ಕೋಲ್ಕತ್ತಾ: ಶೂ ನ ಅಡಿಭಾಗದಲ್ಲಿ 2,000 ರೂ. ಮುಖಬೆಲೆಯ ಸುಮಾರು 4 ಲಕ್ಷ ರೂ. ನಕಲಿ ನೋಟುಗಳನ್ನು ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ವ್ಯಕ್ತಿಯನ್ನು ವಾಸಿಮ್ ಅಕ್ರಮ್ ಎಂದು ಗುರುತಿಸಲಾಗಿದ್ದು, ಈತನನ್ನು ಕೋಲ್ಕತ್ತಾ ಪೊಲೀಸರು ತಡೆದು ಪರಿಶೀಲಿಸಿದಾಗ ನಕಲಿ ನೋಟುಗಳನ್ನ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿತ್ತು. ಗುರುವಾರದಂದು ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಖಚಿತ ಮಾಹಿತಿ ಆಧರಿಸಿ ಕೋಲ್ಕತ್ತಾ ಪೊಲೀಸ್‍ನ ಸ್ಪೆಷಲ್ ಟಾಸ್ಕ್ ಫೋರ್ಸ್ ಅಧಿಕಾರಿಗಳು ಬಿನಿಯಾಪುಕುರ್ ಬಳಿ ವಾಸಿಮ್‍ನನ್ನು ತಡೆದು ಆತ ಕೊಂಡೊಯ್ಯುತ್ತಿದ್ದ ಬ್ಯಾಗ್ ತಪಾಸಣೆ ಮಾಡಿದ್ದರು. ಮೊದಲಿಗೆ ಹೆಚ್ಚಿನದ್ದೇನೂ ಪತ್ತೆಯಾಗಿರಲಿಲ್ಲ. ಕೇವಲ 3 ಜೊತೆ ಹೊಸ ಶೂಗಳು ಬ್ಯಾಗ್‍ನಲ್ಲಿದ್ದವು.
ನಡಿಗೆಯಿಂದ ಸಿಕ್ಕಿಬಿದ್ದ: ವಾಸಿಮ್ ತನ್ನ ಬ್ಯಾಗ್‍ನಲ್ಲಿದ್ದ ಶೂನಂತೇಯೇ ಮತ್ತೊಂದು ಶೂ ಧರಿಸಿ ವಿಚಿತ್ರವಾಗಿ ನಡೆಯುತ್ತಿದ್ದ. ಇದನ್ನು ಗಮನಿಸಿ ತಪಾಸಣೆ ಮಾಡಿದಾಗ ನಕಲಿ ನೋಟುಗಳು ಇದ್ದಿದ್ದು ಪತ್ತೆಯಾಯ್ತು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. 2 ಸಾವಿರ ರೂ. ಮುಖಬೆಲೆಯ 4 ಲಕ್ಷ ರೂ ಮೊತ್ತದ ಹಣವನ್ನ ಬ್ಯಾಗ್‍ನಲ್ಲಿದ್ದ ಶೂನ ಸೋಲ್‍ನಲ್ಲಿ ಹಾಗೂ ತಾನು ಧರಿಸಿದ್ದ ಶೂನಲ್ಲಿ ಅಡಗಿಸಿದ್ದ ಎಂದು ಅವರು ಹೇಳಿದ್ದಾರೆ.
ಈತ ನಕಲಿ ನೋಟುಗಳನ್ನ ಮುಂಬೈಗೆ ಸಾಗಾಟ ಮಾಡಲು ವಾಸಿಮ್ ಪ್ಲಾನ್ ಮಾಡಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿರುವುದಾಗಿ ಅವರು ತಿಳಿಸಿದ್ದಾರೆ.
ಮಾಲ್ದಾ ಜಿಲ್ಲೆಯ ಬೈಶ್ನಾಬ್‍ನಗರ್ ನಿವಾಸಿಗಿರೋ ವಾಸಿಮ್ ನಕಲಿ ನೋಟು ಜಾಲದಲ್ಲಿ ಕೆಲಸ ಮಾಡುತ್ತಿದ್ದಾನಾ ಎಂಬುದರ ಬಗ್ಗೆ ಎಸ್‍ಟಿಎಫ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.