ಬೆಂಗಳೂರು: ಕಂತೆ ಕಂತೆ ನಕಲಿ ನೋಟುಗಳನ್ನು (Fake Currency) ಮುದ್ರಿಸಿ ಆರ್‌ಬಿಐಗೆ (RBI) ನೀಡಿ ಟೊಪ್ಪಿ ಹಾಕಲು ಯತ್ನಿಸಿದ ವಂಚಕರ ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದಿದೆ.
ಬಂಧಿತ ಆರೋಪಿಗಳನ್ನು ಅಬ್ದುಲ್, ಪ್ರಸೀತ್, ಮೊಹಮ್ಮದ್ ಅಫ್ನಾಸ್, ನೂರುದ್ದೀನ್ ಅನ್ವರ್ ಹಾಗೂ ಪ್ರಿಯೇಶ್ ಎಂದು ತಿಳಿದು ಬಂದಿದೆ. ಆರೋಪಿಗಳು ಹಿಂದಿಯ ವೆಬ್ ಸೀರಿಸ್ ಒಂದರಲ್ಲಿ ನೋಟುಗಳನ್ನ ಮುದ್ರಿಸಿ ವಾಮಮಾರ್ಗದಲ್ಲಿ ಸರಬರಾಜು ಮಾಡುವ ಕತೆಯನ್ನು ಮೀರಿಸುವ ಹಾಗೆ ನಕಲಿ ನೋಟುಗಳನ್ನು ಮುದ್ರಿಸಿ ವಂಚಿಸುತ್ತಿದ್ದರು. ಅಲ್ಲದೇ ನಕಲಿ ನೋಟುಗಳನ್ನು ಆರ್‌ಬಿಐಗೆ ನೀಡಿ ರಾಜಾರೋಷವಾಗಿ ಚಾಲ್ತಿಗೆ ತರಲು ಪ್ರಯತ್ನಿಸಿದ್ದರು.
ಇದರಲ್ಲಿ ಸಿರಗುಪ್ಪ ಮೂಲದ ಅಬ್ದುಲ್ ಉದ್ಯಮಿ ಆಗಿದ್ದು, ಪ್ರಸೀತ್ ಅಲಿಯಾಸ್ ಪ್ರಸಿದ್‌ಗೆ 40 ಲಕ್ಷ ರೂ. ಮೌಲ್ಯದ ಗ್ರಾನೈಟ್ ಮಾರಾಟ ಮಾಡಿದ್ದ. ಪದೇ ಪದೇ ಹಣ ಕೇಳುತ್ತಿದ್ದ. ಅಬ್ದುಲ್‌ಗೆ ನನ್ನ ಹತ್ರ 2000 ರೂ. ಮುಖಬೆಲೆಯ 25 ಲಕ್ಷ ರೂ. ಹಣ ಇದೆ, ಅದನ್ನು ಆರ್‌ಬಿಐನಲ್ಲಿ ಎಕ್ಸ್‌ಚೇಂಜ್ ಮಾಡಿಸಿಕೋ ಎಂದು ಪ್ರಸಿದ್ದ್ 25 ಲಕ್ಷ ರೂ. ನಕಲಿ ನೋಟ್ ಕೊಟ್ಟಿದ್ದನಂತೆ. ಈ ಹಣವನ್ನ ಬೆಂಗಳೂರಿನ ಆರ್‌ಬಿಐಗೆ ತಂದ ಅಬ್ದುಲ್, ಅಲ್ಲಿ ಮೆಷಿನ್‌ನಲ್ಲಿ ಹಾಕಿದಾಗ ಹಣ ಚಲಾವಣೆ ಆಗಿರಲಿಲ್ಲ. ಈ ವೇಳೆ ಅಬ್ದುಲ್‌ಗೆ ನೋಟಿನ ಬಗ್ಗೆ ಅನುಮಾನ ಬಂದಿದ್ದರೂ ಕೂಡ, ನೇರವಾಗಿ ಅಧಿಕಾರಿಗಳ ಬಳಿ ಹೋಗಿ ನೋಟು ಎಕ್ಸ್ ಚೇಂಜ್ ಮಾಡಲು ಕೇಳಿದ್ದಾನೆ. ಈ ವೇಳೆ ನೋಟು ಪರಿಶೀಲನೆ ಮಾಡಿದಾಗ ನಕಲಿ ನೋಟುಗಳು ಎಂಬುದು ಬೆಳಕಿಗೆ ಬಂದಿದೆ.
ಆರ್‌ಬಿಐ ಅಧಿಕಾರಿಗಳು ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ನಕಲಿ ನೋಟಿನ ಮೂಲ ಬೆನ್ನತ್ತಿ ವಿಚಾರಣೆ ನಡೆಸಿದಾಗ ಕೇರಳದ (Kerala) ಕಾಸರಗೋಡು ಲಿಂಕ್ ಸಿಕ್ಕಿದ್ದು, ಅಲ್ಲಿನ ಪ್ರಿಯೇಶ್, ಮೊಹಮ್ಮದ್ ಅಫ್ನಾಸ್ ಹಾಗೂ ನೂರುದ್ದೀನ್ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆರೋಪಿ ಪ್ರಿಯೇಶ್ ಪ್ರಿಂಟಿಂಗ್ ಪ್ರೆಸ್ ಹೊಂದಿದ್ದು, ಅದರಲ್ಲಿ ಎರಡು ಸಾವಿರ ಮುಖಬೆಲೆ ಖೋಟಾ ನೋಟು ಮುದ್ರಿಸಿ ಹಂಚಿಕೆ ಮಾಡುತ್ತಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ.
ಹಲಸೂರು ಗೇಟ್ ಪೊಲೀಸರು ಕಾಸರಗೋಡಿನಲ್ಲಿ 29 ಲಕ್ಷ ರೂ. ನಕಲಿ ನೋಟು, ಪ್ರಿಂಟಿಂಗ್ ಮೆಷಿನ್, ಕಚ್ಚಾ ಪೇಪರ್ ಹಾಗೂ ವಸ್ತುಗಳನ್ನ ವಶಕ್ಕೆ ಪಡೆದಿದ್ದಾರೆ. ಒಟ್ಟು 52 ಲಕ್ಷ ರೂ. ನಕಲಿ ನೋಟು ಪತ್ತೆಯಾಗಿದ್ದು, ಎಲ್ಲವನ್ನು ಜಪ್ತಿ ಮಾಡಿದ್ದಾರೆ. ಪ್ರಕರಣದಲ್ಲಿ ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು ಪೊಲೀಸರು ಹುಡುಕಾಟ ನಡೆಸಿದ್ದಾರೆ.