– ಪ್ರಾಮಾಣಿಕವಾಗಿ ಕ್ಷಮೆ ಕೇಳಲು ಏನಾಗಿತ್ತು?
ನವದೆಹಲಿ: ಆಪರೇಷನ್ ಸಿಂಧೂರದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕರ್ನಲ್ ಖುರೇಷಿಯವರ (Colonel Qureshi) ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಮಧ್ಯಪ್ರದೇಶದ (Madhya Pradesh) ಸಚಿವ ವಿಜಯ್ ಶಾ (Vijay Shah) ಅವರ ಕ್ಷಮೆಯಾಚನೆಯನ್ನು ಸುಪ್ರೀಂ ಕೋರ್ಟ್ (Supreme Court ) ತಿರಸ್ಕರಿಸಿದೆ. ಈ ಪ್ರಕರಣವನ್ನು ವಿಶೇಷ ತನಿಖಾ ತಂಡ (SIT) ತನಿಖೆ ನಡೆಸಲಿ ಎಂದು ನ್ಯಾಯಮೂರ್ತಿ ಸೂರ್ಯ ಕಾಂತ್ ಅವರಿದ್ದ ಏಕ ಸದಸ್ಯ ಪೀಠ ತಿಳಿಸಿದೆ.
ವಿಜಯ್ ಶಾ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ನ್ಯಾಯಾಲಯ, ನೀವು ಯಾವ ರೀತಿ ಕ್ಷಮೆಯಾಚಿಸಿದ್ದೀರಿ? ಕ್ಷಮೆಯಾಚನೆಗೆ ಸ್ವಲ್ಪ ಅರ್ಥವಿದೆ. ಕೆಲವೊಮ್ಮೆ ಜನರು ವಿಚಾರಣೆಯಿಂದ ಹೊರಬರಲು ಮಾತ್ರ ಸೌಮ್ಯ ಭಾಷೆ ಬಳಸುತ್ತಾರೆ. ಅಲ್ಲದೇ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ನಿಮ್ಮದು ಯಾವ ರೀತಿಯ ಕ್ಷಮೆಯಾಚನೆ? ನ್ಯಾಯಾಲಯ ಹೇಳಿದೆ ಎಂಬ ಕಾರಣಕ್ಕೆ ಕ್ಷಮೆ ಕೇಳಿದ್ದೀರಿ, ಇಲ್ಲಿಯವರೆಗೆ ನಿಮ್ಮ ಅಸಭ್ಯ ಹೇಳಿಕೆಗಳಿಗೆ ಪ್ರಾಮಾಣಿಕವಾಗಿ ಕ್ಷಮೆಯಾಚಿಸಲು ನಿಮ್ಮನ್ನು ಏನು ತಡೆದಿತ್ತು ಎಂದು ಪೀಠ ಛೀಮಾರಿ ಹಾಕಿತು. ಇದನ್ನೂ ಓದಿ: ಸೋಫಿಯಾ ವಿರುದ್ಧ ಅವಹೇಳನಕಾರಿ ಹೇಳಿಕೆ – ವಿಜಯ್ ಶಾರನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ
ಸಚಿವರ ವಿರುದ್ಧದ ಪ್ರಕರಣವನ್ನು ತನಿಖೆ ಮಾಡಲು ಮಂಗಳವಾರ ಬೆಳಗ್ಗೆ ಮೂವರು ಐಪಿಎಸ್ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಬೇಕು. ಅದು ಮಹಿಳಾ ಅಧಿಕಾರಿಯನ್ನು ಹೊಂದಿರಬೇಕು ಮತ್ತು ಮೇ 28 ರೊಳಗೆ ವರದಿಯನ್ನು ಸಲ್ಲಿಸಬೇಕು. ಅಲ್ಲದೇ ಅಧಿಕಾರಿಗಳು ಮಧ್ಯಪ್ರದೇಶ ಮೂಲದವರಾಗಿರಬಾರದು ಎಂದು ನ್ಯಾಯಾಲಯ ಆದೇಶದಲ್ಲಿ ಷರತ್ತು ವಿಧಿಸಿದೆ.
ಶಾ ಬಂಧನದಿಂದ ವಿನಾಯಿತಿ ನೀಡಿದ ನ್ಯಾಯಾಲಯ, ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿತು. ಅಲ್ಲದೇ ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಬೇಕಿತ್ತು, ಈ ಬಗ್ಗೆ ಉತ್ತರಿಸುವಂತೆ ಮಧ್ಯಪ್ರದೇಶ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ, ಇದನ್ನು ಪೀಠ ಗಮನಿಸುತ್ತದೆ. ನಿಮಗೆ ಇದೊಂದು ಅಗ್ನಿ ಪರೀಕ್ಷೆ ಎಂದು ಸರ್ಕಾರಕ್ಕೆ ಸೂಚಿಸಿದೆ.
ವಿಜಯ್ ಶಾ ಹೇಳಿದ್ದೇನು?
ಇಂದೋರ್ ಜಿಲ್ಲೆಯ ಮಾಹುವಿನ ರಾಯ್ಕುಂಡ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಜಯ್ ಶಾ ಮಾತಾಡಿದ್ದರು. ಭಾಷಣದಲ್ಲಿ ಭಯೋತ್ಪಾದಕರು ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳ ಸಿಂಧೂರವನ್ನು ಅಳಿಸಿದ್ದರು. ಆ ಉಗ್ರರಿಗೆ ಪಾಠ ಕಲಿಸಲು ಅವರ ಸಹೋದರಿಯನ್ನು ನಾವು ಕಳುಹಿಸಿದ್ದೇವೆ ಎಂದು ಹೇಳಿದ್ದರು. ಈ ಸಂಬಂಧ ಮಧ್ಯಪ್ರದೇಶದ ಹೈಕೋರ್ಟ್ ಎಫ್‌ಐಆರ್ ದಾಖಲಿಸುವಂತೆ ಸೂಚಿಸಿತ್ತು. ಇದಾದ ಬೆನ್ನಲ್ಲೇ ಕರ್ನಲ್ ಸೋಫಿಯಾ ಜಾತಿ ಮತ್ತು ಧರ್ಮವನ್ನು ಮೀರಿ ಭಾರತಕ್ಕೆ ಕೀರ್ತಿ ತಂದಿದ್ದಾರೆ. ನನ್ನ ಮಾತುಗಳು ಸಮಾಜ ಮತ್ತು ಧರ್ಮಕ್ಕೆ ನೋವುಂಟು ಮಾಡಿದ್ದರೆ, ನಾನು ಹತ್ತು ಬಾರಿ ಕ್ಷಮೆಯಾಚಿಸಲು ಸಿದ್ಧನಿದ್ದೇನೆ ಎಂದಿದ್ದರು. ಬಳಿಕ ಹೈಕೂರ್ಟ್ ಆದೇಶದ ರದ್ದು ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಇದನ್ನೂ ಓದಿ: ಮೊದಲು ಕರ್ನಲ್ ಸೋಫಿಯಾ ಬಳಿ ಹೋಗಿ ಕ್ಷಮೆ ಕೇಳಿ: ವಿಜಯ್ ಶಾಗೆ ಸುಪ್ರೀಂ ಚಾಟಿ