ಕದಂಬ ನೌಕಾನೆಲೆಗಾಗಿ ಭೂಮಿ ಕೊಟ್ಟವರಿಗೆ 30 ವರ್ಷದ ನಂತರ ಸಿಕ್ತು ಪರಿಹಾರ

Public TV
2 Min Read
kadamba naval base compensation

ಕಾರವಾರ: ಕದಂಬ ನೌಕಾನೆಲೆಗಾಗಿ ಭೂಮಿ ಕೊಟ್ಟವರಿಗೆ 30 ವರ್ಷಗಳ ನಂತರ ಕೊನೆಗೂ ಪರಿಹಾರ ಸಿಕ್ಕಿದೆ.

ಎಷ್ಯಾದಲ್ಲೇ ಅತಿದೊಡ್ಡ ನೌಕಾನೆಲೆ ನಿರ್ಮಾಣಕ್ಕೆ, ಮನೆ, ಭೂಮಿ ಬಿಟ್ಟು ಕೊಟ್ಟು, ಬೇರೆಡೆ ವಾಸಿಸುತ್ತಿರುವ ಸಾವಿರಾರು ಕುಟುಂಬಗಳ ಪೈಕಿ, 443 ಕ್ಕೂ ಹೆಚ್ಚು ಕುಟುಂಬಗಳಿಗೆ ಇದುವರೆಗೂ ಸೂಕ್ತ ಪರಿಹಾರ ಸಿಕ್ಕಿರಲಿಲ್ಲ. ಅನೇಕ ಕುಟುಂಬಗಳು ನಾಲ್ಕೈದು ಎಕರೆ ಭೂಮಿ, ಕನಸಿನ ಮನೆ ಕಳೆದುಕೊಂಡು, ಕೂಲಿ ನಾಲಿ ಮಾಡುತ್ತ. ನೌಕಾ ನೆಲೆಯಲ್ಲಿ ಸಿ ಹಾಗೂ ಡಿ ದರ್ಜೆಯ ಕೆಲಸ ಮಾಡುತ್ತ ಜೀವನ ಮಾಡುತ್ತಿದ್ದರು. ತಮ್ಮ ನಿತ್ಯದ ಜೀವನ ಹಾಗೂ ಮಕ್ಕಳ ಭವಿಷ್ಯಕ್ಕಾಗಿ, ಸೂಕ್ತ ಪರಿಹಾರ ಕೊಡಬೇಕೆಂದು 1995 ರಿಂದ ಇಲ್ಲಿಯವರೆಗೂ ಹೋರಾಟ ನಡೆಸಿದ್ರು. ಕೊನೆಗೂ ಅವರ ಹೋರಾಟಕ್ಕೆ ಫಲ ಸಿಕ್ಕಿದ್ದು, ಪ್ರತಿ ಗುಂಟೆಗೆ 11,500 ರೂಪಾಯಿಯಂತೆ ಬಡ್ಡಿ ಸಮೇತ ಸುಮಾರು 57 ಕುಟುಂಬಗಳಿಗೆ 10.38 ಕೋಟಿ ರೂಪಾಯಿ ಹಣ, ನೇರವಾಗಿ ಅವರ ಅಕೌಂಟ್‌ಗೆ ಜಮೆ ಆಗಿದೆ.

1985 ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದಿಂದ 5 ಕಿ.ಮೀ ಅಂತರದಲ್ಲಿರುವ ಜಾಗದಲ್ಲಿ ಅಂದಿನ ಪ್ರಧಾನಿ ರಾಜೀವ ಗಾಂಧಿ ಅಡಿಗಲ್ಲು ಹಾಕಿದ್ದರು. 1995 ರಲ್ಲಿ ಸುಮಾರು 14 ಗ್ರಾಮಗಳ 4800 ಕುಟುಂಬಗಳನ್ನು ಬೇರೆ ಕಡೆ ಸ್ಥಳಾಂತರಿಸಲಾಗಿತ್ತು. ಅಂದು ಪ್ರತಿ ಗುಂಟೆ ಭೂಮಿಗೆ ಕೇವಲ 1,500 ರೂಪಾಯಿ ಪರಿಹಾರ ಕೊಡಲಾಗಿತ್ತು. 2008 ರ ಸುಪ್ರಿಂ ಕೊರ್ಟ್ ತೀರ್ಪಿನ ಪ್ರಕಾರ ಪ್ರತಿ ಗುಂಟೆಗೆ 11,500 ರೂಪಾಯಿ ಪರಿಹಾರ ಕೊಡಬೇಕೆಂದು ಆದೇಶ ಮಾಡಲಾಯ್ತು. ಆಗ ಸಾವಿರಾರು ಕುಟುಂಬಗಳಿಗೆ ಗುಂಟೆಗೆ 11,500 ರೂಪಾಯಿಯಂತೆ ಪರಿಹಾರ ಸಿಕ್ಕಿತ್ತು. ಆದರೆ, ಸುಮಾರು 443 ಪ್ರಕರಣಗಳು ಕಾರವಾರ ಎಸಿ ಕೋರ್ಟ್‌ನಲ್ಲಿ ಪೆಂಡಿಂಗ್ ಇದ್ದವು. ಆ ಪೈಕಿ 333 ಪ್ರಕರಣಗಳ ಕಳೆದ ಆರು ತಿಂಗಳ ಹಿಂದೆ ಕ್ಲಿಯರ್ ಆಗಿ, ಕೇಂದ್ರ ರಕ್ಷಣಾ ಇಲಾಖೆಯಿಂದ ಸದ್ಯ 57 ಪ್ರಕರಣಗಳಿಗೆ ಒಟ್ಟು 10.38 ಕೋಟಿ ರೂಪಾಯಿ ಸಿಕ್ಕಿದ್ದು, ಇನ್ನುಳಿದ ಪ್ರಕರಣಗಳಿಗೆ ಸಂಬಂಧಪಟ್ಟಂತೆ 60 ಕೋಟಿ ರೂಪಾಯಿ ಪರಿಹಾರ ಹಣ ಬಾಕಿ ಉಳಿದಿದೆ.

ಕಳೆದ 30 ವರ್ಷಗಳಿಂದ ದೇಶಕ್ಕಾಗಿ ಭೂಮಿ ಕಳೆದುಕೊಂಡು ಸೂಕ್ತ ಪರಿಹಾರಕ್ಕೆ ಪರಿತಪಿಸುತ್ತಿದ್ದ ಸುಮಾರು 57 ಕುಟುಂಬಗಳಿಗೆ ಕೊನೆಗೂ ಪರಿಹಾರ ಕೊಡಿಸುವುದರಲ್ಲಿ ಉತ್ತರ ಕನ್ನಡ ಜಿಲ್ಲಾಡಳಿತ ಯಶಸ್ವಿ ಆಗಿದೆ. ಇನ್ನುಳಿದ ಕುಟುಂಬಗಳಿಗೂ ಪರಿಹಾರ ಕೊಡಬೇಕಿದೆ.

Share This Article