ಮಂಡ್ಯ: ಶಿವರಾತ್ರಿ ಜಾತ್ರಾಮಹೋತ್ಸವದ ಅಂಗವಾಗಿ ಭಾನುವಾರ ನಡೆದ ರಥೋತ್ಸವದ ವೇಳೆ ರಥದ ಚಕ್ರಕ್ಕೆ ಸಿಲುಕಿ ಬಾಲಕ ಮೃತಪಟ್ಟು, ಮತ್ತೋರ್ವನಿಗೆ ಗಾಯವಾಗಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.
ಜಿಲ್ಲೆಯ ಮದ್ದೂರು ತಾಲೂಕಿನ ಹನುಂತನಗರದ ಶ್ರೀ ಆತ್ಮಲಿಂಗೇಶ್ವರ ಕ್ಷೇತ್ರದಲ್ಲಿ ಘಟನೆ ನಡೆದಿದ್ದು, ಕರಡಕೆರೆ ಗ್ರಾಮದ ಶಿವಕುಮಾರ್ (13) ಮೃತಪಟ್ಟ ಬಾಲಕ. ಲಿಂಗೇಗೌಡ (50) ಕಾಲುಮುರಿದುಕೊಂಡ ವ್ಯಕ್ತಿ. ಭಾನುವಾರ ಸಂಜೆ 4 ಗಂಟೆಗೆ ಪ್ರಾರಂಭವಾದ ರಥೋತ್ಸವ ಶ್ರೀ ಆತ್ಮಲಿಂಗೇಶ್ವರ ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕಿ ರಥವನ್ನು ನಿಲ್ಲಿಸಲಾಗಿತ್ತು.
- Advertisement 2-
- Advertisement 3-
ನಂತರ ರಥದ ಮನೆಗೆ ರಥವನ್ನು ಎಳೆದು ನಿಲ್ಲಿಸುವಾಗ ಶಿವಕುಮಾರ್ ರಥದ ಚಕ್ರಕ್ಕೆ ಸಿಲುಕಿದ್ದಾನೆ. ಇದನ್ನು ಕಂಡ ಲಿಂಗೇಗೌಡ ಬಾಲಕನ್ನು ರಕ್ಷಿಸಲು ಯತ್ನಿಸಿದಾಗ ರಥದ ಹಿಂಬದಿಯ ಚಕ್ರಕ್ಕೆ ಕಾಲು ಸಿಲುಕಿ ಅವರ ಕಾಲು ಮುರಿದು ತೀವ್ರವಾಗಿ ಗಾಯಗೊಂಡಿದ್ದಾರೆ.
- Advertisement 4-
ಬಳಿಕ ಇಬ್ಬರನ್ನೂ ಕೆ.ಎಂ.ದೊಡ್ಡಿಯ ಜಿ.ಮಾದೇಗೌಡ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶಿವಕುಮಾರ್ ಮೃತಪಟ್ಟಿದ್ದಾನೆ. ಗಾಯಗೊಂಡಿರುವ ಲಿಂಗೇಗೌಡ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಕೆ.ಎಂ.ದೊಡ್ಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.