2024ರ ಜುಲೈ-ಆಗಸ್ಟ್‌ನಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಹಿಂಸಾಚಾರ ಪ್ರಕರಣದಲ್ಲಿ ಬಾಂಗ್ಲಾದೇಶದ (Bangaldesh) ಪದಚ್ಯುತ ಪ್ರಧಾನಿ ಶೇಖ್ ಹಸೀನಾ (Sheikh Hasina) ಅಪರಾಧಿ ಎಂದು ಢಾಕಾದ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ ತೀರ್ಪು ನೀಡಿದ್ದು, ಶೇಖ್ ಹಸೀನಾಗೆ ಗಲ್ಲು ಶಿಕ್ಷೆ ವಿಧಿಸಿ ಆದೇಶಿಸಿದೆ. ಹಾಗಿದ್ರೆ ಶೇಖ್ ಹಸೀನಾ ಮುಂದಿನ ದಾರಿ ಏನು? ಭಾರತ ಹಸೀನಾ ಅವರನ್ನು ಬಾಂಗ್ಲಾಗೆ ಹಸ್ತಾಂತರಿಸುತ್ತಾ? ಭಾರತ-ಬಾಂಗ್ಲಾ ನಡುವಿನ ಒಪ್ಪಂದ ಏನು ಹೇಳುತ್ತೆ ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.
ಪ್ರಧಾನಿಯಾಗಿ ಆಯ್ಕೆ:
1996ರಲ್ಲಿ ಶೇಖ್ ಹಸೀನಾ ಪ್ರಧಾನಿಯಾಗಿ ಆಯ್ಕೆಯಾದರು. ಆದರೆ ಸೇನಾ ಬೆಂಬಲಿತ ಸರ್ಕಾರದ ದಂಗೆಯೊಂದಿಗೆ ಭ್ರಷ್ಟಾಚಾರ ಆರೋಪ ಕೇಳಿಬಂದ ಮೇಲೆ 2007ರಲ್ಲಿ ಜೈಲು ಪಾಲದ್ದರು. ಆದರೆ ಒಂದೇ ವರ್ಷದಲ್ಲಿ ಈ ಪ್ರಕರಣವನ್ನು ಕೈಬಿಡಲಾಯಿತು. ಇದರಿಂದ ಅವರು ಚುನಾವಣೆಗೆ ಸ್ಪರ್ಧಿಸಲೂ ಸ್ವತಂತ್ರರಾದರು. ಭಾರಿ ಬಹುಮತದೊಂದಿಗೆ ಹಸೀನಾ ಜಯಭೇರಿ ಬಾರಿಸಿದರು. ಅಲ್ಲಿಂದ ಮತ್ತೆ ಅವರು ರಾಜಕೀಯ ಜೀವನದ ಯಶಸ್ಸಿನ ಪಯಣ ಆರಂಭವಾಯಿತು.
ಬಾಂಗ್ಲಾ ಅಭಿವೃದ್ಧಿ:
1971ರಲ್ಲಿ ಭಾರತದ ಸಹಾಯದ ಮೂಲಕ ಪಾಕಿಸ್ತಾನದಿಂದ ಪ್ರತ್ಯೇಕಗೊಂಡು ರಚನೆಯಾದ ಬಾಂಗ್ಲಾದೇಶ, ಜಗತ್ತಿನ ಬಡದೇಶಗಳಲ್ಲಿ ಒಂದು. ಆದರೆ 2009ರ ನಂತರ ಹಸೀನಾ ಆಡಳಿತದಲ್ಲಿ ಅದು ಸಾಕಷ್ಟು ಬದಲಾವಣೆಗಳನ್ನು ಕಂಡಿದೆ. ವಾರ್ಷಿಕ ಸರಾಸರಿ ಶೇ 6ರ ಪ್ರಗತಿ ಕಂಡಿರುವ ಬಾಂಗ್ಲಾ, 2021ರ ನಂತರ ಭಾರತಕ್ಕಿಂತಲೂ ಅಧಿಕ ತಲಾದಾಯ ಹೊಂದಿದ ಸಾಧನೆ ಮಾಡಿದೆ. ದೇಶದ ಶೇ 95ಕ್ಕೂ ಅಧಿಕ ಜನಸಂಖ್ಯೆಗೆ ಈಗ ವಿದ್ಯುತ್ ಸಂಪರ್ಕ ದೊರಕಿದೆ. ಬಡತನ ಮಟ್ಟದ ಪ್ರಮಾಣವೂ ಗಣನೀಯವಾಗಿ ಕಡಿಮೆ ಆಯಿತು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ:
ಅಲ್ಲದೇ 2017ರಲ್ಲಿ ಮ್ಯಾನ್ಮಾರ್‌ನಲ್ಲಿ ಸೇನಾ ದಂಗೆಯ ಸಂತ್ರಸ್ತರಾದ ಸಾವಿರಾರು ರೊಹಿಂಗ್ಯಾ ಮುಸ್ಲಿಮರಿಗೆ ಆಶ್ರಯ ನೀಡಿದ್ದರು. ಹಸೀನಾ ಅವರ ಈ ನಡೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿತ್ತು.
ಬಾಂಗ್ಲಾ ಹಿಂಸಾಚಾರ:
ಕಳೆದ ವರ್ಷ ಜುಲೈನಲ್ಲಿ ಬಾಂಗ್ಲಾದೇಶದ ಇತಿಹಾಸದಲ್ಲೇ ಎಂದೂ ಕಂಡು ಕೇಳಿರದ ದೊಡ್ಡ ಹಿಂಸಾಚಾರ ನಡೆದಿತ್ತು. ಜುಲೈ ತಿಂಗಳ ಆರಂಭದಲ್ಲಿ ವಿದ್ಯಾರ್ಥಿಗಳು ಉದ್ಯೋಗ ಮೀಸಲಾತಿ ರದ್ದುಗೊಳಿಸುವಂತೆ ಪಟ್ಟು ಹಿಡಿದು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಮೊದಲು ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆಯನ್ನ ಹತ್ತಿಕ್ಕಲು ಶೇಖ್ ಹಸೀನಾ ಆದೇಶ ನೀಡಿದರು. ಪೊಲೀಸರು ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಲು ಶುರು ಮಾಡಿದ್ದರು. ನಂತರ ಪ್ರತಿಭಟನೆ ಹಿಂಸಾಚಾರ ರೂಪ ಪಡೆದಿತ್ತು. ಬಳಿಕ ಸರ್ಕಾರ ದೇಶದಲ್ಲಿರುವ ಎಲ್ಲಾ ವಿಶ್ವವಿದ್ಯಾಲಯ ಮುಚ್ಚಿಸಿ ಇಂಟರ್ನೆಟ್ ಸೇವೆಯನ್ನ ಸ್ಥಗಿತಗೊಳಿಸಿತ್ತು. ಇದು ಪ್ರತಿಭಟನಕಾರರನ್ನ ಕೆರಳಿ ಕೆಂಡವಾಗುವಂತೆ ಮಾಡಿತ್ತು. ಇದು ದೇಶಾದ್ಯಂತ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು.
ವಿದ್ಯಾರ್ಥಿಗಳು ಮತ್ತು ಸರ್ಕಾರದ ನಡುವಿನ ಪ್ರತಿಭಟನೆಯಲ್ಲಿ ಅನೇಕ ವಿದ್ಯಾರ್ಥಿಗಳು, ನಾಗರೀಕರು, ಪೊಲೀಸರು ಸೇರಿದಂತೆ ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು. ಶೇಖ್ ಹಸೀನಾ ಅವರು ಪ್ರತಿಭಟನೆಯನ್ನ ಹತ್ತಿಕ್ಕಲು ಕಂಡಲ್ಲಿ ಗುಂಡು ಹೊಡೆಯುವಂತೆ ಆದೇಶಿದ್ದರು ಎಂದು ತನಿಖೆಯ ಮೂಲಕ ತಿಳಿದು ಬಂದಿತ್ತು. ಪ್ರತಿಭಟನೆಯ ವೇಳೆ ಇಡೀ ಬಾಂಗ್ಲಾದೇಶವೇ ಧಗ ಧಗ ಹೊತ್ತಿ ಉರಿದಿತ್ತು. ಕಂಡ ಕಂಡಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಬಾಂಗ್ಲಾದ ರಾಜಧಾನಿ ಢಾಕ ಸೇರಿದಂತೆ ಪ್ರಮುಖ ನಗರಗಳಲ್ಲಿ ಪ್ರತಿಭಟನಕಾರರು ಬೀದಿಗಳಿದು ಶೇಖ್ ಹಸೀನಾ ರಾಜೀನಾಮೆಗೆ ಒತ್ತಾಯಿಸಿದ್ದರು.

ಭಾರತಕ್ಕೆ ಪಲಾಯನ ಮಾಡಿದ್ದ ಹಸೀನಾ:
ಸರ್ಕಾರದ ವಿರುದ್ಧ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಶೇಖ್ ಹಸೀನಾ ಅವರು ಬೇರೆ ದಾರಿ ಕಾಣದೇ ತಮ್ಮ ಪ್ರಧಾನಿ ಪದವಿಗೆ ರಾಜೀನಾಮೆ ನೀಡಿದ್ದರು. ಕಳೆದ ವರ್ಷ ಆಗಸ್ಟ್ 5ರಂದು ಹೆಲಿಕಾಪ್ಟರ್ ಮೂಲಕ ಭಾರತಕ್ಕೆ ಪಲಾಯನ ಮಾಡಿ ದೆಹಲಿಯಲ್ಲಿ ಆಶ್ರಯ ಪಡೆದರು. ಅಂದಿನಿಂದ ಇಲ್ಲಿಯವರೆಗೂ ಶೇಖ್ ಹಸೀನಾ ಅವರು ದೆಹಲಿಯಲ್ಲಿ ವಾಸವಾಗಿದ್ದಾರೆ.
ಶೇಖ್ ಹಸೀನಾ ಮನೆ ಧ್ವಂಸ:
ಶೇಖ್ ಹಸೀನಾ ಪ್ರಧಾನಿ ಸ್ಥಾನದಿಂದ ಕೆಳಗಿಳಿಯುತ್ತಿದ್ದಂತೆ ಪ್ರತಿಭಟನಕಾರರ ಸಂಭ್ರಮ ಮುಗಿಲು ಮುಟ್ಟಿತ್ತು. ಅದೇ ಸಂಭ್ರಮದಲ್ಲಿ ಪ್ರತಿಭಟನಕಾರರು ಶೇಖ್ ಹಸೀನಾ ನಿವಾಸಕ್ಕೆ ನುಗ್ಗಿ ಧ್ವಂಸಗೊಳಿಸಿ, ಮನೆಯಲ್ಲಿದ್ದ ಪೀಠೋಪಕರಣ ಹಾಗೂ ಮನೆಯಲ್ಲಿದ್ದ ಬಟ್ಟೆಗಳನ್ನ ಬಿಡದೆ ಎಲ್ಲವನ್ನೂ ಹೊತ್ತು ತಂದಿದ್ದರು.
ಇದೀಗ ಭಾರತದಲ್ಲಿ ಆಶ್ರಯ ಪಡೆದಿರುವ ಶೇಖ್ ಹಸೀನಾ ಅವರನ್ನು ಅದಷ್ಟು ಬೇಗ ಹಸ್ತಾಂತರಿಸುವಂತೆ, ಮೊಹಮ್ಮದ್ ಯೂನಸ್ ನೇತೃತ್ವದ ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ಭಾರತ ಸರ್ಕಾರವನ್ನು ಕೇಳಿಕೊಂಡಿದೆ. ಈ ಕುರಿತು ಬಾಂಗ್ಲಾದೇಶದಿಂದ ಅಧಿಕೃತ ಪತ್ರ ಸ್ವೀಕರಿಸಿರುವ ಭಾರತದ ವಿದೇಶಾಂಗ ಸಚಿವಾಲಯ, ಕಾನೂನು ಸಾಧ್ಯತೆಗಳನ್ನು ಪರಿಶೀಲಿಸುತ್ತಿರುವುದಾಗಿ ಪ್ರತಿಕ್ರಿಯೆ ನೀಡಿದೆ.
ಬಾಂಗ್ಲಾದೇಶದ ಮನವಿ:
ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯಿಂದ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಶೇಖ್ ಹಸೀನಾ ಅವರನ್ನು ತ್ವರಿತವಾಗಿ ಢಾಕಾಗೆ ಹಸ್ತಾಂತರಿಸಬೇಕೆಂದು, ಮೊಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ಭಾರತಕ್ಕೆ ಮನವಿ ಪತ್ರ ಕಳುಹಿಸಿದೆ. ಹಸೀನಾ ಜೊತೆಗೆ ಭಾರತದಲ್ಲಿದ್ದಾರೆಂದು ನಂಬಲಾದ ಅವರ ಮಾಜಿ ಗೃಹ ಸಚಿವ ಅಸಾದುಜ್ಜಮಾನ್ ಖಾನ್ ಕಮಲ್ ಅವರನ್ನೂ ಹಸ್ತಾಂತರಿಸಬೇಕು ಎಂದು ಯೂನಸ್ ಸರ್ಕಾರ ಪತ್ರದಲ್ಲಿ ಉಲ್ಲೇಖಿಸಿದೆ.

ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾದ ಈ ಇಬ್ಬರು ವ್ಯಕ್ತಿಗಳನ್ನು ತಕ್ಷಣವೇ ಬಾಂಗ್ಲಾದೇಶ ಅಧಿಕಾರಿಗಳಿಗೆ ಹಸ್ತಾಂತರಿಸುವಂತೆ ನಾವು ಭಾರತ ಸರ್ಕಾರವನ್ನು ಒತ್ತಾಯಿಸುತ್ತೇವೆ. ಬಾಂಗ್ಲಾದೇಶ ಮತ್ತು ಭಾರತದ ನಡುವಿನ ಅಸ್ತಿತ್ವದಲ್ಲಿರುವ ದ್ವಿಪಕ್ಷೀಯ ಹಸ್ತಾಂತರ ಒಪ್ಪಂದವು, ಈ ಇಬ್ಬರು ಅಪರಾಧಿಗಳ ವರ್ಗಾವಣೆಯನ್ನು ನವದೆಹಲಿಯ ಕಡ್ಡಾಯ ಜವಾಬ್ದಾರಿ ಎಂದು ಗುರುತಿಸುತ್ತದೆ ಎಂದು ಬಾಂಗ್ಲಾದೇಶದ ವಿದೇಶಾಂಗ ಸಚಿವಾಲಯ ತನ್ನ ಹೇಳಿಕೆಯಲ್ಲಿ ಪ್ರತಿಪಾದಿಸಿದೆ. ಮಾನವೀಯತೆಯ ವಿರುದ್ಧದ ಅಪರಾಧಗಳಲ್ಲಿ ಶಿಕ್ಷೆಗೊಳಗಾದ ವ್ಯಕ್ತಿಗಳಿಗೆ ಆಶ್ರಯ ನೀಡುವುದನ್ನು, ಸ್ನೇಹಿಯಲ್ಲದ ಮತ್ತು ನ್ಯಾಯವನ್ನು ಕಡೆಗಣಿಸುವ ಕೃತ್ಯವೆಂದು ಪರಿಗಣಿಸಲಾಗುತ್ತದೆ ಎಂದು ಬಾಂಗ್ಲಾದೇಶದ ಸಚಿವಾಲಯ ಎಚ್ಚರಿಸಿದೆ.
ಭಾರತದ ಪ್ರತಿಕ್ರಿಯೆ ಏನು?
ಢಾಕಾ ನ್ಯಾಯಾಲಯದ ಶೇಖ್ ಹಸೀನಾ ವಿರುದ್ಧದ ತೀರ್ಪಿಗೆ ಭಾರತ ಎಚ್ಚರಿಕೆಯ ಪ್ರತಿಕ್ರಿಯೆ ನೀಡಿದ್ದು, ನೆರೆಯ ದೇಶದಲ್ಲಿ ಶಾಂತಿ, ಪ್ರಜಾಪ್ರಭುತ್ವ ಮತ್ತು ಸ್ಥಿರತೆಯನ್ನು ಪರಿಗಣಿಸಿ ಬಾಂಗ್ಲಾದೇಶವೂ ಸೇರಿದಂತೆ ಎಲ್ಲಾ ಪಾಲುದಾರರೊಂದಿಗೆ ರಚನಾತ್ಮಕವಾಗಿ ತೊಡಗಿಸಿಕೊಳ್ಳುವುದಾಗಿ ಭರವಸೆ ನೀಡಿದೆ. ಬಾಂಗ್ಲಾದೇಶದ ಜನರ ಹಿತಾಸಕ್ತಿಗಳಿಗೆ ಭಾರತ ಬದ್ಧವಾಗಿದೆ ಎಂದು ವಿದೇಶಾಂಗ ಸಚಿವಾಲಯ ಅಧಿಕೃತ ಹೇಳಿಕೆಯನ್ನು ಪ್ರಕಟಿಸಿದೆ.
ಆದರೆ ಭಾರತವು ಶೇಖ್ ಹಸೀನಾ ಅವರನ್ನು ಹಸ್ತಾಂತರಿಸುವಂತೆ ಬಾಂಗ್ಲಾದೇಶ ಮಾಡಿರುವ ಮನವಿಯ ಬಗ್ಗೆ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ಸಂಬಂಧಿಸಿದಂತೆ, ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ ಘೋಷಿಸಿದ ತೀರ್ಪನ್ನು ಭಾರತ ಗಮನಿಸಿದೆ ಎಂದಷ್ಟೇ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಭಾರತ-ಬಾಂಗ್ಲಾದೇಶ ಹಸ್ತಾಂತರ ಒಪ್ಪಂದ ಏನು ಹೇಳುತ್ತದೆ?
2013ರಲ್ಲಿ ನವದೆಹಲಿ ಮತ್ತು ಢಾಕಾ ತಮ್ಮ ಹಂಚಿಕೆಯ ಗಡಿಗಳಲ್ಲಿ ದಂಗೆ ಮತ್ತು ಭಯೋತ್ಪಾದನೆಯನ್ನು ಪರಿಹರಿಸಲು, ಒಂದು ಕಾರ್ಯತಂತ್ರದ ಕ್ರಮವಾಗಿ ಹಸ್ತಾಂತರ ಒಪ್ಪಂದಕ್ಕೆ (India-Bangladesh Extradition Treaty) ಸಹಿ ಹಾಕಿವೆ. ಮೂರು ವರ್ಷಗಳ ನಂತರ ಅಂದರೆ 2016 ರಲ್ಲಿ ಎರಡೂ ರಾಷ್ಟ್ರಗಳಿಗೆ ಬೇಕಾದ ಪರಾರಿಯಾದವರ ವಿನಿಮಯವನ್ನು ಸರಾಗಗೊಳಿಸುವ ಸಲುವಾಗಿ ಒಪ್ಪಂದವನ್ನು ತಿದ್ದುಪಡಿ ಮಾಡಲಾಗಿದೆ. ಆದಾಗ್ಯೂ, ಒಪ್ಪಂದದ ಅಡಿಯಲ್ಲಿ ಅಪರಾಧವು ಎರಡೂ ದೇಶಗಳಲ್ಲಿ ಶಿಕ್ಷಾರ್ಹವಾಗಿದ್ದಾಗ ಮಾತ್ರ ಹಸ್ತಾಂತರ ಪ್ರಕ್ರಿಯೆ ನಡೆಯುತ್ತದೆ .ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಬಾಂಗ್ಲಾದ ಗೃಹಸಚಿವಾಲಯದ ನಡುವೆ ಈ ಒಪ್ಪಂದ ಮಾಡಲಾಗಿದೆ.
ಶೇಖ್ ಹಸೀನಾ ಅವರ ಅಪರಾಧವು ಹಸ್ತಾಂತರಕ್ಕೆ ಕನಿಷ್ಠ ಕಾರ್ಯವಿಧಾನದ ಸ್ಥಿತಿಯನ್ನು ಪೂರೈಸುತ್ತದೆಯಾದರೂ, ಅವರ ವಿರುದ್ಧದ ಆರೋಪಗಳು ಭಾರತದ ದೇಶೀಯ ಕಾನೂನಿನ ಮಾದರಿಯೊಳಗೆ ಹೊಂದಿಕೆಯಾಗುವುದಿಲ್ಲ ಎಂಬ ಕಾರಣಕ್ಕೆ, ಹಸ್ತಾಂತರವನ್ನು ನಿರಾಕರಿಸಲು ಈ ಷರತ್ತು ನವದೆಹಲಿಗೆ ಅವಕಾಶ ನೀಡುತ್ತದೆ.
ಇದಲ್ಲದೆ, ಒಪ್ಪಂದದ 8ನೇ ವಿಧಿಯು ಆರೋಪಿಯು ತನ್ನ ವಿರುದ್ಧದ ಕ್ರಮವು ಅನ್ಯಾಯ ಅಥವಾ ದಬ್ಬಾಳಿಕೆಯಿಂದ ಕೂಡಿದೆ ಎಂಬುದನ್ನು ಸಾಬೀತುಪಡಿಸಲು ಸಾಧ್ಯವಾದರೆ ಹಸ್ತಾಂತರ ವಿನಂತಿಯನ್ನು ನಿರಾಕರಿಸಬಹುದು ಎಂದು ಹೇಳುತ್ತದೆ. ಅದೇ ರೀತಿ ಒಪ್ಪಂದದ 6ನೇ ವಿಧಿಯು ಅಪರಾಧವು ರಾಜಕೀಯ ಸ್ವರೂಪದ್ದಾಗಿದ್ದರೆ ಹಸ್ತಾಂತರವನ್ನು ನಿರಾಕರಿಸಬಹುದು ಎಂದು ಷರತ್ತು ವಿಧಿಸುತ್ತದೆ.

ಹಸ್ತಾಂತರಕ್ಕೆ ಒಪ್ಪುತ್ತಾ ಭಾರತ?
ಹಸ್ತಾಂತರ ವಿನಂತಿಗಳನ್ನು ಸಾಮಾನ್ಯವಾಗಿ ಉತ್ತಮ ನಂಬಿಕೆಯಿಂದ ಗೌರವಿಸಲಾಗುತ್ತದೆಯಾದರೂ, ನವದೆಹಲಿಯು ಶೇಖ್ ಹಸೀನಾ ಅವರನ್ನು ಹಸ್ತಾಂತರಿಸುವ ಸಾಧ್ಯತೆ ಕಡಿಮೆ. ಭಾರತೀಯ ಕಾನೂನು ಮತ್ತು ದ್ವಿಪಕ್ಷೀಯ ಒಪ್ಪಂದ ಎರಡೂ ಭಾರತಕ್ಕೆ ಗಮನಾರ್ಹವಾದ ವಿವೇಚನೆಯನ್ನು ನೀಡುತ್ತವೆ. ವಿಶೇಷವಾಗಿ ವಿನಂತಿಯನ್ನು ರಾಜಕೀಯ ಪ್ರೇರಿತ ಅಥವಾ ಅನ್ಯಾಯವೆಂದು ನಿರ್ಣಯಿಸಬಹುದಾದ ಸಂದರ್ಭಗಳಲ್ಲಿ ಭಾರತ ತನ್ನದೇ ಆದ ನಿರ್ಣಯವನ್ನು ಕೈಗೊಳ್ಳಬಹುದಾಗಿದೆ.
ಭಾರತದ ಹಸ್ತಾಂತರ ಕಾಯ್ದೆ ಏನು ಹೇಳುತ್ತೆ?
ಹೊರದೇಶಗಳಲ್ಲಿ ಅಪರಾಧ ಎಸಗಿ ಅಲ್ಲಿಂದ ಭಾರತಕ್ಕೆ ಬಂದು ಆಶ್ರಯ ಪಡೆದಿರುವ ವ್ಯಕ್ತಿಗಳನ್ನು ಹಸ್ತಾಂತರ ಮಾಡುವ ಕುರಿತು 1962ರಲ್ಲಿ ಹಸ್ತಾಂತರ ಕಾಯ್ದೆಯನ್ನು ಜಾರಿಗೆ ತರಲಾಯಿತು.ಈ ಹಸ್ತಾಂತರ ಕಾಯ್ದೆಯು ಸಂದರ್ಭಗಳನ್ನು ಅವಲಂಬಿಸಿ ಭಾರತ ಸರ್ಕಾರಕ್ಕೆ ಹಸ್ತಾಂತರವನ್ನು ನಿರಾಕರಿಸಲು, ಪ್ರಕ್ರಿಯೆಗಳಿಗೆ ತಡೆ ನೀಡಲು ಅಥವಾ ಹಸ್ತಾಂತರ ಕೋರಿದ ವ್ಯಕ್ತಿಯನ್ನು ಬಿಡುಗಡೆ ಮಾಡಲು ಅಧಿಕಾರ ನೀಡುತ್ತದೆ.
ಕಾಯ್ದೆಯ 31 (1) ಸೆಕ್ಷನ್ ಪ್ರಕಾರ, ಒಂದು ವೇಳೆ ಅಪರಾಧವು ರಾಜಕೀಯ ಸ್ವರೂಪದ್ದಾಗಿದ್ದರೆ ವಿದೇಶದಿಂದ ಬಂದು ಭಾರತದಲ್ಲಿ ಆಶ್ರಯ ಪಡೆದಿರುವ ಅಪರಾಧಿಯನ್ನು ಹಸ್ತಾಂತರಿಸಬೇಕಿಲ್ಲ. ಕಾಯ್ದೆಯ 29ನೇ ಸೆಕ್ಷನ್ ಪ್ರಕಾರ, ಅಪರಾಧಿಯನ್ನು ಹಸ್ತಾಂತರಿಸುವಂತೆ ಹೊರದೇಶ ಮಾಡಿರುವ ಮನವಿ ಪ್ರಾಮಾಣಿಕವಾಗಿಲ್ಲದಿದ್ದರೆ ಅಥವಾ ನ್ಯಾಯದ ಹಿತಾಸಕ್ತಿಯಿಂದ ಕೂಡಿರದಿದ್ದರೆ ಅಥವಾ ರಾಜಕೀಯ ಕಾರಣಗಳಿಗೆ ಆಗಿದ್ದರೆ ಕೇಂದ್ರ ಸರ್ಕಾರ ಆ ಮನವಿಯನ್ನು ತಿರಸ್ಕರಿಸುವ ಹಕ್ಕನ್ನು ಹೊಂದಿದೆ. ಹೀಗಾಗಿ ಭಾರತವು ಶೇಖ್ ಹಸೀನಾ ಹಸ್ತಾಂತರ ಪ್ರಕ್ರಿಯೆ ಬಗ್ಗೆ ಅತ್ಯಂತ ಎಚ್ಚರಿಕೆಯ ಹೆಜ್ಜೆಗಳನ್ನಿಡುತ್ತಿದ್ದು, ಭಾರತವು ಶೇಖ್ ಹಸೀನಾ ಅವರನ್ನು ಹಸ್ತಾಂತರಿಸುವ ಸಾಧ್ಯತೆ ಕಡಿಮೆ ಎಂದು ವಿಶ್ಲೇಷಿಸಲಾಗುತ್ತಿದೆ.
