ಸೂರತ್: ಗುಜರಾತಿನ (Gujarat) ಸೂರತ್‌ನಲ್ಲಿ ನಕಲಿ ವೈದ್ಯರು (Fake Doctor) ಕ್ಲಿನಿಕ್‌ಗಳನ್ನು ನಡೆಸುವುದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಿ ಉದ್ಘಾಟಿಸಿರುವುದು ವರದಿಯಾಗಿದೆ.
ನಕಲಿ ವೈದ್ಯರ ಗುಂಪು ಆಸ್ಪತ್ರೆಯ ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರದಲ್ಲಿ ಉನ್ನತ ಆಡಳಿತ ಮತ್ತು ಪೊಲೀಸ್ ಅಧಿಕಾರಿಗಳೊಂದಿಗೆ ಮಾತಾಡದೆ ಅವರ ಹೆಸರನ್ನು ಮುದ್ರಿಸಿದೆ. ಆಮಂತ್ರಣ ಪತ್ರದಲ್ಲಿ ಆಯುರ್ವೇದ ವೈದ್ಯಕೀಯ ಪದವಿ ಹೊಂದಿರುವ ವೈದ್ಯ ಎಂದು ಪರಿಚಯಿಸಲಾದ ಬಿ.ಆರ್ ಶುಕ್ಲಾ ವಿರುದ್ಧ ಗುಜರಾತ್ ವೈದ್ಯಕೀಯ ಕಾಯ್ದೆಯಡಿ ಪ್ರಕರಣವಿದೆ. ಎಲೆಕ್ಟ್ರೋ-ಹೋಮಿಯೋಪತಿಯಲ್ಲಿ ಪದವಿ ಪಡೆದಿರುವುದಾಗಿ ಹೇಳಿಕೊಂಡಿರುವ ಮತ್ತೊಬ್ಬ ಸಹ-ಸಂಸ್ಥಾಪಕ ಆರ್.ಕೆ ದುಬೆ ವಿರುದ್ಧ ಸಹ ಗುಜರಾತ್ ವೈದ್ಯಕೀಯ ಕಾಯ್ದೆಯಡಿ ಪ್ರಕರಣ ಎದುರಿಸುತ್ತಿದ್ದಾನೆ. ಇವರಿಬ್ಬರು ನಕಲಿ ಪದವಿಗಳನ್ನು ಹೊಂದಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತೊಬ್ಬ ಸಹ-ಸಂಸ್ಥಾಪಕ ಜಿ.ಪಿ ಮಿಶ್ರಾ ವಿರುದ್ಧ ಮೂರು ಪ್ರಕರಣಗಳಿವೆ. ಅವರ ಪದವಿಯನ್ನು ಇನ್ನೂ ಪರಿಶೀಲಿಸಬೇಕಾಗಿದೆ. ಇತರ ಇಬ್ಬರು ಸಹ-ಸಂಸ್ಥಾಪಕರ ಪದವಿಗಳ ಬಗ್ಗೆಯೂ ಸಂಶಯವಿದೆ. ಈ ಬಗ್ಗೆ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಆಸ್ಪತ್ರೆಯ ಉದ್ಘಾಟನೆಯ ಒಂದು ದಿನದ ನಂತರ ಅದನ್ನು ಮುಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೂರತ್ ಮುನ್ಸಿಪಲ್ ಕಮಿಷನರ್ ಶಾಲಿನಿ ಅಗರ್ವಾಲ್, ಪೊಲೀಸ್ ಕಮಿಷನರ್ ಅನುಪಮ್ ಸಿಂಗ್ ಗಹ್ಲೌತ್ ಮತ್ತು ಜಂಟಿ ಪೊಲೀಸ್ ಕಮಿಷನರ್ ರಾಘವೇಂದ್ರ ವತ್ಸಾ ಸೇರಿದಂತೆ ಉನ್ನತ ಅಧಿಕಾರಿಗಳ ಹೆಸರುಗಳು ಉದ್ಘಾಟನೆಯ ಆಹ್ವಾನ ಪತ್ರಿಕೆಯಲ್ಲಿತ್ತು. ಅಂತಹ ಯಾವುದೇ ಆಹ್ವಾನದ ಬಗ್ಗೆ ತಮಗೆ ತಿಳಿದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರ್ಯಾರೂ ಕಾರ್ಯಕ್ರಮಕ್ಕೆ ಬಂದಿರಲಿಲ್ಲ.
ಆಸ್ಪತ್ರೆ ಆವರಣವನ್ನು ಸೀಲ್ ಮಾಡಲಾಗಿದೆ. ತನಿಖೆ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.