ಯಾದಗಿರಿ: ಸಿಎಂ ಸಿದ್ದರಾಮಯ್ಯ ಸರ್ಕಾರ ಬಡ ಜನರ ಹೊಟ್ಟೆ ತುಂಬಿಸಲು ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದೆ. ಅನ್ನಭಾಗ್ಯ ಯೋಜನೆಯಿಂದ ಬಡಜನರಿಗೆ ಅನುಕೂಲವಾಗಿದೆ. ಆದ್ರೆ ನ್ಯಾಯಬೆಲೆ ಅಂಗಡಿ ಮಾಲೀಕರು ಉಚಿತ ಅಕ್ಕಿ ನೀಡುವ ಬದಲು ಬಡ ಜನರಿಂದ ಹಣ ಕೊಳ್ಳೆ ಹೊಡೆಯುವ ಕೆಲಸ ಮಾಡುತ್ತಿದ್ದಾರೆ.
ಸರ್ಕಾರ 2013 ರಲ್ಲಿ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದ್ದು ಮೊದಲು 1 ರೂ. ಕೊಟ್ಟು ಅಕ್ಕಿ ಪಡೆಯಬೇಕಾಗಿತ್ತು. ನಂತರ ಸರ್ಕಾರ ಕಳೆದ ವರ್ಷ ಮೇ ತಿಂಗಳಲ್ಲಿ ಪ್ರತಿ ಯುನಿಟ್ ಕಾರ್ಡ್‍ಗೆ 5 ಕೆಜಿ ಉಚಿತ ಅಕ್ಕಿ ನೀಡುವ ಯೋಜನೆ ಜಾರಿಗೆ ತಂದಿದೆ. ನಂತರ ಇದೇ ಏಪ್ರಿಲ್ 1 ರಿಂದ ಪ್ರತಿ ಯುನಿಟ್ ಕಾರ್ಡ್‍ನ ಒಬ್ಬ ಸದಸ್ಯನಿಗೆ 7 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲು ಆದೇಶ ಹೊರಡಿಸಿದೆ. ಆದ್ರೆ ಯಾದಗಿರಿ ಜಿಲ್ಲೆಯಲ್ಲಿ ನ್ಯಾಯಬೆಲೆ ಅಂಗಡಿ ಮಾಲೀಕರು ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಅನ್ನಭಾಗ್ಯ ಯೋಜನೆಯಲ್ಲಿ ಬಡಜನರಿಂದ ಹಣ ದೋಚುವ ಹಗಲು ದರೋಡೆ ಕೆಲಸ ಮಾಡುತ್ತಿವೆ.
ಉಚಿತವಾಗಿ 7 ಕೆಜಿ ಅಕ್ಕಿ ನೀಡುವ ಬಗ್ಗೆ ಜನರಿಗೆ ಸರಿಯಾಗಿ ಮಾಹಿತಿ ಕೂಡುತ್ತಿಲ್ಲ. ಯಾದಗಿರಿ ಜಿಲ್ಲೆಯ ಶಹಾಪೂರ ತಾಲೂಕಿನ ಹಾಲಗೇರಾದಲ್ಲಿ ಮಾತ್ರವಲ್ಲ ಜಿಲ್ಲೆಯ ಬಹುತೇಕ ಗ್ರಾಮೀಣ ಪ್ರದೇಶದ ನ್ಯಾಯ ಬೆಲೆ ಅಂಗಡಿ ಮಾಲೀಕರು ಜನರಿಗೆ ಅಕ್ಕಿ ಕೊಟ್ಟು ಹಣ ಪಡೆಯುತ್ತಿದ್ದಾರೆ. ಕೆಲವು ಕಡೆ ಅಂಗಡಿ ಮಾಲೀಕರು 10 ರಿಂದ 50 ವರಗೆ ಹಣ ಪಡೆದು ಅನ್ನಭಾಗ್ಯ ಪಡಿತರ ಅಕ್ಕಿ ವಿತರಣೆ ಮಾಡುತ್ತಿದ್ದಾರೆ.
ಈ ಬಗ್ಗೆ ನ್ಯಾಯ ಬೆಲೆ ಅಂಗಡಿ ಮಾಲೀಕರಿಗೆ ಕೇಳಿದ್ರೆ, ಕೆಲವೊಮ್ಮೆ ಅಕ್ಕಿ ತೂಕದಲ್ಲಿ ಕಡಿಮೆ ಬರುತ್ತವೆ. ಹೀಗಾಗಿ ಹಣ ಪಡೆಯುತ್ತಿದ್ದೇವೆ ಎನ್ನುತ್ತಾರೆ.