– ರಾಜಧಾನಿಯ ಸುತ್ತಲಿನ ನಗರಗಳಿಗೆ ಸೌಲಭ್ಯ ಒದಗಿಸುವ ಇಚ್ಛೆ: ಎಂ ಬಿ ಪಾಟೀಲ್
ಬೆಂಗಳೂರು: ರಾಜಧಾನಿಯಲ್ಲಿನ ಸಂಚಾರ ದಟ್ಟಣೆ ನಿವಾರಣೆಯ ಗುರಿಯೊಂದಿಗೆ ಕೈಗೆತ್ತಿಕೊಂಡಿರುವ ಉಪನಗರ ರೈಲು ಯೋಜನೆಯನ್ನು ( Bengaluru Sub Urban Rail Project) ಸುತ್ತಮುತ್ತಲಿನ ಮೈಸೂರು, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ಮಾಗಡಿ, ಗೌರಿಬಿದನೂರು, ಬಂಗಾರಪೇಟೆಗೆ ವಿಸ್ತರಿಸಲು ಅನುಕೂಲವಾಗುವಂತೆ ಕಾರ್ಯಸಾಧ್ಯತಾ ವರದಿ ಕೈಗೆತ್ತಿಕೊಳ್ಳಲು ರೈಲ್ವೆ ಸಚಿವಾಲಯವು ಅನುಮತಿ ನೀಡಬೇಕೆಂದು ಕೋರಿ ನೈರುತ್ಯ ರೈಲ್ವೆ (South Western Railway) ವಲಯದ ಪ್ರಧಾನ ವ್ಯವಸ್ಥಾಪಕರಿಗೆ ಪತ್ರ ಬರೆಯಲಾಗಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ್ (MB Patil) ತಿಳಿಸಿದ್ದಾರೆ.
Advertisement
ಉಪನಗರ ರೈಲು ಯೋಜನೆಯ ಪ್ರಗತಿ ಕುರಿತು ಸೋಮವಾರ ಇಲ್ಲಿ ಕರ್ನಾಟಕ ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿ ನಿಯಮಿತದ (ಕೆ-ರೈಡ್) ಉನ್ನತ ಅಧಿಕಾರಿಗಳೊಂದಿಗೆ ಅವರು ಸೋಮವಾರ ಪರಿಶೀಲನಾ ಸಭೆ ನಡೆಸಿದರು. ಇದನ್ನೂ ಓದಿ: ವೈದ್ಯಕೀಯ, ಎಂಜಿನಿಯರಿಂಗ್ ಸೇರಿ ಎಲ್ಲಾ ಕೋರ್ಸ್ಗಳಿಗೂ ಒಟ್ಟಿಗೆ ಸಿಇಟಿ ಸೀಟು ಹಂಚಿಕೆ – ಹೊಸ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತೆ?
Advertisement
Advertisement
ಈ ಬಗ್ಗೆ ಮಾತನಾಡಿದ ಅವರು, “ಹಂತ-1ರಲ್ಲಿ ಉಪನಗರ ರೈಲು ಯೋಜನೆ ಕಾಮಗಾರಿ (148.17 ಕಿ.ಮೀ.) ನಡೆಯುತ್ತಿದೆ. ಇದನ್ನು ಸುತ್ತಲಿನ ಹಲವು ನಗರಗಳಿಗೆ ವಿಸ್ತರಿಸುವ ಅಗತ್ಯವಿದೆ. ಈ ಸಂಬಂಧ ಜೂನ್ 6ರಂದು ಸಭೆ ನಡೆಸಲಾಗಿತ್ತು. ಕೆ-ರೈಡ್ ಈ ಪ್ರಸ್ತಾವನೆಗೆ ಅಂದು ತಾತ್ತ್ವಿಕ ಒಪ್ಪಿಗೆ ನೀಡಿತ್ತು. ಮುಂದಿನ ಹೆಜ್ಜೆಯಾಗಿ ಈಗ ನೈರುತ್ಯ ರೈಲ್ವೆಗೆ ಪತ್ರ ಬರೆಯಲಾಗಿದೆ” ಎಂದರು.
Advertisement
ಉಪನಗರ ರೈಲು ಯೋಜನೆಯ ಹಂತ-1ರ ಕಾಮಗಾರಿಗಳು ಅಬಾಧಿತವಾಗಿ ಮುಂದುವರಿದುಕೊಂಡು ಹೋಗಲಿವೆ. ಆದರೆ, ಹಂತ-2ನ್ನು 452 ಕಿ.ಮೀ.ಗಳಿಗೆ ವಿಸ್ತರಿಸಲು ಯೋಚಿಸಿದ್ದು, ಇದಕ್ಕೆ ಈಗಿನಿಂದಲೇ ಅಗತ್ಯ ಉಪಕ್ರಮಗಳನ್ನು ಕೈಗೊಳ್ಳುವ ಜರೂರಿದೆ. ನಿಯಮಗಳ ಪ್ರಕಾರ ರಾಜ್ಯ ಸರಕಾರದ ಸಂಸ್ಥೆಯು ಕಾರ್ಯಸಾಧ್ಯತಾ ವರದಿ ತಯಾರಿಸಲು ಸಾಧ್ಯವಿಲ್ಲ. ಇದನ್ನು ರೈಲ್ವೆ ಮಂಡಲಿಯೇ ಮಾಡಬೇಕು ಎಂದು ಅವರು ಮಾಹಿತಿ ನೀಡಿದ್ದಾರೆ.
ಬೆಂಗಳೂರು ಉಪನಗರಗಳು, ಮೈಸೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಜನರಿಗೆ ಉಪಯೋಗವಾಗಲಿರುವ ಬೆಂಗಳೂರು ಉಪನಗರ ರೈಲ್ವೆ ಯೋಜನೆ- #BSRP ಕುರಿತಂತೆ ಇಂದು ಪ್ರಗತಿ ಪರಿಶೀಲನಾ ಸಭೆ ನಡೆಸಿದೆ. ಯೋಜನೆಯ ಶೀಘ್ರ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. pic.twitter.com/I59nSvZO7L
— M B Patil (@MBPatil) July 24, 2023
ಇದೇ ಸಂದರ್ಭದಲ್ಲಿ ಅವರು, ಉಪನಗರ ರೈಲು ಯೋಜನೆಯ ವ್ಯಾಪ್ತಿಯಲ್ಲಿ ಭೂಸ್ವಾಧೀನಕ್ಕೆ ಸಂಬಂಧಪಟ್ಟಂತೆ ಇರುವ ಸಣ್ಣಪುಟ್ಟ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಬೇಕು. ರೈಲು ವ್ಯವಸ್ಥೆಗೆ ಬೇಕಾದ ಬೋಗಿಗಳ ತಯಾರಿಕೆಗೆ ಬಿಡ್ ಅಂತಿಮಗೊಳಿಸಲಾಗುತ್ತಿದ್ದು, ಕೆಲವೇ ದಿನಗಳಲ್ಲಿ ಯೋಜನೆಯ ಕಾಮಗಾರಿಯನ್ನೂ ಖುದ್ದಾಗಿ ಪರಿಶೀಲಿಸಲಾಗುವುದು ಎಂದು ವಿವರಿಸಿದರು.
ಈ ಯೋಜನೆಗೆ 177.22 ಎಕರೆ ಭೂಮಿ ಅಗತ್ಯವಿತ್ತು. ಈ ಪೈಕಿ ಈಗಾಗಲೇ 164 ಎಕರೆಯ ಸ್ವಾಧೀನ ಮುಗಿದಿದೆ. ಆದರೆ ಉಳಿದ 12.39 ಎಕರೆ ಭೂಮಿ ರಕ್ಷಣಾ ಇಲಾಖೆ ಮತ್ತು ಸರಕಾರದ್ದಾಗಿದ್ದು, ಸ್ವಲ್ಪ ಕಗ್ಗಂಟಾಗಿದೆ. ಕೆ-ರೈಡ್ ಅಧಿಕಾರಿಗಳು ಸಂಬಂಧಿಸಿದವರ ಜತೆ ಮಾತುಕತೆ ನಡೆಸಿ, ಇದನ್ನು ಬೇಗನೆ ಬಗೆಹರಿಸಬೇಕು. ಯೋಜನೆಯ ಭಾಗವಾಗಿ ಸೋಲದೇವನಹಳ್ಳಿ ಮತ್ತು ದೇವನಹಳ್ಳಿಯಲ್ಲಿ ಎರಡು ಡಿಪೋ ನಿರ್ಮಿಸಲಾಗುವುದು ಎಂದು ಸಚಿವರು ನುಡಿದರು.
ಸಭೆಯಲ್ಲಿ ಕೆ-ರೈಡ್ ವ್ಯವಸ್ಥಾಪಕ ನಿರ್ದೇಶಕ ಗೌರವ್ ಗುಪ್ತ, ಕೆ- ರೈಡ್ ಯೋಜನಾ ನಿರ್ದೇಶಕ ರಾಜೇಂದ್ರಕುಮಾರ್ ಸಿಂಗ್ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಉಪನಗರ ರೈಲು ವಿಸ್ತರಣೆಯ ರೂಪುರೇಷೆ ಹೇಗೆ?
ಸದ್ಯಕ್ಕೆ ಪ್ರಗತಿಯಲ್ಲಿರುವ 148 ಕಿ.ಮೀ. ವ್ಯಾಪ್ತಿಯ ಉಪನಗರ ರೈಲು ಯೋಜನೆಯಲ್ಲಿ ಒಟ್ಟು ನಾಲ್ಕು ಕಾರಿಡಾರ್ಗಳಿವೆ. ಇದು ಕ್ರಮವಾಗಿ ಬೆಂಗಳೂರು ನಗರ ರೈಲು ನಿಲ್ದಾಣದಿಂದ ದೇವನಹಳ್ಳಿ (41.4 ಕಿ.ಮೀ), ಬೈಯಪ್ಪನಹಳ್ಳಿಯಿಂದ ಚಿಕ್ಕಬಾಣಾವರ (25.01 ಕಿ.ಮೀ), ಕೆಂಗೇರಿಯಿಂದ ವೈಟ್ಫೀಲ್ಡ್ (35.32 ಕಿ.ಮೀ) ಮತ್ತು ಹೀಳಲಿಗೆಯಿಂದ ರಾಜಾನುಕುಂಟೆವರೆಗೆ (46.25 ಕಿ.ಮೀ) ಉದ್ದವಿದೆ.
ಇದನ್ನು ಎರಡನೇ ಹಂತದಲ್ಲಿ ದೇವನಹಳ್ಳಿಯಿಂದ ಕೋಲಾರ (107 ಕಿ.ಮೀ), ಚಿಕ್ಕಬಾಣಾವರದಿಂದ ಡಾಬಸ್ಪೇಟೆ ಮೂಲಕ ತುಮಕೂರು (55 ಕಿ.ಮೀ), ಚಿಕ್ಕಬಾಣಾವರದಿಂದ ಮಾಗಡಿ (45 ಕಿ.ಮೀ), ಕೆಂಗೇರಿಯಿಂದ ಮೈಸೂರು (125 ಕಿ.ಮೀ), ವೈಟ್ಫೀಲ್ಡ್ನಿಂದ ಬಂಗಾರಪೇಟೆ (45 ಕಿ.ಮೀ), ಹೀಳಲಿಗೆಯಿಂದ ತಮಿಳುನಾಡಿನ ಹೊಸೂರು (23 ಕಿ.ಮೀ) ಮತ್ತು ರಾಜಾನುಕುಂಟೆಯಿಂದ ದೊಡ್ಡಬಳ್ಳಾಪುರದ ಮಾರ್ಗವಾಗಿ ಗೌರಿಬಿದನೂರಿನವರೆಗೆ (52 ಕಿ.ಮೀ) ವಿಸ್ತರಿಸಬೇಕೆಂಬುದು ಸಚಿವ ಎಂ ಬಿ ಪಾಟೀಲ ಅವರ ಚಿಂತನೆಯಾಗಿದೆ. ಇದರಿಂದಾಗಿ ಬೆಂಗಳೂರಿನ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಬಂದು, ಇಲ್ಲಿರುವ ಉದ್ದಿಮೆಗಳಿಗೆ ಸುತ್ತಮುತ್ತಲ ನಗರ/ಪಟ್ಟಣಗಳಿಂದ ಉದ್ಯೋಗಿಗಳು ಸುಗಮವಾಗಿ ಬಂದು ಹೋಗಬಹುದು ಎನ್ನುವುದು ಅವರ ಆಶಯವಾಗಿದೆ.
Web Stories