ಬೆಂಗಳೂರು: ನಗರದ ಬೌರಿಂಗ್ ಇನ್ಸ್ಟಿಟ್ಯೂಟ್ ಕ್ಲಬ್ ನಲ್ಲಿ ಕೋಟಿ ಕೋಟಿ ಹಣ ಪತ್ತೆ ಪ್ರಕರಣ ಕುರಿತು ತನಿಖೆ ಮುಂದುವರಿದಿದ್ದು, ಇದೀಗ ಈ ಹಣ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಸೇರಿದ್ದಾಗಿದೆ ಎನ್ನಲಾಗಿದೆ.
ಕ್ಲಬ್ ನ ಸದಸ್ಯತ್ವ ಹೊಂದಿದ್ದ ಉದ್ಯಮಿ ಅವಿನಾಶ್ ಅಮರ್‍ಲಾಲ್, ಮಾಜಿ ಸಿಎಂ ಜೊತೆಗೂಡಿ ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದರು ಎಂಬುದಾಗಿ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.
ಕೋಟಿ ನಿಧಿ ಪ್ರಕರಣದಲ್ಲಿ ಮಾಜಿ ಸಿಎಂ ಹೆಸರು ತಳಕು ಹಾಕಿಕೊಂಡಿದ್ದರಿಂದ ಯಾವುದೇ ಕ್ಷಣದಲ್ಲಾದರೂ ಜಗದೀಶ್ ಶೆಟ್ಟರ್ ಅವರನ್ನು ಐಟಿ ಅಧಿಕಾರಿಗಳು ವಿಚಾರಣೆ ನಡೆಸುವ ಸಾಧ್ಯತೆಗಳಿವೆ.
ಹಣ ಸಿಕ್ಕಿದ್ದು ಹೇಗೆ?
ಬೌರಿಂಗ್ ಇನ್ಸ್ಟಿಟ್ಯೂಟ್ ಆಡಳಿತ ಮಂಡಳಿ 15 ದಿನಗಳ ಹಿಂದೆ, ನೀವು ಲಾಕರ್ ನಲ್ಲಿ ಇಟ್ಟಿದ್ದ ಬ್ಯಾಗ್ ಗಳನ್ನು ತೆಗೆದುಕೊಂಡು ಹೋಗಿ ಒಂದು ವೇಳೆ ಲಾಕರ್ ನಲ್ಲಿರುವ ವಸ್ತು ಕೊಂಡೊಯ್ಯದಿದ್ದರೆ ಲಾಕರ್ ಒಡೆಯುದಾಗಿ ಉದ್ಯಮಿಗೆ ನೋಟಿಸ್ ಕಳುಹಿಸಿರುತ್ತಾರೆ. ಸ್ವಲ್ಪ ಕೆಲಸ ಕಾರ್ಯಗಳಿವೆ. ಆದ್ದರಿಂದ ಅವುಗಳನ್ನು ಒಡೆದು ನವೀಕರಣಗೊಳಿಸಬೇಕಿದೆ ಎಂದು ಬೌರಿಂಗ್ ಆಡಳಿತ ಮಂಡಳಿ ತಿಳಿಸುತ್ತದೆ. ಆದರೆ ಉದ್ಯಮಿ ನೋಟಿಸ್ ಬಗ್ಗೆ ತಲೆ ತಲೆಕೆಡಿಸಿಕೊಂಡಿಲ್ಲ. ಕೊನೆಗೆ ಆಡಳಿತ ಮಂಡಳಿ 86, 87ರಲ್ಲಿ ಲಾಕರ್ ಹೊಡೆದಿದೆ. ಆಗ ಈ ಕೋಟಿ ಕೋಟಿ ಆಸ್ತಿ ಪತ್ತೆಯಾಗಿತ್ತು.
ಅವಿನಾಶ್ ಅಮರ್ಲಾಲ್ ಪ್ರೆಸ್ಟಿಜ್ ಗ್ರೂಪ್ ಆಫ್ ಕಂಪೆನಿಯಲ್ಲಿ ಪಾಲುದಾರನಾಗಿದ್ದು, ಮೂಲತಃ ರಾಜಸ್ಥಾನದವನು ಎಂದು ತಿಳಿದು ಬಂದಿದೆ. ಜೊತೆಗೆ ಬೆಂಗಳೂರಲ್ಲಿ ಬಡ್ಡಿ ವ್ಯವಹಾರ ಮಾಡುತ್ತಿದ್ದು, 30% ರಷ್ಟು ಬಡ್ಡಿಗೆ ಸಾಲ ನೀಡುತ್ತಿದ್ದರು. ಸಾಲ ಕೊಟ್ಟು ಆಸ್ತಿ ಪತ್ರಗಳನ್ನು ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.
ಉದ್ಯಮಿ ಅವಿನಾಶ್ ಅಮರ್ ಲಾಲ್, ನಗರದ ಟೆನಿಸ್ ಕೋರ್ಟ್ ನಲ್ಲಿ ಕಳೆದ 1 ವರ್ಷದಿಂದ ನಿಧಿಯನ್ನು ಬಚ್ಚಿಟ್ಟಿದ್ದರು. ಬೌರಿಂಗ್ ಇನ್ಸ್ಟಿಟ್ಯೂಟ್ ಆಡಳಿತ ಮಂಡಳಿ ಅವರು ಬಚ್ಚಿಟ್ಟಿದ್ದ ಲಾಕರ್ ಓಪನ್ ಮಾಡಿದ್ದಾರೆ. 2 ಲಾಕರ್ ಓಪನ್ ಮಾಡಿದ್ದು, ಅದರಲ್ಲಿ 2 ಬ್ಯಾಗ್ ಪತ್ತೆಯಾಗಿತ್ತು. ಈ 2 ಬ್ಯಾಗಿನಲ್ಲಿ ಸುಮಾರು 3.90 ಕೋಟಿ ನಗದು, 5 ಕೋಟಿ ಮೌಲ್ಯದ ವಜ್ರಾಭರಣ ಮತ್ತು 100ಕೋಟಿ ರೂ. ಆಸ್ತಿ ಪತ್ರ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಐಟಿ ಇಲಾಖೆ ಅಧಿಕಾರಿಗಳು ತೀವ್ರ ತನಿಖೆ ನಡೆಸುತ್ತಿದ್ದಾರೆ.