ಪಾಕಿಸ್ತಾನ (Pakistan) ಮೇಲೆ ಏರ್‌ಸ್ಟ್ರೈಕ್ ಮಾಡಿದ ಬಳಿಕ ದೇಶದಲ್ಲಿ ಈಗ ಬ್ರಹ್ಮೋಸ್ ಕ್ಷಿಪಣಿ (Brahmos Missile) ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಉಗ್ರರ ನೆಲೆಗಳು ಮತ್ತು ಪಾಕ್ ವಾಯುನೆಲೆಗಳ ಛಿದ್ರವಾಗಲು ಕಾರಣ ಈ ಬ್ರಹ್ಮೋಸ್. ಇಂದು ಲಕ್ನೋದಲ್ಲಿ ರಕ್ಷಣಾ ಕೈಗಾರಿಕಾ ಕಾರಿಡಾರ್‌ನಲ್ಲಿ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿ ಉತ್ಪಾದನಾ ಘಟಕದ ಉದ್ಘಾಟನಾ ಸಮಾರಂಭ ನಡೆದಿದೆ. ಹೀಗಾಗಿ ಈ ಕ್ಷಿಪಣಿಯ ವಿಶೇಷತೆ ಏನು? ಈ ಕ್ಷಿಪಣಿ ನಿರ್ಮಾಣಕ್ಕೆ ಭಾರತ ಕೈ ಹಾಕಿದ್ದು ಯಾಕೆ? ಮಿಸೈಲ್ ಮ್ಯಾನ್ ಅಬ್ದುಲ್ ಕಲಾಂ ( APJ Abdul Kalam) ಪಾತ್ರ ಏನು? ಪಾಕಿಸ್ತಾನಕ್ಕೆ ಈ ಕ್ಷಿಪಣಿ ಹಾರಿದ್ದು ಹೇಗೆ? ಇತ್ಯಾದಿ ವಿವರಗಳನ್ನು ಇಲ್ಲಿ ನೀಡಲಾಗಿದೆ.
ಬ್ರಹ್ಮೋಸ್ ಅಭಿವೃದ್ಧಿಯಾಗಿದ್ದು ಹೇಗೆ?
ಸ್ವಾತಂತ್ರ್ಯ ಸಿಕ್ಕಿದ ಬಳಿಕ ಭಾರತ (India) ಶಾಂತಿ ಮಂತ್ರವನ್ನು ಅನುಸರಿಸಿದರೂ ಪಾಕಿಸ್ತಾನ ಮತ್ತು ಚೀನಾದ (China) ಮಧ್ಯೆ ಯುದ್ಧ ನಡೆಸಬೇಕಾಯಿತು. 1947, 1965, 1971 ರಲ್ಲಿ ಪಾಕಿಸ್ತಾನದ ಜೊತೆ 1962 ರಲ್ಲಿ ಚೀನಾದ ಜೊತೆ ಯುದ್ಧ ಮಾಡಬೇಕಾಯಿತು. ಪಾಕಿಸ್ತಾನ ಜೊತೆಗಿನ ಮೂರು ಯುದ್ಧದಲ್ಲಿ ಭಾರತ ಗೆದ್ದರೆ ಚೀನಾದ ವಿರುದ್ಧ ಭಾರತ ಸೋತಿತ್ತು. ಗಡಿಯಲ್ಲಿರುವ ಈ ದೇಶಗಳ ಕಿರಿಕಿರಿ ಜಾಸ್ತಿ ಆಗುತ್ತಿದ್ದಂತೆ ಭಾರತ ಸರ್ಕಾರ ರಕ್ಷಣೆಗೆ ಹೆಚ್ಚು ಒತ್ತು ನೀಡಲು ಆರಂಭಿಸಿತು. ಅಷ್ಟೇ ಅಲ್ಲದೇ ಸ್ವಂತ ಕ್ಷಿಪಣಿ ಅಭಿವೃದ್ಧಿ ಪಡಿಸಲು ಮುಂದಾಯಿತು.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಾದ ಡಿಆರ್‌ಡಿಒ ವಿಜ್ಞಾನಿಗಳು 1989ರಲ್ಲಿ ಅಗ್ನಿ ಕ್ಷಿಪಣಿಯನ್ನು ಅಭಿವೃದ್ಧಿ ಪಡಿಸಿ ಪರೀಕ್ಷಾರ್ಥ ಪ್ರಯೋಗ ನಡೆಸಿದ್ದರು. ಈ ಸಂದರ್ಭದಲ್ಲಿ ಧ್ವನಿಗಿಂತ ವೇಗವಾಗಿ ಸಂಚರಿಸುವ ಸೂಪರ್ ಸಾನಿಕ್ ಕ್ಷಿಪಣಿಯನ್ನು ಅಭಿವೃದ್ಧಿ ಪಡಿಸಲು ಭಾರತ ಮುಂದಾಯಿತು. ಆದರೆ ಅದಕ್ಕೆ ಬೇಕಾದ ತಂತ್ರಜ್ಞಾನ ಭಾರತದ ಬಳಿ ಇರಲಿಲ್ಲ.
ಅಣುಬಾಂಬ್ ಪರೀಕ್ಷೆ ಮಾಡಿದ ಬಳಿಕ ಅಮೆರಿಕ ಭಾರತದ ಮೇಲೆ ಹಲವು ದಿಗ್ಭಂಧನ ವಿಧಿಸಿತ್ತು. ಈ ಸಂದರ್ಭದಲ್ಲಿ ಭಾರತ ಮತ್ತು ರಷ್ಯಾದ ಸಂಬಂಧ ಚೆನ್ನಾಗಿತ್ತು. ಕೊನೆಗೆ ಭಾರತ ಮತ್ತು ರಷ್ಯಾದ ಜಂಟಿ ಹೂಡಿಕೆಯಲ್ಲಿ ಬ್ರಹ್ಮೋಸ್ ಕಂಪನಿ 1998ರಲ್ಲಿ ಸ್ಥಾಪನೆಯಾಯಿತು.
ಕ್ಷಿಪಣಿ ಮನುಷ್ಯ ಅಬ್ಧುಲ್ ಕಲಾಂ ಮತ್ತು ರಷ್ಯಾದ ರಕ್ಷಣಾ ಸಚಿವ ಮಿಖಾಲಿವೋ ಫೆಬ್ರವರಿ 12 ರಂದು ಮಾಸ್ಕೋದಲ್ಲಿ ಸಹಿ ಹಾಕಿದರು. ಬ್ರಹ್ಮೋಸ್ ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಮತ್ತು ರಷ್ಯಾದ NPOM ನಡುವಿನ ಜಂಟಿ ಉದ್ಯಮವಾಗಿದೆ. ʼಬ್ರಹ್ಮಪುತ್ರʼ ಮತ್ತು ರಷ್ಯಾದ ʼಮಾಸ್ಕೋವಾʼ ನದಿಗಳನ್ನು ಪ್ರತಿನಿಧಿಸಲು ಈ ಕ್ಷಿಪಣಿಗೆ ಬ್ರಹ್ಮೋಸ್ ಎಂದು ಹೆಸರನ್ನು ಇಡಲಾಯಿತು. 250 ಮಿಲಿಯನ್ ಡಾಲರ್ ಹೂಡಿಕೆಯ ಕಂಪನಿಯಲ್ಲಿ ಭಾರತದ ಪಾಲು 50.5% ಇದ್ದರೆ ರಷ್ಯಾದ ಪಾಲು 49.5% ಇದೆ. ಇದನ್ನೂ ಓದಿ: ʻಆಪರೇಷನ್ ಸಿಂಧೂರʼದಲ್ಲಿ ಬ್ರಹ್ಮೋಸ್ ಕ್ಷಿಪಣಿ ಪಾತ್ರ ದೊಡ್ಡದು, ಅನುಮಾನವಿದ್ರೆ ಪಾಕ್‌ನ ಕೇಳಿ: ಯೋಗಿ ಆದಿತ್ಯನಾಥ್
ಬ್ರಹ್ಮೋಸ್ ವಿಶೇಷತೆ ಏನು?
ಚಲಿಸುವ ಪಥದ ಆಧಾರದ ಮೇಲೆ ಕ್ಷಿಪಣಿಗಳನ್ನು ಬ್ಯಾಲಿಸ್ಟಿಕ್ ಮತ್ತು ಕ್ರೂಸ್ ಕ್ಷಿಪಣಿಗಳಾಗಿ ವಿಂಗಡಿಸಲಾಗುತ್ತದೆ. ಬ್ಯಾಲಿಸ್ಟಿಕ್ ಕ್ಷಿಪಣಿ ಭೂಮಿಯ ವಾತಾವರಣವನ್ನು ಬಿಟ್ಟು ಬಾಹ್ಯಾಕಾಶವನ್ನು ಪ್ರವೇಶಿಸಿ ನಂತರ ಭೂಮಿಗೆ ಅಪ್ಪಳಿಸುತ್ತದೆ. ಭಾರತದ ಅಗ್ನಿ, ಪೃಥ್ವಿ ಬ್ಯಾಲಿಸ್ಟಿಕ್ ಕ್ಷಿಪಣಿಗಳಾಗಿವೆ.
ಕ್ರೂಸ್ ಕ್ಷಿಪಣಿ ಶಬ್ಧದ ವೇಗಕ್ಕಿಂತ ಹೆಚ್ಚು ವೇಗದಲ್ಲಿ ಹೋಗುತ್ತದೆ. ಆರಂಭದಲ್ಲಿ ಕ್ರೂಸ್ ಕ್ಷಿಪಣಿ ಕೆಳಹಂತದಲ್ಲಿ ಭೂಮಿಯ ಮೇಲ್ಮೆಗೆ ಸಮಾನಂತರವಾಗಿ ಶಬ್ಧದ ವೇಗಕ್ಕಿಂತ ಕಡಿಮೆ ವೇಗದಲ್ಲಿ ಚಲಿಸಿ ಗುರಿ ತಲುಪುತ್ತಿದ್ದಂತೆ ಇದರ ವೇಗ ಶಬ್ಧದ ವೇಗಕ್ಕಿಂತ ಹೆಚ್ಚಾಗಿ ಕೊನೆಗೆ ಗುರಿಯನ್ನು ತಲುಪುತ್ತದೆ. ಈ ತಂತ್ರಜ್ಞಾನದಿಂದ ಶತ್ರುಗಳ ರೇಡಾರ್‌ಗಳಿಗೆ ಸಹ ಈ ಕ್ಷಿಪಣಿಯ ಪಥವನ್ನು ಅಷ್ಟು ಸುಲಭವಾಗಿ ಪತ್ತೆ ಹಚ್ಚಲು ಸಾಧ್ಯವಾಗುವುದಿಲ್ಲ. ಈ ಕ್ಷಿಪಣಿ ಸಮುದ್ರದ ಒಳಗೆ ಹೋಗಿ ಮತ್ತೆ ಮೇಲೆ ಬರುವ ಸಾಮರ್ಥ್ಯವನ್ನು ಹೊಂದಿದೆ. ಭಾರತದ ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಯ ವರ್ಗಕ್ಕೆ ಸೇರುತ್ತದೆ.
ಈ ಕ್ಷಿಪಣಿಗಳನ್ನು ಭೂಮಿಯಿಂದ, ಬಾನಿನಿಂದ, ಸಮುದ್ರದಿಂದ, ಜಲಾಂತರ್ಗಮಿ, ಚಲಿಸುವ ವಾಹನಗಳಿಂದಲೂ ಉಡಾಯಿಸಬಹುದು. ಭೂ ನೆಲೆ ಮತ್ತು ಯುದ್ಧ ನೌಕೆ ಆಧಾರಿತ ಬ್ರಹ್ಮೋಸ್ ಕ್ಷಿಪಣಿಗಳು ಗರಿಷ್ಠ 200 ಕೆಜಿ ಸಿಡಿತಲೆಗಳನ್ನು ಹೊತ್ತುಕೊಂಡು ಹೋಗುವ ಸಾಮರ್ಥ್ಯ ಹೊಂದಿದ್ದರೆ ಯುದ್ಧ ವಿಮಾನದಿಂದ ಉಡಾವಣೆಯಾಗುವ ವೇರಿಯೆಂಟ್ 300 ಕೆಜಿ ಭಾರವನ್ನು ಹೊತ್ತುಕೊಂಡು ಹೋಗುವ ಸಾಮರ್ಥ್ಯ ಹೊಂದಿದೆ.
ಚಲಿಸುವ ಗುರಿಯನ್ನು ನಿಖರವಾಗಿ ಹೊಡೆದು ಉರುಳಿಸವ ಸಾಮರ್ಥ್ಯ ಬ್ರಹ್ಮೋಸ್‌ಗೆ ಇದೆ. ಶತ್ರು ನೆಲೆಗಳಿಂದ ಬರುವ ಕ್ಷಿಪಣಿ ಹಾದಿಯನ್ನು ತಪ್ಪಿಸುವ ಎಲೆಕ್ಟ್ರಾನ್ ಸಂಕೇತಗಳ ವಿರುದ್ಧ ತನ್ನನ್ನು ರಕ್ಷಿಸಿಕೊಳ್ಳುವ ಸಿಗ್ನಲ್ ಜಾಮಿಂಗ್ ವ್ಯವಸ್ಥೆ ಬ್ರಹ್ಮೋಸ್‌ನಲ್ಲಿದೆ. ಮೊದಲ ಬಾರಿಗೆ ಬ್ರಹ್ಮೋಸ್ ಕ್ಷಿಪಣಿಯನ್ನು 2001ರ ಜೂನ್ 12 ರಲ್ಲಿ ಒಡಿಶಾದ ತೀರಪ್ರದೇದೇಶದದಲ್ಲಿ ಪರೀಕ್ಷೆ ಮಾಡಿದ್ದು ಈಗ ಭಾರತದ ಭೂ, ವಾಯು, ನೌಕಾ ಸೇನೆಗೆ ಸೇರ್ಪಡೆಯಾಗಿದೆ. ಇದನ್ನೂ ಓದಿ: 300 ಕೋಟಿ ವೆಚ್ಚದ ʻಬ್ರಹ್ಮೋಸ್ʼ ಕ್ಷಿಪಣಿ ಉತ್ಪಾದನಾ ಘಟಕ ಉದ್ಘಾಟನೆ; ವಾರ್ಷಿಕ 100 ಮಿಸೈಲ್ ಉತ್ಪಾದನೆ ಗುರಿ
ಭಾರತ ಇಲ್ಲಿಯವರೆಗೆ ಯಾವುದೇ ಕಾರ್ಯಾಚರಣೆಗೆ ಬ್ರಹ್ಮೋಸ್ ಬಳಸಿರಲಿಲ್ಲ. ಆದರೆ ಪಾಕ್ ವಿರುದ್ಧದ ಸಂಘರ್ಷದ ವೇಳೆ ಇದನ್ನು ಬಳಸಿತ್ತು. ನಿಖರ ದಾಳಿಯಿಂದಾಗಿ ಈಗ ಸ್ವದೇಶಿ ಬ್ರಹ್ಮೋಸ್ ವಿಶ್ವದೆಲ್ಲೆಡೆ ಫೇಮಸ್ ಆಗಿದೆ.
ಯಾವೆಲ್ಲ ದೇಶಗಳು ಆಸಕ್ತಿ ತೋರಿಸಿವೆ?
ಫಿಲಿಪೈನ್ಸ್ ಬ್ರಹ್ಮೋಸ್ ನೆವಿ ಮಿಸೈಲ್ ಖರೀದಿ ಸಂಬಂಧ 375 ಮಿಲಿಯನ್ ಡಾಲರ್ ಮೊತ್ತದ ಒಪ್ಪಂದಕ್ಕೆ 2022ರಲ್ಲಿ ಸಹಿ ಹಾಕಿ ಖರೀದಿಸಿದೆ. ಇಂಡೋನೇಷ್ಯಾ, ವಿಯೆಟ್ನಾಂ, ಮಲೇಷ್ಯಾ, ಯುಎಇ, ಚಿಲಿ ಮತ್ತು ದಕ್ಷಿಣ ಆಫ್ರಿಕಾ ಸೇರಿದಂತೆ ಇತರ ದೇಶಗಳು ಆಸಕ್ತಿ ವ್ಯಕ್ತಪಡಿಸಿವೆ.
ಬ್ರಹ್ಮೋಸ್ ಖರೀದಿಗೆ ಹಲವು ದೇಶಗಳು ಆಸಕ್ತಿ ತೋರಿಸಿದ್ದು ಯಾಕೆ ಎನ್ನುವುದಕ್ಕೆ ಕಾರಣವಿದೆ. ಬ್ರಹ್ಮೋಸ್ ಭಾರತದಲ್ಲಿ ಪ್ರಯೋಗ ಯಶಸ್ವಿಯಾಗಿದ್ದು ಈಗಾಗಲೇ ಮೂರು ಸೇನೆಗೆ ಸೇರ್ಪಡೆಯಾಗಿದೆ. ನಿಖರವಾಗಿ ಗುರಿಯನ್ನು ಹೊಡೆಯುವುದು ಅಲ್ಲದೇ ಬೆಲೆಯೂ ಕಡಿಮೆ. ಚಂದ್ರಯಾನದಂತೆ ಈ ಕ್ಷಿಪಣಿಯ ಬೆಲೆ ಕಡಿಮೆ ಇದೆ. ಅಧಿಕೃತವಾಗಿ ಈ ಕ್ಷಿಪಣಿಯ ಬೆಲೆ ಎಷ್ಟು ಎಂಬುದನ್ನು ಸರ್ಕಾರ ತಿಳಿಸದೇ ಇದ್ದರೂ ಮಾಧ್ಯಮಗಳಲ್ಲಿ ಬಂದಿರುವ ಮಾಹಿತಿ ಪ್ರಕಾರ ಒಂದು ಕ್ಷಿಪಣಿಯ ಬೆಲೆ 35 ಕೋಟಿ ರೂ. ಇದೆಯಂತೆ. ಇದರ ಜೊತೆ ಭಾರತದ ವಿಜ್ಞಾನಿಗಳ ಬಗ್ಗೆ ನಂಬಿಕೆ ಈಗ ವಿಶ್ವಕ್ಕೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಬ್ರಹ್ಮೋಸ್ ಖರೀದಿಗೆ ಹಲವು ದೇಶಗಳು ಆಸಕ್ತಿ ತೋರಿಸಿವೆ. ಇದನ್ನೂ ಓದಿ: ಅಣ್ವಸ್ತ್ರಗಳಿರೋ ಬೆಟ್ಟದ ಮೇಲೆ ದಾಳಿ – ಬೆದರಿದ ಪಾಕ್, ಅಮೆರಿಕಕ್ಕೂ ಶಾಕ್ |ಕದನ ವಿರಾಮದ ಇನ್‌ಸೈಡ್ ಸ್ಟೋರಿ ಓದಿ
ಪಾಕಿಸ್ತಾನಕ್ಕೆ ಹಾರಿತ್ತು ಬ್ರಹ್ಮೋಸ್
ಈ ಬ್ರಹ್ಮೋಸ್ ಕ್ಷಿಪಣಿ ಪಾಕಿಸ್ತಾನಕ್ಕೂ ಹಾರಿತ್ತು. 2022ರ ಮಾರ್ಚ್ 9ರ ಸಂಜೆಯ ವೇಳೆ ಹರ್ಯಾಣದ ಸಿರ್ಸಾದಿಂದ ಬ್ರಹ್ಮೋಸ್ ಕ್ಷಿಪಣಿ ಆಕಸ್ಮಿಕವಾಗಿ ಉಡಾವಣೆಯಾಗಿ ಕೇವಲ 3 ನಿಮಿಷ 44 ಸೆಕೆಂಡ್‌ನಲ್ಲಿ 124 ಕಿ.ಮೀ ಕ್ರಮಿಸಿ ಪಾಕಿಸ್ತಾನದ ಭೂ ಪ್ರದೇಶದ ಒಳಗಡೆ ಬಿದ್ದಿತ್ತು. ಈ ಘಟನೆಯಿಂದ ಯಾವುದೇ ಸಾವು,ನೋವು ಸಂಭವಿಸಲಿಲ್ಲ. ಈ ವಿಷಯವನ್ನು ಇಟ್ಟುಕೊಂಡು ಪಾಕಿಸ್ತಾನ ಭಾರೀ ವಿರೋಧ ವ್ಯಕ್ತಪಡಿಸಿತ್ತು. ಕೊನೆಗೆ ಭಾರತ ತಾಂತ್ರಿಕ ಸಮಸ್ಯೆಯಿಂದ ಈ ಕ್ಷಿಪಣಿ ಉಡಾವಣೆಯಾಗಿದೆ ಎಂದು ಹೇಳಿ ವಿಷಾದ ವ್ಯಕ್ತಪಡಿಸಿ ತನಿಖೆ ನಡೆಸುವುದಾಗಿ ಹೇಳಿತ್ತು. ತನಿಖೆಯ ಬಳಿಕ ವಾಯುಸೇನೆಯ ಇಮೇಜ್‌ಗೆ ಧಕ್ಕೆ ತಂದ ಹಿನ್ನೆಲೆಯಲ್ಲಿ ವಿಂಗ್ ಕಮಾಂಡರ್ ಅಭಿನವ್ ಶರ್ಮಾ ಅವರನ್ನು ಸೇವೆಯಿಂದಲೇ ವಜಾಗೊಳಿಸಿತ್ತು. ಈ ಕ್ಷಿಪಣಿ ಪ್ರಕರಣದಿಂದ ಭಾರತ ಸರ್ಕಾರಕ್ಕೆ 24 ಕೋಟಿ ರೂ. ನಷ್ಟವಾಗಿತ್ತು.
ಶಸ್ತ್ರಾಸ್ರ್ತ ಮಾರಾಟ ಹೆಚ್ಚಳ:
ಶಸ್ತ್ರಾಸ್ತ್ರಗಳನ್ನು ಆಮದು ಮಾಡುಕೊಳ್ಳುವ ಟಾಪ್ ರಾಷ್ಟ್ರಗಳಲ್ಲಿ ಭಾರತ ಮೊದಲ ಸ್ಥಾನದಲ್ಲಿತ್ತು. ಆದರೆ ರಷ್ಯಾದೊಂದಿಗಿನ ಯುದ್ಧದಿಂದಾಗಿ ಉಕ್ರೇನ್ ಮೊದಲ ಸ್ಥಾನಕ್ಕೆ ಜಿಗಿದರೆ ಭಾರತ ಎರಡನೇ ಸ್ಥಾನಕ್ಕೆ ಜಾರಿದೆ. ಆದರೆ ಈಗ ಭಾರತ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡುವತ್ತಾ ಸಾಗುತ್ತಿದೆ. ಇದರ ಭಾಗವಾಗಿ ಈಗ ಭಾರತ ವಿಶ್ವದ ಹಲವು ದೇಶಗಳಿಗೆ ಬ್ರಹ್ಮೋಸ್ ಕ್ಷಿಪಣಿಯನ್ನು ರಫ್ತು ಮಾಡಲು ಮಾತುಕತೆ ನಡೆಸುತ್ತಿದೆ.
ಸರ್ಕಾರದ ಅಂಕಿಅಂಶಗಳ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ರಫ್ತು ಮಾಡಲಾದ ಪ್ರಮುಖ ರಕ್ಷಣಾ ಸಾಧನಗಳಲ್ಲಿ ಸಿಮ್ಯುಲೇಟರ್, ಅಶ್ರುವಾಯು ಲಾಂಚರ್, ಟಾರ್ಪಿಡೊ-ಲೋಡಿಂಗ್ ಮೆಕ್ಯಾನಿಸಂ, ಅಲಾರ್ಮ್ ಮಾನಿಟರಿಂಗ್ ಮತ್ತು ಕಂಟ್ರೋಲ್, ನೈಟ್ ವಿಷನ್ ಮಾನೋಕ್ಯುಲರ್ ಮತ್ತು ಬೈನಾಕ್ಯುಲರ್, ಅಗ್ನಿಶಾಮಕ ನಿಯಂತ್ರಣ ವ್ಯವಸ್ಥೆಗಳು, ಶಸ್ತ್ರಸಜ್ಜಿತ ರಕ್ಷಣಾ ವಾಹನ, ಶಸ್ತ್ರಾಸ್ತ್ರಗಳನ್ನು ಪತ್ತೆ ಹಚ್ಚುವ ರಾಡಾರ್, ಹೈ ಫ್ರಿಕ್ವೆನ್ಸಿ ರೇಡಿಯೊ ಇತ್ಯಾದಿಗಳನ್ನು ರಫ್ತು ಮಾಡಿವೆ.
ಇಟಲಿ, ಶ್ರೀಲಂಕಾ, ರಷ್ಯಾ, ಮಾಲ್ಡೀವ್ಸ್, ಮಾರಿಷಸ್, ನೇಪಾಳ, ಫ್ರಾನ್ಸ್, ಶ್ರೀಲಂಕಾ, ಈಜಿಪ್ಟ್, ಇಸ್ರೇಲ್, ಭೂತಾನ್, ಯುಎಇ, ಸೌದಿ ಅರೇಬಿಯಾ, ಇಥಿಯೋಪಿಯಾ, ಫಿಲಿಪೈನ್ಸ್, ಪೋಲೆಂಡ್, ಸ್ಪೇನ್ ಮತ್ತು ಚಿಲಿ ದೇಶಗಳು ರಫ್ತು ಲಿಸ್ಟ್‌ನಲ್ಲಿವೆ.
2029ರ ವೇಳೆಗೆ ಭಾರತ 50 ಸಾವಿರ ಕೋಟಿ ರೂ. ಮೌಲ್ಯದ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡಬೇಕೆಂಬ ಗುರಿಯನ್ನು ಕೇಂದ್ರ ಸರ್ಕಾರ ಹಾಕಿಕೊಂಡಿದೆ. ಈ ಗುರಿಯನ್ನು ತಲುಪಬೇಕಾದರೆ ಸರ್ಕಾರ ಬಹಳ ಶ್ರಮಪಡಬೇಕಾದ ಅಗತ್ಯವಿದೆ.