ಬೆಂಗಳೂರು: ಇಂಗ್ಲಿಷ್‍ನಲ್ಲಿ ಮಾತನಾಡಿ ವಿವಿಧ ಬ್ಯಾಂಕ್ ಗ್ರಾಹಕರಿಗೆ ವಂಚಿಸಿದ್ದ ನಕಲಿ ಮ್ಯಾನೇಜರ್‌ನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಶಿವಪ್ರಸಾದ್ ಮಾಗಡಿ (30) ಬಂಧಿತ ನಕಲಿ ಮ್ಯಾನೇಜರ್. ಆರೋಪಿ ಶಿವಪ್ರಸಾದ್ ವಿವಿಧ ಬ್ಯಾಂಕ್ ಗ್ರಾಹಕರಿಗೆ ಫೋನ್ ಮಾಡಿ, ನಾನು ಬ್ಯಾಂಕ್ ಮ್ಯಾನೇಜರ್ ಎಂದು ಹೇಳಿಕೊಳ್ಳುತ್ತಿದ್ದ. ಬಳಿಕ ಗ್ರಾಹಕರಿಗೆ ಅನುಮಾನ ಬರದಂತೆ, ನಿಮ್ಮ ಅಕೌಂಟ್‍ನಲ್ಲಿ ಸ್ವಲ್ಪ ಟೆಕ್ನಿಕಲ್ ಸಮಸ್ಯೆ ಆಗಿದೆ. ಹೀಗಾಗಿ ಅಕೌಂಟ್ ಮಾಹಿತಿ ನೀಡಿ ಎಂದು ಇಂಗ್ಲಿಷ್‍ನಲ್ಲಿ ಕೇಳುತ್ತಿದ್ದ.
ಆರೋಪಿಯ ಮಾತನ್ನು ನಂಬಿದ ಗ್ರಾಹಕರು ಬ್ಯಾಂಕ್ ಮಾಹಿತಿ ನೀಡುತ್ತಿದ್ದರು. ಅಷ್ಟೇ ಅಲ್ಲದೆ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮಾಹಿತಿ ಜೊತೆಗೆ ಓಟಿಪಿ ಪಡೆದು ಲಕ್ಷಾಂತರ ರೂಪಾಯಿ ವಂಚಿಸುತ್ತಿದ್ದ. ಇದೇ ರೀತಿ ರವಿ ಎಂಬವರಿಗೆ ಕಾಲ್ ಮಾಡಿದ್ದ ಶಿವಪ್ರಸಾದ್, ಸುಳ್ಳು ಹೇಳಿ ಮಾಹಿತಿ ಪಡೆದು ಬರೋಬ್ಬರಿ 97 ಲಕ್ಷ ರೂ. ಹಣ ಡ್ರಾ ಮಾಡಿ ತಲೆಮರೆಸಿಕೊಂಡಿದ್ದ.
ಹಣ ಕಳೆದುಕೊಂಡಿದ್ದ ರವಿ ಅವರು ಆರೋಪಿ ಶಿವಪ್ರಸಾದ್ ವಿರುದ್ಧ ಹಲಸೂರುಗೇಟ್ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಹಲಸೂರುಗೇಟ್ ಪೊಲೀಸರು ನಕಲಿ ಮ್ಯಾನೇಜರ್ ಶಿವಪ್ರಸಾದ್‍ನನ್ನು ಬಂಧಿಸಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಶಿವಪ್ರಸಾದ್ ಹತ್ತಕ್ಕೂ ಹೆಚ್ಚು ಜನರಿಗೆ ಇದೇ ರೀತಿ ಲಕ್ಷಾಂತರ ರೂಪಾಯಿ ವಂಚಿಸಿರುವುದು ಬೆಳಕಿಗೆ ಬಂದಿದ್ದು, ಆ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ.