2016 ರಲ್ಲಿ, ಭಾರತ ಸರ್ಕಾರವು ತನ್ನ ಕರೆನ್ಸಿ (Indian Currency) ವ್ಯವಸ್ಥೆಯಲ್ಲಿನ ಎರಡು ದೊಡ್ಡ ಮೌಲ್ಯದ ಕರೆನ್ಸಿಗಳಾದ 500 ಮತ್ತು 1,000 ರೂ. ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿತು. ಈ ನೋಟುಗಳು ದೇಶದ ಚಲಾವಣೆಯಲ್ಲಿರುವ ಹಣದ ಶೇ.86 ರಷ್ಟಿದ್ದವು. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು 2016 ನವೆಂಬರ್ 8 ರಂದು ಎಲ್ಲಾ 500 ರೂ. ಮತ್ತು 1,000 ರೂ. ಬ್ಯಾಂಕ್-ನೋಟುಗಳ ಅಮಾನ್ಯೀಕರಣವನ್ನು ಘೋಷಿಸಿದರು. ಹೊಸದಾಗಿ ಪರಿಚಯಿಸಲಾದ 2,000 ರೂ. ಮತ್ತು 500 ರೂ.ಗೆ ಅವುಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶ ನೀಡಲಾಯಿತು. ಇದು ಭಾರತದ ಅರ್ಥ ವ್ಯವಸ್ಥೆಯಲ್ಲಿ (Indian Economy System) ದೊಡ್ಡ ಕ್ರಾಂತಿಕಾರಿ ಬದಲಾವಣೆಯನ್ನೇ ತಂದಿತ್ತು. ಎಟಿಎಂಗಳು ಮತ್ತು ಬ್ಯಾಂಕುಗಳ ಮುಂದೆ ಜನರು ನೋಟುಗಳ ವಿನಿಮಯಕ್ಕೆ ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಣ್ಣ ಉದ್ಯಮಗಳು ಮತ್ತು ಮನೆಮಂದಿಗೆ ನಗದುಕೊರತೆ ಉಂಟಾಗಿತ್ತು.
ಕಪ್ಪು ಹಣದ ವಿರುದ್ಧದ ಹೋರಾಟ, ನಕಲಿ ನೋಟುಗಳಿಗೆ ಕಡಿವಾಣ ಹಾಕುವುದು, ಅಕ್ರಮ ಹಣ ವರ್ಗಾವಣೆ, ತೆರಿಗೆ ವಂಚನೆ ತಡೆಯುವ ಉದ್ದೇಶದಿಂದ ಭಾರತದಲ್ಲಿ ನೋಟು ಅಪನಗದೀರಣ ಘೋಷಣೆ ಮಾಡಲಾಯಿತು. ಇದೀಗ 20 ವರ್ಷಗಳ ಬಳಿಕ ಅಂತಹದ್ದೇ ಕ್ರಾಂತಿಕಾರಕ ಬದಲಾವಣೆಗೆ ಜಪಾನ್ ಮುಂದಾಗಿದ್ದು, ಹೊಸ ಬ್ಯಾಂಕ್ ನೋಟುಗಳನ್ನ (Japan New Banknotes) ಪರಿಚಯಿಸಿದೆ. ಜಪಾನ್‌ನಲ್ಲಿ ಹೊಸ ನೋಟುಗಳ ಮುದ್ರಣಕ್ಕೆ ಕಾರಣ ಏನು? 20 ವರ್ಷಗಳ ಬಳಿಕ ಎಷ್ಟು ಮೌಲ್ಯದ ಮುಖಬೆಲೆಯ ನೋಟುಗಳನ್ನು ಪರಿಚಯಿಸಲಾಗುತ್ತಿದೆ? ಇದು ಆರ್ಥಿಕತೆಯ ಮೇಲೆ ಅಥವಾ ಸಣ್ಣ ಉದ್ಯಮಗಳ ಮೇಲೆ ಪರಿಣಾಮ ಬೀರಲಿದೆಯೇ ಎಂಬುದನ್ನು ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ? ಅದಕ್ಕೂ ಮುನ್ನ ಡಿಮಾನಿಟೈಸೇಷನ್ ಅಥವಾ ಅಪನಗದೀಕರಣ ಎಂದರೇನು ಎಂಬುದನ್ನು ತಿಳಿಯೋಣ…
Advertisement
Advertisement
ಡಿಮಾನಿಟೈಸೇಷನ್ ಎಂದರೇನು?
ಡಿಮಾನಿಟೈಸೇಷನ್ ಅಥವಾ ಅಪನಗದೀಕರಣ ಎನ್ನುವುದು ಕರೆನ್ಸಿಯ ಕಾನೂನು ಮಾನ್ಯತೆಯನ್ನು ರದ್ದುಗೊಳಿಸುವ ಪ್ರಕ್ರಿಯೆ. ರಾಷ್ಟ್ರೀಯ ಕರೆನ್ಸಿಯ ಬದಲಾವಣೆ ಇದ್ದಾಗಲೆಲ್ಲಾ ಅದು ಸಂಭವಿಸುತ್ತದೆ. ಉದಾಹರಣೆಗೆ 2016ರಲ್ಲಿ ಭಾರತದಲ್ಲಿ ಹಳೆಯ 500 ಮತ್ತು 1,000 ರೂ. ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಲಾಗಿತ್ತು. ರದ್ದಾದ ನೋಟಿನ ಬದಲು ಹೊಸ ನೋಟು ಅಥವಾ ನಾಣ್ಯಗಳೊಂದಿಗೆ ಬದಲಾಯಿಸಲಾಗುತ್ತದೆ. ಕೆಲವೊಮ್ಮೆ, ಒಂದು ದೇಶವು ಹಳೆಯ ಕರೆನ್ಸಿಯನ್ನು ಹೊಸ ಕರೆನ್ಸಿಯೊಂದಿಗೆ ಸಂಪೂರ್ಣವಾಗಿ ಬದಲಾಯಿಸುತ್ತದೆ.
Advertisement
Advertisement
ಜಪಾನ್‌ನಲ್ಲಿ ಹೊಸ ನೋಟು ಮುದ್ರಣ ಇದೇ ಮೊದಲಾ?
ಈ ಪ್ರಶ್ನೆಗೆ ಖಂಡಿತಾ ಇಲ್ಲಾ ಅಂದೇ ಉತ್ತರ ಸಿಗುತ್ತದೆ. 20 ವರ್ಷಗಳ ಬಳಿಕ ಹೊಸ ಬ್ಯಾಂಕ್ ನೋಟು ಚಲಾವಣೆಗೆ ಜಪಾನ್ ಮುಂದಾಗಿದೆ. 1885ರಲ್ಲಿ ತನ್ನ ಮೊದಲ ಬ್ಯಾಂಕ್ ನೋಟು ಚಲಾವಣೆಗೆ ತಂದಿದ್ದ ಜಪಾನ್ ಮತ್ತೊಮ್ಮೆ ಕ್ರಾಂತಿಕಾರಕ ಬದಲಾವಣೆಗೆ ಮುಂದಾಗಿದೆ. ಜಪಾನ್ ಹಣಕಾಸು ಇಲಾಖೆ ಮೂಲಗಳ ಪ್ರಕಾರ ದೇಶದ ಇತಿಹಾಸದಲ್ಲಿ ಜಾರಿಗೊಳಿಸುತ್ತಿರುವ 53ನೇ ನೋಟು ಮುದ್ರಣ ಇದಾಗಿದೆ.
ಹೊಸ ನೋಟು ಜಾರಿಗೆ ಕಾರಣ ಏನು?
ಮೇಲ್ನೋಟಕ್ಕೆ ನಕಲಿ ನೋಟುಗಳನ್ನು ತಡೆಯುವ ಉದ್ದೇಶದಿಂದ ಹೊಸ ನೋಟುಗಳನ್ನು ಚಲಾವಣೆಗೆ ತರಲಾಗುತ್ತಿದೆ ಎಂದು ತಿಳಿದುಬಂದಿದೆ. ಏಕೆಂದರೆ 2020ರಲ್ಲಿ ಜಪಾನ್‌ನಲ್ಲಿ 2,693 ನಕಲಿ ನೋಟು ವಿನಿಮಯ ಪ್ರಕರಣಗಳು ವರದಿಯಾಗಿದ್ದರೆ, 2023ರಲ್ಲಿ 681 ಪ್ರಕರಣಗಳು ಕಂಡುಬಂದಿದೆ. ಆದ್ರೆ ಅಸಲಿ ಕಾರಣವೇ ಬೇರೆಯಿದೆ. ಇಡೀ ವಿಶ್ವವೇ ಡಿಜಿಟಲ್ ಪಾವತಿಗೆ ಒಗ್ಗಿಕೊಂಡಿದೆ. ಹಾಗಾಗಿ ಜಪಾನ್ ಸಹ ಡಿಜಿಟಲ್ ಪಾವತಿಗೆ ಒತ್ತು ನೀಡಿ ನಗದು ರಹಿತ ಪಾವತಿಯನ್ನು ಹೆಚ್ಚಿಸುವ ಉದ್ದೇಶ ಹೊಂದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಎಷ್ಟೆಷ್ಟು ಬೆಲೆಯ ನೋಟುಗಳು ಜಾರಿ?
10,000, 5,000, 1,000 ಜಪಾನ್ ಕರೆನ್ಸಿ ಯೇನ್ ಬೆಲೆಯ ನೋಟುಗಳನ್ನು ಮುದ್ರಿಸಲಾಗುತ್ತಿದೆ. ಇದೇ ತಿಂಗಳ ಜುಲೈ 3 ರಿಂದ ನೋಟುಗಳನ್ನು ಜಾರಿಗೆ ತರಲಾಗಿದೆ.
ಹೊಸ ನೋಟುಗಳ ವಿಶೇಷತೆ ಏನು?
* ಈ ಯೇನ್ ಕರೆನ್ಸಿ ಮೇಲೆ ಬ್ರ್ಯಾಂಡಿಂಗ್ ಹಾಗೂ ಹೆಚ್ಚಿನ ಸುರಕ್ಷತೆಯುಳ್ಳ ಹೊಲೊಗ್ರಾಫಿಕ್ ಸ್ಟ್ರೈಪ್‌ಗಳನ್ನು ಬಳಸಲಾಗಿದೆ. ಹೀಗಾಗಿ 3ಡಿ ಪರಿಣಾಮ ಉಂಟುಮಾಡುವ ಹೊಲೊಗ್ರಾಫಿಯನ್ನು ಬಳಸುವ ಮೊದಲ ದೇಶ ಜಪಾನ್ ಎಂದೂ ಹೇಳಿಕೊಂಡಿದೆ.
* ಎಲ್ಲ ವಯಸ್ಸಿನ ಜನರು ಸುಲಭವಾಗಿ ಕರೆನ್ಸಿ ಗುರುತಿಸಲು ಸಹಾಯಕವಾಗುವಂತೆ ವಿಸ್ತೃತ ಅರೇಬಿಕ್ ಅಂಕಿ ಅಂಶಗಳನ್ನು ಬಳಸಲಾಗಿದೆ.
* ದೃಷ್ಟಿಹೀನ ವ್ಯಕ್ತಿಗಳು ಸ್ಪರ್ಶದ ಮೂಲಕವೂ ನೋಟುಗಳನ್ನು ಗುರುತಿಸಲು ಬ್ರೈಲ್ ಮಾದರಿಯನ್ನು ಅಳವಡಿಸಲಾಗಿದೆ.
* ದೃಢೀಕರಣಕ್ಕಾಗಿ ಇಟಾಂಗ್ಲಿಯೋ ಮುದ್ರಣ ಮತ್ತು ವಾಟರ್‌ಮಾರ್ಕ್ ಸಹ ಒಳಗೊಂಡಿದೆ.
ಬ್ಯಾಂಕ್ ನೋಟುಗಳನ್ನು ಎಲ್ಲಿ ಪಡೆಯಬೇಕು?
ಹೊಸ ಬ್ಯಾಂಕ್ ನೋಟುಗಳನ್ನು ಬ್ಯಾಂಕ್ ಆಫ್ ಜಪಾನ್‌ನಲ್ಲಿ ಪಡೆಯಬೇಕು. ಶೀಘ್ರದಲ್ಲೇ ದೇಶದ ಎಲ್ಲಾ ಹಣಕಾಸು ಸಂಸ್ಥೆಗಳಿಗೆ ನೋಟುಗಳನ್ನು ತಲುಪಿಸಲಾಗುತ್ತದೆ. ಇದರೊಂದಿಗೆ ದೇಶದ ಎಲ್ಲಾ ಎಟಿಎಂ ಬ್ಯಾಂಕ್‌ಗಳಿಗೆ ತಲುಪಿದ ನಂತರ ಮಾರುಕಟ್ಟೆಯಲ್ಲಿ ಅಧಿಕೃತ ಚಲಾವಣೆ ಶುರುವಾಗಲಿದೆ. ಜಪಾನ್ ಟೈಮ್ಸ್ ಪ್ರಕಾರ ಜುಲೈ 5ರ ವೇಳೆಗೆ ನೋಟುಗಳ ಸಂಖ್ಯೆ 5 ಬಿಲಿಯನ್ ತಲುಪಿದೆ. 2025ರ ಅಂತ್ಯದ ವೇಳೆಗೆ 7.5 ಶತಕೋಟಿ ಹೊಸ ನೋಟುಗಳು ಚಲಾವಣೆಯಲ್ಲಿರುವ ನಿರೀಕ್ಷೆಯಿದೆ ಎಂದು ಹಣಕಾಸು ಇಲಾಖೆ ಹೇಳಿದೆ. ಅಲ್ಲದೇ ಹೊಸ ನೋಟುಗಳ ಚಲಾವಣೆ ಸಂದರ್ಭದಲ್ಲಿಯೂ ಹಳೆಯ ನೋಟುಗಳು ವಹಿವಾಟಿಗೆ ಮಾನ್ಯವಾಗಿರುತ್ತವೆ ಎಂದು ಹೇಳಿದೆ.
ಸ್ಥಳೀಯ ಉದ್ಯಮಗಳ ಮೇಲೆ ಪರಿಣಾಮ ಬೀರಲಿದೆಯೇ?
ಖಂಡಿತವಾಗಿಯೂ ಹೌದು… ಏಕೆಂದರೆ ಹೊರ ನೋಟುಗಳು ದೇಶದ ಮುಕ್ತ ಮಾರುಕಟ್ಟೆಯಲ್ಲಿ ಚಲಾವಣೆಗೆ ಬಂದ ನಂತರ ಬ್ಯಾಂಕ್, ರೈಲು ನಿಲ್ದಾಣ, ವಾಣಿಜ್ಯ ಮಳಿಗೆಗಳು ಮತ್ತು ಸೂಪರ್ ಮಾರ್ಕೆಟ್, ಮಾಲ್‌ಗಳು ಹೊಸ ನೋಟುಗಳನ್ನು ಸ್ವೀಕರಿಸಲು ಅನುಕೂಲವಾಗುವಂತೆ ಯಂತ್ರಗಳನ್ನು ನವೀಕರಿಸಬೇಕು ಎಂದು ಸರ್ಕಾರ ಹೇಳಿದೆ. ಈ ಕ್ರಮಕ್ಕೆ ಕನಿಷ್ಠ 10 ಲಕ್ಷ ಯೇನ್ ವೆಚ್ಚವಾಗುತ್ತದೆ. ಇದು ಸಣ್ಣ ಉದ್ಯಮಗಳ ಮೇಲೆ ದೊಡ್ಡ ಹೊಡೆತ ಬೀಳುತ್ತದೆ. ಕೆಲವೆಡೆ ಸಣ್ಣ ಉದ್ದಿಮೆದಾರರಿಗೆ 3 ಲಕ್ಷ ಯೇನ್ ವರೆಗೆ ಸಹಾಯಧನ ನೀಡಲು ಸರ್ಕಾರ ಮುಂದಾಗಿದೆ. ಆದ್ರೆ ಇದು ಆರ್ಥಿಕ ಹೊರೆ ತಗ್ಗಿಸುವಲ್ಲಿ ಯಾವ ರೀತಿ ಕೆಲಸ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.