ನವದೆಹಲಿ: ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ದಾಳಿಯಿಂದ ಕೋಮುಗಲಭೆ ಜಾಸ್ತಿಯಾಗಿದ್ದು ಮಸೀದಿ ಹಾಗೂ ಮುಸ್ಲಿಂ ವ್ಯಾಪಾರಿಗಳ ಅಂಗಡಿ ಮೇಲೆ ದಾಳಿ ಹೆಚ್ಚಾಗುತ್ತಿದೆ. ಹೀಗಾಗಿ ತಾತ್ಕಾಲಿಕವಾಗಿ ಶ್ರೀಲಂಕಾದಲ್ಲಿ ಸಾಮಾಜಿಕ ಜಾಲತಾಣಗಳನ್ನು ನಿಷೇಧಿಸಲಾಗಿದೆ.
ಫೇಸ್‍ಬುಕ್ ಮತ್ತು ವಾಟ್ಸಾಪ್ ಸೇರಿದಂತೆ ಕೆಲವು ಸಾಮಾಜಿಕ ಜಾಲತಾಣಗಳನ್ನು ಶ್ರೀಲಂಕಾ ಸರ್ಕಾರ ನಿಷೇಧಿಸಿದೆ. ಈಸ್ಟರ್ ದಿನದಂದು ಸಂಭವಿಸಿದ ಬಾಂಬ್ ದಾಳಿಯಲ್ಲಿ 290ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಇದಾದ ಬಳಿಕ ಮಸೀದಿ ಹಾಗೂ ಮುಸ್ಲಿಂ ವ್ಯಾಪಾರಿಗಳ ಮೇಲೆ ದಾಳಿಗಳು ಆರಂಭವಾಗಿದೆ. ಈ ಹಿನ್ನಲೆಯಲ್ಲಿ ಈಗ ಶ್ರೀಲಂಕಾ ಸರ್ಕಾರ ಈ ಕ್ರಮವನ್ನು ತೆಗೆದುಕೊಂಡಿದೆ.
ಬಹುಪಾಲು ಕ್ರಿಶ್ಚಿಯನ್ ಧರ್ಮದವರೇ ವಾಸಿಸುವ ಪಶ್ಚಿಮ ಕರಾವಳಿಯ ಪಟ್ಟಣ ಚಿಲಾದಲ್ಲಿ ಫೇಸ್‍ಬುಕ್ ಮೂಲಕ ಪ್ರಾರಂಭವಾದ ಗಲಾಟೆ ಮುಸ್ಲಿಂರ ಮೇಲೆ ಹಲ್ಲೆ ನಡೆಯುವ ಮಟ್ಟಿಗೆ ಬಂದು ನಿಂತಿದೆ. ಈ ವಿವಾದದಿಂದ ಸಾರ್ವಜನಿಕರು ಹಲವಾರು ಮಸೀದಿ ಹಾಗೂ ಮುಸ್ಲಿಂ ವ್ಯಾಪಾರಿಗಳ ಅಂಗಡಿ ಮೇಲೆ ಕಲ್ಲು ತೂರಾಟವನ್ನು ನಡೆಸಿದ್ದಾರೆ.
ಈ ದಾಳಿಯಲ್ಲಿ ಹಲವು ಮಸೀದಿಗಳು ಮತ್ತು ಮುಸ್ಲಿಂ ಮನೆಗಳು ಹಾನಿಗೀಡಾಗಿವೆ ಎಂದು ಶ್ರೀಲಂಕಾದ ಮುಸ್ಲಿಂ ಕೌನ್ಸಿಲ್ ಹೇಳಿದೆ. ಆದರೆ ನಿಖರವಾದ ಹಾನಿ ಮತ್ತು ಬಂಧನಕ್ಕೆ ಒಳಗಾದವರ ಸಂಖ್ಯೆಯು ಸ್ಪಷ್ಟವಾಗಿ ಲಭ್ಯವಾಗಿಲ್ಲ.
ಸಾಮಾಜಿಕ ಜಾಲತಾಣಗಳಲ್ಲಿ ಕೋಮುಗಲಭೆಗಳಿಗೆ ಉತ್ತೇಜನ ನೀಡುವಂತಹ ಪೋಸ್ಟ್ ಹಾಗೂ ಸಂದೇಶಗಳು ರವಾನೆಯಾಗುತ್ತಿದೆ. ಆದ್ದರಿಂದ ರಾಷ್ಟ್ರದಲ್ಲಿ ಶಾಂತಿ, ಸುವ್ಯವಸ್ಥೆ ಹದಗೆಡುತ್ತಿದೆ. ಹೀಗಾಗಿ ಸಾಮಾಜಿಕ ಜಾಲತಾಣಗಳ ಮೇಲೆ ನಿಷೇಧ ಹೇರಲಾಗಿದೆ ಎಂದು ಶ್ರೀಲಂಕಾ ಸರ್ಕಾರ ತಿಳಿಸಿದೆ.