ದುನಿಯಾ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಸೂರಿ ಹೆಸರಿನಲ್ಲಿ ಕೆಲವರು ಮಾಡಬಾರದ ಕೆಲಸವನ್ನು ಮಾಡುತ್ತಿದ್ದಾರಂತೆ. ಹಾಗಾಗಿ ಸೂರಿ ಸಹಜವಾಗಿಯೇ ಗರಂ ಆಗಿದ್ದಾರೆ. ಈ ಕುರಿತು ಅವರು ಸೈಬರ್ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. ಈ ಕುರಿತು ಇನ್ಸ್ಟಾದಲ್ಲಿ ಬರೆದುಕೊಂಡಿರುವ ಸೂರಿ, ತಾವು ಇನ್ಸ್ಟಾಗ್ರಾಮ್ ಬಿಟ್ಟು ಬೇರೆ ಯಾವುದೇ ಸೋಷಿಯಲ್ ಮೀಡಿಯಾದಲ್ಲಿ ಖಾತೆ ಹೊಂದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ದುನಿಯಾ ಸೂರಿ ಹೆಸರಿನಲ್ಲಿ ಹಲವರು ಟ್ವಿಟ್ಟರ್ ಮತ್ತು ಫೇಸ್ ಬುಕ್ ಖಾತೆ ತೆರೆದಿದ್ದಾರಂತೆ. ಅವುಗಳ ಮೂಲಕ ದಿನವೂ ಅಪ್ ಡೇಟ್ ಮಾಡುತ್ತಿದ್ದಾರಂತೆ. ಅಪ್ ಡೇಟ್ ಮಾಡುವಂತಹ ವಿಷಯಗಳು ಸೂರಿ ಅವರಿಗೆ ಮುಜುಗರ ತರುತ್ತಿವೆಯಂತೆ. ಹೀಗಾಗಿಯೇ ಅವರು ತಮ್ಮ ಹೆಸರಿನ ಖಾತೆಗಳ ಕುರಿತು ಸೈಬರ್ ಠಾಣೆಗೆ ದೂರು ದಾಖಲಿಸಿರುವುದಾಗಿ ಇನ್ಸ್ಟಾದಲ್ಲಿ ಬರೆದುಕೊಂಡಿದ್ದಾರೆ. ಬ್ಯುಸಿ ಕೆಲಸಗಳ ನಡುವೆಯೂ ಇಂತಹ ಕೆಲಸಗಳು ಕಿರಿಕಿರಿ ಮಾಡುತ್ತವೆ ಎಂದೂ ಅವರು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಕೊನೆಗೂ ಶಿವಣ್ಣ, ಅನುಶ್ರೀ ಭೇಟಿಯಾಗಿ ಆಸೆ ಈಡೇರಿಸಿಕೊಂಡ ಕಾಫಿನಾಡು ಚಂದು
ಇನ್ಸ್ಟಾದಲ್ಲಿ ಸೂರಿ ಈ ಕುರಿತು ಬರೆದುಕೊಂಡಿದ್ದು, ‘ಎಲ್ಲರಿಗೂ ನಮಸ್ಕಾರ, ನಾನು ಕನ್ನಡ ಚಲನಚಿತ್ರ ನಿರ್ದೇಶಕ ಸೂರಿ (ಸುರೇಶ್ ರಾಮಸ್ವಾಮಿ) ಇನ್ ಸ್ಟಾಗ್ರಾಮ್ ಬಿಟ್ಟರೆ, ಬೇರೆ ಯಾವ ರೀತಿಯ ಸೋಷಿಯಲ್ ಮೀಡಿಯಾ ಅಕೌಂಟ್ ನಲ್ಲೂ ನಾನು ಇಲ್ಲ. ಟ್ವಿಟ್ಟರ್‌ನಲ್ಲಿ ದುನಿಯಾ ಸೂರಿ ಎಂಬ ಅಕೌಂಟ್ ನನ್ನದಲ್ಲ. ಈ ನಡುವೆ ಟ್ವಿಟ್ಟರ್ ಅಕೌಂಟ್‌ನಲ್ಲಿ ಅಪ್ ಡೇಟ್ ಆಗುತ್ತಿರುವ ಯಾವ ಅನಿಸಿಕೆಯೂ, ಅಭಿಪ್ರಾಯ ಮತ್ತು ಸಮಾಜದ ಆಗುಹೋಗುಗಳು ನನ್ನದಲ್ಲ. ಕಾನೂನು ಪ್ರಕಾರ ನನ್ನ ಫೋಟೋ ಹಾಗೂ ನನ್ನ ಹೆಸರನ್ನು ನನ್ನ ಅನುಮತಿ ಇಲ್ಲದೇ ಬಳಸುವುದು ಅಪರಾಧ. ದಯವಿಟ್ಟು ಇದನ್ನು ನಿಲ್ಲಿಸಿ’ ಎಂದು ಅವರು ಬರೆದಿದ್ದಾರೆ.