ಬೆಂಗಳೂರು: ನಗರದಲ್ಲಿ ದಾಖಲಾಗಿದ್ದ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದ್ದು, ಲವ್ವರ್ ಮದುವೆಯಾಗಲು ವಿವಾಹಿತ ಮಹಿಳೆ ನಾಟಕವಾಡಿದ ವಿಚಾರ ಈಗ ಬೆಳಕಿಗೆ ಬಂದಿದೆ.
ಕಳೆದ ಒಂದೂವರೆ ವರ್ಷದ ಹಿಂದೆ 20 ವರ್ಷದ ಕಾವ್ಯಾ(ಹೆಸರು ಬದಲಾಯಿಸಲಾಗಿದೆ) ಎಂಬ ಮಹಿಳೆಗೆ ಮದುವೆ ಆಗಿತ್ತು. ಮದುವೆ ನಂತರ ಕಾವ್ಯಾ ತನ್ನ ಸೋದರ ಸಂಬಂಧಿಯೊಬ್ಬರನ್ನು ಲವ್ ಮಾಡುತ್ತಿದ್ದಳು. ಹೀಗಾಗಿ ಈಗಾಗಲೇ ಮದುವೆಯಾಗಿರುವ ಕಾವ್ಯಾ ಅವರು ತನ್ನ ಸಂಬಂಧಿ ಜೊತೆ ಮತ್ತೊಂದು ಮದುವೆಯಾಗಲು ನಿರ್ಧರಿಸಿದ್ದಳು. ಅಂತೆಯೇ ನಾಲ್ವರಿಂದ ಗ್ಯಾಂಗ್ ರೇಪ್ ಆಗಿದೆ ಅಂತಾ ಬ್ಯಾಟರಾಯನಪುರ ಪೊಲೀಸರಿಗೆ ದೂರು ನೀಡಿದ್ದಳು.
Advertisement
Advertisement
ದೂರಿನಲ್ಲಿ ಏನಿತ್ತು?: ಜನವರಿ 5ರಂದು ಮನೆಯಿಂದ ಕೆಲಸಕ್ಕೆಂದು ಬ್ಯಾಟರಾಯನಪುರದ ಟಿಂಬರ್ ಯಾರ್ಡ್ ಲೇ ಔಟ್ ನಲ್ಲಿರುವ ಶಾಲಿನಿ ಗಾರ್ಮೆಂಟ್ಸ್ ಹತ್ತಿರ ನಡೆದುಕೊಂಡು ಹೋಗುತ್ತಿರಬೇಕಾದರೆ ಬೆಳಗ್ಗೆ 9.40ರ ಸುಮಾರಿಗೆ ವ್ಯಕ್ತಿಯೊಬ್ಬ ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದನು. ಅಲ್ಲದೇ ನಿಮ್ಮನ್ನು ಕರೆಯುತ್ತಿದ್ದಾರೆ ನೋಡಿ ಅಂದಿದ್ದ ತಕ್ಷಣ ತಿರುಗಿ ನೋಡುವಷ್ಟರಲ್ಲಿ ಬಿಳಿಯ ಬಣ್ಣದ ಮಾರುತಿ ವ್ಯಾನ್ ಪಕ್ಕಕ್ಕೆ ಬಂದಿದ್ದು, ಕಾರಿನಲ್ಲಿದ್ದ ವ್ಯಕ್ತಿಯೊಬ್ಬ ತನ್ನನ್ನು ಕಾರಿನೊಳಗೆ ಎಳೆದುಕೊಂಡಿದ್ದು, ತನ್ನನ್ನು ಮಾತನಾಡಿಸಿದ ವ್ಯಕ್ತಿಯೂ ಆ ಕಾರಿನೊಳಗೆ ಕುಳಿತುಕೊಂಡನು. ಮತ್ತೊಬ್ಬ ವ್ಯಕ್ತಿ ಕೂಡ ಅಲ್ಲಿಯೇ ಕುಳಿತುಕೊಂಡನು. ಕಾರಿನಲ್ಲಿ ಒಟ್ಟು ನಾಲ್ಕು ಮಂದಿಯಿದ್ದು, ಕೂಗಾಡದಂತೆ ಬೆದರಿಸಿ, ಬಾಯಿ ಅದುಮಿ ತಲೆಕೆಳಗೆ ಬಗ್ಗಿಸಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಚಾಕು ತೋರಿಸಿ, ಬಲವಂತವಾಗಿ ತನ್ನ ಕಿವಿಯಲ್ಲಿದ್ದ 2 ಗ್ರಾಂ ತೂಕದ ಒಂದು ಜೊತೆ ಕಿವಿಯೋಲೆ, 3 ಗ್ರಾಂನ ಚಿನ್ನದ ಉಂಗುರ, 9 ಗ್ರಾಂ ನ ಮಾಂಗಲ್ಯಸರ ಮತ್ತು 4 ಗುಂಡುಗಳನ್ನು ಬಲವಂತವಾಗಿ ಕಿತ್ತುಕೊಂಡರು. ನಂತರ 3 ಜನ ತನ್ನ ಮೇಲೆ ಬಲವಂತವಾಗಿ ಅತ್ಯಾಚಾರವೆಸಗಿದ್ದಾರೆ. ಬಳಿಕ ರಾತ್ರಿ 8 ಗಂಟೆ ಸುಮಾರಿಗೆ ನನ್ನನ್ನು ಕಲಾಸಿಪಾಳ್ಯ ಬಸ್ ನಿಲ್ದಾಣದ ಬಳಿ ಬಿಟ್ಟು ಹೋಗಿರುತ್ತಾರೆ. ಕಾಮುಕರು ಸುಮಾರು 25ರಿಂದ 30 ವರ್ಷ ಪ್ರಾಯದವರಾಗಿರುತ್ತಾರೆ. ಹೀಗಾಗಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಅಂತ ಕಾವ್ಯಾ ದೂರು ನೀಡಿದ್ದಳು.
Advertisement
Advertisement
ತನಿಖೆಯ ವೇಳೆ ಬಯಲಾಯ್ತು:
ದೂರು ದಾಖಲಿಸಿಕೊಂಡು ಕಾವ್ಯಳನ್ನು ಪೊಲೀಸರು ವಿಚಾರಣೆ ನಡೆಸಿದಾಗ ಆಕೆ ಪದೇ ಪದೇ ತನ್ನ ಹೇಳಿಕೆಯನ್ನು ಬದಲಾಯಿಸುತ್ತಿದ್ದಳು. ಹೀಗಾಗಿ ಮತ್ತಷ್ಟು ಅನುಮಾನ ಬಂದು ವಿಚಾರಣೆ ನಡೆಸಿದಾಗ ಆಕೆಯ ನಿಜಬಣ್ಣ ಗೊತ್ತಾಗಿದೆ. ಒಂದು ವೇಳೆ ನನ್ನ ಮೇಲೆ ಗ್ಯಾಂಗ್ ರೇಪ್ ಆರೋಪ ಬಂದರೆ ಗಂಡ ಬಿಟ್ಟು ಬಿಡ್ತಾನೆ ಅನ್ನೋ ನಂಬಿಕೆಯಿಂದ ಮಹಿಳೆ ಈ ಪ್ಲಾನ್ ಮಾಡಿದ್ದಳು ಎನ್ನುವ ವಿಚಾರ ತನಿಖೆಯಿಂದ ಬಂದಿದೆ.