ಲಕ್ನೋ: “ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕಾ? ಮಸೀದಿ ನಿರ್ಮಾಣವಾಗಬೇಕಾ? ನಿಮ್ಮ ಅಭಿಪ್ರಾಯ ಏನು? www.ayodhya-issue.gov-up.in ವೆಬ್‍ಸೈಟ್‍ನಲ್ಲಿ ನೀವು ಅಭಿಪ್ರಾಯವನ್ನು ತಿಳಿಸಿ ಉತ್ತರಪ್ರದೇಶ ಸರ್ಕಾರಕ್ಕೆ ಸಹಕಾರ ನೀಡಿ” ಎನ್ನುವ ಸಂದೇಶ ನಿಮ್ಮ ವಾಟ್ಸಪ್‍ಗೆ ಬಂದಿದೆಯೇ?
ಈ ರೀತಿಯ ಮೆಸೇಜ್ ನಿಮ್ಮ ವಾಟ್ಸಪ್‍ಗೆ ಬಂದಿದ್ದರೆ ದಯವಿಟ್ಟು ವೆಬ್‍ಸೈಟ್‍ಗೆ ಹೋಗಿ ನೀವು ಅಭಿಪ್ರಾಯವನ್ನು ದಾಖಲಿಸಬೇಡಿ. ಆಯೋಧ್ಯೆ ರಾಮಮಂದಿರ, ಬಾಬ್ರಿ ಮಸೀದಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಜನರಿಂದ ಅಭಿಪ್ರಾಯವನ್ನು ಸ್ವೀಕರಿಸಲು ಉತ್ತರಪ್ರದೇಶ ಸರ್ಕಾರ ಯಾವುದೇ ವೆಬ್‍ಸೈಟ್ ಆರಂಭಿಸಿಲ್ಲ. ಯಾರೋ ವ್ಯಕ್ತಿಗಳು ಈ ವೆಬ್‍ಸೈಟನ್ನು ಆರಂಭಿಸಿರುವ ವಿಚಾರ ಈಗ ಬೆಳಕಿಗೆ ಬಂದಿದೆ.
Advertisement
ಆರಂಭಿಸಿದವರು ಯಾರು?
ಈ ವೆಬ್‍ಸೈಟ್ ಯುಆರ್‍ಎಲ್ ಆಧಾರಿಸಿ ಪತ್ತೆ ಮಾಡಿದಾಗ ಈ ವೆಬ್‍ಸೈಟ್ ದೆಹಲಿಯ ತರುಣ್ ಚೌಧರಿಯ ಹೆಸರಿನಲ್ಲಿ ನೋಂದಣಿ ಆಗಿರುವುದು ಬೆಳಕಿಗೆ ಬಂದಿದೆ. ಆದರೆ ಈ ವೆಬ್‍ಸೈಟನ್ನು ಬೆಂಗಳೂರು ಮೂಲದ ಐಟಿ ಉದ್ಯಮಿಯವರ ಮೊಬೈಲ್ ನಂಬರ್ ನೀಡಿ ನೋಂದಣಿ ಮಾಡಲಾಗಿದೆ.
Advertisement
ಉದ್ಯಮಿ ಅಕ್ತರ್ ಅಲಿಯವರ ಮೊಬೈಲ್ ನಂಬರನ್ನು ನೀಡಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾರೋ ದುಷ್ಕರ್ಮಿಗಳು ನನ್ನ ನಂಬರನ್ನು ಬಳಸಿ ಈ ವೆಬ್‍ಸೈಟನ್ನು ತೆರೆದಿದ್ದಾರೆ. ಈ ವಿಚಾರ ನನಗೆ ಈಗಷ್ಟೇ ತಿಳಿದಿದೆ. ಪೊಲೀಸರಿಗೆ ಈ ವಿಚಾರವನ್ನು ತಿಳಿಸುತ್ತೇನೆ ಎಂದು ಹೇಳಿದ್ದಾರೆ.
Advertisement
ವೆಬ್‍ಸೈಟ್ ಬೆಳಕಿಗೆ ಬಂದಿದ್ದು ಯಾವಾಗ?
ಭೂ ವಿವಾದವನ್ನು ಎರಡು ಪಾರ್ಟಿಗಳು ನ್ಯಾಯಾಲಯದ ಹೊರಗಡೆ ಬಗೆಹರಿಸಿಕೊಳ್ಳುವುದು ಉತ್ತಮ ಎಂದು ಸುಪ್ರೀಂ ಕೋರ್ಟ್ ಸಲಹೆ ನೀಡಿದ ಬಳಿಕ ಈ ವೆಬ್‍ಸೈಟ್ ಕುರಿತಾಗಿರುವ ಮೆಸೇಜ್ ವಾಟ್ಸಪ್ ನಲ್ಲಿ ಹರಿದಾಡಲು ಆರಂಭವಾಗಿತ್ತು.
Advertisement
ವೆಬ್‍ಸೈಟಿನಲ್ಲಿದ್ದ ನಾಲ್ಕು ಪ್ರಶ್ನೆಗಳು
ಅಯೋಧ್ಯೆಯಲ್ಲಿ ರಾಮಮಂದಿರವನ್ನೇ ನಿರ್ಮಿಸಿ, ಮಸೀದಿಯನ್ನು ಬೇರೆಡೆ ನಿರ್ಮಿಸಬೇಕು, ಎರಡನೇಯದು ರಾಮಮಂದಿರ ಮತ್ತು ಮಸೀದಿಯನ್ನು ಹತ್ತಿರದಲ್ಲೇ ನಿರ್ಮಿಸಬೇಕು, ಮೂರನೆಯದಾಗಿ ಮೂಲಸ್ಥಾನದಲ್ಲಿ ಬಾಬ್ರಿ ಮಸೀದಿ ನಿರ್ಮಿಸಿ, ಪಕ್ಕದಲ್ಲಿ ರಾಮಮಂದಿರ ನಿರ್ಮಿಸಬೇಕು. ನಾಲ್ಕನೆಯದಾಗಿ ಜನರ ಭಾವನೆಗಳನ್ನು ಆಧರಿಸಿ ಕಾನೂನು ಪ್ರಕಾರವಾಗಿ ಸುಪ್ರೀಂಕೋರ್ಟ್ ವಿವಾದ ಇತ್ಯರ್ಥಗೊಳಿಸಬೇಕು ಎನ್ನುವ ಪ್ರಶ್ನೆಯನ್ನು ಕೇಳಿ ಪೋಲ್ ಆಯ್ಕೆಯನ್ನು ನೀಡಲಾಗಿತ್ತು.
ಜನ ನಂಬಿದ್ದು ಯಾಕೆ?
ಈ ವೆಬ್‍ಸೈಟ್‍ನಲ್ಲಿರುವ ಮಾಹಿತಿಯ ಜೊತೆಗೆ ಉತ್ತರಪ್ರದೇಶದ ನೂತನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಫೋಟೋವನ್ನು ಅಪ್ಲೋಡ್ ಮಾಡಲಾಗಿತ್ತು. ಹೀಗಾಗಿ ಉತ್ತರ ಪ್ರದೇಶ ಸರ್ಕಾರವೇ ಈ ವೆಬ್‍ಸೈಟನ್ನು ಆರಂಭಿಸಿದೆ ಎಂದು ಜನ ನಂಬಿದ್ದರು.
ಇದು ಸರ್ಕಾರಿ ವೆಬ್‍ಸೈಟ್ ಎಂದು ತಿಳಿಯುವುದು ಹೇಗೆ?
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಬಹುತೇಕ ವೆಬ್‍ಸೈಟ್‍ಗಳನ್ನು ನ್ಯಾಷನಲ್ ಇನ್ಫಾರ್ಮೆಟಿಕ್ಸ್ ಸೆಂಟರ್(ಎನ್‍ಐಸಿ) ಸಿದ್ಧಪಡಿಸುತ್ತದೆ. ಎನ್‍ಐಸಿ ಸಿದ್ಧಪಡಿಸಿ ವೆಬ್‍ಸೈಟ್‍ಗಳ ಯೂನಿಫಾರ್ಮ್ ರಿಸೋರ್ಸ್ ಲೋಕೆಟರ್(ಯುಆರ್‍ಎಲ್)ಗಳು www.pib.nic.in, www.kar.nic.in ಈ ರೀತಿ ಇರುತ್ತದೆ. ಆದರೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಎಲ್ಲ ವೆಬ್‍ಸೈಟ್‍ಗಳನ್ನು ಎನ್‍ಐಸಿಯೇ ಸಿದ್ಧಪಡಿಸುವುದಿಲ್ಲ. ಹೀಗಾಗಿ ಅವುಗಳ ಒಳಗಡೆ ಇರುವ ಮಾಹಿತಿ, ವೆಬ್‍ಸೈಟಿಗೆ ಲಿಂಕ್ ಆಗಿರುವ ಅಧಿಕೃತ ಸಾಮಾಜಿಕ ಜಾಲತಾಣಗಳನ್ನು ನೋಡಿದ ಬಳಿಕವಷ್ಟೇ ಇದು ಸರ್ಕಾರಿ ವೆಬ್‍ಸೈಟ್ ಎಂದು ಖಚಿತಪಡಿಸಿಕೊಳ್ಳಬಹುದು.