ಜಗತ್ತು ಆಧುನಿಕ ಯುಗದ ಓಟದಲ್ಲಿದೆ. ಆವಿಷ್ಕಾರ, ಅಭಿವೃದ್ಧಿ ನಾಗಾಲೋಟ ಮುಂದುವರಿದಿದೆ. ಭೂಗರ್ಭದಲ್ಲಿರುವ ಸಂಪನ್ಮೂಲಗಳ ಬಳಕೆಯೂ ಹೆಚ್ಚಾಗಿದೆ. ಭೂಮಿ ಬರಿದಾಗುತ್ತಿದ್ದು, ವಿಪತ್ತಿನ ಹಾದಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಇದರಿಂದ ಎಚ್ಚೆತ್ತ ಮಾನವ ಪರ್ಯಾಯ ಮಾರ್ಗಗಳನ್ನು ಕಂಡುಕೊಂಡಿದ್ದಾನೆ. ಅದಕ್ಕಾಗಿ ಹೊಸ ಹೊಸ ತಂತ್ರಜ್ಞಾನಗಳ ಆವಿಷ್ಕಾರವಾಗುತ್ತಿದೆ. ಭೂಸಂಪತ್ತು ಉಳಿಯಬೇಕು, ಪ್ರಕೃತಿಯಲ್ಲಿ ಹೇರಳವಾಗಿ ಸಿಗುವ ಸಂಪತ್ತನ್ನೇ ಆಧುನಿಕ ತಂತ್ರಜ್ಞಾನ ಬಳಸಿ ನವೀಕರಿಸುವ ನಿಟ್ಟಿನಲ್ಲಿ ಕ್ರಾಂತಿಕಾರಿ ಬೆಳವಣಿಗೆಯಾಗುತ್ತಿದೆ.
ಪಳೆಯುಳಿಕೆ ಇಂಧನ ಅತಿಯಾದ ಬಳಕೆಯಿಂದ ಭೂಮಿ ಸಂಪತ್ತು ಬರಿದಾಗುವುದರ ಜೊತೆಗೆ ಪ್ರಕೃತಿ ಮೇಲೆ ದುಷ್ಪರಿಣಾಮಗಳು ಹೆಚ್ಚಾಗಿವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಜಾಗತಿಕ ವೇದಿಕೆಯು ನವೀಕರಿಸಬಹುದಾದ ಇಂಧನ ಬಳಕೆ ಉತ್ತೇಜಿಸಲು ಹಲವು ಉಪಕ್ರಮಗಳನ್ನು ಕೈಗೊಂಡಿದೆ. ಅದರಲ್ಲಿ ಮುಂಚೂಣಿಯಲ್ಲಿ ಬರುವುದು (Solar) ಸೌರಶಕ್ತಿ. ಸಣ್ಣ ಪ್ರಮಾಣದಲ್ಲಿ ಗೃಹ ಬಳಕೆ ಹಾಗೂ ಕೃಷಿಗೆ ಸೀಮಿತವಾಗಿದ್ದ ಶಕ್ತಿಯನ್ನು ಕೈಗಾರಿಕಾ ವಲಯದಲ್ಲೂ ಹೆಚ್ಚು ಬಳಕೆಗೆ ಹೊಸ ತಂತ್ರಜ್ಞಾನವೊಂದನ್ನು ಅಭಿವೃದ್ಧಿಪಡಿಸಲಾಗಿದೆ.
Advertisement
Advertisement
ಸೌರ ಪ್ಯಾರಾಬೋಲಾಯ್ಡ್ ತಂತ್ರಜ್ಞಾನ(Solar paraboloid technology), ಏನಿದು ಟೆಕ್ನಾಲಜಿ? ಇದರ ಆವಿಷ್ಕಾರ ಏಕೆ? ಹೊಸ ತಂತ್ರಜ್ಞಾನದಿಂದ ಆಗುವ ಉಪಯೋಗಗಳೇನು? ಪ್ರಸ್ತುತ ಕಾಲಮಾನಕ್ಕೆ ಇದು ಏಕೆ ಮುಖ್ಯ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
Advertisement
ಸೌರಶಕ್ತಿ
ಸೌರ ಪ್ಯಾರಾಬೋಲಾಯ್ಡ್ ಟೆಕ್ನಾಲಜಿಗೂ ಮುನ್ನ ಸೌರಶಕ್ತಿ ಬಗ್ಗೆ ತಿಳಿಯೋಣ. ಸೂರ್ಯನ ಕಿರಣಗಳ ಶಾಖ ಮತ್ತು ಬೆಳಕಿನಿಂದ ಸಿಗುವ ಎನರ್ಜಿಯನ್ನು (ಶಕ್ತಿ) ವಿವಿಧ ತಂತ್ರಜ್ಞಾನ ಬಳಸಿ, ಮಾನವನ ಉಪಯೋಗಕ್ಕೆ ಅನುಕೂಲವಾಗುವಂತೆ ಮಾರ್ಪಡಿಸಿ ಪಡೆಯುವುದೇ ಸೌರಶಕ್ತಿ. ಸೌರಶಕ್ತಿಯು ನವೀಕರಿಸಬಹುದಾದ (Renewable energy) ಸಂಪನ್ಮೂಲವಾಗಿದೆ. ಸಾಮಾನ್ಯವಾಗಿ ಸೋಲಾರ್ (ಬಿಸಿ ನೀರಿಗಾಗಿ), ಮನೆಗಳಿಗೆ ಹಾಗೂ ಕೃಷಿ ಚಟುವಟಿಕೆಗಳಲ್ಲಿ ವಿದ್ಯುತ್ ಪೂರೈಕೆಗೆ ಸೌರಶಕ್ತಿ ಬಳಸಲಾಗುತ್ತಿತ್ತು. ಈಗ ಸುಧಾರಿತ ತಂತ್ರಜ್ಞಾನ ಬಳಸಿ ಸೌರಶಕ್ತಿಯನ್ನು ಬೃಹತ್ ಕೈಗಾರಿಕೆಯ ವಾಣಿಜ್ಯೋದ್ಯಮಕ್ಕೆ ಬಳಸುವ ಕಾರ್ಯ ನಡೆಯುತ್ತಿದೆ. ಅದೇ ಸೌರ ಪ್ಯಾರಾಬೋಲಾಯ್ಡ್ ತಂತ್ರಜ್ಞಾನ.
Advertisement
ಏನಿದು ಸೌರ ಪ್ಯಾರಾಬೋಲಾಯ್ಡ್ ಟೆಕ್ನಾಲಜಿ?
ನವೀಕರಿಸಬಹುದಾದ ಎನರ್ಜಿಯ ತುರ್ತು ಅಗತ್ಯ ಈಗ ಜಗತ್ತಿಗಿದೆ. ಸೌರ ಪ್ಯಾರಾಬೋಲಾಯ್ಡ್ ತಂತ್ರಜ್ಞಾನವು ಸಂಭಾವ್ಯ ಪರಿವರ್ತಕ ಪರಿಹಾರವಾಗಿ ಹೊರಹೊಮ್ಮುತ್ತಿದೆ. ಇದು ಕೇಂದ್ರೀಕರಿಸುವ ಸೌರಶಕ್ತಿಯಾಗಿದೆ. ಸೂರ್ಯನ ಬೆಳಕನ್ನು ಒಂದೇ ಬಿಂದುವಿನ ಮೇಲೆ ಕೇಂದ್ರೀಕರಿಸಲು ಪ್ಯಾರಾಬೋಲಿಕ್ ಪ್ರತಿಫಲಕವನ್ನು ಬಳಸಲಾಗುತ್ತದೆ. ಕೇಂದ್ರೀಕರಿಸುವ ಸೌರಶಕ್ತಿಯ ಈ ಸುಧಾರಿತ ತಂತ್ರಜ್ಞಾನವು, ಸೌರ ಶಕ್ತಿಯ ಸೆರೆಹಿಡಿಯುವಿಕೆಯ ದಕ್ಷತೆಯನ್ನು ಹೆಚ್ಚಿಸುತ್ತದೆ. ಜೊತೆಗೆ ಸಾಂಪ್ರದಾಯಿಕ ದ್ಯುತಿವಿದ್ಯುಜ್ಜನಕ ವ್ಯವಸ್ಥೆಗಳನ್ನು ದೀರ್ಘಕಾಲ ಬಾಧಿಸುತ್ತಿರುವ ಮಿತಿಗಳನ್ನು ಪರಿಹರಿಸಲು ಸಹಕಾರಿಯಾಗಲಿದೆ. ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಇದು ಪೂರಕ. ಸರ್ಕಾರಗಳು ಮತ್ತು ಕೈಗಾರಿಕೆಗಳು ಹೆಚ್ಚು ಬದ್ಧವಾಗಿರುವುದರೊಂದಿಗೆ, ಜಾಗತಿಕ ಇಂಧನ ಮಾರುಕಟ್ಟೆಗಳ ಭವಿಷ್ಯವನ್ನು ರೂಪಿಸುವಲ್ಲಿ ಸೌರ ಪ್ಯಾರಾಬೋಲಾಯ್ಡ್ ಟೆಕ್ನಾಲಜಿ ಪ್ರಮುಖ ಪಾತ್ರ ವಹಿಸುತ್ತವೆ.
ಇದು ಹೇಗೆ ಕೆಲಸ ಮಾಡುತ್ತದೆ?
ಸೌರ ಪ್ಯಾರಾಬೋಲಾಯ್ಡ್ಗಳು ಪ್ಯಾರಾಬೋಲಿಕ್ ಟ್ರಫ್ ಕಲೆಕ್ಟರ್ (ಪಿಟಿಸಿ) ಸಿಸ್ಟಮ್ ಬಳಸಿಕೊಂಡು ಕಾರ್ಯನಿರ್ವಹಿಸುತ್ತವೆ. ಈ ಸಿಸ್ಟಮ್‌ಗಳು ಉದ್ದವಾದ, ಪ್ಯಾರಾಬೋಲಿಕ್ ಕನ್ನಡಿಗಳನ್ನು ಒಳಗೊಂಡಿರುತ್ತವೆ. ಅದು ಕನ್ನಡಿಯ ಫೋಕಲ್ ಲೈನ್‌ನಲ್ಲಿ ಇರಿಸಲಾದ ರಿಸೀವರ್ ಟ್ಯೂಬ್‌ನ ಮೇಲೆ ಸೂರ್ಯನ ಬೆಳಕನ್ನು ಕೇಂದ್ರೀಕರಿಸುತ್ತದೆ. ಕೇಂದ್ರೀಕೃತ ಸೌರ ಶಕ್ತಿಯು ರಿಸೀವರ್ ಒಳಗೆ ದ್ರವವನ್ನು ಬಿಸಿ ಮಾಡುತ್ತದೆ. ನಂತರ ಅದನ್ನು ವಿದ್ಯುತ್ ಉತ್ಪಾದಿಸಲು ಅಥವಾ ಕೈಗಾರಿಕಾ ಪ್ರಕ್ರಿಯೆಗಳಿಗೆ ನೇರ ಶಾಖವನ್ನು ಒದಗಿಸಲು ಬಳಸಬಹುದು. ಈ ವಿನ್ಯಾಸವು ಸಾಂಪ್ರದಾಯಿಕ ಪಿವಿ ಪ್ಯಾನೆಲ್‌ಗಳಿಗಿಂತ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಇದು ಅರೆವಾಹಕಗಳನ್ನು ಬಳಸಿಕೊಂಡು ಸೂರ್ಯನ ಬೆಳಕನ್ನು ನೇರವಾಗಿ ವಿದ್ಯುತ್ ಆಗಿ ಪರಿವರ್ತಿಸುತ್ತದೆ.
ಸೌರ ಪ್ಯಾರಾಬೋಲಾಯ್ಡ್ ತಂತ್ರಜ್ಞಾನದ ಪ್ರಮುಖ ಪ್ರಯೋಜನವೆಂದರೆ, 300 ಡಿಗ್ರಿ ಸೆಲ್ಸಿಯಸ್ ವರೆಗೆ ಹೆಚ್ಚಿನ ತಾಪಮಾನದಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಇದು ಉಷ್ಣ ದಕ್ಷತೆಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ಶಾಖ ಹೀರಿಕೊಳ್ಳಲು ಸಣ್ಣದಾದ ಜಾಗವಿರುತ್ತದೆ. ಇದು ಶಾಖದ ನಷ್ಟವಾಗುವುದನ್ನು ಕಡಿಮೆ ಮಾಡುತ್ತದೆ.
ಟೆಕ್ನಾಲಜಿ ಮಹತ್ವವೇನು?
ವಿದ್ಯುತ್ ಪ್ರತಿ ಯೂನಿಟ್‌ಗೆ ಕಡಿಮೆ ವೆಚ್ಚ?: ಸೌರ ಪ್ಯಾರಾಬೋಲಾಯ್ಡ್ಗಳ ಸಾಮರ್ಥ್ಯಕ್ಕೆ ತಕ್ಕಂತೆ ಸೂರ್ಯನ ಬೆಳಕಿನಿಂದ ಹೆಚ್ಚು ವಿದ್ಯುತ್ ಉತ್ಪಾದಿಸಬಹುದು. ಇದು ಪ್ರತಿ ಯೂನಿಟ್ ವಿದ್ಯುತ್ ವೆಚ್ಚವನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತದೆ. ಪಳೆಯುಳಿಕೆ ಇಂಧನ ಬಳಕೆ ತಗ್ಗಿಸಲು ಇದು ಪೂರಕವಾಗಿದೆ.
ತಂತ್ರಜ್ಞಾನಕ್ಕೆ ಬೇಕು ಹೆಚ್ಚಿನ ಹೂಡಿಕೆ?
ಈ ತಂತ್ರಜ್ಞಾನವನ್ನು ದೊಡ್ಡ ಪ್ರಮಾಣದಲ್ಲಿ ಅಳವಡಿಸಿಕೊಳ್ಳಲು ಹಣಕಾಸು ಹೂಡಿಕೆ ಪ್ರಮುಖ ವಿಷಯವಾಗಿದೆ. ಸೌರ ಶಕ್ತಿಯನ್ನು ಕೇಂದ್ರೀಕರಿಸುವಲ್ಲಿ ಸೌರ ಪ್ಯಾರಾಬೋಲಾಯ್ಡ್ಗಳು ಹೆಚ್ಚು ಪರಿಣಾಮಕಾರಿಯಾಗಿವೆ. ಅಂದರೆ ಅದೇ ಪ್ರಮಾಣದ ಸೂರ್ಯನ ಬೆಳಕಿನಿಂದ ಹೆಚ್ಚಿನ ವಿದ್ಯುತ್ ಉತ್ಪಾದಿಸಬಹುದು. ಈ ದಕ್ಷತೆಯು ಪ್ರತಿ ಯೂನಿಟ್ ವಿದ್ಯುತ್ ಉತ್ಪಾದನೆಗೆ ಕಡಿಮೆ ವೆಚ್ಚಕ್ಕೆ ಕಾರಣವಾಗಬಹುದು. ಟೆಕ್ನಾಲಜಿಗೆ ವಿಶಾಲ ಭೂಪ್ರದೇಶ ಬೇಕಾಗುತ್ತದೆ. ವಿಶೇಷ ವಸ್ತುಗಳು, ಕಾಂಪ್ಲೆಕ್ಸ್ ಟ್ರ್ಯಾಕಿಂಗ್ ಸಿಸ್ಟಮ್ ಅಗತ್ಯವಿರುತ್ತದೆ. ಇದೆಲ್ಲದಕ್ಕೂ ಹೆಚ್ಚಿನ ಖರ್ಚಾಗುತ್ತದೆ. ತಂತ್ರಜ್ಞಾನ ಅನುಷ್ಠಾನಕ್ಕೆ ಎದುರಾಗುವ ತೊಡಕುಗಳ ನಿವಾರಣೆಗೆ, ಸರ್ಕಾರಗಳು ಮತ್ತು ಕೈಗಾರಿಕೆಗಳು ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹೂಡಿಕೆ ಮಾಡಬೇಕು. ಜೊತೆಗೆ ಆರಂಭಿಕ ಅಳವಡಿಕೆದಾರರಿಗೆ ಪ್ರೋತ್ಸಾಹ ನೀಡಬೇಕು.
ಭಾರತದಲ್ಲಿ ತಂತ್ರಜ್ಞಾನ ಅಳವಡಿಕೆ?
ಸೌರ ಪ್ಯಾರಾಬೋಲಾಯ್ಡ್ಗಳಿಗೆ ಉದ್ಯಮ ಕ್ಷೇತ್ರದಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜಸ್ಥಾನದ ಗೋದಾವರಿ ಸೌರ ಯೋಜನೆ ಮತ್ತು ಉತ್ತರ ಪ್ರದೇಶದ ದಾದ್ರಿ ಐಎಸ್‌ಸಿಸಿ ಸ್ಥಾವರ ಸ್ಥಾಪನೆಗೆ ಪ್ರಾತ್ಯಕ್ಷಿಕೆ ಯೋಜನೆಗಳು ನಡೆದಿದ್ದರೂ, ತಂತ್ರಜ್ಞಾನವು ಇನ್ನೂ ಅಭಿವೃದ್ಧಿಯ ಹಂತದಲ್ಲಿದೆ. ಹೆಚ್ಚಿನ ಮುಂಗಡ ವೆಚ್ಚಗಳು, ತಾಂತ್ರಿಕ ಸಂಕೀರ್ಣತೆ ಮತ್ತು ನಿಯಮಿತ ನಿರ್ವಹಣೆಯ ಅಗತ್ಯವು ಗಮನಾರ್ಹವಾದ ಸವಾಲುಗಳಾಗಿವೆ.
ನವೀಕರಿಸಬಹುದಾದ ಶಕ್ತಿಯ ಗೇಮ್ ಚೇಂಜರ್ ಆಗುತ್ತಾ?
ಸೌರ ಪ್ಯಾರಾಬೋಲಾಯ್ಡ್ ತಂತ್ರಜ್ಞಾನ ಅಭಿವೃದ್ಧಿ ಕಾರ್ಯವು ಇನ್ನೂ ಅದರ ಆರಂಭಿಕ ಹಂತಗಳಲ್ಲಿದೆ. ಆದರೆ ನವೀಕರಿಸಬಹುದಾದ ಇಂಧನ ಬಳಕೆ ವಲಯದಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ನಿರಾಕರಿಸಲಾಗದು. ಇಂಗಾಲದ ಹೊರಸೂಸುವಿಕೆ ಕಡಿಮೆ ಮಾಡಲು ನೆರವಾಗುತ್ತದೆ.