ಶಿವಮೊಗ್ಗ: ಜಿಲ್ಲೆಯ ಶಿಕಾರಿಪುರ ತಾಲೂಕು ಶಿರಾಳಕೊಪ್ಪದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಫೇಸ್‍ಬುಕ್‍ನಲ್ಲಿ ಕೋಮು ಸಾಮರಸ್ಯ ಕದಡುವಂತ ಪೋಸ್ಟ್ ಹಾಕಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಫೋಸ್ಟ್ ಮಾಡಿದ್ದ ಶಿಕಾರಿಪುರ ತಾಲೂಕಿನ ಮತ್ತಿಕೋಟೆಯ ರಹೀಮ್ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಕಳೆದ ವಾರ ಶಿರಾಳಕೊಪ್ಪದಲ್ಲಿ ಗೋವುಗಳ ಸಾಗಾಣಿಕೆ ತಡೆದ ಬಜರಂಗದಳ ಕಾರ್ಯಕರ್ತರ ಮೇಲೆ ಹಲ್ಲೆಯಾಗಿತ್ತು. ಇದರಿಂದಾಗಿ ಶಿರಾಳಕೊಪ್ಪ ಪಟ್ಟಣದಲ್ಲಿ ಪರಿಸ್ಥಿತಿ ಬಿಗುವಿನಿಂದ ಕೂಡಿತ್ತು. ಇಂಥ ಸಂದರ್ಭದಲ್ಲಿ ರಹೀಮ್ ತನ್ನ ಎಫ್‍ಬಿಯಲ್ಲಿ `ಕರ್ನಾಟಕದ ಶಿರಾಳಕೊಪ್ಪದಲ್ಲಿ ಗೋರಕ್ಷಕರನ್ನು ರುಬ್ಬಿದ ಜನ. ಯಾವತ್ತೋ ಆಗಬೇಕಿತ್ತು ಈ ಕೆಲ್ಸ’ ಎಂದು ಪೋಸ್ಟ್ ಹಾಕಿದ್ದ. ಇದಕ್ಕೆ ಫೇಸ್ ಬುಕ್ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.
ಇದನ್ನು ಖಂಡಿಸಿ ಹಾಗೂ ಕ್ರಮಕ್ಕೆ ಆಗ್ರಹಿಸಿ ಶಿರಾಳಕೊಪ್ಪದಲ್ಲಿ ಸಂಘ ಪರಿವಾರದಿಂದ ಬೈಕ್ ಜಾಥಾವನ್ನೂ ಮಾಡಲಾಗಿತ್ತು. ಈ ಹಿನ್ನಲೆಯಲ್ಲಿ ಶಿಕಾರಿಪುರ ಗ್ರಾಮಾಂತರ ಪೊಲೀಸರು ರಹೀಮ್‍ನನ್ನು ಬಂಧಿಸಿದ್ದಾರೆ.