ನವದೆಹಲಿ: ಭಾರತದಲ್ಲಿ ಮೊದಲ ಬಾರಿಗೆ ನದಿ ಡಾಲ್ಫಿನ್‌ಗಳ ಕುರಿತು ಸಮೀಕ್ಷೆ ನಡೆಸಲಾಗಿದ್ದು, ಇತ್ತೀಚಿಗಷ್ಟೇ ಪ್ರಧಾನಿ ನರೇಂದ್ರ ಮೋದಿ ಸಮೀಕ್ಷೆಯ ಅಂದಾಜು ವರದಿಯನ್ನು ಬಿಡುಗಡೆಗೊಳಿಸಿದರು.
ಸಾಮಾನ್ಯವಾಗಿ ಸಮುದ್ರ-ಸಾಗರಗಳಲ್ಲಿ ಇರುವ ಡಾಲ್ಫಿನ್ ಗಳ ಬಗ್ಗೆ ದತ್ತಾಂಶದ ವರದಿಯನ್ನು ಬಿಡುಗಡೆ ಮಾಡಲಾಗುತ್ತದೆ. ಆದರೆ ಭಾರತದಲ್ಲಿ ಮೊದಲ ಬಾರಿಗೆ ನದಿ ಡಾಲ್ಫಿನ್ ಗಳ ಸಮೀಕ್ಷೆಯನ್ನು ನಡೆಸಲಾಗಿದೆ. 2021 ಹಾಗೂ 2023ರ ನಡುವೆ ಗಂಗಾ, ಬ್ರಹ್ಮಪುತ್ರ ಹಾಗೂ ಸಿಂಧೂ ನದಿ ಹೇಳಿದಂತೆ ಹಲವು ಉಪನದಿಗಳಲ್ಲಿ ಡಾಲ್ಫಿನ್ ಸಮೀಕ್ಷೆ ನಡೆಸಲಾಯಿತು.
ಕೇಂದ್ರ ಸಚಿವಾಲಯದ ಅಡಿಯಲ್ಲಿ ಬರುವ ವೈಲ್ಡ್ ಲೈಫ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ನೇತೃತ್ವದಲ್ಲಿ, 8,000 ಕಿಲೋಮೀಟರ್ ವ್ಯಾಪ್ತಿಯ ಸಮೀಕ್ಷೆ ಇದಾಗಿದ್ದು, ಎರಡು ಜಾತಿಯ ನದಿ ಡಾಲ್ಫಿನ್ ಗಳ ವರದಿ ಸಂಗ್ರಹಿಸಲಾಗಿದೆ.
ಗಂಗಾ ನದಿಯಲ್ಲಿ ಸುಮಾರು 6,324 ಡಾಲ್ಫಿನ್ಗಳು ಇರುವುದಾಗಿ ಮಾಹಿತಿ ಲಭ್ಯವಾಗಿದೆ. ಸಿಂಧೂ ನದಿಯಲ್ಲಿ ಕೇವಲ ಮೂರು ಡಾಲ್ಫಿನ್ ಮಾತ್ರ ಇದ್ದು, ಇನ್ನುಳಿದಂತೆ ಪಂಜಾಬ್ ನ ಬಿಯಾಸ್ ನದಿಯಲ್ಲಿ ಡಾಲ್ಫಿನ್ ಗಳು ಇರುವುದಾಗಿ ತಿಳಿದು ಬಂದಿದೆ. ಈ ಸಮೀಕ್ಷೆಯಲ್ಲಿ 28 ನದಿಗಳನ್ನು ದೋಣಿ ಮೂಲಕ ಹಾಗೂ 30 ನದಿಗಳನ್ನು ರಸ್ತೆ ಮೂಲಕ ಸಮೀಕ್ಷೆ ಮಾಡಲಾಗಿದೆ.
ಉತ್ತರ ಪ್ರದೇಶ, ಬಿಹಾರ್, ಜಾರ್ಖಂಡ್, ಮಧ್ಯ ಪ್ರದೇಶ್ ಹಾಗೂ ರಾಜಸ್ಥಾನಗಳಲ್ಲಿ ಗಂಗಾ ನದಿ ಹಾಗೂ ಅದರ ಉಪನದಿಗಳ ಒಟ್ಟು 7,109 ಕಿಮೀ ಗಳ ಸಮೀಕ್ಷೆ ನಡೆಸಲಾಗಿದೆ. ಬ್ರಹ್ಮಪುತ್ರ ನದಿ ಹಾಗೂ ಉಪನದಿಗಳು ಸೇರಿ ಒಟ್ಟು 1,297 ಕಿಮೀ ಗಳ ಸಮೀಕ್ಷೆ ನಡೆಸಲಾಗಿದೆ. ಪಂಜಾಬ್ ಬಿಯಾಸ್ ನದಿಯಲ್ಲಿ 101 ಕಿಮೀ ಸಮೀಕ್ಷೆ ನಡೆಸಲಾಯಿತು. ಗಂಗಾ ನದಿಯ ಮುಖ್ಯಭೂಮಿಯಲ್ಲಿ 3,275 ಡಾಲ್ಫಿನ್ ಗಳು, ಉಪನದಿಗಳಲ್ಲಿ 2,414 ಡಾಲ್ಫಿನ್, ಬ್ರಹ್ಮಪುತ್ರ ನದಿಯ ಮುಖ್ಯ ಭೂಮಿಯಲ್ಲಿ 584 ಹಾಗೂ ಉಪನದಿಗಳಲ್ಲಿ 51 ಡಾಲ್ಫಿನ್ ಇರುವುದಾಗಿ ತಿಳಿದು ಬಂದಿದೆ. ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಗಂಗಾ ನದಿಯ ಡಾಲ್ಫಿನ್ ಗಳು ಕಂಡುಬಂದಿವೆ. ಎರಡನೇ ಸ್ಥಾನದಲ್ಲಿ ಬಿಹಾರ ಹಾಗೂ ಮೂರನೇ ಸ್ಥಾನದಲ್ಲಿ ಪಶ್ಚಿಮ ಬಂಗಾಳ ಕಂಡುಬಂದಿದೆ.
ಸಮೀಕ್ಷೆಯ ಸವಾಲುಗಳು:
ಸಾಮಾನ್ಯವಾಗಿ ನದಿ ಡಾಲ್ಫಿನ್ ಗಳು ಕೆಸರಿನ ನೀರಿನಲ್ಲಿ ವಾಸಿಸುತ್ತವೆ. ಕೇವಲ ಕೆಲವು ಸಮಯದಲ್ಲಿ ಮಾತ್ರ ನೀರಿನ ಮೇಲ್ಮೈಗೆ ಬರುತ್ತವೆ. ಹೀಗಿರುವಾಗ ಡಾಲ್ಫಿನ್ ಜನಸಂಖ್ಯೆಯನ್ನು ಅಂದಾಜಿಸುವುದು ಕಷ್ಟಕರವಾಗಿರುತ್ತದೆ.
ಜನಸಂಖ್ಯೆಯ ಅಂದಾಜು ವರದಿಯ ಪ್ರಕಾರ, ಡಾಲ್ಫಿನ್ ಕೇವಲ 1.26 ಸೆಕೆಂಡ್ ಗಳ ಕಾಲ ಮಾತ್ರ ನೀರಿನ ಮೇಲ್ಮೈ ಗೆ ಬರುತ್ತವೆ. ಜನರಿರುವ ಕಡೆ ಡಾಲ್ಫಿನ್ ಗಳು ನೀರಿನ ಮೇಲ್ಮೈಗೆ ಬರಲು ಹೆದರುತ್ತವೆ. ಈ ಕಾರಣದಿಂದ ಡಾಲ್ಫಿನ್ ಗಳು ಎಣಿಕೆಗೆ ಸುಲಭವಾಗಿ ಸಿಗುವುದಿಲ್ಲ.
ಸಮೀಕ್ಷೆ ನಡೆಸಲು ನೀರಿನಲ್ಲಿ ಡಾಲ್ಫಿನ್ ಚಿತ್ರಗಳನ್ನು ಸೆರೆಹಿಡಿಯಲು ಮೈಕ್ರೋಫೋನ್ ಹಾಗೂ ಹೈಡ್ರೋಫೋನ್ ಗಳನ್ನು ಬಳಸಲಾಗುತ್ತದೆ. ಇವುಗಳು ನೀರಿನಲ್ಲಿ ಚಲಿಸುವ ವಸ್ತುಗಳ ಫೋಟೋಗಳನ್ನು ಸೆರೆಹಿಡಿಯುತ್ತದೆ. ಈ ಪ್ರಕ್ರಿಯೆಯನ್ನು ಎಖೋಲೇಶನ್ ಎಂದು ಕರೆಯಲಾಗುತ್ತದೆ.
ನೀರಿನ ಆಳದ ಆಧಾರದ ಮೇಲೆ ಹಡಗುಗಳ ಕೆಳಗೆ ಈ ಮೈಕ್ರೋಫೋನ್ ಗಳನ್ನು ಅಂಟಿಸಲಾಗುತ್ತದೆ. ನದಿಗಳು ತುಂಬಾ ಅಗಲವಾಗಿದ್ದರೆ ಒಂದು ದೋಣಿಗೆ ಎರಡು ಮೈಕ್ರೋಫೋನ್ ಅಥವಾ ಹೈಡ್ರೋಫೋನ್ ಗಳನ್ನು ಅಂಟಿಸಲಾಗುತ್ತದೆ. ಈ ದೋಣಿಗಳು ಡಾಲ್ಫಿನ್ ಗಳಿಗಿಂತ ವೇಗವಾಗಿ ಚಲಿಸುವುದರಿಂದ ಒಂದೇ ಡಾಲ್ಫಿನ್ ಎರಡು ಬಾರಿ ಚಲಿಸುವುದನ್ನು ತಡೆಹಿಡಿಯುತ್ತದೆ. ಇದರಿಂದ ಒಂದೇ ಡಾಲ್ಫಿನ್ ಫೋಟೋ ಎರಡು ಬಾರಿ ಕ್ಲಿಕ್ಕಿಸಲು ಸಾಧ್ಯವಾಗುವುದಿಲ್ಲ.
ನದಿ ಡಾಲ್ಫಿನ್ ಸಮೀಕ್ಷೆ ನಡೆಸುವುದು ಯಾಕೆ?
ಇತ್ತೀಚಿನ ದಿನಗಳಲ್ಲಿ ನದಿಗಳು ಮಾಲಿನ್ಯವಾಗುತ್ತಿರುವುದು, ಗಣಿಗಾರಿಕೆ, ಕಡಿಮೆ ನೀರಿನ ಆಳ ಈ ರೀತಿಯ ನದಿ ನೀರಿನ ಬಳಕೆಯಿಂದಾಗಿ ಜಲಚರ ಸಸ್ತನಿಗಳ ಆವಾಸಸ್ಥಾನಗಳು ಹಾನಿಯಾಗುತ್ತಿದೆ. ಬೇಟೆಯಾಡುತ್ತಿರುವುದು ಮತ್ತು ಹವಾಮಾನ ಬದಲಾವಣೆ. ಈ ರೀತಿಯ ಕಾರಣಗಳಿಂದಾಗಿ ಜಲಚರ ಸಸ್ತನಿಗಳು ಅಳಿವಿನಂಚಿನಲ್ಲಿವೆ. ಹೀಗಾಗಿ ಅವುಗಳ ಅಂದಾಜು ವರದಿಗಾಗಿ ಈ ಸಮೀಕ್ಷೆ ನಡೆಸಲಾಗಿದೆ.
ನದಿಯಲ್ಲಿ ಡಾಲ್ಫಿನ್ ಇರಲು ಕಾರಣವೇನು?
ಭಾರತ ಸರ್ಕಾರ 2020ರಲ್ಲಿ ಪ್ರಾರಂಭಿಸಿದ ಪ್ರಾಜೆಕ್ಟ್ ಡಾಲ್ಫಿನ್ ಯೋಜನೆಯ ಮೂಲಕ ಸಿಹಿ ನೀರಿನ ನದಿಗಳು ಮತ್ತು ಕರಾವಳಿ ನದಿಗಳಲ್ಲಿ ಡಾಲ್ಫಿನ್ ಗಳ ರಕ್ಷಣೆ ಮಾಡಲಾಗುತ್ತಿದೆ.
ಡಾಲ್ಫಿನ್ ಗಳು ಶುದ್ಧ, ಹರಿಯುವ ನೀರಿನಲ್ಲಿ ಮಾತ್ರ ಬದುಕುತ್ತವೆ. ನದಿಗಳಲ್ಲಿ ಡಾಲ್ಫಿನ್ ಗಳು ಇದ್ದರೆ ಆ ನದಿ ಆರೋಗ್ಯಕರ ನದಿ ವ್ಯವಸ್ಥೆಯನ್ನು ಹೊಂದಿದೆ ಎಂದು ನಿರ್ಣಯಿಸಲಾಗುತ್ತದೆ. ಪ್ರಾಜೆಕ್ಟ್ ಡಾಲ್ಫಿನ್ ಯೋಜನೆಯು ನದಿ ಮಾತ್ರವಲ್ಲದೆ ಸಮುದ್ರ ಹಾಗೂ ಸಾಗರಗಳ ಡಾಲ್ಫಿನ್ ಗಳ ರಕ್ಷಣೆಯ ಗುರಿಯನ್ನು ಹೊಂದಿದೆ.
ಡಾಲ್ಫಿನ್ ಅತ್ಯಂತ ಬುದ್ಧಿವಂತ ಸಸ್ತನಿಯಾಗಿವೆ. ಸದ್ಯ ಪರಿಸರದ ಸೂಕ್ಷ್ಮ ಪ್ರದೇಶಗಳನ್ನು ಕೇಂದ್ರೀಕರಿಸಿ ಭಾರತ ಸರ್ಕಾರ ಸಮುದ್ರ ಡಾಲ್ಫಿನ್ ಜನಸಂಖ್ಯೆಯನ್ನು ಕೂಡ ಅಂದಾಜಿಸಲು ಯೋಜಿಸುತ್ತಿದೆ.