ಮುಂಬೈ: ಮಹಾರಾಷ್ಟ್ರದಲ್ಲಿ ಸಚಿವ ಸಂಪುಟ (Maharashtra Cabinet Formation) ಖಾತೆ ಹಂಚಿಕೆ ಕುರಿತ ಸಸ್ಪೆನ್ಸ್‌ಗೆ ಡಿ.14ರಂದು ತೆರೆ ಬೀಳಲಿದೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನೇತೃತ್ವದ ಮಹಾರಾಷ್ಟ್ರ ಸರ್ಕಾರದ ಸಂಪುಟ ವಿಸ್ತರಣೆ ಡಿಸೆಂಬರ್ 14ರಂದು ನಡೆಯಲಿದೆ ಎಂದು ಉಪಮುಖ್ಯಮಂತ್ರಿ ಅಜಿತ್ ಪವಾರ್ (Ajit Pawar) ಖಚಿತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಫಡ್ನವಿಸ್ (Devendra Fadnavis )ಅವರು ಬುಧವಾರ ತಡರಾತ್ರಿ ದೆಹಲಿಗೆ ತೆರಳಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಮುಖ್ಯಸ್ಥ ಜೆ.ಪಿ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದರು. ಇಂದು ಪ್ರಧಾನಿ ಮೋದಿಯನ್ನು ಭೇಟಿಯಾಗಿದ್ದಾರೆ. ಬಳಿಕ ಇದೊಂದು ಸೌಜನ್ಯದ ಭೇಟಿ ಎಂದು ತಿಳಿಸಿದ್ದಾರೆ.
Advertisement
Advertisement
ಹಿಂದಿನ ಸರ್ಕಾರದಲ್ಲಿ ಸಿಎಂ ಆಗಿದ್ದ ಏಕನಾಥ್ ಶಿಂಧೆ (Eknath Shinde) ಈ ಬಾರಿ ಡಿಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಗೃಹ ಖಾತೆಯ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ. ಆದ್ರೆ ಮೂರು ಮಿತ್ರಪಕ್ಷಗಳ ಪೈಕಿ ಅತಿ ದೊಡ್ಡ ಪಕ್ಷವಾದ ಬಿಜೆಪಿ ಗೃಹ ಸಚಿವಾಲಯ ಖಾತೆಯಯನ್ನು ಉಳಿಸಿಕೊಳ್ಳಲಿದ್ದು, ಪಿಡಬ್ಲ್ಯುಡಿ (ಲೋಕೋಪಯೋಗಿ ಇಲಾಖೆ) ಮತ್ತು ಯುಡಿ (ನಗರಾಭಿವೃದ್ಧಿ) ಶಿಂಧೆ ಪಾಳೆಯಕ್ಕೆ ನೀಡುವ ಸಾಧ್ಯತೆಯಿದೆ. ಹಣಕಾಸು ಖಾತೆ ಅಜಿತ್ ಪವಾರ್ ಪಕ್ಷದ ಪಾಲಾಗುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ.
Advertisement
Advertisement
ಹೊಸ ಸೂತ್ರಕ್ಕೆ ಒಪ್ಪಿಗೆ:
ಮೂಲಗಳ ಪ್ರಕಾರ, ಮಹಾಯುತಿಯ ಮೂವರು ನಾಯಕರಾದ ಫಡ್ನವಿಸ್, ಏಕನಾಥ್ ಶಿಂಧೆ ಮತ್ತು ಅಜಿತ್ ಪವಾರ್ ಖಾತೆ ಹಂಚಿಕೆಯ ಹೊಸ ಸೂತ್ರಕ್ಕೆ ಒಪ್ಪಿಗೆ ನೀಡಿದ್ದಾರೆ. ಅದರಂತೆ ಬಿಜೆಪಿ 20 ಇಲಾಖೆಗಳನ್ನು ಹೊಂದಿರುತ್ತದೆ, ಶಿವಸೇನೆ ಮತ್ತು ಎನ್‌ಸಿಪಿ ತಲಾ 10 ಖಾತೆಗಳನ್ನು ಹೊಂದಿರಲಿವೆ. ಇತ್ತ ಬಿಜೆಪಿ ಮತ್ತು ಎನ್‌ಸಿಪಿ ಹಾಲಿ ಸಚಿವರಿಗೆ ಸಚಿವ ಸ್ಥಾನ ನೀಡುವ ಪ್ಲ್ಯಾನ್ ಮಾಡಿದ್ದರೆ, ಶಿಂಧೆ ಬಣದ ಶಿವ ಸೇನೆ ಹೊಸ ಮುಖಗಳಿಗೆ ಮಂತ್ರಿ ಸ್ಥಾನ ನೀಡಲು ಯೋಜಿಸಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ತಿಂಗಳು ನಡೆದ ಮಹಾರಾಷ್ಟ್ರದ 288 ಕ್ಷೇತ್ರಗಳಿಗೆ ನಡೆಸ ಚುನಾವಣೆಯಲ್ಲಿ ಮಹಾಯುತಿ ಮೈತ್ರಿಕೂಟ ಗೆಲುವು ಸಾಧಿಸಿತ್ತು. ಬಿಜೆಪಿ 132 ಸ್ಥಾನಗಳನ್ನು ಗೆದ್ದರೆ, ಶಿವಸೇನೆ 57 ಮತ್ತು ಎನ್‌ಸಿಪಿ 41 ಸ್ಥಾನಗಳನ್ನು ಗೆದ್ದುಕೊಂಡಿತು. ಇದೇ ಡಿಸೆಂಬರ್ 5 ರಂದು ದೇವೇಂದ್ರ ಫಡ್ನವೀಸ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಏಕನಾಥ್ ಶಿಂಧೆ ಮತ್ತು ಅಜಿತ್ ಪವಾರ್ ಅವರ ಉಪಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.