ಚಾಮರಾಜನಗರ: ಅನ್ನಭಾಗ್ಯ ಯೋಜನೆಯಡಿ ವಿತರಣೆಯಾಗಿರುವ ತೀರಾ ಕಳಪೆ ಗುಣಮಟ್ಟದ ಅಕ್ಕಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಜಿಲ್ಲೆಯ ಹನೂರು ತಾಲೂಕಿನ ಹೂಗ್ಯಂ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜಲ್ಲಿಪಲ್ಯಂ ಗ್ರಾಮದ ನ್ಯಾಯಬೆಲೆ ಅಂಗಡಿಗೆ ವಿತರಣೆಯಾಗಿರುವ ಅಕ್ಕಿ ವಿಡಿಯೋ ಇದಾಗಿದ್ದು, ವಿಡಿಯೋದಲ್ಲಿ ಯುವಕನೋರ್ವ ಹುಳು ತಿಂದು ಕಪ್ಪು ಬಣ್ಣಕ್ಕೆ ತಿರುಗಿ, ಬೂದಿಯಂತಾದ ಅಕ್ಕಿಯನ್ನು ನ್ಯಾಯಬೆಲೆ ಅಂಗಡಿಯ ತೂಕದ ಯಂತ್ರದ ಮೇಲೆ ಇಟ್ಟು ತೋರಿಸುತ್ತಿರುವು ಸೆರೆಯಾಗಿದೆ. ತೀರಾ ಕಳಪೆ ಮಟ್ಟದ ಅಕ್ಕಿಯನ್ನು ನ್ಯಾಯಬೆಲೆ ಅಂಗಡಿಯಲ್ಲಿ ವಿತರಿಸುತ್ತಿರುವುದಕ್ಕೆ ಸಿಟ್ಟಿಗೆದ್ದು ಯುವಕ ಈ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ.
Advertisement
Advertisement
ಅನ್ನಭಾಗ್ಯದ ಅಕ್ಕಿ ಹೋಗಿ ಹುಳುಭ್ಯಾಗದ ಅಕ್ಕಿ ತಿನ್ನಲು ಅಸಾಧ್ಯವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಯುವಕ ಕಿಡಿಕಾರಿದ್ದಾನೆ. ಬಡವರಿಗೆ ಸಹಾಯವಾಗಲಿ ಎಂದು ಅನ್ನಭಾಗ್ಯ ಯೋಜನೆ ಕಾರ್ಯರೂಪಕ್ಕೆ ಬಂತು. ಆದರೆ ಯೋಜನೆ ಹೆಸರಲ್ಲಿ ಈ ರೀತಿ ಕಳಪೆ ಮಟ್ಟದ ಅಕ್ಕಿ ಕೊಟ್ಟರೆ ಜನರು ಹೇಗೆ ಜೀವನ ನಡೆಸಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
ಎಲ್ಲೆಡೆ ಸಖತ್ ವೈರಲ್ ಆಗಿರುವ ವಿಡಿಯೋ ನೋಡಿ ಅನೇಕರು ಸರ್ಕಾರ ಹಾಗೂ ಅಧಿಕಾರಿಗಳ ಮೇಲೆ ಕೆಂಡಕಾರಿದ್ದಾರೆ. ಅವರು ನಿರ್ಲಕ್ಷ್ಯ ತೋರಿ ಕ್ರಮ ತೆಗೆದುಕೊಳ್ಳದಿದ್ದಕ್ಕೆ ಈ ಪರಿಸ್ಥಿತಿ ಬಂದಿದೆ ಎಂದು ಹರಿಹಾಯ್ದಿದ್ದಾರೆ. ಇನ್ನಾದರೂ ಸ್ಥಳೀಯ ಶಾಸಕ ಆರ್. ನರೇಂದ್ರ ಮತ್ತು ಅಧಿಕಾರಿಗಳು ಇತ್ತ ಗಮನ ಹರಿಸಿ, ಗುಣಮಟ್ಟದ ಅಕ್ಕಿ ಜನರಿಗೆ ನೀಡಲು ಮುಂದಾಗಬೇಕಿದೆ.