– ಮದ್ವೆಯಲ್ಲಿ ಮರ್ಯಾದೆ ಕಾಪಾಡಿಕೊಳ್ಳಲು ನಕಲಿ ಅಂಕಪಟ್ಟಿ
– ವಾಟ್ಸಪ್‌ನಲ್ಲೇ ಡೀಲ್ ಕುದುರಿಸುತ್ತಿದ್ದ ಗ್ಯಾಂಗ್
– 422 ನಕಲಿ ಅಂಕಪಟ್ಟಿ ವಶಕ್ಕೆ
ಕಲಬುರಗಿ: ಇಲ್ಲಿನ ಸಿಇಎನ್ ಪೊಲೀಸ್ ಠಾಣೆಯ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆಯಿಂದ ದೇಶದ ವಿವಿಧ ವಿಶ್ವವಿದ್ಯಾಲಯಗಳ ಹೆಸರಿನಲ್ಲಿ ನಕಲಿ ಅಂಕಪಟ್ಟಿ ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಬೇಧಿಸುವಲ್ಲಿ ಕಲಬುರಗಿ ನಗರ ಪೊಲೀಸರು (Kalaburagi City Police) ಯಶಸ್ವಿಯಾಗಿದ್ದಾರೆ.
ದೇಶದ ವಿವಿಧ 28 ವಿಶ್ವವಿದ್ಯಾಲಯಗಳ (Universities) ನಕಲಿ ಅಂಕಪಟ್ಟಿ ತಯಾರಿಸುತ್ತಿದ್ದ ದೆಹಲಿ ಮೂಲದ ರಾಜೀವ್ ಸಿಂಗ್ ಅರೋರಾ ಎಂಬ ಅಂತರರಾಜ್ಯ ಆರೋಪಿಯನ್ನು ಬಂಧಿಸಿದ್ದು, ದೆಹಲಿಯಿಂದ ರಾಜ್ಯಕ್ಕೆ ಸರಬರಾಜು ಆಗುತ್ತಿದ್ದ ನಕಲಿ ಅಂಕಪಟ್ಟಿಗಳನ್ನು ವಶಕ್ಕೆ ಪಡೆಯಲಾಗಿದೆ. ಇದನ್ನೂ ಓದಿ: ರಸ್ತೆ ದಾಟುವಾಗ ಬಿಎಂಟಿಸಿ ಬಸ್ ಡಿಕ್ಕಿ – ಮಹಿಳೆ ಸಾವು
Advertisement
Advertisement
28 ವಿಶ್ವವಿದ್ಯಾಲಯಗಳ 522 ನಕಲಿ ಮಾರ್ಕ್ಸ್ ಕಾರ್ಡ್ (Fake Marks Card), 1,626 ಖಾಲಿ ಮಾರ್ಕ್ಸ್ ಕಾರ್ಡ್, 403 ಹೋಲೊಗ್ರಾಮ್, 122 ಸೀಲ್, 80 ಬ್ಯಾಂಕ್ ಪಾಸ್‌ಬುಕ್, 123 ನಕಲಿ ಐಡಿ ಕಾರ್ಡ್, 32 ಮೊಬೈಲ್ ಫೋನ್, ಲ್ಯಾಪ್‌ಟಾಪ್, ಪೇಮೆಂಟ್‌ಗಾಗಿ ಬಳಸುತ್ತಿದ್ದ ಸ್ವೈಪಿಂಗ್ ಮಷೀನ್ ಸೇರಿ 1,20,000 ರೂ.ಗಳ ನಗದು ಹಣ ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ ಮಾಹಿತಿ ನೀಡಿದರು. ಇದನ್ನೂ ಓದಿ: ʻಕೈʼಮುಖಂಡನ ಹತ್ಯೆ ಕೇಸ್ – ಶಿವಮೊಗ್ಗದಿಂದ ಗಡಿಪಾರಾಗಿದ್ದ ಆರೋಪಿಗಳಿಗೆ ಸುಪಾರಿ ಕೊಟ್ಟು ಕೊಲೆ
Advertisement
ಈ ಕುರಿತು ಗುರುವಾರ ನಗರದ ಪೊಲೀಸ್ ಆಯುಕ್ತಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸೆನ್ ಪೊಲೀಸ್ ಠಾಣೆಯಲ್ಲಿ ನಕಲಿ ಅಂಕಪಟ್ಟಿ ಮಾರಾಟದ ಬಗ್ಗೆ ದೂರು ದಾಖಲಾಗಿತ್ತು. ನಗರದ ಏಷ್ಯನ್ ಮಾಲ್‌ನಲ್ಲಿ ʻಐ ಫಾರ್ ಯು ಗ್ಲ್ಯಾಮ್ ಚಾಯಿಸ್ʼ ಹೆಸರಿನ ಬಟ್ಟೆ ಅಂಗಡಿಯಲ್ಲಿ ಎಲೆಜೆನ್ಸ್ ಟೆಕ್ನಾಲಜಿ ಮತ್ತು ಪ್ಲೇಸ್ಮೆಂಟ್ ಬ್ಯೂರೋ ಎಂಬ ಹೆಸರಲ್ಲಿ ನಕಲಿ ಅಂಕಪಟ್ಟಿ ತಯಾರು ಮಾಡುತ್ತಿದ್ದ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ತಾರ್ಫೈಲ್ ನಿವಾಸಿ ಮೊಹ್ಮದ್ ಖಾನ್ ನನ್ನು ನಕಲಿ ಅಂಕಪಟ್ಟಿ ಮಾರಾಟ ಮಾಡುತ್ತಿದ್ದ ಎಂಬ ಆರೋಪದಲ್ಲಿ ಬಂಧಿಸಲಾಗಿತ್ತು. ಈ ಪ್ರಕರಣದ ಜಾಡು ಬೆನ್ನುಹತ್ತಿದ ಪೊಲೀಸರು ಇದೀಗ ಇಡಿ ಜಾಲವನ್ನೇ ಪತ್ತೆ ಮಾಡಿ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Advertisement
ನಕಲಿ ಅಂಕಪಟ್ಟಿ ತಯಾರಿಕೆ ಪ್ರಕರಣದಲ್ಲಿ ದಾವಣಗೆರೆಯ ಹರಿಪ್ರಸಾದ್ ಹಾಗೂ ಬೆಂಗಳೂರಿನ ಜಗದೀಶ್ ಮಧ್ಯವರ್ಥಿಗಳಾಗಿ ಕೆಲಸ ಮಾಡುತ್ತಿದ್ದರು. ಇವರ ಮೂಲಕ ಪ್ರಕರಣದ ಪ್ರಮುಖ ಆರೋಪಿ ದೆಹಲಿಯ ರಾಜೀವ್ ಸಿಂಗ್ ಅರೋರಾ ನನ್ನು ಪತ್ತೆ ಹಚ್ಚಿ, ಈತನನ್ನು ದೆಹಲಿಯಲ್ಲಿ ಬಂಧಿಸಿ ಕಲಬುರಗಿಗೆ ಕರೆತರಲಾಗಿದೆ. ಕೇವಲ 15-20 ಸಾವಿರ ರೂ.ಗಳಿಗೆ ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಬಿಇ, ಬಿ.ಟೆಕ್ ಇನ್ನಿತರೆ ಪದವಿಯ ನಕಲಿ ಅಂಕಪಟ್ಟಿ ತಯಾರಿಸಿ ಮಾರಾಟ ಮಾಡುತ್ತಿದ್ದರು. ಈ ಪ್ರಕರಣದಲ್ಲಿ ಇನ್ನೂ ಯಾರ‍್ಯಾರು ಭಾಗಿಯಾಗಿದ್ದಾರೆ ಎನ್ನುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಆಯುಕ್ತ ಡಾ. ಶರಣಪ್ಪ ತಿಳಿಸಿದರು.
ಇನ್ನೂ, ಅಂತರ ರಾಜ್ಯ ನಕಲಿ ಅಂಕಪಟ್ಟಿ ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ ಅವರು ಪ್ರಶಂಸನಾ ಪತ್ರ ನೀಡಿ ಶ್ಲಾಘಿಸಿದರು. ಈ ಸಂದರ್ಭದಲ್ಲಿ ಡಿಸಿಪಿಗಳಾದ ಕನಿಕಾ ಸಿಕ್ರಿವಾಲ್, ಪ್ರವೀಣ್ ನಾಯ್ಕ್, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಇದ್ದರು. ಇದನ್ನೂ ಓದಿ: ನೇಪಾಳದಲ್ಲಿ 6.1 ತೀವ್ರತೆಯ ಪ್ರಬಲ ಭೂಕಂಪನ – ಭಾರತ, ಚೀನಾ ಗಡಿಯಲ್ಲೂ ಕಂಪಿಸಿದ ಭೂಮಿ
ವಾಟ್ಸಪ್‌ನಲ್ಲಿ ಆರ್ಡರ್ ಆರ್ಡರ್:
ಕಲಬುರಗಿಯ ಅಭ್ಯರ್ಥಿಗಳಿಗೆ ನಕಲಿ ಅಂಕಪಟ್ಟಿ ಬೇಕಾದರೆ, ಅವರು ರಾಜೀವ್ ಸಿಂಗ್ ಅರೋರಾನನ್ನು ಸಂಪರ್ಕಿಸಲು ಸಾಧ್ಯವಾಗುತ್ತಿರಲಿಲ್ಲ. ನೇರವಾಗಿ ವಾಸ್ಟಪ್ ಮೂಲಕವೇ ನಕಲಿ ಅಂಕಪಟ್ಟಿಗಾಗಿ ಆರ್ಡರ್ ನೀಡಬೇಕಾಗಿತ್ತು. ತಯಾರಾದ ಬಳಿಕ ವಾಟ್ಸಪ್ ಚಾಟ್ ಎಲ್ಲವೂ ಡಿಲೀಟ್ ಮಾಡುತ್ತಿದ್ದ, ಯಾವುದೇ ದಾಖಲೆಗಳನ್ನು ಉಳಿಸಿಕೊಳ್ಳುತ್ತಿರಲಿಲ್ಲ. ಹೀಗಾಗಿ, ಯಾರ‍್ಯಾರು ಅಂಕಪಟ್ಟಿ ಮಾಡಿಸಿಕೊಂಡಿದ್ದಾರೆ ಎನ್ನುವ ಮಾಹಿತಿ ತನಿಖೆ ಮೂಲಕ ಕಲೆ ಹಾಕಲಾಗುತ್ತಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.
ಮದುವೆ, ಖಾಸಗಿ ಕೆಲಸಕ್ಕೆ ಅಂಕಪಟ್ಟಿ ಬಳಕೆ:
ರಾಜೀವ್ ಸಿಂಗ್ ಅರೋರಾ ಬಳಿ ಯಾರೆಲ್ಲ ನಕಲಿ ಅಂಕಪಟ್ಟಿ ಪಡೆದು ಕೊಂಡಿದ್ದಾರೋ ಅದರಲ್ಲಿ ಬಹುತೇಕರು ಮದುವೆಯಲ್ಲಿ ಮರ್ಯಾದೆ ಕಾಪಾಡಿಕೊಳ್ಳಲು ಹಾಗೂ ಖಾಸಗಿ ಕಂಪನಿಗಳಲ್ಲಿ ಕೆಲಸ ಪಡೆದುಕೊಳ್ಳಲು ಅಂಕಪಟ್ಟಿ ಬಳಸಿಕೊಂಡಿದ್ದಾರೆ ಎನ್ನುವ ಪ್ರಾಥಮಿಕ ತನಿಖೆಯಿಂದ ಬಹಿರಂಗವಾಗಿದೆ. ಅಂಕಪಟ್ಟಿ ಬಳಸಿ ಸರಕಾರಿ ನೌಕರಿ ಪಡೆದಿರುವ ಬಗ್ಗೆ ಮಾಹಿತಿ ತಿಳಿದಿಲ್ಲ. ತನಿಖೆ ನಡೆಯುತ್ತಿದ್ದು, ಶೀಘ್ರವೇ ಎಲ್ಲವೂ ಬಹಿರಂಗಗೊಳ್ಳಲಿದೆ. ಸದ್ಯ ಆರ್ಡರ್ ಕೊಟ್ಟವರು ಹಾಗೂ ಆರ್ಡರ್ ಕೊಟ್ಟು ಅಂಕಪಟ್ಟಿ ತೆಗೆದುಕೊಂಡು ಹೋಗದವರ ನಕಲಿ ಅಂಕಪಟ್ಟಿ ಮಾತ್ರ ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ ತಿಳಿಸಿದರು.
ಅಸ್ತಿತ್ವದಲ್ಲಿ ಇರದ ವಿವಿಯ ಹೆಸರಲ್ಲಿ ಅಂಕಪಟ್ಟಿ:
ನಕಲಿ ಅಂಕಪಟ್ಟಿ ತಯಾರಿಕ ಜಾಲವು ದೇಶದ ಸುಮಾರು 28 ವಿಶ್ವವಿದ್ಯಾಲಯಗಳ ಅಂಕಪಟ್ಟಿ ತಯಾರಿಸಿ ಮಾರಾಟ ಮಾಡಿದ್ದು ಬೆಳಕಿಗೆ ಬಂದಿದೆ. ಇನ್ನು ಕೆಲವು ವಿಶ್ವವಿದ್ಯಾಲಯಗಳು ಅಸ್ತಿತ್ವದಲ್ಲೇ ಇಲ್ಲದಿದ್ದರೂ ಅಂತಹ ವಿವಿಗಳ ಹೆಸರಲ್ಲೂ ಸಹ ರಾಜೀವ್ ಸಿಂಗ್ ಅಂಕಪಟ್ಟಿ ನೀಡಿದ್ದಾನೆ. ಮಹಾರಾಷ್ಟ್ರದ ಸೌತ್ ವೆಸ್ಟ್ ಯೂನಿವರ್ಸಿಟಿ ಅಸ್ತಿತ್ವದಲ್ಲೇ ಇಲ್ಲ. ಆದರೂ ಇದರ ಹೆಸರಲ್ಲಿ ಅನೇಕರಿಗೆ ನಕಲಿ ಅಂಕಪಟ್ಟಿ ನೀಡಲಾಗಿದೆ.
ಕಳೆದ 7-8 ವರ್ಷಗಳಿಂದ ದೇಶದ 28ಕ್ಕೂ ಹೆಚ್ಚು ವಿವಿಗಳ ಹೆಸರಲ್ಲಿ ನಕಲಿ ಅಂಕಪಟ್ಟಿ ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲ ಪತ್ತೆ ಹಚ್ಚಿದ್ದು, ಬೇರೆ ಬೇರೆ ವಿಶ್ವವಿದ್ಯಾಲಯಗಳ ಹೆಲೋಗ್ರಾಮ್ ಗಳನ್ನು ಆನ್ಲೈನ್ ಮೂಲಕವೇ ಪಡೆದು ಅಂಕಪಟ್ಟಿ ತಯಾರಿಸುತ್ತಿದ್ದರು. ಇಲ್ಲಿವರೆಗೂ ಕೋಟಿಗೊ ಅಧಿಕ ವಹಿವಾಟು ಪ್ರಮುಖ ಆರೋಪಿ ರಾಜೀವ್ ಸಿಂಗ್ ಅರೋರಾ ನಡೆಸಿದ್ದಾನೆ. ತನಿಖೆ ಬಳಿಕ ಹೆಚ್ಚಿನ ಮಾಹಿತಿ ತಿಳಿಯಲಿದೆ.