Connect with us

Bengaluru City

ಚಂದನವನದಲ್ಲಿ ಮತ್ತೊಂದು ಸ್ಟಾರ್ ವಾರ್! ಯಶ್-ರಕ್ಷಿತ್ ಅಭಿಮಾನಿಗಳಿಂದ ಶುರುವಾಗಿದೆ ಫೇಸ್‍ಬುಕ್ ದಂಗಲ್!

Published

on

ಬೆಂಗಳೂರು: ಚಂದನವನದಲ್ಲಿ ಮತ್ತೊಂದು ಸ್ಟಾರ್ ವಾರ್‍ಗೆ ಸಾಕ್ಷಿಯಾಗಿದೆ. ಈ ಬಾರಿ ರಾಕಿಂಗ್ ಸ್ಟಾರ್ ಯಶ್ ಮತ್ತು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ರಣರಂಗ ಪ್ರವೇಶ ಮಾಡಿದ್ದಾರೆ.

ಯಶ್ ಮತ್ತು ರಕ್ಷಿತ್ ಶೆಟ್ಟಿ ಅಭಿಮಾನಿಗಳು ಫೇಸ್‍ಬುಕ್‍ನಲ್ಲಿ ಪರಸ್ಪರ ಗುದ್ದಾಟಕ್ಕೆ ಇಳಿದಿದ್ದಾರೆ. ಬಳಸಬಾರದ ಶಬ್ದಗಳನ್ನು ಬಳಸಿ ಜಗಳ ಮಾಡುತ್ತಿದ್ದಾರೆ. ಅದಕ್ಕೆಲ್ಲ ವಿಕೇಂಡ್ ವಿತ್ ರಮೇಶ್ ಪ್ರೋಗ್ರಾಮ್ ಕಾರಣವಾಗಿದೆ. ನಟ ರಮೇಶ್ ನಡೆಸಿಕೊಡುತ್ತಿರುವ ವಿಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಸಿನಿಮಾ ರಂಗ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳ ಪ್ರತಿಭಾವಂತರನ್ನು ಸಾಧಕರ ಸೀಟಿನಲ್ಲಿ ಕೂಡಿಸಲಾಗುತ್ತದೆ. ಅವರು ಬೆಳೆದು ಬಂದ ದಾರಿ, ಬದುಕಿನ ತಿರುವು, ನೋವು ನಲಿವುಗಗಳನ್ನು ತೋರಿಸುವುದರಿಂದ ಕಾರ್ಯಕ್ರಮ ಎಲ್ಲರ ಅಚ್ಚುಮೆಚ್ಚಾಗಿದೆ.

ಮುಂದಿನ ವಾರ ರಕ್ಷಿತ್ ಶೆಟ್ಟಿ ಸಾಧಕರ ಸೀಟಿನಲ್ಲಿ ಕೂಡುತ್ತಾರೆ ಎನ್ನುವ ಸುದ್ದಿ ಗೊತ್ತಾಗುತ್ತಿದ್ದಂತೆಯೇ ಕೆಲವರು ಮುಖ ಕಿವಿಚಿದರು. `ರಕ್ಷಿತ್ ಶೆಟ್ಟಿಯನ್ನು ಇಷ್ಟು ಬೇಗ ಈ ಸೀಟಿನಲ್ಲಿ ಕೂಡಿಸಬಾರದಿತ್ತು..’ ಎಂದು ಕೆಲವರು ಅಸಮಾಧಾನ ಪಟ್ಟರು. `ರಕ್ಷಿತ್ ಏನು ಸಾಧನೆ ಮಾಡಿದ್ದಾರೆ ಅಂತ ಆ ಕಾರ್ಯಕ್ರಮದಲ್ಲಿ ಅವಕಾಶ ನೀಡಿದ್ದೀರಿ…’ ಹೀಗಂತ ಇನ್ನುಳಿದವರು ಕಡ್ಡಿ ತುಂಡು ಮಾಡಿದರು. ಅದ್ಯಾವಾಗ ಈ ಮಾತಿನ ನಡುವೆ ಯಶ್ ಹೆಸರು ತೂರಿ ಬಂತೊ ಏನೊ…ಫೇಸ್‍ಬುಕ್ ರಣರಂಗವಾಯಿತು.

ಹಾಗಾದರೆ ಅಭಿಮಾನಿಗಳು ಹೇಳಿದ್ದೇನು?
ರಕ್ಷಿತ್ ಶೆಟ್ಟಿ ಫ್ಯಾನ್ : ಸಾಧಕರ ಸೀಟಿನಲ್ಲಿ ಯಶ್ ಕುಳಿತಾಗ ಯಾಕೆ ಯಾರು ಮಾತಾಡಲಿಲ್ಲ. ಆಗಿನ್ನೂ ರಾಮಾಚಾರಿ ಕೂಡ ಬಂದಿರಲಿಲ್ಲ. ಈಗ ರಕ್ಷಿತ್ ಆ ಸೀಟಿನಲ್ಲಿ ಕುಳಿತರೆ ಯಾಕೆ ಮಾತಾಡುತ್ತಿದ್ದೀರಿ ?

ಯಶ್ ಫ್ಯಾನ್ : ಯಶ್, ಆ ಸೀಟಿನಲ್ಲಿ ಕುಳಿತಾಗ ಅವರು ಹಲವಾರು ಹಿಟ್ ಚಿತ್ರಗಳನ್ನು ಕೊಟ್ಟಿದ್ದರು. ಗಜಕೇಸರಿ, ರಾಜಾಹುಲಿ, ಕಿರಾತಕ, ಗೂಗ್ಲಿ. ರಕ್ಷಿತ್ ಅಂಥ ಯಾವ ಸೂಪರ್ ಹಿಟ್ ಸಿನಿಮಾ ಕೊಟ್ಟಿದ್ದಾರೆ ಹೇಳಿ ?

ಈ ಎರಡೂ ಸಾಲುಗಳು ಕೇವಲ ಸ್ಯಾಂಪಲ್‍ಗಳು. ಬರೆಯಲಾರದಂಥ ಶಬ್ದಗಳನ್ನು ಬಳಸಿ ಪರಸ್ಪರ ನಿಂದಿಸುತ್ತಿದ್ದಾರೆ.

ಯಶ್ ಬಗ್ಗೆ ಎರಡು ಮಾತು: ಯಶ್‍ಗೆ ಯಾವುದೇ ಸಿನಿಮಾ ಹಿನ್ನೆಲೆ ಇಲ್ಲ. ಮಧ್ಯಮವರ್ಗದ ಕುಟುಂಬದಿಂದ ಬಂದು ಇಂದು ಸ್ಟಾರ್ ಆಗಿದ್ದಾರೆ. ಧಾರಾವಾಹಿಯಲ್ಲಿ ನಟಿಸುತ್ತಾ, ಸಿನಿಮಾ ರಂಗದಲ್ಲಿ ಬೆಳೆಯುವ ಕನಸು ಕಾಣುತ್ತಾ, ನೋವು, ನಲಿವು, ಅವಮಾನ, ಹತಾಶೆ ಎಲ್ಲವನ್ನೂ ನುಂಗುತ್ತಾ ರಾಕಿಂಗ್ ಸ್ಟಾರ್ ಆಗಿದ್ದಾರೆ. ರಾಮಾಚಾರಿ ಚಿತ್ರವಂತೂ ಯಶ್‍ಗೆ ಕನ್ನಡಿಗರ ಮನದಲ್ಲಿ ಭದ್ರ ಸ್ಥಾನ ನೀಡಿತು.

ರಕ್ಷಿತ್ ಜೀವನ: ರಕ್ಷಿತ್ ಶೆಟ್ಟಿ ಕೂಡ ಇದೇ ರೀತಿ ನೆಲೆ ಕಂಡವರು. ಅವರಿಗೂ ಸಿನಿಮಾ ಹಿನ್ನೆಲೆ ಇಲ್ಲ. ಕಳೆದ ಏಳು ವರ್ಷಗಳಿಂದ ಉದ್ಯಮದಲ್ಲಿದ್ದಾರೆ. ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಬ್ರೇಕ್ ನೀಡಿತು. ರಿಕ್ಕಿ ಹೊಸ ಇಮೇಜ್ ಕೊಟ್ಟಿತು. ಕಿರಿಕ್ ಪಾರ್ಟಿ ಇವರನ್ನು ಸ್ಟಾರ್ ಪಟ್ಟಕ್ಕೇರಿಸಿತು. ಉಳಿದವರು ಕಂಡಂತೆ ಸಿನಿಮಾದಿಂದ ತಾವೊಬ್ಬ ಡಿಫರೆಂಟ್ ಫಿಲ್ಮ್ ಡೈರೆಕ್ಟರ್ ಎಂದು ಸಾಬೀತು ಪಡಿಸಿದರು.

ಗುಲಾಬಿ ಹೂವಿಗೆ ಅದರದೇ ಸೌಂದರ್ಯ ಇದೆ. ಸಂಪಿಗೆಗೂ ಸ್ವಂತ ಘಮಲಿದೆ. ಎರಡನ್ನೂ ಹೋಲಿಸುವುದು ಬೇಡ. ನಿಜ ಜೀವನದಲ್ಲಿ ಸ್ಯಾಂಡಲ್‍ವುಡ್ ಸ್ಟಾರ್‍ಗಳು ಚೆನ್ನಾಗಿಯೇ ಇರ್ತಾರೆ. ವೃತ್ತಿ ವಿಷಯಕ್ಕೆ ಬಂದಾಗ ಸ್ಪರ್ಧೆ ಇದ್ದೇ ಇರುತ್ತದೆ. ಅದನ್ನು ಬಿಟ್ಟರೆ ಎಲ್ಲರೂ ಸಾರ್ವಜನಿಕ ಮತ್ತು ವೈಯಕ್ತಿಕವಾಗಿ ಉತ್ತಮ ಬಾಂಧವ್ಯ ಹೊಂದಿರುತ್ತಾರೆ. ಅದು ಎಲ್ಲರಿಗೂ ಅರ್ಥವಾಗಬೇಕಿದೆ.

 

 

 

 

Click to comment

Leave a Reply

Your email address will not be published. Required fields are marked *