ನವದೆಹಲಿ: ಮತದಾನ ಸಂಬಂಧಿತ ಹಿಂಸಾಚಾರದಿಂದ ಸುದ್ದಿಯಾಗಿರುವ ಎರಡು ರಾಜ್ಯಗಳಿಗೆ ಚುನಾವಣಾ ಆಯೋಗ (ECI) ಮತ ಎಣಿಕೆ ದಿನ ಭಾರೀ ಭದ್ರತೆಯನ್ನು ಕೈಗೊಂಡಿದೆ. ಆಂಧ್ರಪ್ರದೇಶ (Andhra Pradesh) ಮತ್ತು ಪಶ್ಚಿಮ ಬಂಗಾಳದಲ್ಲಿ (West Bengal) ಮತ ಎಣಿಕೆಯ ದಿನವಾದ ಜೂ.4 ಹಾಗೂ ಮತ ಎಣಿಕೆ ನಂತರ 15 ದಿನಗಳ ಕಾಲ ಕೇಂದ್ರ ಭದ್ರತಾ ಪಡೆಗಳು ಬೀಡುಬಿಡಲಿವೆ ಎಂದು ಮೂಲಗಳು ತಿಳಿಸಿವೆ.
ಉತ್ತರ ಪ್ರದೇಶ, ಒಡಿಶಾ, ಸಿಕ್ಕಿಂ, ಅರುಣಾಚಲ ಪ್ರದೇಶ ಮತ ಎಣಿಕೆ ದಿನದ ನಂತರ ಎರಡು ದಿನಗಳ ಕಾಲ ಭದ್ರತಾ ಪಡೆಗಳು ಇರಲಿವೆ. ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಆಯೋಗದ ಮೂಲಗಳು ತಿಳಿಸಿವೆ. ರಾಜ್ಯ ಮತ್ತು ಕೇಂದ್ರದ ಚುನಾವಣಾಧಿಕಾರಿಗಳ ಮಾಹಿತಿ ಅನುಗುಣವಾಗಿ ಭದ್ರತಾ ಪಡೆಗಳನ್ನು ಒದಗಿಸಲಾಗಿದೆ. ಸುದೀರ್ಘವಾಗಿ ನಡೆದ ಏಳು ಹಂತಗಳ ಚುನಾವಣೆ ಇಂದು ಸಂಜೆ ಮುಕ್ತಾಯಗೊಳ್ಳುತ್ತಿದ್ದಂತೆ ಆಯೋಗದಿಂದ ಈ ನಿರ್ಧಾರ ಹೊರಬಿದ್ದಿದೆ. ಇದನ್ನೂ ಓದಿ: ಅಬ್ಕಿ ಬಾರ್ ಚಾರ್ ಸೌ ಪಾರ್ – ಎನ್‌ಡಿಎ 400ರ ಗಡಿ ದಾಟುತ್ತೆ ಎಂದ ಟುಡೇಸ್ ಚಾಣಕ್ಯ
ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಕೆಲವು ಮತಗಟ್ಟೆ ಏಜೆಂಟರನ್ನು ಮತಗಟ್ಟೆಗಳಿಗೆ ಪ್ರವೇಶಿಸದಂತೆ ನಿಬರ್ಂಧಿಸಿದ ಬಳಿಕ ಹಿಂಸಾಚಾರ ನಡೆದಿತ್ತು. ಈ ವೇಳೆ ಕೋಪಗೊಂಡ ಜನಸಮೂಹವು ಮತಗಟ್ಟೆಗಳಿಗೆ ನುಗ್ಗಿ, ಇವಿಎಂನ್ನು ಕೊಳಕ್ಕೆ ಎಸೆದಿತ್ತು. ಇನ್ನೂ ಜಾದವ್‍ಪುರ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಭಂಗಾರ್‍ನ ಸತುಲಿಯಾ ಪ್ರದೇಶದಲ್ಲಿ ಇಂಡಿಯನ್ ಸೆಕ್ಯುಲರ್ ಫ್ರಂಟ್ ಮತ್ತು ಸಿಪಿಐ(ಎಂ) ನಡುವಿನ ಘರ್ಷಣೆಯಲ್ಲಿ ಹಲವಾರು ಜನರು ಗಾಯಗೊಂಡಿರುವುದು ವರದಿಯಾಗಿದೆ.
ಆಂಧ್ರಪ್ರದೇಶದಲ್ಲಿ, ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷ ಮತ್ತು ಆಡಳಿತಾರೂಢ ವೈಎಸ್‍ಆರ್ ಕಾಂಗ್ರೆಸ್ ಕಾರ್ಯಕರ್ತರ ನಡುವಿನ ಘರ್ಷಣೆಯು ಮೇ ತಿಂಗಳಲ್ಲಿ ನಡೆದ ಎರಡನೇ ಹಂತದ ಮತದಾನದಲ್ಲಿ ಪ್ರಮುಖ ಸುದ್ದಿಯಾಗಿತ್ತು. ಎಕ್ಸಿಟ್ ಪೋಲ್‍ಗಳು ಎರಡೂ ರಾಜ್ಯಗಳಲ್ಲಿ ಬಿಜೆಪಿ (BJP) ಮತ್ತು ಎನ್‍ಡಿಎ ಹೆಚ್ಚು ಸ್ಥಾನಗಳನ್ನು ಗಳಿಸಲಿದೆ ಎಂದು ಭವಿಷ್ಯ ನುಡಿದಿದ್ದು, ಹಿಂಸಾಚಾರ ನಡೆಯವ ಸಾಧ್ಯತೆ ಬಗ್ಗೆ ಆತಂಕ ಮನೆ ಮಾಡಿದೆ. ಇದೇ ಕಾರಣಕ್ಕೆ ಚುನಾವಣಾ ಆಯೋಗ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: Exit Poll | ಎಕ್ಸಿಟ್ ಪೋಲ್ ಮೇಲೆ ನಂಬಿಕೆಯಿಲ್ಲ, ಬಿಜೆಪಿ 275 ಸ್ಥಾನಗಳನ್ನೂ ದಾಟಲ್ಲ: ಎಂ.ಬಿ ಪಾಟೀಲ್