ಬೆಂಗಳೂರು: ನಗರದ ಲಕ್ಕಸಂದ್ರದ ಬಳಿಯ ಆ್ಯಕ್ಸಿಸ್ ಬ್ಯಾಂಕ್ ಶಾಖೆಯ ಎಟಿಎಂ ನಲ್ಲಿ ಸಾರ್ವಜನಿಕರೊಬ್ಬರಿಗೆ 2 ಸಾವಿರ ರೂ. ಮುಖಬೆಲೆಯ ನಕಲಿ ನೋಟು ದೊರೆತಿದೆ.
ಲಕ್ಕಸಂದ್ರದ ಎರಡನೇ ಕ್ರಾಸ್‍ನಲ್ಲಿರುವ ಎಕ್ಸಿಸ್ ಬ್ಯಾಂಕ್ ಎಟಿಎಂನಲ್ಲಿ ದಯಾನಂದ್ ರೆಡ್ಡಿ ಎಂಬ ಯುವಕ ಆರು ಸಾವಿರ ರೂಪಾಯಿ ಡ್ರಾ ಮಾಡಿದ್ದಾರೆ. ಬಳಿಕ ಪೆಟ್ರೋಲ್ ಹಾಕಿಸಲು ಬಂಕ್ ಗೆ ಹೋದಾಗ ಅಲ್ಲಿ ಖೋಟಾನೋಟು ಎಂಬುದು ಗೊತ್ತಾಗಿದೆ. ಈ ನೋಟಿನ ಮೇಲೆ ನಂಬರ್ ಇರುವ ಜಾಗದಲ್ಲಿ ಇಂಗ್ಲಿಷ್ ಅಕ್ಷರಗಳಿಂದ `ದಿಸ್ ಈಸ್ ಶೂಟಿಂಗ್ ಪರ್ಪಸ್ ಓನ್ಲಿ’ ಎಂದು ಪ್ರಿಂಟ್ ಆಗಿದೆ.
ನಕಲಿ ನೋಟು ಹಿಡಿದು ದಯಾನಂದ್ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದಾರೆ. ಆದರೆ ಪೊಲೀಸರು ಒಂದೇ ನೋಟು ಪತ್ತೆಯಾಗಿರೋದು ಎಂದು ಕೇಸ್ ದಾಖಲಿಸಿಕೊಳ್ಳದೇ ನಿರ್ಲಕ್ಷ್ಯ ತೋರಿದ್ದಾರೆ. ಇನ್ನೂ ಬ್ಯಾಂಕ್ ಸಿಬ್ಬಂದಿ ಕೇಳಲು ಹೋದ್ರೆ ಯಾರೂ ಕೂಡ ಸರಿಯಾಗಿ ಪ್ರತಿಕ್ರಿಯಿಸಿಲ್ಲ ಎಂದು ದಯಾನಂದ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.