
– ಸಾವಿರಾರು ರೂ. ಹಣ ಪಡೆದು ವಂಚನೆ
– ವಂಚನೆ ಬಯಲಾಗುತ್ತಿದ್ದಂತೆ ಪರಾರಿ
ಆನೇಕಲ್: ಪಿಎಸ್‍ಐ ಹಗರಣ ಬೆಳಕಿಗೆ ಬಂದ ಬೆನ್ನಲ್ಲೇ ಈಗ ಮತ್ತೊಂದು ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ತಾನು ನಿವೃತ್ತ ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡು ಬಡ ಹಾಗೂ ಅಮಾಯಕ ನಿರುದ್ಯೋಗಿ ಯುವಕರಿಗೆ ವ್ಯಕ್ತಿಯೊಬ್ಬ ವಂಚಿಸಿ ಪರಾರಿಯಾಗಿರುವ ವಿಚಾರ ಈಗ ಬೆಳಕಿಗೆ ಬಂದಿದೆ.
ದೊಡ್ಡಬಳ್ಳಾಪುರ ಮೂಲದ ಜ್ಞಾನಮೂರ್ತಿ ಎಂಬಾತ ಬಣ್ಣ ಬಣ್ಣದ ಕಥೆ ಕಟ್ಟಿ ಯುವಕರನ್ನು ವಂಚಿಸಿ ಈಗ ಓಡಿ ಹೋಗಿದ್ದಾನೆ. ಬೆಂಗಳೂರು ಹೊರವಲಯ ಆನೇಕಲ್ ಭಾಗದಲ್ಲಿ ನಾನು ನಿವೃತ್ತ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಎಂದು ಪೋಸ್ ಕೊಟ್ಟು ಹೇಳಿ ಯುವಕರಿಂದ ಸಾವಿರಾರು ರೂ. ಪಡೆದು ಈಗ ಜಾಗ ಖಾಲಿ ಮಾಡಿದ್ದಾನೆ. ಇದನ್ನೂ ಓದಿ: ಕರಾವಳಿ ಜಿಲ್ಲೆಗಳಿಗೆ ಕುಚ್ಚಲಕ್ಕಿ ವಿತರಣೆಗೆ ರಾಜ್ಯ ಸರ್ಕಾರ ಚಿಂತನೆ: ಕೋಟ ಶ್ರೀನಿವಾಸ ಪೂಜಾರಿ ವಿಶೇಷ ಸಭೆ
ಆನೇಕಲ್ ಥಳಿ ಮುಖ್ಯರಸ್ತೆಯ ಸಿಕೆ ಬಾರ್ ಅಂಡ್ ರೆಸ್ಟೋರೆಂಟ್‍ಗೆ ಮೇ ತಿಂಗಳಿನಲ್ಲಿ ಆಗಮಿಸಿದ ಜ್ಞಾನಮೂರ್ತಿ ನಾನು ಆನೇಕಲ್ ಭಾಗದಲ್ಲಿ 80 ಲಕ್ಷಕ್ಕೆ ಜಮೀನು ಖರೀದಿ ಮಾಡಿದ್ದೇನೆಂದು ಪರಿಚಯ ಮಾಡಿಕೊಂಡಿದ್ದಾನೆ. ಅಷ್ಟೇ ಅಲ್ಲದೇ ನಾನು ಸಬ್-ಇನ್ಸ್‌ಪೆಕ್ಟರ್ ಎಂದು ಹೇಳಿ ಹೇಳಿ ಡಿಸ್ಕೌಂಟ್‍ನಲ್ಲಿ ರೂಮ್ ಪಡೆದಿದ್ದಾನೆ. ಜಮೀನು ವ್ಯವಹಾರ ಮುಗಿಯುವವರೆಗೂ ಬಂದು ಹೋಗುತ್ತೇನೆಂದು ರೂಮ್ ಬಾಡಿಗೆ ಪಡೆದು ತನ್ನ ಕೃತ್ಯ ಆರಂಭಿಸಿದ್ದ.
ಬಡ ಯುವಕರೇ ಟಾರ್ಗೆಟ್
ಮೊದಲು ತಾನು ಉಳಿದುಕೊಂಡಿದ್ದ ಬಾರ್ ಅಂಡ್ ರೆಸ್ಟೋರೆಂಟ್ ಸಿಬ್ಬಂದಿ ಮೇಲೆ ಕಳ್ಳಾಟವಾಡಿದ್ದ. ತನ್ನ ಮಾತಿನ ಶಕ್ತಿಯಿಂದ ಕಿಶೋರ್ ಹಾಗೂ ಕ್ಯಾಷಿಯರ್ ಆನಂದ್ ಅವರನ್ನ ಪರಿಚಯ ಮಾಡಿಕೊಂಡು ಬಲೆಗೆ ಬೀಳಿಸಿದ್ದ ಜ್ಞಾನಮೂರ್ತಿ, ಡಿಜಿಪಿ ಅವರ ಪಿಎ ನನ್ನ ಸ್ನೇಹಿತ. ಅವರ ಸಹಾಯದಿಂದ ನಿಮಗೆ ಪೊಲೀಸ್ ಕೆಲಸ ಕೊಡಿಸುತ್ತೇನೆಂದು ನಂಬಿಸಿದ್ದ.
ನಾನು ಈಗಾಗಲೇ ಹಲವು ಮಂದಿಗೆ ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ನೋಡಿದ್ದು ನಿಮಗೆ ಉದ್ಯೋಗ ಬೇಕಾದರೆ ಮುಂಗಡ ಹಣವನ್ನು ನೀಡಬೇಕು ಎಂದು ಹೇಳಿದ್ದಾನೆ. ಈತನ ಮಾತಿಗೆ ಮರಳಾಗಿ ಆನಂದ್ 30 ಸಾವಿರ ರೂ. ಹಾಗೂ ಸಪ್ಲೇಯರ್ ಕಿಶೋರ್ 45 ಸಾವಿರ ರೂ. ನೀಡಿದ್ದಾರೆ. ಈತ ವ್ಯವಹಾರದಲ್ಲಿ ಎಷ್ಟು ಚಾಲಕಿ ಎಂದರೆ ತನ್ನ ಮೇಲೆ ಯುವಕರಿಗೆ ನಂಬಿಕೆ ಬರಲೆಂದು ಡಿಜಿಪಿ ಪಿಎ ಎಂದು ಬೇರೊಬ್ಬ ವ್ಯಕ್ತಿಯ ಮೂಲಕ ಫೋನ್‍ನಲ್ಲಿ ಮಾತನಾಡಿಸಿದ್ದ.
ತಾನು ಉಳಿದುಕೊಂಡಿದ್ದ ರೆಸ್ಟೋರೆಂಟ್ ಸಿಬ್ಬಂದಿಗೆ ಮೋಸ ಮಾಡಿದ ಬಳಿಕ ತನ್ನ ಕಳ್ಳಾಟದ ಕ್ಷೇತ್ರವನ್ನು ಮುತ್ಯಾಲಮಡು ಪ್ರವಾಸಿ ತಾಣಕ್ಕೆ ವಿಸ್ತರಿಸಿದ್ದ. ಈ ತಾಣದಲ್ಲಿ ಕೆಲಸ ಮಾಡುತ್ತಿದ್ದ ಯುವಕರಿಗೆ, ಮೈಸೂರು ಕುದುರೆ ಹಾಗೂ ಪೊಲೀಸರು ಸೀಜ್ ಮಾಡಿರುವ ಪೆಟ್ಟಿ ಅಂಗಡಿಯನ್ನ ಕಡಿಮೆ ಬೆಲೆಗೆ ಕೊಡಿಸೋದಾಗಿ ಕಥೆ ಕಟ್ಟಿದ್ದ. ಈತನ ಮಾತಿಗೆ ಮರಳಾಗಿ ರವಿ 75 ಸಾವಿರ ರೂ. ನೀಡಿದ್ದರು. ಇದನ್ನೂ ಓದಿ: ಆಚರಣೆ, ವೈಭವಗಳನ್ನ ಇಷ್ಟಪಡದ ಸಿದ್ದರಾಮಯ್ಯ ಈಗ ಉತ್ಸವ ಆಚರಿಕೊಳ್ಳುತ್ತಿದ್ದಾರೆ: ವಿ.ಸೋಮಣ್ಣ
ವಂಚಿಸುವುದರಲ್ಲಿ ನಿಸ್ಸೀಮನಾಗಿದ್ದ ಈತ ಯುವಕರನ್ನು ಕರೆದೊಯ್ದು ನಾಲ್ಕೈದು ಬಿಲ್ಡಿಂಗ್ ತೋರಿಸಿ ಇದೆಲ್ಲವೂ ನನ್ನದೇ ಎಂದು ಪೋಸ್ ಕೊಟ್ಟಿದ್ದ. ರಾಜ್ಯದಲ್ಲಿ ಸಂಚಲನ ಮೂಡಿಸಿದ ಪಿಎಸ್‍ಐ ಹಗರಣ ಬೆಳಕಿಗೆ ಬಂದ ಬಳಿಕ ಯುವಕರಿಗೆ ಜ್ಞಾನಮೂರ್ತಿಯ ಬಗ್ಗೆ ಅನುಮಾನ ಬಂದಿದೆ. ಅನುಮಾನ ಬಂದ ಬೆನ್ನಲ್ಲೇ ಈತನ ಬಗ್ಗೆ ಮಾಹಿತಿ ಕಲೆ ಹಾಕಿದಾಗ ನಕಲಿ ಪೊಲೀಸಪ್ಪನ ಅಸಲಿ ಕಹಾನಿ ಬಯಲಾಗಿದೆ.
ಸಾವಿರಾರು ರೂಪಾಯಿ ಹಣ ಪಡೆದು ವಂಚಿಸಿದ್ದಾನೆ ಎಂದು ವಂಚನೆಗೊಳಗಾದ ಯುವಕರು ಆರೋಪಿಸಿದ್ದಾರೆ. ಈ ಅಸಾಮಿ ಫೋನ್ ಮೂಲಕ ಬಣ್ಣ, ಬಣ್ಣದ ಕಥೆಗಳನ್ನ ಹೇಳಿ ಮೋಸ ಮಾಡಿರುವ ಆಡಿಯೋವನ್ನ ಯುವಕರು ರೆಕಾರ್ಡ್ ಮಾಡಿಟ್ಟುಕೊಂಡಿದ್ದಾರೆ.
ಸದ್ಯ ಜ್ಞಾನಮೂರ್ತಿ ವಂಚನೆ ಪ್ರಕರಣ ಆನೇಕಲ್ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಆರೋಪಿ ಸಿಕ್ಕ ಬಳಿಕ ಎಲ್ಲಿ? ಯಾರಿಗೆ ಎಷ್ಟು ಹಣ ವಂಚಿಸಿದ್ದಾನೆ ಎಂಬುದರ ಬಗ್ಗೆ ತಿಳಿಯಬೇಕಿದೆ.