ಜಮ್ಮು ಮತ್ತು ಕಾಶ್ಮೀರದ (Jammu and Kashmir) ನೂತನ ಮೀಸಲಾತಿ ನೀತಿಯ (Reservation Policy) ವಿರುದ್ಧ ಸಾರ್ವಜನಿಕರು ಹಾಗೂ ರಾಜಕೀಯ ಮುಖಂಡರಿಂದ ಪರ ಹಾಗೂ ವಿರೋಧದ ಧ್ವನಿ ಕೇಳಿಬರುತ್ತಿದೆ. ಈ ನೂತನ ಮೀಸಲಾತಿ ವಿರುದ್ಧ ಪ್ರತಿಭಟನೆಗಳು ಸಹ ನಡೆಯುತ್ತಿವೆ. ಈ ನೀತಿ ಕೆಲ ವರ್ಗಗಳಿಗೆ ಹೆಚ್ಚಿನ ಮೀಸಲು ಹಾಗೂ ಇನ್ನೂ ಕೆಲವರಿಗೆ ತೀರ ಕಡಿಮೆ ಅವಕಾಶವನ್ನು ಕೊಡುತ್ತದೆ ಎಂಬುದು ಪ್ರತಿಭಟನಾಕಾರರ ವಾದ.
ಲೋಕಸಭೆಯು ಡಿ.2023 ರಲ್ಲಿ ಜಮ್ಮು ಮತ್ತು ಕಾಶ್ಮೀರ ಮೀಸಲಾತಿ (ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸಿತು. ಇದು ಉದ್ಯೋಗ, ಶಿಕ್ಷಣ ಸಂಸ್ಥೆಗಳು ಮತ್ತು ಜಮ್ಮು ಮತ್ತು ಕಾಶ್ಮೀರದ ಮೀಸಲು ಕ್ಷೇತ್ರಗಳಿಗೆ ಪರಿಶಿಷ್ಟ ಪಂಗಡಗಳ (ST) ವರ್ಗಕ್ಕೆ ಮೀಸಲಾತಿಯನ್ನು ಒದಗಿಸುತ್ತದೆ. ಈ ಮಸೂದೆಯು ಪಹಾರಿ ಜನಾಂಗ, ಪದಾರಿ ಬುಡಕಟ್ಟುಗಳು, ಕೋಲಿಗಳು ಮತ್ತು ಗಡ್ಡಾ ಬ್ರಾಹ್ಮಣ ಜನಾಂಗಕ್ಕೆ ಎಸ್‌ಟಿ ಸ್ಥಾನಮಾನವನ್ನು ನೀಡುವ ಮೂಲಕ ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ.
Advertisement
ಹೊಸ ಮೀಸಲಾತಿ ವ್ಯವಸ್ಥೆಯು ಅಲ್ಪಸಂಖ್ಯಾತ ಬುಡಕಟ್ಟುಗಳಿಗೆ ಉದ್ಯೋಗದಲ್ಲಿ 60% ಸ್ಥಾನಗಳನ್ನು ನೀಡುತ್ತದೆ. ಇನ್ನೂ ಉಳಿದ 40% ಮೀಸಲಾತಿ ಬಹುಸಂಖ್ಯಾತರಿಗೆ ಸಿಗಲಿದೆ. ಹೊಸ ನೀತಿಯಿಂದ ನಮಗೆ ಸಮಸ್ಯೆಯಾಗಲಿದೆ ಎಂದು ಮೀಸಲಾತಿ ವಿರುದ್ಧ ಧ್ವನಿ ಎತ್ತಿರುವ ಬಹುಸಂಖ್ಯಾತರು ಆರೋಪಿಸಿದ್ದಾರೆ. ಈ ಮೂಲಕ ಜಮ್ಮು ಮತ್ತು ಕಾಶ್ಮೀರದಲ್ಲಿ ಮೀಸಲಾತಿ ವಿಷಯ ಮತ್ತೊಮ್ಮೆ ಸಾರ್ವಜನಿಕ ಚರ್ಚೆ ಮತ್ತು ರಾಜಕೀಯ ಚರ್ಚೆಯ ಕೇಂದ್ರ ಬಿಂದುವಾಗಿದೆ.
Advertisement
Advertisement
ಏನಿದು ನೂತನ ಮೀಸಲಾತಿ ನೀತಿ?
ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ನೇತೃತ್ವದ ಆಡಳಿತವು 2005ರ ಜಮ್ಮು ಮತ್ತು ಕಾಶ್ಮೀರ ಮೀಸಲಾತಿ ನಿಯಮಗಳನ್ನು ತಿದ್ದುಪಡಿ ಮಾಡಿತು. ಈ ಹೊಸ ತಿದ್ದುಪಡಿ ಮೂಲಕ ಸಾಮಾನ್ಯ ವರ್ಗದ ಮೀಸಲಾತಿಯ ಪ್ರಮಾಣವನ್ನು ಕಡಿಮೆ ಮಾಡಿತು. ಈ ಮೂಲಕ ಪಹಾರಿಗಳು ಮತ್ತು ಇತರ ಮೂರು ಬುಡಕಟ್ಟುಗಳಿಗೆ 10% ರಷ್ಟು ಮೀಸಲಾತಿಯನ್ನು ಅನುಮೋದಿಸಿತು. ಇದರಿಂದ ಪರಿಶಿಷ್ಟ ಪಂಗಡ (ST) ವರ್ಗದ ಅಡಿಯಲ್ಲಿ ಒಟ್ಟು ಮೀಸಲಾತಿಗಳನ್ನು 20%ಗೆ ಏರಿಕೆ ಆಯಿತು.
Advertisement
ಮೀಸಲಾತಿ ನೀತಿಯ ಮರುಪರಿಶೀಲನೆಗೆ ಹೆಚ್ಚಿದ ಒತ್ತಾಯ
ನೂತನ ಮೀಸಲಾತಿ ನೀತಿಯು ರಾಜಕಾರಣಿಗಳು ಮತ್ತು ವಿದ್ಯಾರ್ಥಿಗಳ ಟೀಕೆಯನ್ನು ಎದುರಿಸುತ್ತಿದೆ. ಈ ನೀತಿಯಿಂದ ಅನ್ಯಾಯವಾಗಿದೆ, ಮೀಸಲಾತಿ ನೀತಿಯನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿ ಕಾಶ್ಮೀರದ ಸಿಎಂ ಒಮರ್ ಅಬ್ದುಲ್ಲಾ (Omar Abdullah) ಅವರ ನಿವಾಸದ ಹೊರಗೆ ಪ್ರತಿಭಟನೆಗಳು ನಡೆದಿವೆ. ಇದರಿಂದಾಗಿ ಸರ್ಕಾರ ಮೀಸಲಾತಿ ನೀತಿ ಮರುಮೌಲ್ಯಮಾಪನ ಮಾಡಲು 3 ಸದಸ್ಯರ ಸಮಿತಿಯನ್ನು ರಚಿಸಿದೆ. ಅಲ್ಲದೇ ನೀತಿಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರವಾಗಿ ಹೈಕೋರ್ಟ್ ಸರ್ಕಾರದ ಪ್ರತಿಕ್ರಿಯೆಯನ್ನು ಕೇಳಿದೆ. ಹೀಗಿರುವಾಗ ಅವರ ಪಕ್ಷದ ನಾಯಕರು ನಡೆಸುತ್ತಿರುವ ಪ್ರತಿಭಟನೆ ಇದೀಗ ಒಮರ್ ಅಬ್ದುಲ್ಲಾ ಸರ್ಕಾರದ ಮೇಲೆ ಒತ್ತಡ ಹೆಚ್ಚಿಸುತ್ತಿದೆ.
ಸಿಎಂ ಒಮರ್ ಅಬ್ದುಲ್ಲಾ ಹೇಳಿದ್ದೇನು?
ಜಮ್ಮು ಮತ್ತು ಕಾಶ್ಮೀರದಲ್ಲಿ ಮೀಸಲಾತಿ ನೀತಿಯನ್ನು ಪರಿಶೀಲಿಸಲು ರಚಿಸಲಾದ ಸಂಪುಟ ಉಪ ಸಮಿತಿಯು ಆರು ತಿಂಗಳೊಳಗೆ ತನ್ನ ವರದಿಯನ್ನು ಸಲ್ಲಿಸಲಿದೆ. ವರದಿಯನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಸಧ್ಯ ಪ್ರತಿಭಟನೆ ಕೈಬಿಡುವಂತೆ ವಿದ್ಯಾರ್ಥಿಗಳಿಗೆ ಮನವಿ ಮಾಡಿದ್ದಾರೆ.
ಮೀಸಲಾತಿಗೆ ಹೊಸದಾಗಿ ಗುರುತಿಸಲ್ಪಟ್ಟ ಜಾತಿಗಳು
ಪದ್ದರಿ ಬುಡಕಟ್ಟು, ಪಹಾರಿ ಜನಾಂಗೀಯ ಗುಂಪು, ಗಡ್ಡಾ ಬ್ರಾಹ್ಮಣ ಮತ್ತು ಕೋಲಿ ಸಮುದಾಯಗಳನ್ನು ಒಳಗೊಂಡಂತೆ ಕಡಿಮೆ ಪ್ರಾತಿನಿಧ್ಯದ ಗುಂಪುಗಳಿಗೆ ಹೆಚ್ಚುವರಿ 10% ಮೀಸಲಾತಿಯನ್ನು ಒದಗಿಸಲಾಗಿದೆ.
ಹೊಸ ವಿವಾದ ಏನು?
ಕೆಲವು ರಾಜಕೀಯ ಮುಖಂಡರು ಮೀಸಲಾತಿ ನೀತಿಗೆ ಆಕ್ಷೇಪಣೆ ಎತ್ತಿದ್ದಾರೆ. ಅದರ ನ್ಯಾಯಸಮ್ಮತತೆ ಮತ್ತು ಪರಿಣಾಮವನ್ನು ಪ್ರಶ್ನಿಸಿದ್ದಾರೆ. ಈ ನೀತಿಯನ್ನು ಪರಿಚಯಿಸಿದಾಗ ಲೆಫ್ಟಿನೆಂಟ್ ಗವರ್ನರ್ ಆಡಳಿತದ ಸಮಯದಲ್ಲಿ ಯಾವುದೇ ಗಮನಾರ್ಹ ವಿರೋಧವಿರಲಿಲ್ಲ. ಆದರೆ ನೂತನ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ವಿವಾದ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಇದು ರಾಜಕೀಯ ಪ್ರೇರಿತ ಎಂಬ ಆರೋಪ ಸಹ ಇದೆ.
ಮೆಹಬೂಬಾ ಮುಫ್ತಿ ಹೇಳಿದ್ದೇನು?
ಇದು ಬಹಳ ಗಂಭೀರವಾದ ವಿಚಾರವಾಗಿದೆ. ಚಿಕ್ಕಂದಿನಿಂದಲೂ ನಮ್ಮ ಮಕ್ಕಳಿಗೆ ಕಷ್ಟಪಟ್ಟು ದುಡಿದು ಜೀವನದಲ್ಲಿ ಯಶಸ್ಸು ಗಳಿಸಲು ಹೇಳುತ್ತೇವೆ. ಆದರೆ ಇಂದು ಅರ್ಹತೆಯೇ ಅತಿ ದೊಡ್ಡ ಸವಾಲಾಗಿದೆ. ಪ್ರಸ್ತುತ ಮೀಸಲಾತಿ ನೀತಿಯು ಓಪನ್ ಮೆರಿಟ್ ವಿದ್ಯಾರ್ಥಿಗಳ ಮೇಲೆ ಅಸಮಾನವಾದ ಪರಿಣಾಮ ಬೀರುತ್ತಿದೆ ಎಂದು ಅವರು (Mehbooba Mufti) ಕಳವಳ ವ್ಯಕ್ತಪಡಿಸಿದ್ದಾರೆ.
ನಿರುದ್ಯೋಗ ನಿಜವಾದ ಸವಾಲು
ಜಮ್ಮು ಮತ್ತು ಕಾಶ್ಮೀರವು ನಿರುದ್ಯೋಗ ಬಿಕ್ಕಟ್ಟನ್ನು ಎದುರಿಸುತ್ತಿದೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (CMIE) ವರದಿ ಪ್ರಕಾರ 32.8% ನಿರುದ್ಯೋಗ ಇಲ್ಲಿದೆ. ಇದು ಭಾರತದಲ್ಲಿಯೇ ಅತ್ಯಧಿಕವಾಗಿದೆ. ಮರ್ವಾ, ಪದ್ದಾರ್, ವಾರ್ವಾನ್, ದುಡು, ಬನಿ ಮತ್ತು ಭಲೆಸ್ಸಾದಂತಹ ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿ, ಕಳಪೆ ಮೂಲಸೌಕರ್ಯ, ಅಸಮರ್ಪಕ ಶಿಕ್ಷಣ ಮತ್ತು ಸೀಮಿತ ಉದ್ಯೋಗಾವಕಾಶಗಳೊಂದಿಗೆ ಪರಿಸ್ಥಿತಿ ಈ ಹಂತದಲ್ಲಿದೆ.
ಈ ಪ್ರದೇಶಗಳಲ್ಲಿನ ಯುವಕರು ಸಾಮಾನ್ಯವಾಗಿ ಉದ್ಯೋಗಕ್ಕಾಗಿ ವಲಸೆ ಹೋಗುತ್ತಾರೆ. ಇದರಿಂದ ಮೀಸಲಾತಿಯ ವಿಷಯದಲ್ಲಿ ಜನರನ್ನು ವಿಭಜಿಸುವ ಬದಲು, ರಾಜಕೀಯ ನಾಯಕರು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳು, ಉತ್ತಮ ಶಿಕ್ಷಣ ಸೌಲಭ್ಯಗಳು ಮತ್ತು ಕೈಗಾರೀಕರಣದ ಮೂಲಕ ನಿರುದ್ಯೋಗವನ್ನು ಪರಿಹರಿಸುವತ್ತ ಗಮನಹರಿಸಬೇಕು ಎಂಬ ವಾದವೂ ಇನ್ನೊಂದೆಡೆ ಕೇಳಿ ಬಂದಿದೆ.
ಯಾರ್ಯಾರಿಗೆ ಎಷ್ಟೆಷ್ಟು ಮೀಸಲಾತಿ?
1. ವರ್ಗ A: (36%): ಪರಿಶಿಷ್ಟ ಜಾತಿಗಳು (SC 8%), ಇತರೆ ಹಿಂದುಳಿದ ವರ್ಗಗಳು (OBC 8%), ಪರಿಶಿಷ್ಟ ಪಂಗಡಗಳು (ST-1, 10%), ಪರಿಶಿಷ್ಟ ಪಂಗಡಗಳು (ST-2 10%)
2. ವರ್ಗ B: ಎಲ್ಲರಿಗೂ ಸಾಮಾನ್ಯ ಮೀಸಲಾತಿಗಳು (24%) – ಇವು ಸಾಮಾನ್ಯ ಮತ್ತು ಮೀಸಲು ವರ್ಗಗಳೆರಡಕ್ಕೂ ಅನ್ವಯಿಸುತ್ತವೆ. ಹಿಂದುಳಿದ ಪ್ರದೇಶಗಳ ನಿವಾಸಿಗಳು (RBA 10%), ನಿಯಂತ್ರಣ ರೇಖೆಯ ಪ್ರದೇಶಗಳು (ALC 4%), ಆರ್ಥಿಕವಾಗಿ ದುರ್ಬಲ ವಿಭಾಗಗಳು (EWS 10%)
3. ವರ್ಗ C: ಅಡ್ಡ ಮೀಸಲಾತಿಗಳು (10%) – ಇವುಗಳು ಎಲ್ಲಾ ವಿಭಾಗಗಳಿಗೂ ಅನ್ವಯಿಸುತ್ತವೆ (A, B, ಮತ್ತು D). ಮಾಜಿ ಸೈನಿಕರು 6%, ವಿಕಲಾಂಗ ವ್ಯಕ್ತಿಗಳು (PWD 4%),
4. ವರ್ಗ D: ಸಾಮಾನ್ಯ ವರ್ಗ (30%): ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ.