Connect with us

Latest

ನೀರು ಆವಿಯಾಗೋದನ್ನ ತಡೆಯಲು ತಮಿಳ್ನಾಡು ಸರ್ಕಾರ ಮಾಡಿದ ಈ ಐಡಿಯಾ ಮೊದಲ ದಿನವೇ ಫ್ಲಾಪ್

Published

on

ಚೆನ್ನೈ: ಡ್ಯಾಮ್‍ನಿಂದ ನೀರು ಆವಿಯೋಗೋದನ್ನ ತಡೆಯಲು ತಮಿಳುನಾಡು ಸರ್ಕಾರ ಒಂದು ಹೊಸ ಯೋಜನೆಯನ್ನ ಕೈಗೊಂಡಿತ್ತು. ಆದ್ರೆ ಆ ಪ್ಲಾನ್ ಮೊದಲ ದಿನವೇ ಕೈಕೊಟ್ಟಿದೆ.

ಶುಕ್ರವಾರದಂದು ಸಹಕಾರ ಸಚಿವ ಸೆಲ್ಲೂರ್ ಕೆ ರಾಜು, ವಾಗೈ ಡ್ಯಾಂನ ನೀರನ್ನ ಥರ್ಮಕೋಲ್ ಶೀಟ್‍ಗಳಿಂದ ಮುಚ್ಚುವ 10 ಲಕ್ಷ ರೂ. ವೆಚ್ಚದ ಯೋಜನೆಗೆ ಚಾಲನೆ ನೀಡಿದ್ರು.

ಪರೀಕ್ಷಾರ್ಥವಾಗಿ 200 ಚದರ ಮೀಟರ್‍ನಷ್ಟು ನೀರಿನ ಮೇಲೆ ಥರ್ಮಕೋಲ್ ಶೀಟ್‍ಗಳನ್ನ ಹರಡುವುದು ಈ ಯೋಜನೆಯ ಉದ್ದೇಶವಾಗಿತ್ತು ಎಂದು ಇಲ್ಲಿನ ಲೋಕೋಪಯೋಗಿ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಈ ಐಡಿಯಾವನ್ನ ಮೊದಲಿಗೆ ಪ್ರಯೋಗ ಮಾಡಿ ಸಕಾರಾತ್ಮಕ ಫಲಿತಾಂಶ ಬಂದರೆ ಅದನ್ನು ವಿಸ್ತರಿಸಬೇಕೆಂದಿದ್ದೆವು ಎಂದು ಅಧಿಕಾರಿಗಳು ತಿಳಿಸಿದ್ದಾರೆ

ಆದ್ರೆ ಥರ್ಮಕೋಲ್ ಶೀಟ್‍ಗಳನ್ನು ಹರಡಿದ ಕೆಲವೇ ನಿಮಿಷಗಳಲ್ಲಿ ಅವು ಗಾಳಿಗೆ ತೂರಿಕೊಂಡು ಹೋಗಿದ್ದವು. ಕೊನೆಗೆ ಅವು ದಡ ತಲುಪಿದ್ದು, ಇನ್ನೂ ಕೆಲವು ಮುರಿದುಹೋಗಿದ್ದವು.

ಈ ಯೋಜನೆ ಅವೈಜ್ಞಾನಿಕವಾಗಿದೆ. ನೀರು ಆವಿಯಾಗುವುದು ಒಂದು ನೈಸರ್ಗಿಕ ಕ್ರಿಯೆ. ಅದು ಜಲ ಚಕ್ರ(ವಾಟರ್ ಸೈಕಲ್)ನ ಭಾಗ. ಈ ನೈಸರ್ಗಿಕ ಪ್ರಕ್ರಿಯೆಯನ್ನು ಯಾರಾದ್ರೂ ಯಾಕೆ ತಡೆಯಬೇಕು? ಎಂದು ಪರಿಸರವಾದಿ ಜಿ ಸುಂದರ್ ರಾಜನ್ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ. ಅಲ್ಲದೆ ಒಂದು ವೇಳೆ ಥರ್ಮಕೋಲ್ ತಿಂದರೆ ಮೀನು ಮತ್ತು ಪಕ್ಷಿಗಳಿಗೆ ತೊಂದರೆಯಾಗುತ್ತದೆ ಎಂದು ಅವರು ಹೇಳಿದ್ದಾರೆ.

ಮೂರ್ಖತನದ ಐಡಿಯಾ: ಡ್ಯಾಂನಲ್ಲಿ ಶೇಖರಣೆಯಾದ ನೀರಿನ ಮೇಲೆ ಥರ್ಮಕೋಲ್ ಶೀಟ್‍ಗಳನ್ನ ಹರಡಿ ಅವು ಅದೇ ಸ್ಥಳದಲ್ಲಿ ಇರುತ್ತವೆ ಎಂದುಕೊಳ್ಳುವುದು ನಿಜಕ್ಕೂ ಮೂರ್ಖತನ ಎಂದು ಅವರು ಹೇಳಿದ್ರು.

ಆದ್ರೆ ಡ್ಯಾಂನಲ್ಲಿ ಶೇಖರಣೆಯಾದ ನೀರು ಮಧುರೈ ನಗರಕ್ಕೆ ಕುಡಿಯುವ ನೀರಿಗಾಗಿ ಇರುವ ಪ್ರಮುಖ ಮೂಲ. ಆದ್ದರಿಂದ ದಿನಕ್ಕೆ 1.2 ಮಿಲಿಯನ್ ಕ್ಯೂಬಿಕ್ ಅಡಿಯಷ್ಟು ನೀರು ಆವಿಯಾಗುತ್ತಿರೋದನ್ನ ತಡೆಯುವುದು ತುಂಬಾ ಮುಖ್ಯ ಎಂದು ಅಧಿಕಾರಿಗಳು ವಾದಿಸಿದ್ದಾರೆ.

ಸಚಿವ ರಾಜು ಅವರು ಬಳಿಕ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಸಭೆ ಕರೆದು, ಥರ್ಮಕೋಲ್‍ಗಳು ಗಾಳಿಗೆ ಹಾರಿ ಹೋಗದಂತೆ ಹಾಗೂ ಇನ್ನಿತರೆ ತೊಂದರೆಗಳಿಗೆ ಪರಿಹಾರದ ಬಗ್ಗೆ ಚರ್ಚಿಸಿದ್ದಾರೆ. ಈ ಮಾದರಿಯನ್ನ ವಿದೇಶಗಳಲ್ಲಿ ಬಳಸಲಾಗುತ್ತಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿಗೆ ತಜ್ಞರನ್ನು ಸಂಪರ್ಕಿಸುತ್ತೇವೆ. ನೀರು ಉಳಿಸಲು ವಿವಿಧ ಐಡಿಯಾಗಳನ್ನ ಪ್ರಯೋಗ ಮಾಡಲು ರಾಜ್ಯ ಸರ್ಕಾರ 10 ಲಕ್ಷ ರೂ. ಹಣ ನಿಯೋಜಿಸಿದೆ ಎಂದು ಸಚಿವರು ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

ಈ ಐಡಿಯಾ ಯಶಸ್ವಿಯಾಗಿದ್ದೂ ಇದೆ: ಕೃಷಿ ಹೊಂಡಗಳಲ್ಲಿನ ನೀರು ಆವಿಯಾಗದಿರಲೆಂದು ನೀರಿನ ಮೇಲೆ ಥರ್ಮಕೋಲ್ ತೇಲಿಬಿಡುತ್ತಾರೆ. ಮಹಾರಾಷ್ಟ್ರದ ನಾಸಿಕ್‍ನ ದೇವೆರ್ ಗಾವ್‍ನಲ್ಲಿ ಈ ವಿಧಾನದ ಪ್ರಯೋಗ ಯಶಸ್ವಿಯಾಗಿದೆ. ಆದ್ರೆ ಇದು ಸಣ್ಣ ಹೊಂಡಗಳಿಗೆ ಮಾತ್ರ ಸರಿಹೊಂದುತ್ತದೆ. ಡ್ಯಾಂನ ಹಿನ್ನೀರಿಗೆ ಈ ಪ್ರಯೋಗ ಮಾಡಲು ಹೋದ್ರೆ ಸಮುದ್ರಕ್ಕೆ ಉಪ್ಪು ಹಾಕಿದಂತೆ.

ಸರ್ಕಾರದ ಈ ಯೋಜನೆ ಕೈ ಕೊಟ್ಟ ಬಗ್ಗೆ ಟ್ವಿಟ್ಟರ್‍ನಲ್ಲಿ ಟ್ರೋಲ್‍ಗಳು ಹರಿದಾಡ್ತಿವೆ.

Click to comment

Leave a Reply

Your email address will not be published. Required fields are marked *