ಬೆಂಗಳೂರು: ನಕಲಿ ನಾಗಸಾಧುವೊಬ್ಬ (Fake Naga Sadhu) ಕಾರು ಚಾಲಕನಿಗೆ ಮಂಕುಬೂದಿ ಎರಚಿರೊ ಘಟನೆ ಬೆಂಗಳೂರು ನಗರದಲ್ಲಿ ನಡೆದಿದೆ. ಚಾಲಕನಿಗೆ ರುದ್ರಾಕ್ಷಿ ಕೊಟ್ಟು ಕೈಯಲ್ಲಿದ್ದ 10 ಗ್ರಾಂ ಚಿನ್ನದ ಉಂಗುರ (Gold Ring) ಕಸಿದು ಪರಾರಿಯಾಗಿದ್ದಾನೆ.
ವೈಯಾಲಿಕಾವಲ್ ನಿವಾಸಿ ವೆಂಕಟಕೃಷ್ಣಯ್ಯ ಇದೇ ಏ.19ರಂದು ಖಾಸಗಿ ಹೋಟೆಲ್ ಬಳಿ ಮಾಲೀಕರನ್ನ ಡ್ರಾಪ್ ಮಾಡಿ ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿಕೊಂಡು ನಿಂತಿದ್ದರು. ಈ ವೇಳೆ ಅಲ್ಲಿಗೆ ಬಂದ ನಕಲಿ ನಾಗಸಾಧು ಚಾಲಕನನ್ನು ಕಂಡು 5 ನಿಮಿಷ ವಿಶ್ರಾಂತಿ ಪಡೆದುಕೊಳ್ಳಬೇಕು ಅಂತ ಹೇಳಿದ್ದಾನೆ. ನಂತ್ರ ತನ್ನ ಅಸಲಿ ವರಸೆ ತೆಗೆದಿದ್ದಾನೆ. ಇದನ್ನೂ ಓದಿ: ಮೇ 7ರಿಂದ ಹೊಸ ಪೋಪ್ ಆಯ್ಕೆ ಪ್ರಕ್ರಿಯೆ ಪ್ರಾರಂಭ
ಚಾಲಕನಿಗೆ 5 ರುದ್ರಾಕ್ಷಿ (Rudraksha) ಕೊಟ್ಟು ಒಂದು ವಾಪಸ್ಸು ಕೂಡುವಂತೆ ಹೇಳಿದ್ದ. ವಾಪಸ್ ಕೊಟ್ಟ ರುದ್ರಾಕ್ಷಿಯನ್ನು ಪೇಪರ್‌ನಲ್ಲಿ ಮಡಚಿ ಓಪನ್ ಮಾಡಿದ್ದ. ಈ ವೇಳೆ ರುದ್ರಾಕ್ಷಿ ಹೂ ಆಗಿ ಬದಲಾಗಿತ್ತು. ನೋಡು ಇದು ಶುಭ ಸೂಚಕ ನಿನಗೆ ಒಳ್ಳೆಯದಾಗುತ್ತೆ ಲಕ್ಷ್ಮಿ ಕೃಪಾಕಟಾಕ್ಷವಾಗುತ್ತೆ ಅಂತ ರೈಲುಬಿಟ್ಟಿದ್ದಾನೆ. ಇದನ್ನೂ ಓದಿ: Pahalgam Attack | ಟಿಆರ್‌ಎಫ್‌ಗೆ ಭಾರತೀಯ ಯುವಕರೇ ಟಾರ್ಗೆಟ್ – ಈ ಭಯೋತ್ಪಾದಕ ಗುಂಪು ಹೇಗೆ ಕೆಲಸ ಮಾಡುತ್ತೆ?
ನಂತ್ರ ನಿನ್ನ ಕೈಯಲ್ಲಿರುವ ಚಿನ್ನದ ಉಂಗುರ ಕೊಡು ಅಂತ ಹೇಳಿದ್ದಾನೆ. ಚಿನ್ನದ ಉಂಗುರ ಬಿಚ್ಚಿ ಕೊಡುತ್ತಿದ್ದಂತೆ ಹಣೆಗೆ ಬೂದಿ ರೀತಿಯ ವಸ್ತುವನ್ನು ಹಚ್ಚಿದ್ದಾನೆ. ಹಿಂದೆ ತಿರುಗಿ ನೋಡದೇ ಸ್ವಲ್ಪ ಮುಂದೆ ಹೋಗು ಇಲ್ಲದಿದ್ರೆ ನಿನಗೆ ಕೆಡುಕಾಗುತ್ತದೆ ಅಂತ ಹೇಳಿದ್ದಾನೆ. ಆತನ ಮಾತು ಕೇಳಿ ಮಂಕುಬಡಿದಂತಾದ ವೆಂಕಟಕೃಷ್ಣಯ್ಯ ಮುಂದೆ ಬಂದಿದ್ದಾನೆ. ಬಳಿಕ ನಕಲಿ ನಾಗಸಾಧು ಅಲ್ಲಿಂದ ಮಾಯವಾಗಿದ್ದಾನೆ.
ಬಳಿಕ ಮನೆಯವರಿಗೆ ವಿಚಾರ ತಿಳಿಸಿದ ವೆಂಕಟಕೃಷ್ಣಯ್ಯ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ (High Grounds Police Station) ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಕಲಿ ನಾಗಸಾಧುಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಉಗ್ರರು ಗುಂಡು ಹಾರಿಸುವ ಹೊತ್ತಲ್ಲಿ 3 ಬಾರಿ ‘ಅಲ್ಲಾಹು ಅಕ್ಬರ್’ ಅಂತ ಕೂಗಿದ ಜಿಪ್‌ಲೈನ್ ಆಪರೇಟರ್