ಕಿಡ್ನಾಪ್ ಯತ್ನ ವಿಫಲವಾದಾಗ ಬಾಲಕಿಯ ಮೂಗನ್ನೇ ಕತ್ತರಿಸಿದ ಗ್ಯಾಂಗ್

Public TV
1 Min Read
Police Jeep 1

ಚಂಡೀಗಢ: ಮನೆಗೆ ನುಗ್ಗಿ ಬಾಲಕಿಯೋರ್ವಳನ್ನು ಅಪಹರಿಸಲು ಗ್ಯಾಂಗೊಂದು ಯತ್ನಿಸಿದ್ದು, ತಮ್ಮ ಪ್ರಯತ್ನ ವಿಫಲವಾದಾಗ ಆಕೆಯ ಮೂಗನ್ನೇ ಕತ್ತರಿಸಿ ದುಷ್ಕರ್ಮಿಗಳು ಪರಾರಿಯಾದ ಅಮಾನವೀಯ ಘಟನೆ ಹರ್ಯಾಣದ ಗುರುಗ್ರಾಮದಲ್ಲಿ ನಡೆದಿದೆ.

ಭಾನುವಾರ ಈ ಘಟನೆ ನಡೆದಿದೆ. ಸಂತ್ರಸ್ತೆ ಪೂನಂ ಕುಮಾರಿ ತನ್ನ ಕುಟುಂಬಸ್ಥರೊಂದಿಗೆ ಮನೆಯಲ್ಲಿ ಇದ್ದಾಗ ಆರೋಪಿಗಳಾದ ಗೌರವ್ ಯಾದವ್, ಆಕಾಶ್ ಯಾದವ್, ಸತೀಶ್ ಯಾದವ್, ಮೋನು ಯಾದವ್ ಮತ್ತು ಲೀಲು ಯಾದವ್ ಈ ದುಷ್ಕøತ್ಯವೆಸೆಗಿದ್ದಾರೆ. ಮನೆಗೆ ನುಗ್ಗಿದ ಆರೋಪಿಗಳು ಬಾಲಕಿಯನ್ನು ಅಪಹರಿಸಲು ಯತ್ನಿಸಿದ್ದಾರೆ. ಆದರೆ ಈ ವೇಳೆ ಆಕೆಯ ಅಣ್ಣ ಅಡ್ಡಬಂದಾಗ ಆತನ ಮೇಲೆ ಹಾಗೂ ಕುಟುಂಬಸ್ಥರ ಮೇಲೆ ಆರೋಪಿಗಳು ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಗೌರವ್ ಹಾಗೂ ಆಕಾಶ್ ಇಬ್ಬರು ಸೇರಿ ಹರಿತವಾದ ವಸ್ತುವಿನಿಂದ ಬಾಲಕಿಯ ಮೂಗು ಕತ್ತರಿಸಿದ್ದಾರೆ. ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

police

ಈ ಬಗ್ಗೆ ಬಾಲಕಿ ಅಣ್ಣ ಪೊಲೀಸರಿಗೆ ದೂರು ನೀಡಿದ್ದು, ಹಲ್ಲೆ ಮಾಡಿದ ಆರೋಪಿಗಳು ಪ್ರಭಾವಿಗಳು. ಊರಿನಲ್ಲಿ ಎಲ್ಲರ ಜೊತೆಗೂ ಅವರು ಜಗಳವಾಡುತ್ತಾರೆ. ಆಸ್ತಿ ವಿಚಾರಕ್ಕೆ ಅವರ ವಿರುದ್ಧ ನಮ್ಮ ಕುಟುಂಬ ದೂರು ನೀಡಿತ್ತು. ಅದಕ್ಕಾಗಿ ನಮ್ಮ ಕುಟುಂಬದ ಮೇಲೆ ಅವರು ಹಲ್ಲೆ ಮಾಡಿದ್ದಾರೆ. ನನ್ನ ತಂಗಿಯ ಮೂಗನ್ನು ಕತ್ತರಿಸಿ ವಿಕೃತಿ ಮೆರೆದಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ.

5ರಿಂದ 6 ಮಂದಿ ಆರೋಪಿಗಳು ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ. ಆದರೆ ಅವರು ಹಲ್ಲೆ ನಡೆಸುತ್ತಿದ್ದಾಗ ಮನೆಯ ಹೊರಗೆ 15ರಿಂದ 20 ಮಂದಿ ಇದ್ದರು. ಅವರು ಅಕ್ಕಪಕ್ಕದ ಮನೆಯವರು ನಮ್ಮ ಸಹಾಯಕ್ಕೆ ಬರಬಾರದೆಂದು ಅವರನ್ನು ತಡೆಯುತ್ತಿದ್ದರು ಎಂದು ಬಾಲಕಿ ಅಣ್ಣ ತಿಳಿಸಿದ್ದಾರೆ. ಸದ್ಯ ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

Share This Article