– ಪೊಲೀಸ್ ಎಂದು ಸುಳ್ಳಿ ಹೇಳಿ ಬಸ್ ಹತ್ತಿದ ಮೂವರು
– ಮಗನನ್ನ ಹಿಡ್ಕೊಂಡ ಇಬ್ಬರು ನಕಲಿ ಪೊಲೀಸ್
ಹೈದರಾಬಾದ್: ಪೊಲೀಸ್ ಎಂದು ಸುಳ್ಳು ಹೇಳಿ ವಿವಾಹಿತ ಮಹಿಳೆಯನ್ನ ಕಟ್ಟಡಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿರುವ ಘಟನೆ ತೆಲಂಗಾಣದ ಜಹೀರಾಬಾದ್‍ನಲ್ಲಿ ನಡೆದಿದೆ.
37 ವರ್ಷದ ವಿವಾಹಿತ ಮಹಿಳೆ ಇತ್ತೀಚೆಗೆ ತನ್ನ ಮಗನೊಂದಿಗೆ ಕರ್ನಾಟಕದ ಬೀದರಿಗೆ ಹೋಗಿದ್ದರು. ಬೀದರಿನಿಂದ ಜಹೀರಾಬಾದ್‍ನ ಮನೆಗೆ ಬರಲು ಬಸ್ ಹತ್ತಿದ್ದರು. ಆಗ ಜಹೀರಾಬಾದ್‍ಗೆ ಬರುತ್ತಿದಂತೆ ಬಸ್ ಹತ್ತಿದ್ದ ಮೂವರು ವ್ಯಕ್ತಿಗಳು ತಾವು ಪೊಲೀಸ್ ಎಂದು ಸುಳ್ಳು ಹೇಳಿದ್ದಾರೆ.
ಮಹಿಳೆಯ ಬಳಿ ಇದ್ದ ಬ್ಯಾಗ್ ಪರಿಶೀಲನೆ ನಡೆಸಿದ ಅವರು ಬ್ಯಾಗಿನಲ್ಲಿರುವ ಸಾಮಾನುಗಳಲ್ಲಿ ನಿಷೇಧಿತ ವಸ್ತುಗಳು ಇವೆ. ಹೀಗಾಗಿ ನಾವು ಅವುಗಳನ್ನು ಪರಿಶೀಲನೆ ಮಾಡಬೇಕು ಎಂದು ತಿಳಿಸಿದ್ದಾರೆ. ಬಳಿಕ ಇಬ್ಬರು ವ್ಯಕ್ತಿಗಳು ಸಾಮಾನುಗಳ ಜೊತೆಗೆ ಮಹಿಳೆ ಹಾಗೂ ಮಗನನ್ನು ಬಸ್‍ನಿಂದ ಕೆಳಗಿಳಿಸಿದ್ದರು. ಈ ವೇಳೆ ಇಬ್ಬರು ಮಹಿಳೆಯ ಮಗನನ್ನು ಹಿಡಿದುಕೊಂಡಿದ್ದು, ಮತ್ತೊಬ್ಬ ಆರೋಪಿ ಮಹಿಳೆಯನ್ನು ರಸ್ತೆ ಸಮೀಪದಲ್ಲಿದ್ದ ಕಟ್ಟಡಕ್ಕೆ ಕರೆದುಕೊಂಡು ಹೋಗಿ ಬೆದರಿಕೆ ಹಾಕಿ ಅತ್ಯಾಚಾರ ಎಸಗಿದ್ದಾನೆ.
ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದನು. ಬಳಿಕ ಸಂತ್ರಸ್ತೆಯನ್ನು ರಸ್ತೆಬದಿಯಲ್ಲಿ ಬಿಟ್ಟು ಹೋಗಿದ್ದರು. ಸಂತ್ರಸ್ತೆ ಅಲ್ಲಿಂದ ಜಹೀರಾಬಾದ್ ಪೊಲೀಸ್ ಠಾಣೆಗೆ ಹೋಗಿ ಘಟನೆ ಕುರಿತು ದೂರು ದಾಖಲಿಸಿದ್ದಾರೆ. ಸದ್ಯಕ್ಕೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಕಲಿ ಪೊಲೀಸ್ ಆರೋಪಿಗಳಿಗಾಗಿ ಶೋಧಕಾರ್ಯ ಶುರು ಮಾಡಿದ್ದಾರೆ.