ಗಲ್ವಾನ್ ಘರ್ಷಣೆಯ ಬಳಿಕ ಚೀನಿ ಆಪ್‌ಗಳನ್ನು ನಿಷೇಧಿಸಿದ್ದ ಭಾರತ ಈಗ ಚೀನಾದ ಲ್ಯಾಪ್‌ಟಾಪ್/ಕಂಪ್ಯೂಟರ್ ಆಮದಿಗೆ ನಿರ್ಬಂಧ ಹೇರಿದೆ. 2020-21 ರಲ್ಲಿ ಗಲ್ವಾನ್‌ನಲ್ಲಿ ಘರ್ಷಣೆ ನಡೆದ ಬಳಿಕ ಚೀನಿ ಸಾಫ್ಟ್‌ವೇರ್ ಕ್ಷೇತ್ರಕ್ಕೆ ಶಾಕ್ ನೀಡಿದ್ದ ಭಾರತ ಈಗ ಹಾರ್ಡ್‌ವೇರ್ ಕ್ಷೇತ್ರಕ್ಕೆ ಶಾಕ್ ನೀಡಿದೆ. ಹೀಗಾಗಿ ಭಾರತ ಈಗ ದಿಢೀರ್ ಲ್ಯಾಪ್‌ಟಾಪ್, ಕಂಪ್ಯೂಟರ್ ಆಮದಿಗೆ ನಿರ್ಬಂಧ ಹೇರಿದ್ದು ಯಾಕೆ? ಚೀನಾ ಚಿಪ್ ಫ್ಯಾಕ್ಟರಿಯಾಗಿದ್ದು ಹೇಗೆ? ಹಾರ್ಡ್‌ವೇರ್ ಕ್ಷೇತ್ರದಲ್ಲಿ ಚೀನಾವನ್ನು ಸೋಲಿಸಲು ಸಾಧ್ಯವೇ? ಇತ್ಯಾದಿ ವಿಷಯಗಳ ಬಗ್ಗೆ ವಿವರವಾದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಚೀನಾ ಚಿಪ್ ಫ್ಯಾಕ್ಟರಿಯಾಗಿದ್ದು ಹೇಗೆ?
ಒಂದು ದೇಶ ಅಭಿವೃದ್ಧಿಯಾಗಬೇಕಾದರೆ ಮೂಲಸೌಕರ್ಯ ಅಭಿವೃದ್ಧಿಯಾಗಬೇಕು ಎಂಬುದನ್ನು ಅರಿತ ಚೀನಾ ಮೂಲಸೌಕರ್ಯಕ್ಕೆ ಹೆಚ್ಚಿನ ಹಣವನ್ನು ಹೂಡಿಕೆ ಮಾಡಿತು. 1980-2000 ಅವಧಿಯಲ್ಲಿ ರಸ್ತೆ, ರೈಲು, ಬಂದರು ಅಭಿವೃದ್ಧಿ ಮಾಡಲು ಮುಂದಾಯಿತು. ಮೂಲಸೌಕರ್ಯ ಅಭಿವೃದ್ಧಿಯಾದಂತೆ ವಸ್ತುಗಳು ಎಲ್ಲೇ ತಯಾರಾದರೂ ಅದು ಸುಲಭವಾಗಿ ರೈಲು ಮತ್ತು ಬಂದರು ತಲುಪುವಂತೆ ವ್ಯವಸ್ಥೆ ಮಾಡಿತು. ಸಂಪರ್ಕ ವ್ಯವಸ್ಥೆ ಚೆನ್ನಾಗಿ ಆಗುತ್ತಿದ್ದಂತೆ ವಿದೇಶಿ ಕಂಪನಿಗಳನ್ನು ಹೂಡಿಕೆ ಮಾಡಲು ಆಹ್ವಾನಿಸಿತು.
ಚೀನಾದಲ್ಲಿ ಜನಸಂಖ್ಯೆ ಹೆಚ್ಚಾದ ಪರಿಣಾಮ ಕಾರ್ಮಿಕರ ಸಮಸ್ಯೆ ಇರಲಿಲ್ಲ. ಈ ಕಾರಣಕ್ಕೆ ವಿದೇಶಿ ಕಂಪನಿಗಳು ಹೆಚ್ಚು ಹೂಡಿಕೆ ಮಾಡಿದವು. ವಿಶೇಷ ಆರ್ಥಿಕ ವಲಯವನ್ನು ಸ್ಥಾಪಿಸಿ ಕಂಪನಿಗಳಿಗೆ ಹಲವು ರಿಯಾಯಿತಿ ಘೋಷಿಸಿತು. ಇದರ ಜೊತೆ ಚೀನಾ ಸರ್ಕಾರ ಕಂಪನಿಗಳ ಪರವಾಗಿಯೇ ಕಾನೂನು ರೂಪಿಸಿತ್ತು. ಇದೆಲ್ಲದರ ಪರಿಣಾಮ ವಿಶ್ವದ ದೊಡ್ಡ ದೊಡ್ಡ ಎಲೆಕ್ಟ್ರಾನಿಕ್ಸ್ ಕಂಪನಿಗಳು ಚಿಪ್ ಘಟಕವನ್ನು ಸ್ಥಾಪಿಸಲು ಮುಂದಾದವು. ಈ ನಿರ್ಧಾರದಿಂದ ಚೀನಾಕ್ಕೆ ಎರಡು ಲಾಭವಾಯಿತು. ಒಂದನೇಯದ್ದಾಗಿ ಜನರಿಗೆ ಉದ್ಯೋಗ ಸಿಕ್ಕಿದರೆ ಎರಡನೇಯದ್ದಾಗಿ ಚೀನಾದ ಆರ್ಥಿಕತೆ ಬೆಳವಣಿಗೆ ಆಯಿತು. ಈ ಮೂಲಕ ವಿಶ್ವದಲ್ಲೇ ಎರಡನೇ ಅತಿ ದೊಡ್ಡ ಆರ್ಥಿಕತೆ ಹೊಂದಿದ ದೇಶವಾಗಿ ಹೊರಹೊಮ್ಮಿತು.
ಭಾರತ ನಿರ್ಬಂಧ ಹೇರಿದ್ದು ಯಾಕೆ?
ಎಲೆಕ್ಟ್ರಾನಿಕ್ಸ್, ಮಷಿನರಿ, ಮೊಬೈಲ್ ಫೋನ್, ಲ್ಯಾಪ್‌ಟಾಪ್ ಬಿಡಿಭಾಗಗಳು, ಸೋಲಾರ್ ಸೆಲ್ ಮಾಡ್ಯೂಲ್ ಭಾರತ ಚೀನಾದಿಂಧ ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತಿದೆ. ಚೀನಾದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಪೈಕಿ ಈ ವಸ್ತುಗಳ ಪಾಲು 65%. ಅದರಲ್ಲೂ ಭಾರತದ ಕಂಪ್ಯೂಟರ್ ಆಮದಿನಲ್ಲಿ ಚೀನಾ ಪಾಲು70%ರಿಂದ 80% ರಷ್ಟಿದೆ.
ಆಮದು ಮತ್ತು ರಫ್ತು ಎಷ್ಟಿದೆ?
2014ರಲ್ಲಿ ಭಾರತದ ರಫ್ತು 13,434 ಮಿಲಿಯನ್ ಡಾಲರ್ ಇದ್ದರೆ ಆಮದು 58,230 ಮಿಲಿಯನ್ ಡಾಲರ್ ಇತ್ತು. 2020 ರಲ್ಲಿ ರಫ್ತು 19,008 ಮಿಲಿಯನ್ ಡಾಲರ್ ಇದ್ದರೆ ಆಮದು 58,798 ಮಿಲಿಯನ್ ಡಾಲರ್ ಇತ್ತು. 20222 ರಲ್ಲಿ ಭಾರತದ ರಫ್ತು 15,743 ಮಿಲಿಯನ್ ಡಾಲರ್ ಇದ್ದರೆ ಚೀನಾದ ಆಮದು ಪ್ರಮಾಣ 1,26,851 ಮಿಲಿಯನ್ ಡಾಲರ್ ಇತ್ತು. ಈ ವರ್ಷದ ಏಪ್ರಿಲ್ ಜೂನ್ ಅವಧಿಯಲ್ಲಿ ಎಲೆಕ್ಟ್ರಾನಿಕ್ಸ್, ಲ್ಯಾಪ್‌ಟಾಪ್,ಕಂಪ್ಯೂಟರ್, ಟ್ಯಾಬ್ಲೆಟ್ಸ್ ಸೇರಿ ಒಟ್ಟು 19.7 ಬಿಲಿಯನ್ ಡಾಲರ್ ಮೊತ್ತದ ವಸ್ತುಗಳನ್ನು ಭಾರತ ಚೀನಾದಿಂದ ಆಮದು ಮಾಡಿಕೊಂಡಿದೆ.
ಲ್ಯಾಪ್‌ಟಾಪ್, ಟ್ಯಾಬ್ಲೆಟ್, ಆಲ್ ಇನ್ ಒನ್ ಕಂಪ್ಯೂಟರ್‌ಗಳು, ಸಣ್ಣ ಕಂಪ್ಯೂಟರ್‌ಗಳು, ಸರ್ವರ್‌ಗಳು, ಡಾಟಾ ಸಂಸ್ಕರಣಾ ಮಷಿನ್‌ಗಳು ಆಮದಿಗೆ ನಿರ್ಬಂಧ ಹೇರಿದೆ. ಆದರೆ ಇದು ಸಂಪೂರ್ಣ ನಿಷೇಧವಲ್ಲ. ನಿರ್ಬಂಧ ಮಾತ್ರ ಹೇರಲಾಗಿದೆ. ಈ ಮೇಲೆ ತಿಳಿಸಿದ ಯಾವುದೇ ವಸ್ತುಗಳನ್ನು ವ್ಯಾಪಾರಿಗಳು ಭಾರಿ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಬೇಕು ಎಂದರೆ ಕೇಂದ್ರ ಸರ್ಕಾರದ ಅನುಮತಿ ಅಥವಾ ಲೈಸೆನ್ಸ್ ಪಡೆಯುವುದನ್ನು ಕಡ್ಡಾಯ ಮಾಡಲಾಗಿದೆ.
ಸಂಶೋಧನೆ ಮತ್ತು ಅಭಿವೃದ್ಧಿ, ಪರೀಕ್ಷೆ, ಮೌಲ್ಯಮಾಪನ ಸೇರಿ 20 ಎಲೆಕ್ಟ್ರಾನಿಕ್ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಒಂದು ಬಾರಿಯ ಸರ್ಕಾರ ವಿನಾಯ್ತಿ ನೀಡಲಾಗಿದೆ. ಇದನ್ನೂ ಓದಿ: ಕ್ರೀಡೆಗೆ ಸೌದಿ ಕೋಟಿ ಕೋಟಿ ಹೂಡಿಕೆ ಮಾಡುತ್ತಿರುವುದು ಯಾಕೆ?
ಜನಸಂಖ್ಯೆಯಲ್ಲಿ ದೊಡ್ಡ ದೇಶವಾಗಿರುವ ಭಾರತ ವಿಶ್ವದ ದೊಡ್ಡ ಮಾರುಕಟ್ಟೆಯೂ ಹೌದು. ಈ ಕಾರಣಕ್ಕೆ ಈಗ ಆಮದು ಕಡಿಮೆ ಮಾಡಿ ದೇಶದಲ್ಲೇ ಉತ್ಪಾದನೆ ಹೆಚ್ಚಳ ಮಾಡಲು ಚೀನಾದ ವಸ್ತುಗಳಿಗೆ ನಿರ್ಬಂಧ ಹೇರಿದೆ. ಇದರ ಜೊತೆ ಇನ್ನೊಂದು ಕಾರಣವೂ ಇದೆ. ಭಾರತ ತನ್ನ ದೊಡ್ಡ ಮಾರುಕಟ್ಟೆ ಎಂದು ತಿಳಿದಿದ್ದರೂ ಚೀನಾ ಗಡಿಯಲ್ಲಿ ಕಿರಿಕ್ ಮಾಡುತ್ತಲೇ ಇದೆ. ನಮ್ಮದೇ ದುಡ್ಡು ಪಡೆದು ನಮ್ಮ ವಿರುದ್ಧವೇ ತಿರುಗಿ ಬೀಳುವ ಚೀನಾವನ್ನು ಆರ್ಥಿಕವಾಗಿ ಕುಗ್ಗಿಸಬೇಕಾದೆ ನಾವು ಆಮದು ಕಡಿಮೆ ಮಾಡಲೇಬೇಕು. ಈ ಕಾರಣಕ್ಕೆ ಸರ್ಕಾರ ಈಗ ನಿರ್ಬಂಧ ಹೇರುವ ಮಹತ್ವದ ನಿರ್ಧಾರ ಕೈಗೊಂಡಿದೆ.
ಬೆಲೆ ಹೆಚ್ಚಳ:
ಪೋಸ್ಟ್ ಅಥವಾ ಕೊರಿಯರ್ ಮೂಲಕ ಲ್ಯಾಪ್‌ಟಾಪ್, ಟ್ಯಾಬ್ಲೆಟ್, ಆನ್ ಇನ್ ಒನ್ ಕಂಪ್ಯೂಟರ್, ಅಲ್ಟ್ರಾ ಸ್ಮಾಲ್ ಕಂಪ್ಯೂಟರ್‌ಗಳನ್ನು ಆಮದು ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಆದರೆ ಇದಕ್ಕೆ ಸೂಕ್ತ ಸುಂಕ (ಕಸ್ಟಮ್ಸ್) ಪಾವತಿ ಮಾಡಬೇಕಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಸುಂಕ ವಿಧಿಸಿದ್ದರಿಂದ ಉತ್ಪನ್ನಗಳ ಬೆಲೆ ಹೆಚ್ಚಾಗುತ್ತದೆ. ಹೀಗಾಗಿ ಆಮದಿಗೆ ತನ್ನಿಂತಾನೇ ಕಡಿವಾಣ ಬೀಳಬಹುದು ಎಂಬುದು ಸರ್ಕಾರದ ಲೆಕ್ಕಾಚಾರ. ಈ ಕಾರಣಕ್ಕೆ ಕಂಪನಿಗಳು ಭಾರತದಲ್ಲಿ ಲ್ಯಾಪ್‌ಟಾಪ್, ಕಂಪ್ಯೂಟರ್ ತಯಾರಿಕೆಗೆ ಹೂಡಿಕೆ ಮಾಡಬಹುದು ಎಂಬ ಲೆಕ್ಕಾಚಾರವನ್ನು ಕೇಂದ್ರ ಸರ್ಕಾರ ಹಾಕಿಕೊಂಡಿದೆ. ಕೇಂದ್ರ ಸರ್ಕಾರ ಹೇರಿದ ನಿರ್ಬಂಧ ಅಕ್ಟೋಬರ್ 31ವರೆಗೆ ಜಾರಿಯಾಗುವುದಿಲ್ಲ. ಹೀಗಾಗಿ ಸದ್ಯಕ್ಕೆ ಈ ಉತ್ಪನ್ನಗಳ ಬೆಲೆ ಏರಿಕೆಯಾಗುವುದಿಲ್ಲ.
ಏನಿದು ಪಿಎಲ್‌ಐ ಸ್ಕೀಂ?
ಆಮದು ಕಡಿಮೆ ಮಾಡಿ ರಫ್ತು ಹೆಚ್ಚಳ ಮಾಡಲು ಭಾರತ ಸರ್ಕಾರ 2014ರಲ್ಲೇ ವಿದೇಶಿ ಹೂಡಿಕೆಯನ್ನು ಆಕರ್ಷಿಸಲು ಮೇಕ್ ಇನ್ ಇಂಡಿಯಾ ಯೋಜನೆಯನ್ನು ಆರಂಭಿಸಿತ್ತು. ಈ ಯೋಜನೆಯಿಂದ ಹಲವು ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡಿವೆ. ಚೀನಾ ಹೇಗೆ ಉತ್ಪದನಾ ವಲಯದಲ್ಲಿ ದೊಡ್ಡ ದೇಶವಾಗಿ ಹೊರಹೊಮ್ಮಿದೆಯೋ ಅದೇ ರೀತಿ ಭಾರತವು ಹೊರಹೊಮ್ಮುವಂತಾಗಲು ಪ್ರೊಡಕ್ಷನ್-ಲಿಂಕ್ಡ್ ಇನ್ಸೆಂಟಿವ್ಸ್ (PLI) ಸ್ಕೀಂ ಆರಂಭಿಸಿತು. ಆತ್ಮನಿರ್ಭರ ಭಾರತದ ಅಭಿಯಾನವಾಗಿ ಈ ಯೋಜನೆ ಜಾರಿಗೆ ಬಂದಿದೆ. ಪ್ರಸ್ತುತ ವಿಶ್ವದ ಚಿಪ್ ಮಾರುಕಟ್ಟೆಯಲ್ಲಿ ಚೀನಾ ಮತ್ತು ತೈವಾನ್ ಕಂಪನಿಗಳೇ ಹೆಚ್ಚು ಪ್ರಾಬಲ್ಯವನ್ನು ಹೊಂದಿದೆ. ಭಾರತವನ್ನು ಚಿಪ್, ಮೊಬೈಲ್ ಉತ್ಪಾದನಾ ಹಬ್ ದೇಶವನ್ನಾಗಿ ಪರಿವರ್ತಿಸಲು ಕೇಂದ್ರ ಸರ್ಕಾರ ಪಿಎಲ್ಐ ಯೋಜನೆಯನ್ನು ಆರಂಭಿಸಿದೆ. ಉದ್ಯೋಗ ಸೃಷ್ಟಿಗಾಗಿ ಆರಂಭಿಸಲಾದ ಈ ಯೋಜನೆ ಅಡಿ ಮುಂದಿನ 5 ವರ್ಷದಲ್ಲಿ 1.5 ಲಕ್ಷ ಕೋಟಿ ಮೌಲ್ಯದ ಮೊಬೈಲ್ ಫೋನ್ ಹಾಗೂ ಬಿಡಿಭಾಗಗಳನ್ನು ಉತ್ಪಾದಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಪಿಎಲ್‌ಐ ಯೋಜನೆ ಅಡಿ ಲಾಭ ಪಡೆದುಕೊಳ್ಳಲು ದೇಶದ ಹಲವು ಕಂಪನಿಗಳು ಮತ್ತು ವಿದೇಶದ ಕಂಪನಿಗಳು ಆಯ್ಕೆಯಾಗಿವೆ. ಆಯ್ಕೆಯಾದ ಕಂಪನಿಗಳು ನಿಗದಿತ ಟಾರ್ಗೆಟ್ ತಲುಪಿದರೆ ಕಂಪನಿಗಳಿಗೆ ಕ್ಯಾಶ್‌ಬ್ಯಾಕ್ ನೀಡಲಾಗುತ್ತದೆ. ಇದನ್ನೂ ಓದಿ: ತಾಲಿಬಾನ್ ಉಗ್ರರಿಗೆ ಪಾಕ್ ಮೇಲೆ ಸಿಟ್ಯಾಕೆ?
ಐಫೋನ್ ಉತ್ಪಾದನೆಯಲ್ಲಿ ಕ್ರಾಂತಿ
ಹಿಂದೆ ಭಾರತ ಆಪಲ್ ಕಂಪನಿಯ ಐಫೋನ್‌ಗಳನ್ನು ಆಮದು ಮಾಡಿಕೊಳ್ಳುತ್ತಿತ್ತು.ಆದರೆ ಈಗ ಭಾರತವೇ ರಫ್ತು ಮಾಡುವ ದೇಶವಾಗಿ ಹೊರಹೊಮ್ಮುತ್ತಿದೆ. ಸದ್ಯ ಭಾರತದಲ್ಲಿ ಐಫೋನ್ 12, 13, 14 ಮತ್ತು 14+ ಐಫೋನ್ ತಯಾರಾಗುತ್ತಿದೆ. ಭಾರತದಲ್ಲಿ ಫಾಕ್ಸ್‌ಕಾನ್, ವಿಸ್ಟ್ರಾನ್, ಪೆಗಟ್ರಾನ್ ಕಂಪನಿ ಐಫೋನ್ ತಯಾರಿಸುತ್ತಿದೆ. 2023ರ ಹಣಕಾಸು ವರ್ಷದಲ್ಲಿ 5 ಬಿಲಿಯನ್ ಡಾಲರ್ ಮೊತ್ತದ ಐಫೋನ್‌ಗಳನ್ನು ಭಾರತ ರಫ್ತು ಮಾಡಿದೆ. ಇಷ್ಟೊಂದು ಫೋನ್ ರಫ್ತು ಮಾಡಿದ ಮೊದಲ ದೇಶದ ಮೊದಲ ಬ್ರಾಂಡ್ ಎಂಬ ಹೆಗ್ಗಳಿಕೆಗೆ ಐಫೋನ್ ಪಾತ್ರವಾಗಿದೆ, ಈ ಮೂಲಕ ಚೀನಾ ಬಿಟ್ಟರೆ ಎರಡನೇ ಅತಿದೊಡ್ಡ ಐಫೋನ್ ಉತ್ಪಾದನಾ ದೇಶವಾಗಿ ಭಾರತ ಹೊರಹೊಮ್ಮಿದೆ. ಆಪಲ್ ಐಫೋನ್ ಉತ್ಪಾದನಾ ಮಾಡುವ ಫಾಕ್ಸ್‌ಕಾನ್ ಕಂಪನಿ ಭಾರತದಲ್ಲಿ 2 ಶತಕೋಟಿ ಡಾಲರ್ ಹೂಡಿಕೆ ಮಾಡುವುದಾಗಿ ಘೋಷಣೆ ಮಾಡಿದೆ. 2017 ರಿಂದ ಭಾರತದಲ್ಲಿ ಐಫೋನ್ ಉತ್ಪಾದನೆ ಮಾಡಲು ಆರಂಭಿಸಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಹೂಡಿಕೆ ಮಾಡವುದಾಗಿ ಆಪಲ್ ಹೇಳಿದೆ.
ಚೀನಾವನ್ನು ಸೋಲಿಸಲು ಸಾಧ್ಯವೇ?
ಚೀನಾವನ್ನು ಸೋಲಿಸಲು ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರ ತಿಳಿಯವ ಮೊದಲು ಚೀನಾ ಉತ್ಪಾದನಾ ಕ್ಷೇತ್ರದಲ್ಲಿ ಯಾವ ಸ್ಥಾನದಲ್ಲಿ ಇದೆ ಎಂಬುದನ್ನು ತಿಳಿದುಕೊಳ್ಳುವುದು ಉತ್ತಮ. ಚೀನಾವನ್ನು ʼವಿಶ್ವದ ಫ್ಯಾಕ್ಟರಿʼ ಎಂದೇ ಕರೆಯಲಾಗುತ್ತದೆ. ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಭಾರತ, ಅಮೆರಿಕ ದೇಶಗಳು ಮುಂದೆ ಇದ್ದರೆ ಹಾರ್ಡ್‌ವೇರ್ ಕ್ಷೇತ್ರದಲ್ಲಿ ಚೀನಾವೇ ನಂಬರ್ ಒನ್. ಸಣ್ಣ ಸೂಜಿ, ಅಟಿಕೆಯಿಂದ ಹಿಡಿದು ದೊಡ್ಡ ವಸ್ತುಗಳು ಚೀನಾದಲ್ಲಿ ತಯಾರಾಗುತ್ತಿದೆ. ಭಾರತದಲ್ಲೇ ವಸ್ತು ಉತ್ಪಾದನೆಯಾದರೂ ಚೀನಾದಂತೆ ಕಡಿಮೆ ದರದಲ್ಲಿ ಕೊಡಲು ಸಾಧ್ಯವಿಲ್ಲ ಎಂಬ ಮಾತು ಪ್ರಚಲಿತದಲ್ಲಿದೆ. ಈ ರೀತಿ ಮಾತು ಬರಲು ಕಾರಣವಿದೆ. ಚೀನಾದಲ್ಲಿ ಕಡಿಮೆ ಸಂಬಳಕ್ಕೆ ಕಾರ್ಮಿಕರು ಸಿಗುತ್ತಾರೆ. ಅಲ್ಲಿ ಬಾಲ ಕಾರ್ಮಿಕರು, ಕನಿಷ್ಠ ವೇತನ ನಿಯಮಗಳನ್ನು ಪರಿಗಣನೆಯಾಗುವುದಿಲ್ಲ. ಎರಡನೇಯದಾಗಿ ಸಪ್ಲೈ ಚೈನ್ ವ್ಯವಸ್ಥೆ ಬಹಳ ಚೆನ್ನಾಗಿದೆ. ರಸ್ತೆ, ರೈಲು, ಬಂದರು ನೆಟ್‌ವರ್ಕ್ ಸಂಪರ್ಕ ಉತ್ತಮವಾಗಿದೆ.
ಅಲ್ಲಿಯ ಬಿಸಿನೆಸ್ ವ್ಯವಸ್ಥೆ ಈಗ ಆರಂಭಗೊಂಡಿದಲ್ಲ. 30 ವರ್ಷದ ಹಿಂದೆಯೇ ಆರಂಭಗೊಂಡಿದೆ. ಮೂಲ ಸೌಕರ್ಯ ಚೆನ್ನಾಗಿದೆ. ಚೀನಿಯರು ಅಲ್ಪ ಅವಧಿಯ ಲಾಭ ನೋಡುವುದಿಲ್ಲ. ದೀರ್ಘ ಅವಧಿಯ ಲಾಭ ನೋಡಿಕೊಂಡು ವ್ಯವಹಾರ ಉತ್ಪಾದನೆ ಮಾಡುತ್ತಾರೆ. ಭಾರೀ ಪ್ರಮಾಣದಲ್ಲಿ ಉತ್ಪನ್ನಗಳನ್ನು ಉತ್ಪಾದಿಸುತ್ತಾರೆ ಮತ್ತು ಕಡಿಮೆ ಪ್ರಮಾಣದ ಲಾಭ ಇಡುತ್ತಾರೆ. ಪರಿಣಾಮ ವಿಶ್ವದ ಮಾರುಕಟ್ಟೆಗೆ ಚೀನಿ ವಸ್ತುಗಳು ಸುಲಭವಾಗಿ ನುಗ್ಗುತ್ತವೆ.
ಪ್ರಮುಖವಾಗಿ ಅಲ್ಲಿಯ ಭೂಮಿಯ ಮಾಲೀಕತ್ವ ಸರ್ಕಾರದ ಕೈಯಲ್ಲಿ ಇದೆ. ಈ ಕಾರಣಕ್ಕೆ ಕಂಪನಿಗಳಿಗೆ ಸರ್ಕಾರ ಜಾಗವನ್ನು ಸುಲಭವಾಗಿ ನೀಡುತ್ತದೆ. ಯಾವುದೇ ಕಾನೂನಿನ ಸಮಸ್ಯೆ ಇರುವುದಿಲ್ಲ. ನಮ್ಮಲ್ಲಿ ಕಂಪನಿಗಳಿಗೆ ಜಾಗ ನೀಡುವುದೇ ದೊಡ್ಡ ಸಮಸ್ಯೆ. ಹೋರಾಟಗಾರರು ಕೈ ಜೋಡಿಸಿ ಕೊನೆಗೆ ನ್ಯಾಯಾಲಯದ ಮೆಟ್ಟಿಲು ಏರಿದರೆ ಪ್ರಕರಣ ಇತ್ಯರ್ಥ್ಯವಾಗಲು ಹಲವು ವರ್ಷ ಬೇಕಾಗುತ್ತದೆ. ಇದನ್ನೂ ಓದಿ: ಡಾಲರ್‌ಗೆ ರೂಪಾಯಿ ಸೆಡ್ಡು – ಇಂಟರ್‌ನ್ಯಾಷನಲ್ ಕರೆನ್ಸಿ ಆಗುತ್ತಾ?
ಕೊನೆಯದಾಗಿ ಬಹಳ ಮುಖ್ಯ ಚೀನದಲ್ಲಿ ಕಮ್ಯೂನಿಸ್ಟ್ ಸರ್ಕಾರ ಇದೆ. ನಾಯಕರು ಬದಲಾದರೂ ಸರ್ಕಾರದ ನೀತಿಗಳು ಬದಲಾಗುವುದಿಲ್ಲ. ಸದೃಢ ಸರ್ಕಾರವೇ ಇರುತ್ತದೆ. ಸ್ಥಿರ ಸರ್ಕಾರ ಇರುವ ಕಾರಣ ವಿದೇಶಿ ಕಂಪನಿಗಳು ಹೂಡಿಕೆ ಮಾಡುತ್ತವೆ.
ಭಾರತ ವಿಶ್ವದ ಫ್ಯಾಕ್ಟರಿ ಆಗುತ್ತಾ?
ಭಾರತ ವಿಶ್ವದ ಫ್ಯಾಕ್ಟರಿ ಆಗುತ್ತಾ ಇಲ್ಲವೋ ಗೊತ್ತಿಲ್ಲ. ಈ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ. 2014 ರಲ್ಲಿ ಮೇಕ್ ಇನ್ ಇಂಡಿಯಾ ಯೋಜನೆ ಬಂದ ಬಳಿಕ 27 ಕ್ಷೇತ್ರಗಳಲ್ಲಿ ಹೂಡಿಕೆಯಾಗಿದೆ. ವಿಶ್ವ ಬ್ಯಾಂಕ್ ಪ್ರಕಟಿಸುವ ಉದ್ಯಮ ಸ್ನೇಹಿ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತದ ಸ್ಥಾನ ಉತ್ತಮವಾಗುತ್ತಿದೆ. 2014 ರಲ್ಲಿ 142, 2017 ರಲ್ಲಿ 100, 2022 ರಲ್ಲಿ 63ನೇ ಸ್ಥಾನಕ್ಕೆ ಜಿಗಿದಿದೆ. ದೊಡ್ಡ ದೊಡ್ಡ ಕ್ಷೇತ್ರಗಳಲ್ಲಿ ಭಾರತ ಚೀನಾಗೆ ಸ್ಪರ್ಧೆ ನೀಡುವುದು ಕಷ್ಟವಾದರೂ ಸಣ್ಣ ಸಣ್ಣ ಕ್ಷೇತ್ರಗಳಲ್ಲಿ ನಾವು ಸ್ಪರ್ಧೆ ನೀಡಬಹುದು.
10 ವರ್ಷಗಳ ಹಿಂದೆ ಆಪಲ್ ಐಫೋನ್ ಬಿಡುಗಡೆಯಾಗಿ 7-8 ತಿಂಗಳ ನಂತರ ಭಾರತದಲ್ಲಿ ಬಿಡುಗಡೆಯಾಗುತ್ತಿತ್ತು. ಆದರೆ ಈಗ ಬಿಡುಗಡೆ ಅಲ್ಲ, ಭಾರತದಲ್ಲೇ ಫೋನ್ ತಯಾರಾಗಿ ವಿಶ್ವಕ್ಕೆ ರಫ್ತು ಮಾಡುವ ಹಂತಕ್ಕೆ ಬೆಳೆದಿದ್ದೇವೆ. ನಿಜಕ್ಕೂ ಇದು ದೊಡ್ಡ ಸಾಧನೆಯಾದರೂ ಚೀನಾವನ್ನು ಉತ್ಪದನಾ ಕ್ಷೇತ್ರದಲ್ಲಿ ಸೋಲಿಸಬೇಕಾದರೆ ಭಾರತ ತುಂಬಾ ಶ್ರಮ ಪಡಬೇಕು. ಹೀಗಾಗಿ ಈಗ ಬಿತ್ತಿದ ಬೀಜ ಮುಂದೆ ಮರವಾಗಿ ಬೆಳೆದು ಫಲ ನೀಡುವಂತೆ ಇನ್ನು ಮುಂದೆ ದೇಶದಲ್ಲಿ ಆರಂಭವಾಗಲಿರುವ ಫ್ಯಾಕ್ಟರಿಗಳಿಂದ ವಸ್ತುಗಳ ಉತ್ಪಾದನೆ ಹೆಚ್ಚಾದರೆ ನಾವು ಚೀನಾವನ್ನು ಸೋಲಿಸಬಹುದು. ಸರ್ಕಾರದ ಎಲ್ಲಾ ಪ್ರಯತ್ನಗಳು ಫಲ ನೀಡಿದರೆ ಮುಂದೆ ನಮ್ಮ ಕೈಯಲ್ಲಿ ಅಲ್ಲ ವಿದೇಶಿಯರ ಕೈಯಲ್ಲೂ ಮೇಕ್ ಇನ್ ಇಂಡಿಯಾ ಉತ್ಪನ್ನಗಳನ್ನು ನೋಡಬಹುದು.
– ಅಶ್ವಥ್ ಸಂಪಾಜೆ
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]