– ರೋಗದಿಂದ ಬೆಳೆ ರಕ್ಷಿಸಿಕೊಳ್ಳಲಾಗದೆ ಪರದಾಟ
ಬಳ್ಳಾರಿ: ಜಿಲ್ಲೆಯಲ್ಲಿ ಭತ್ತ, ಹತ್ತಿ, ಮೆಣಸಿಕಾಯಿಗಳನ್ನು ಹೆಚ್ಚು ಬೆಳೆಯಲಾಗುತ್ತದೆ. ಇಲ್ಲಿನ ಬೆಳೆ ದೇಶ ವಿದೇಶಕ್ಕೂ ರಫ್ತಾಗುತ್ತಿದೆ. ಆದರೆ ನಕಲಿ ಕ್ರಿಮಿನಾಶಕದಿಂದ ಇಳುವರಿ ಭಾರೀ ಪ್ರಮಾಣದಲ್ಲಿ ಕಡಿಮೆಯಾಗಿದ್ದು, ರೈತರು ಕಂಗಾಲಾಗಿದ್ದಾರೆ.
ಬಳ್ಳಾರಿ ಸೇರಿದಂತೆ ಸುತ್ತಲಿನ ಜಿಲ್ಲೆಗಳಿಗೆ ಮಧ್ಯ ಪ್ರದೇಶದ ಇಂದೋರಿನಿಂದ ನಕಲಿ ಕ್ರಿಮಿನಾಶಕ ಬರುತ್ತಿದ್ದು, ಇದರ ಬಳಕೆಯಿಂದಾಗಿ ಇಳುವರಿ ಬರುವುದಿರಲಿ, ಬೆಳೆಯೂ ರೋಗ ಬಂದು ಸಂಪೂರ್ಣ ನಾಶವಾಗುತ್ತಿದೆ. ಮಾರುಕಟ್ಟೆಯಲ್ಲಿನ ಕ್ರಿಮಿನಾಶಕ ಡಬ್ಬಗಳಲ್ಲಿ ಅಸಲಿ ಯಾವುದು, ನಕಲಿ ಯಾವುದು ಎಂದು ಗುರುತಿಸುವುದು ಕಷ್ಟ. ಅಸಲಿ ಎಂದು ಗುರುತಿಸಲು ಕಂಪೆನಿಯ ಹಾಲೋಗ್ರಾಮ್ ಬಿಟ್ಟರೆ, ಉಳಿದೆಲ್ಲವೂ ಅಸಲಿ ಮಾದರಿಯಲ್ಲಿಯೇ ಇರುತ್ತದೆ. ಇದನ್ನು ಗುರುತಿಸಲಾಗದೆ ರೈತರು ಕಂಗಾಲಾಗಿ ಹೋಗಿದ್ದಾರೆ.
ಉತ್ತಮ ಕಂಪೆನಿಯ ಕ್ರಿಮಿನಾಶಕ ಬಳಿಸಿದರೆ ಭತ್ತ, ಹತ್ತಿ ಮತ್ತು ಮೆಣಸಿನಕಾಯಿಗೆ ರೋಗ ಬರುವುದಿಲ್ಲ. ಇದರಿಂದ ಉತ್ತಮ ಇಳುವರಿ ಕೂಡ ಬರುತ್ತದೆ. ಆದರೆ ಪ್ರತಿಷ್ಠಿತ ಕಂಪೆನಿಗಳ ಕ್ರಿಮಿನಾಶಕವನ್ನೇ ನಕಲಿ ಮಾಡಲಾಗುತ್ತಿದೆ. ಹೀಗಾಗಿ ರೈತರು ಚಿಂತೆಗೀಡಾಗಿದ್ದಾರೆ. ಉತ್ತಮ ಕಂಪೆನಿಯ ಕ್ರಿಮಿನಾಶಕ ಬಳಸಿದರೂ ಹುಳಬಾಧೆ ತಪ್ಪುತ್ತಿಲ್ಲ ಎಂದು ರೈತರು ಕಂಪೆನಿಗೆ ದೂರು ನೀಡಿದ್ದು, ಕಂಪನಿಯ ಪ್ರತಿನಿಧಿಗಳು ಬಂದು ಪರಿಶೀಲಿಸಿದಾಗ ನಕಲಿ ಜಾಲ ಪತ್ತೆಯಾಗಿದೆ.
ಸುಮಾರು 60ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪೆನಿಯ ಕ್ರಿಮಿನಾಶಕವನ್ನು ನಕಲಿ ಮಾಡಲಾಗುತ್ತಿದ್ದು, ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಡಿಲಿಗೇಟ್ ಕಂಪನಿಯ ವ್ಯವಸ್ಥಾಪಕ ಪ್ರಕಾಶ ಗಾಂಧಿನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಕಲಿ ಬೀಜ ಮತ್ತು ಕ್ರಿಮಿನಾಶಕದ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಬೇಕಾದ ಕೃಷಿ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಈ ಕುರಿತು ರೈತರು ದೂರು ನೀಡಿದ ನಂತರ ನಕಲಿ ಕ್ರಿಮಿನಾಶಕವನ್ನು ಲ್ಯಾಬಿಗೆ ಕಳುಹಿಸಿ ಈ ಬಗ್ಗೆ ಪರಿಶೀಲಿಸುತ್ತೇವೆ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ.