ಸುಳ್ಳು ಆರೋಪಗಳ ವಿಷ ಕುಡಿದು, ವಿಷಕಂಠನಾಗಿದ್ದೇನೆ- ಹೆಬ್ಬಾರ್ ವಿರುದ್ಧ ಸಿದ್ದರಾಮಯ್ಯ ಕಿಡಿ

Public TV
2 Min Read
siddu

ಬೆಂಗಳೂರು: ‘ಸಿದ್ದರಾಮಯ್ಯನವರು ನಮ್ಮ ನಾಯಕರು, ಅವರಿಂದಾಗಿಯೇ ನಾವು ರಾಜೀನಾಮೆ ಕೊಟ್ಟಿರುವುದು’ ಎಂದು ಕೆಲವು ಅತೃಪ್ತ ಶಾಸಕರು ಹೇಳಿಕೆ ನೀಡಿದ್ದಾರೆ. ಇದು ಸಂಪೂರ್ಣ ಸುಳ್ಳು ದುರುದ್ದೇಶ ಪೂರಿತ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕಿಡಿ ಕಾರಿದ್ದಾರೆ.

ನಿನ್ನೆ ತಡರಾತ್ರಿ ಕ್ಷೇತ್ರಕ್ಕೆ ಆಗಮಿಸಿದ್ದ ಅತೃಪ್ತ ಶಾಸಕ ಶಿವರಾಮ್ ಹೆಬ್ಬಾರ್, ಸಿದ್ದರಾಮಯ್ಯನವರೇ ನಮ್ಮ ನಾಯಕರು ಅವರು ಹೇಳಿದಂತೆಯೇ ನಡೆದುಕೊಳ್ಳುತ್ತಿದ್ದೇವೆ. ಹೀಗಾಗಿ ಬಿಜೆಪಿ ಸೇರುವ ಯಾವುದೇ ಉದ್ದೇಶ ಹೊಂದಿಲ್ಲ. ಸಿದ್ದರಾಮಯ್ಯನವರ ಮಾರ್ಗದರ್ಶನದಂತೆ ನಡೆದುಕೊಳ್ಳುತ್ತಿದ್ದೇವೆ ಎಂದು ಹೇಳಿದ್ದರು. ಹೆಬ್ಬಾರ್ ಅವರ ಹೇಳಿಕೆ ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಸಂಚಲ ಸೃಷ್ಟಿಸಿದ್ದು, ಇದೀಗ ಸ್ವತಃ ಸಿದ್ದರಾಮಯ್ಯನವರೇ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ.

shivaram hebbar siddaramaiah

ಈ ಕುರಿತು ಸರಣಿ ಟ್ವೀಟ್ ಮಾಡುವ ಮೂಲಕ ಬೇಸರ ವ್ಯಕ್ತಪಡಿಸಿರುವ ಸಿದ್ದರಾಮಯ್ಯ, ತಪ್ಪು ಮುಚ್ಚಿಕೊಳ್ಳುವ ದುರುದ್ದೇಶದಿಂದ ಅತೃಪ್ತ ಶಾಸಕರು ‘ಸಿದ್ದರಾಮಯ್ಯನವರು ನಮ್ಮ ನಾಯಕರು’ ಎಂದು ಹೇಳುತ್ತಿದ್ದಾರೆ. ನಾನು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಕೂಡ ನನ್ನ ಮೇಲೆ ಸುಳ್ಳು ಆರೋಪಗಳ ಸುರಿಮಳೆ ಆಗಿವೆ. ನನ್ನ ರಾಜಕೀಯ ಜೀವನದಲ್ಲಿ ಇವೆಲ್ಲ ಮೊದಲನೆಯದಲ್ಲ, ಬಹುಶ: ಕೊನೆಯದೂ ಅಲ್ಲ. ಇಂತಹ ಸುಳ್ಳು ಆರೋಪಗಳ ವಿಷಕುಡಿದು, ಕುಡಿದು ನಾನು ವಿಷಕಂಠನ್ನಾಗಿದ್ದೇನೆ. ಕೊನೆಗೆ ಸತ್ಯವೇ ಗೆಲ್ಲುವುದು. ಸತ್ಯಮೇವ ಜಯತೇ! ಎಂದು ಮೊದಲ ಟ್ವೀಟ್‍ನಲ್ಲಿ ತಿಳಿಸಿದ್ದಾರೆ.

‘ಸಿದ್ದರಾಮಯ್ಯನವರು ನಮ್ಮ ನಾಯಕರು’ ಎಂದು ಅತೃಪ್ತ ಶಾಸಕರು ಹೇಳಿಕೆ ನೀಡಿದ್ದರೆ ಅವರಿಗೆ ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳುವ ದುರುದ್ದೇಶ ಇರಬಹುದು. ಅವರು ನೀಡದೆ ಇದ್ದ ಹೇಳಿಕೆಯನ್ನು ಮಾಧ್ಯಮಗಳು ವರದಿ ಮಾಡುತ್ತಿದ್ದರೆ ಇದರ ಹಿಂದೆ ಯಾರೋ ಸಂಚುಕೋರರು ಇದ್ದಾರೆಂದು ಅರ್ಥ. ಸತ್ಯ ಬಯಲಾಗುವ ಕಾಲ ಬಂದೇ ಬರುತ್ತದೆ ಎಂದು ಎರಡನೇ ಟ್ವೀಟ್‍ನಲ್ಲಿ ಉಲ್ಲೇಖಿಸಿದ್ದಾರೆ.

‘ಸಿದ್ದರಾಮಯ್ಯನವರು ನಮ್ಮ ನಾಯಕರು, ಅವರಿಂದಾಗಿಯೇ ನಾವು ರಾಜೀನಾಮೆ ಕೊಟ್ಟಿರುವುದು’ ಎಂದು ಕೆಲವು ಅತೃಪ್ತ ಶಾಸಕರು ನೀಡಿದ್ದಾರೆನ್ನಲಾದ ಹೇಳಿಕೆಗಳು ಮಾಧ್ಯಮಗಳಲ್ಲಿ ವರದಿಯಾಗುತ್ತಿವೆ. ಇದು ಸಂಪೂರ್ಣ ಸುಳ್ಳು ಮತ್ತು ದುರುದ್ದೇಶಪೂರಿತ. ಈ ಮಾತನ್ನು ಅವರು ನನ್ನ ಮುಂದೆ ಬಂದು ಹೇಳಲಿ ಅದಕ್ಕೆ ತಕ್ಕ ಉತ್ತರ ಕೊಡುತ್ತೇನೆ ಎಂದು ಮೂರನೇ ಟ್ವೀಟ್‍ನಲ್ಲಿ ಕಿಡಿ ಕಾರಿದ್ದಾರೆ. ಈ ಮೂಲಕ ಅತೃಪ್ತ ಶಾಸಕರು ತಮ್ಮ ಮೇಲೆ ಮಾಡಿರುವ ಎಲ್ಲ ಆರೋಪಗಳು ಸುಳ್ಳು ಎಂದು ಸಿದ್ದರಾಮಯ್ಯ ತಿರಸ್ಕರಿಸಿದ್ದಾರೆ.

ಶಿವರಾಮ್ ಹೆಬ್ಬಾರ್ ಹೇಳಿದ್ದೇನು?
ನಾವು ಬಿಜೆಪಿ ಜೊತೆ ಸಂಪರ್ಕದಲ್ಲಿಲ್ಲ. ನಮ್ಮ ನಾಯಕ ಸಿದ್ದರಾಮಯ್ಯ, ಅವರು ಹೇಳಿದಂತೆ ಯಾರ ಜೊತೆಗೂ ಸಂಪರ್ಕ ಸಾಧಿಸಿಲ್ಲ ಎಂದು ಶಿವರಾಮ್ ಹೆಬ್ಬಾರ್ ಹೇಳಿದ್ದರು. ಬುಧವಾರ ರಾತ್ರಿ ಪಬ್ಲಿಕ್ ಟಿವಿ ಜೊತೆ ಮಾತಾನಾಡಿದ್ದ ಅವರು, ನಾವು ಯಾವ ಬಿಜೆಪಿ ನಾಯಕರ ಜೊತೆ ಸಂಪರ್ಕ ಹೊಂದಿಲ್ಲ. ಸದ್ಯ ರಾಜ್ಯದಲ್ಲಿ ಆಗುತ್ತಿರುವ ಬಿಜೆಪಿ ಸರ್ಕಾರ ರಚನೆಯ ಬೆಳವಣಿಗೆಗೆ ನಮಗೆ ಯಾವುದೇ ಸಂಬಂಧ ಇಲ್ಲ. ನಾವು ಕೇವಲ ಶಾಸಕ ಸ್ಥಾನಕ್ಕೆ ಮಾತ್ರ ರಾಜೀನಾಮೆ ಕೊಟ್ಟಿದ್ದೇವೆ. ಇಂದಿಗೂ ಕಾಂಗ್ರೆಸ್ ಪಕ್ಷದಲ್ಲೇ ಇದ್ದೇವೆ ಎಂದು ತಿಳಿಸಿದ್ದರು.

Shivaram Hebbar a

ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿರುವುದರಿಂದ ರಾಜೀನಾಮೆ ಅಂಗೀಕಾರವಾದ ಬಳಿಕ ಎಲ್ಲರೂ ಒಟ್ಟಿಗೆ ಸೇರಿ ತೀರ್ಮಾನ ಮಾಡುತ್ತೇವೆ. ನಮ್ಮ ನಾಯಕರು ಸಿದ್ದರಾಮಯ್ಯ ಅವರು, ಅವರೇ ದೂರ ಉಳಿಯಿರಿ ಎಂದಿದ್ದಾರೆ. ಸ್ಪೀಕರ್ ಅವರಿಗೆ ಮನವಿ ಮಾಡಿದ್ದು, ಅವರು ತೆಗೆದುಕೊಳ್ಳುವ ತೀರ್ಮಾನದ ಮೇಲೆ ನಮ್ಮ ಮುಂದಿನ ತೀರ್ಮಾನ ಇರುತ್ತದೆ ಎಂದಿದ್ದರು.

Share This Article
Leave a Comment

Leave a Reply

Your email address will not be published. Required fields are marked *