ಬೆಳಗಾವಿ: ಸಿಬಿಐ ಅಧಿಕಾರಿ (CBI Officer) ಎಂದು ನಂಬಿಸಿ, ಸಾರ್ವಜನಿಕರಿಂದ ಹಣ ವಂಚನೆ ಮಾಡುತ್ತಿದ್ದ ಆರೋಪದಡಿ ವ್ಯಕ್ತಿಯೋರ್ವನನ್ನು ಬೆಳಗಾವಿಯ (Belagavi) ಮಾಳಮಾರುತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿಯ ಆಂಜನೇಯ ನಗರದ ನಿವಾಸಿ, ಮೂಲತಃ ಹುಕ್ಕೇರಿ ತಾಲ್ಲೂಕಿನ ಇಸ್ಲಾಂಪುರದ ದಯಾನಂದ ರಾಮು ಜಿಂಡ್ರಾಳೆ(33) ಬಂಧಿತ ಆರೋಪಿ. ನನ್ನ ಗೆಳೆಯನಿಗೆ ಅಪಘಾತವಾಗಿದೆ. ಚಿಕಿತ್ಸೆಗೆ ಹಣದ ಅಗತ್ಯವಿದೆ ಎಂದು ದಯಾನಂದ ನನ್ನಿಂದ 5 ಲಕ್ಷ ರೂ. ಪಡೆದಿದ್ದ. ಅದನ್ನು ಮರಳಿಸದೇ ಬೇರೆ ಬೇರೆ ಸಹಿಯುಳ್ಳ 50 ಸಾವಿರ ರೂ. ಮತ್ತು 3 ಲಕ್ಷ ರೂ. ಎರಡು ಚೆಕ್ ಕೊಟ್ಟಿದ್ದ ಎಂದು ಆರೋಪಿಸಿ ಆಟೊ ನಗರದ ನಿವಾಸಿ ಅಫ್ಜಲ್ ಬೀಡಿ ಎಂಬುವವರು ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇದನ್ನೂ ಓದಿ: Karnataka Rain| ಜುಲೈನಲ್ಲಿ ವಾಡಿಕೆಗಿಂತಲೂ 48% ಜಾಸ್ತಿ ಮಳೆ
Advertisement
Advertisement
ದೂರು ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಆರೋಪಿ ದಯಾನಂದ ಸಿಬಿಐ, ಎಐಸಿ ಅಧಿಕಾರಿ ಎಂದು ಸುಳ್ಳು ಹೇಳಿ ನಿರುದ್ಯೋಗಿ ಯುವಕರಿಗೆ ಕೆಎಸ್ಆರ್ ಟಿಸಿ,ಅರಣ್ಯ ಇಲಾಖೆ, ಅಬಕಾರಿ ಇಲಾಖೆಗಳಲ್ಲಿ ನೌಕರಿ ಕೊಡಿಸುವುದಾಗಿ ಮೋಸ ಮಾಡಿದ್ದ. ನಿಪ್ಪಾಣಿ ರಾಯಬಾಗ, ಕಾಗವಾಡ, ಚಿಕ್ಕೋಡಿ, ಹಾರೂಗೇರಿ ಭಾಗದಲ್ಲಿ ಹಲವರಿಗೆ ಮೋಸ ಮಾಡಿರುವುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ. 10ರಿಂದ 12 ಎಟಿಎಂ ಕಾರ್ಡ್ ಮತ್ತು ಅರಣ್ಯ ಇಲಾಖೆ ಗುರುತಿನ ಚೀಟಿ ಹೊಂದಿದ್ದ. ಆರೋಪಿಯನ್ನು ಬಂಧಿಸಿ ನ್ಯಾಯಲಯಕ್ಕೆ ಹಾಜರುಪಡಿಸಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.