ನಾವು ಮಾಡುವ ಈ ಕೆಲಸದಿಂದ ಅಂಧರ ಬಾಳಲ್ಲಿ ಬೆಳಕು ಬಂದಂತಾಗುವುದು. ನಾವು ಸತ್ತ ಮೇಲೂ ಬದುಕಿರಬೇಕೆಂದರೆ ಈ ತರಹದ ಕೆಲಸವೊಂದೇ ದಾರಿ. ಇಂದು ನಾವು ಕುಟುಂಬದ ಐದೂ ಸದಸ್ಯರು ನೇತ್ರದಾನ ಮಾಡಿದ್ದೇವೆ. ಇದು ನಾವು ನಮ್ಮ ತಂದೆಯವರಿಗೆ ಅರ್ಪಿಸಿದ ಕಿರು ಕಾಣಿಕೆ ಅಷ್ಟೆ. ಇದೇ ತರಹದ ಕೆಲಸಗಳನ್ನು ನಮ್ಮ ಜೀವನದುದ್ದಕ್ಕೂ ಮಾಡಲು ನಮ್ಮ ತಂದೆಯವರು ನಮಗೆ ಶಕ್ತಿ ಕೊಡಲಿ ಎಂದು ಮಗ ಪ್ರಕಾಶ್ಶ ಹೇಳಿದ್ದಾನೆ.
ಕುಟುಂಬದ ಕಳಕಳಿಗೆ ಮೆಚ್ಚುಗೆಯ ಮಾತನ್ನಾಡಿರುವ ಗವಿಮಠದ ಅಭಿನವ ಗವಿಶ್ರೀಗಳು, ನಿಮ್ಮ ಕಾರ್ಯಕ್ಕೆ ಗವಿಸಿದ್ದೇಶ ನಿಮ್ಮ ಕಣ್ಣು ಮುಂದಿನ ಬೆಳಕಾಗಿ ನಿಮ್ಮ ಕುಟುಂಬವನ್ನು ಮುನ್ನೆಡಸಲಿ, ಆತನ ಶ್ರೀರಕ್ಷೆ ಸದಾ ತಮ್ಮ ಕುಟುಂಬದ ಮೇಲಿರಲಿ ಎಂದು ಆಶೀರ್ದಿವಾಸಿದ್ದಾರೆ.