ಹೈದರಾಬಾದ್: ಫೇಸ್‍ಬುಕ್ ಮೂಲಕ ಪರಿಚಯವಾಗಿದ್ದ ಯುವಕನೊಬ್ಬ 10ನೇ ತರಗತಿಯ ವಿದ್ಯಾರ್ಥಿನಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಪ್ರಕರಣವೊಂದು ತೆಲಂಗಾಣದ ಮಹಬೂಬ್‍ನಗರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಹರ್ಷಿಣಿ(15) ಮೃತ ವಿದ್ಯಾರ್ಥಿನಿ. ಈಕೆಯನ್ನು ಫೇಸ್‍ಬುಕ್ ಗೆಳೆಯ ನವೀನ್ ರೆಡ್ಡಿ ಎಂಬಾತ ಕೊಲೆ ಮಾಡಿದ್ದಾನೆ. ಜಾಡ್ಚೆರ್ಲಾ ಪೊಲೀಸರು ಗುರುವಾರ ಬಾಲಕಿಯ ಮೃತದೇಹವನ್ನು ವಶಪಡಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
ಏನಿದು ಪ್ರಕರಣ?
ಆರೋಪಿ ನವೀನ್ ರೆಡ್ಡಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದು, ಫೇಸ್‍ಬುಕ್ ಮೂಲಕ ಹರ್ಷಿಣಿಯನ್ನು ಪರಿಚಯ ಮಾಡಿಕೊಂಡಿದ್ದನು. ಪರಿಚಯ ಸ್ನೇಹವಾಗಿದ್ದು, ಒಂದು ದಿನ ಇಬ್ಬರು ಭೇಟಿಯಾಗಲು ನಿರ್ಧರಿಸಿದ್ದರು. ಅದರಂತೆಯೇ ದಿನಾಂಕ 27ರಂದು ಶಂಕರ್‍ಪಲ್ಲಿ ಗ್ರಾಮದಿಂದ ನವೀನ್ ಆಕೆಯನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾನೆ. ಕಾರಿನಲ್ಲಿ ಹೋಗುವಾಗ ಎಲ್ಲಾದರೂ ನಿರ್ಜನ ಪ್ರದೇಶದಲ್ಲಿ ಇಬ್ಬರು ಕುಳಿತುಕೊಂಡು ಮಾತಾಡೋಣ ಎಂದು ಹೇಳಿದ್ದಾನೆ.
ಇದೇ ವೇಳೆ ಆಕೆಯ ಬಳಿ ದೈಹಿಕ ಸಂಪರ್ಕ ಹೊಂದುವ ಬಯಕೆಯನ್ನು ವ್ಯಕ್ತಪಡಿಸಿದ್ದಾನೆ. ಇದರಿಂದ ಗಾಬರಿಯಾದ ಹರ್ಷಿಣಿ ತಕ್ಷಣ ಆತನಿಂದ ತಪ್ಪಿಸಿಕೊಳ್ಳಬೇಕೆಂದು ಕಾರಿನಿಂದ ಇಳಿಯಲು ಪ್ರಯತ್ನ ಮಾಡಿದ್ದಾಳೆ. ಆಗ ಆರೋಪಿ ಆಕೆಗೆ ಲೈಂಗಿಕ ಕಿರುಕುಳ ನೀಡಲು ಮುಂದಾಗಿದ್ದಾನೆ. ಇದಕ್ಕೆ ವಿದ್ಯಾರ್ಥಿನಿ ವಿರೋಧ ವ್ಯಕ್ತಪಡಿಸಿದ್ದಾಳೆ. ಇದರಿಂದ ಕೋಪಗೊಂಡ ಆರೋಪಿ, ಆಕೆಯ ಬಟ್ಟೆಯನ್ನು ಹರಿದು ಲೈಂಗಿಕ ದೌರ್ಜನ್ಯ ಎಸಗಲು ಪ್ರಯತ್ನಿಸಿದ್ದಾನೆ. ಈ ವೇಳೆ ಹರ್ಷಿಣಿ ಜೋರಾಗಿ ಕೂಗಾಡಿದ್ದಾಳೆ. ಆಗ ಆರೋಪಿ ಭಯದಿಂದ ಆಕೆಯನ್ನು ಕಾರಿನಿಂದ ಕೆಳಗೆ ತಳ್ಳಿ ಕಲ್ಲಿನಿಂದ ಆಕೆಯ ತಲೆಯನ್ನು ಜಜ್ಜಿ ಕೊಲೆ ಮಾಡಿದ್ದಾನೆ. ನಂತರ ಕಾಡಿನಲ್ಲಿ ಮೃತದೇಹವನ್ನು ಎಸೆದು ಪರಾರಿಯಾಗಿದ್ದಾನೆ.
ಮನೆಯಿಂದ ಹೋದ ಮಗಳು ಸಂಜೆಯಾದರೂ ವಾಪಸ್ ಬರಲಿಲ್ಲ ಎಂದು ತಂದೆ, ಮಗಳು ಕಾಣೆಯಾಗಿದ್ದಾಳೆಂದು ದೂರು ಸಲ್ಲಿಸಿದ್ದರು. ನಾವು ಅಪಹರಣ ಪ್ರಕರಣವನ್ನು ದಾಖಲಿಸಿಕೊಂಡು ಕಾಣೆಯಾದ ಸ್ಥಳದಲ್ಲಿ ಅಳವಡಿಸಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದೆವು. ಆಗ ಕಾರಿನಲ್ಲಿ ಬಾಲಕಿ ಹೋಗಿದ್ದು ಪತ್ತೆಯಾಯಿತು. ತಕ್ಷಣ ನಾವು ಕಾರಿನ ನಂಬರ್ ತೆಗೆದುಕೊಂಡು ಎರಡು ದಿನದಲ್ಲಿ ಆರೋಪಿ ನವೀನ್ ರೆಡ್ಡಿಯನ್ನು ಪತ್ತೆಹಚ್ಚಿದೆವು ಎಂದು ತನಿಖಾ ಅಧಿಕಾರಿ ತಿಳಿಸಿದರು.
ವಿಚಾರಣೆ ಮಾಡಿದಾಗ ಮೃತದೇಹವನ್ನು ಎಸೆದಿದ್ದ ಸ್ಥಳಕ್ಕೆ ಕರೆದುಕೊಂಡು ಹೋಗಿ ಬಾಲಕಿಯ ಶವವನ್ನು ತೋರಿಸಿದನು. ನಾವು ಫೋರೆನ್ಸಿಕ್ ತಂಡದ ಜೊತೆ ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದೇವೆ. ಸದ್ಯಕ್ಕೆ ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ರವಾನಿಸಿದ್ದೇವೆ. ಇವರಿಬ್ಬರು ಸುಮಾರು 3 ತಿಂಗಳ ಹಿಂದೆ ಫೇಸ್‍ಬುಕ್ ಮೂಲಕ ಪರಿಚಯವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದರಿಂದ ಕೋಪಗೊಂಡ ಸ್ಥಳೀಯರು ವಿದ್ಯಾರ್ಥಿಯನ್ನು ಅಮಾನುಷವಾಗಿ ಹತ್ಯೆ ಮಾಡಿದ್ದಕ್ಕಾಗಿ ಆರೋಪಿಯನ್ನು ಗಲ್ಲಿಗೇರಿಸಬೇಕು, ನಮಗೆ ನ್ಯಾಯ ಕೊಡಿಸಬೇಕೆಂದು ಪೊಲೀಸ್ ಠಾಣೆ ಹೊರಗೆ ಪ್ರತಿಭಟನೆ ನಡೆಸಿದ್ದರು. ಸದ್ಯಕ್ಕೆ ಆರೋಪಿ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದೇವೆ ಎಂದು ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.