DistrictsKarnatakaLatestMain PostRaichur

ಮಂತ್ರಾಲಯದ ಹೆಸರಲ್ಲಿ ನಕಲಿ ವೆಬ್‍ಸೈಟ್ – ಭಕ್ತರಿಂದ ಹಣ ವಸೂಲಿ ಮಾಡಿರುವ ಖದೀಮರು

Advertisements

ರಾಯಚೂರು: ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿ ಭಕ್ತರು ದೇಶ ಮಾತ್ರವಲ್ಲ ವಿದೇಶದಲ್ಲೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಖದೀಮರು ಮಠದ ಹೆಸರಿನಲ್ಲಿ ಆನ್‍ಲೈನ್ ಮೂಲಕ ಭಕ್ತರಿಂದ ಹಣ ವಸೂಲಿ ಮಾಡಿದ್ದಾರೆ. ಸಾಕಷ್ಟು ಜನ ಭಕ್ತರು ಸತ್ಯ ಅರಿಯದೇ ಕಾಣಿಕೆ ಅಂತಲೋ, ಭಕ್ತಿ ಸಮರ್ಪಣೆ ಅಂತಲೋ ದುಡ್ಡನ್ನು ಹಾಕಿ ಮೋಸ ಹೋಗಿದ್ದಾರೆ.

ಮೊದಲ ಪ್ರಕರಣ
ಕಲಿಯುಗದ ಕಾಮಧೇನು ಮಂತ್ರಾಲಯ ಶ್ರೀಗುರು ರಾಘವೇಂದ್ರ ಸ್ವಾಮಿ ಮಠದ ಹೆಸರು ದುರ್ಬಳಕೆ ಮಾಡಿಕೊಂಡು ಕಳೆದ ಎರಡು ವರ್ಷಗಳಿಂದ ವಿವಿಧ ಗುಂಪುಗಳು ಆನ್‍ಲೈನ್‍ನಲ್ಲಿ ಭಕ್ತರಿಂದ ಹಣ ವಸೂಲಿ ನಡೆಸಿವೆ. ಮಠದಲ್ಲಿ 25 ರೂಪಾಯಿಗೆ ಸಿಗುವ ಪರಿಮಳ ಪ್ರಸಾದದ ಒಂದು ಪ್ಯಾಕೆಟ್‍ನ್ನು ನೇರವಾಗಿ ಹೋಂ ಡೆಲಿವರಿ ಮಾಡುತ್ತೇವೆ ಎಂದು ಒಂದು ಪ್ಯಾಕೆಟ್‍ಗೆ 400 ರೂಪಾಯಿ ವಸೂಲಿ ಮಾಡುತ್ತಿದ್ದಾರೆ. ಇದರಿಂದಲೇ ಭಕ್ತರಿಂದ ಲಕ್ಷಾಂತರ ರೂಪಾಯಿ ವಸೂಲಿಯಾಗಿದೆ. ಇದನ್ನೂ ಓದಿ: ಪ್ರತ್ಯೇಕ ರಾಜ್ಯ ಕೇಳುವುದು ಮೂರ್ಖತನ, ಕರ್ನಾಟಕ ಅಖಂಡವಾಗಿಯೇ ಉಳಿಯಬೇಕು: ಬಸವರಾಜ ಹೊರಟ್ಟಿ 

ಎರಡನೇ ಪ್ರಕರಣ
ಮಂತ್ರಾಲಯದ ಸ್ಥಳೀಯ ಧಿರೇಂದ್ರ ಕೊರೊನಾ ಬಳಿಕ ಮಠದ ಸಿಬ್ಬಂದಿ, ಅರ್ಚಕರು ಸಂಕಷ್ಟದಲ್ಲಿದ್ದಾರೆ. ಅವರಿಗೆ ಸಹಾಯ ಮಾಡಿ ಎಂದು ಬ್ಯಾಂಕ್ ಅಕೌಂಟ್ ನಂಬರ್, ಗೂಗಲ್ ಪೇ ನಂಬರ್ ನೀಡಿ ಭಕ್ತರಿಂದ ಹಣ ವಸೂಲಿ ಮಾಡಿದ್ದಾನೆ.

ಮೂರನೇ ಪ್ರಕರಣ
ಮಂತ್ರಾಲಯದಲ್ಲಿನ ಯೋಜನೆಗೆ ಶ್ರೀಮಠದ ಭಕ್ತರು ಪ್ರಯೋಜಕತ್ವವನ್ನು ವಹಿಸಿಕೊಳ್ಳುವುದಕ್ಕೆ ಹಾಗೂ ದೇಣಿಗೆ ನೀಡುವಂತೆ ಕೋರಿ ‘ಮಾತೃಭೂಮಿ ಹಿಂದೂ ಸ್ಪಂದನೆ’ ಹೆಸರಿನ ವಾಟ್ಸಪ್ ಗ್ರೂಪ್‍ನಲ್ಲಿ ಹಣ ವಸೂಲಿ ನಡೆಸಲಾಗಿದೆ. ಈಗಾಗಲೇ ಪ್ರತ್ಯೇಕ ಮೂರು ಪ್ರಕರಣಗಳು ಮಂತ್ರಾಲಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಇಬ್ಬರು ಆರೋಪಿಗಳ ಬಂಧನವಾಗಿದೆ.

ಮುಂದೆ ಯಾವುದೇ ಭಕ್ತರು ವಂಚಕರ ಬಲೆಗೆ ಬೀಳದೆ, ಕಾಣಿಕೆ ನೀಡುವವರು ನೇರವಾಗಿ ಮಠದ ಅಧಿಕೃತ ವೆಬ್‍ಸೈಟ್ ಮೂಲಕ ಅಥವಾ ನೇರವಾಗಿ ದೇಣಿಗೆ ನೀಡಬೇಕು. ಮೋಸ ಹೋದವರು ತಮ್ಮ ಹತ್ತಿರದ ಪೊಲೀಸ್ ಠಾಣೆಯಲ್ಲೇ ದೂರು ದಾಖಲಿಸಬೇಕು ಎಂದು ಮಠದ ವ್ಯವಸ್ಥಾಪಕ ಶ್ರೀನಿವಾಸ ರಾವ್ ತಿಳಿಸಿದ್ದಾರೆ.

ಭಕ್ತರು ವಂಚಕರ ಹಾವಳಿ ಹೆಚ್ಚಾಗಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ನಕಲಿ ವೆಬ್‍ಸೈಟ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಮಠದ ಹೆಸರು ಬಳಸಿಕೊಂಡು ಹಣ ವಸೂಲಿಗೆ ನಿಂತಿರುವವರನ್ನ ಬಂಧಿಸುವಂತೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: 819 ಕೋಟಿ ವಂಚಿಸಿದ್ರಾ ಮಾಜಿ ಸಚಿವ..? – ರಮೇಶ್ ಜಾರಕಿಹೊಳಿ ವಿರುದ್ಧ ಲಕ್ಷ್ಮಣ್ ಗಂಭೀರ ಆರೋಪ

ಕಳೆದ ಎರಡು ವರ್ಷಗಳಲ್ಲಿ ಕೋಟ್ಯಂತರ ರೂಪಾಯಿ ಹಣವನ್ನು ವಿವಿಧ ಗುಂಪುಗಳು ರಾಯರ ಮಠದ ಹೆಸರಿನಲ್ಲಿ ವಸೂಲಿ ಮಾಡಿವೆ. ಕನಿಷ್ಠ ಈಗಲಾದ್ರೂ ಭಕ್ತರು ಎಚ್ಚೆತ್ತುಕೊಂಡು ಹಣ ವರ್ಗಾವಣೆ ಮಾಡಬೇಕಿದೆ. ಆಂಧ್ರಪ್ರದೇಶ ಹಾಗೂ ಕರ್ನಾಟಕ ಪೊಲೀಸರು ಖದೀಮರ ಗುಂಪುಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಬೇಕಿದೆ.

Live Tv

Leave a Reply

Your email address will not be published.

Back to top button