ಭೋಪಾಲ್: ಮಧ್ಯಪ್ರದೇಶದ (Madhya Pradesh) ಆಸ್ಪತ್ರೆಯೊಂದರಲ್ಲಿ (Hospital) ನಕಲಿ ವೈದ್ಯನೊಬ್ಬ ಸುಮಾರು 7 ಜನರಿಗೆ ಹೃದಯ (Heart) ಶಸ್ತ್ರಚಿಕಿತ್ಸೆ ಮಾಡಿದ್ದು, ರೋಗಿಗಳ ಸಾವಿಗೆ ಕಾರಣನಾಗಿದ್ದಾನೆ.
ದಾಮೋಹ್ ನಗರದ ಖಾಸಗಿ ಮಿಷನರಿ ಆಸ್ಪತ್ರೆಯಲ್ಲಿ ಒಂದು ತಿಂಗಳೊಳಗೆ 7 ಜನರ ಸಾವುಗಳ ವರದಿಯಾಗಿತ್ತು. ಇದು ಈ ಪ್ರದೇಶದಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ಸಂಬಂಧ ವೈದ್ಯನನ್ನು ಅಧಿಕಾರಿಗಳು ವಿಚಾರಿಸಿದಾಗ ಆತ ನಕಲಿ ವೈದ್ಯ ಎಂದು ತಿಳಿದು ಬಂದಿದೆ.
ಎನ್ ಜಾನ್ ಕೆಮ್ ಎಂಬ ವ್ಯಕ್ತಿ ಕ್ರಿಶ್ಚಿಯನ್ ಮಿಷನರಿ ಆಸ್ಪತ್ರೆಯಲ್ಲಿ ಬ್ರಿಟಿಷ್ ವೈದ್ಯನಂತೆ ನಟಿಸಿ ಕೆಲಸ ಮಾಡುತ್ತಿದ್ದ. ಹೆಚ್ಚಿನ ತನಿಖೆಯ ನಂತರ, ಆರೋಪಿಯ ನಿಜವಾದ ಹೆಸರು ನರೇಂದ್ರ ವಿಕ್ರಮಾದಿತ್ಯ ಯಾದವ್ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಪತ್ನಿಗೆ ಅಕ್ರಮ ಸಂಬಂಧ ಶಂಕೆ – ಸುತ್ತಿಗೆಯಿಂದ ಇಂಜಿನಿಯರ್ ತಲೆ ಒಡೆದು ಹತ್ಯೆಗೈದ ಪತಿ
ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಮಕ್ಕಳ ಕಲ್ಯಾಣ ಸಮಿತಿಯ ಜಿಲ್ಲಾ ಅಧ್ಯಕ್ಷ ಮತ್ತು ವಕೀಲ ದೀಪಕ್ ತಿವಾರಿ, ಅಧಿಕೃತ ಸಾವಿನ ಸಂಖ್ಯೆ 7 ಆಗಿದ್ದರೂ, ನಿಜವಾದ ಸಂಖ್ಯೆ ಇನ್ನೂ ಹೆಚ್ಚಾಗಿದೆ ಎಂದು ಆರೋಪಿಸಿದ್ದಾರೆ. ಈ ವೈದ್ಯನ ವಿರುದ್ಧ ನಾನು ಈ ಹಿಂದೆ ದಾಮೋಹ್ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ದೂರು ನೀಡಿದ್ದೆ ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಪ್ರಿಯಾಂಕ್ ಕನೂಂಗೊ ಈ ಬಗ್ಗೆ ಪ್ರತಿಕ್ರಿಯಿಸಿ, ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ಮಿಷನರಿ ಆಸ್ಪತ್ರೆ ಸರ್ಕಾರದಿಂದ ಹಣವನ್ನು ಪಡೆಯುತ್ತಿದೆ ಎಂದು ಹೇಳಿದ್ದಾರೆ.
ಈ ಪ್ರಕರಣದ ಬಳಿಕ ತನಿಖಾ ತಂಡವು ಆಸ್ಪತ್ರೆಯಿಂದ ಎಲ್ಲಾ ದಾಖಲೆಗಳನ್ನು ವಶಪಡಿಸಿಕೊಂಡಿದೆ. ತನಿಖೆಯ ಸಮಯದಲ್ಲಿ, ವಂಚಕ ಪ್ರಸಿದ್ಧ ಬ್ರಿಟಿಷ್ ವೈದ್ಯರಂತೆಯೇ ನಕಲಿ ದಾಖಲೆಗಳನ್ನು ಸಲ್ಲಿಸಿದ್ದಾನೆ ಎಂದು ತಿಳಿದುಬಂದಿದೆ. ಆತನ ವಿರುದ್ಧ ಈ ಹಿಂದೆ ಹೈದರಾಬಾದ್‌ನಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಕಾರವಾರ | ಹಿಂದೂ ಮಹಾಸಾಗರದಲ್ಲಿ 9 ಮಿತ್ರ ರಾಷ್ಟ್ರಗಳೊಂದಿಗೆ IOS ಸಾಗರ ಹೆಸರಿನ ಕಾರ್ಯಾಚರಣೆಗೆ ಚಾಲನೆ