ಭಾರತವನ್ನು ಡೆಡ್ ಎಕಾನಮಿ ಎಂದು ಕರೆದಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ವರಸೆ ಬದಲಾಯಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನನ್ನ ಸ್ನೇಹಿತ. ಅವರ ಜೊತೆ ಮಾತನಾಡಲು ಎದುರು ನೋಡುತ್ತೇನೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಒಂದೇ ವಾರದಲ್ಲಿ ಎರಡು ಬಾರಿ ಮೋದಿ ನನ್ನ ಸ್ನೇಹಿತ ಎಂದು ಕರೆಯುವ ಮೂಲಕ ವಿಶ್ವಕ್ಕೆ ಅಚ್ಚರಿ ನೀಡಿದ್ದಾರೆ. ಹೀಗಾಗಿ ದಿಢೀರ್ ಟ್ರಂಪ್‌ಗೆ ಭಾರತದ ಮೇಲೆ ಪ್ರೀತಿ ಬಂದಿದ್ದು ಯಾಕೆ? ಟ್ರಂಪ್ ಮಾತನ್ನು ನಾವು ನಂಬಬಹುದೇ? ಅಮೆರಿಕದ ʼವರಿʼ ಏನು ಇತ್ಯಾದಿ ವಿಚಾರಗಳನ್ನು ಇಲ್ಲಿ ವಿವರಿಸಲಾಗಿದೆ.
ತಲೆ ಕೆಡಿಸಿಕೊಳ್ಳದ ಭಾರತ:
ಡೊನಾಲ್ಡ್ ಟ್ರಂಪ್ (Donald Trump) ತೆರಿಗೆ ಸಮರ ಆರಂಭಿಸಿದ ಬಳಿಕ ಯುರೋಪ್ ಸೇರಿದಂತೆ ಹಲವು ದೇಶಗಳ ಮುಖ್ಯಸ್ಥರು ಅಮೆರಿಕಕ್ಕೆ ತೆರಳಿ ಮಾತುಕತೆ ನಡೆಸಿದ್ದರು. ಬೇರೆ ದೇಶಗಳಂತೆ ಭಾರತವು (India) ಅಮೆರಿಕದ ಜೊತೆ ಮಾತುಕತೆ ನಡೆಸುತ್ತಿತ್ತು. ಮಾತುಕತೆಯ ವೇಳೆ ಡೈರಿ ಮತ್ತು ಕೃಷಿ ಕ್ಷೇತ್ರವನ್ನು ಬಿಟ್ಟುಕೊಡುವುದಿಲ್ಲ ಎಂದು ಹೇಳಿತ್ತು. ಹಲವು ಸುತ್ತಿನ ಮಾತುಕತೆ ನಡೆದರೂ ಭಾರತ ತನ್ನ ಹಠವನ್ನು ಬಿಟ್ಟಿರಲಿಲ್ಲ. ಇದಕ್ಕೆ ಸಿಟ್ಟಾದ ಟ್ರಂಪ್ ಭಾರತದ ಕೆಲ ವಸ್ತುಗಳ ಮೇಲೆ 25% ಸುಂಕ ವಿಧಿಸಿದರು.
ಅಮೆರಿಕ ಸುಂಕ ವಿಧಿಸುತ್ತಿದ್ದಂತೆ ಭಾರತ ಆಫ್ರಿಕಾ, ಏಷ್ಯಾ, ಯರೋಪ್ ಜೊತೆ ವ್ಯಾಪಾರ ಮಾತುಕತೆ ನಡೆಸಲು ಮುಂದಾಯಿತು. ಈ ಬೆನ್ನಲ್ಲೇ ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡುತ್ತಿರುವುದಕ್ಕೆ ದಂಡದ ರೂಪದಲ್ಲಿ ಟ್ರಂಪ್ ಮತ್ತೆ 25% ಸುಂಕ ಹೇರಿದರು. ಪರಿಣಾಮ ಆಮದಾಗುವ ಭಾರತದ ಕೆಲ ವಸ್ತುಗಳಿಗೆ ಈಗ ಅಮೆರಿಕದಲ್ಲಿ 50% ಸುಂಕ ವಿಧಿಸಲಾಗಿದೆ. ಇದನ್ನೂ ಓದಿ: ನನ್ನ ಆತ್ಮೀಯ ಸ್ನೇಹಿತ ಮೋದಿ ಜೊತೆ ಮಾತನಾಡಲು ಎದುರು ನೋಡುತ್ತಿದ್ದೇನೆ: ಟ್ರಂಪ್
ಭಾರತ ಯಾವುದೇ ತೀಕ್ಷ್ಣ ಪ್ರತಿಕ್ರಿಯೆ ನೀಡದೇ ಇದ್ದರೂ ಮೋದಿ (Narendra Modi) ಶಾಂಘೈ ಸಹಕಾರ ಒಕ್ಕೂಟದ ಶೃಂಗಸಭೆಯಲ್ಲಿ ಭಾಗಿಯಾಗಿದರು. 7 ವರ್ಷದ ಬಳಿಕ ಚೀನಾಗೆ ಭೇಟಿ ನೀಡಿದರು. ಮೋದಿ, ಕ್ಸಿ ಜಿನ್‌ಪಿಂಗ್, ಪುಟಿನ್ ಮಾತುಕತೆ ವಿಶ್ವದಲ್ಲಿ ಸಂಚಲನ ಮೂಡಿಸಿತು. ಅದರಲ್ಲೂ ಮೋದಿ ಮತ್ತು ಪುಟಿನ್ ಕಾರಿನಲ್ಲಿ ಇಬ್ಬರೇ ಸುಮಾರು 30 ನಿಮಿಷ ಮಾತನಾಡಿದ್ದು ದೊಡ್ಡ ಸುದ್ದಿಯಾಯಿತು. ಈ ಸಭೆಯ ಮುಗಿದ ಕೆಲ ದಿನದ ಬಳಿಕ ಟ್ರಂಪ್ ಅವರು ನಮ್ಮ ಸ್ನೇಹಿತನಾಗಿದ್ದ ಭಾರತ ಮತ್ತು ರಷ್ಯಾವನ್ನು ಚೀನಾಗೆ ಬಿಟ್ಟುಕೊಟ್ಟಿದ್ದೇವೆ ಎಂದು ಪೋಸ್ಟ್ ಮಾಡಿದ್ದರು.
ಇನ್ನೊಂದು ಕಡೆ ಟ್ರಂಪ್ ಅವರ ವ್ಯಾಪಾರ ಸಲಹೆಗಾರ ಪೀಟರ್ ನವರೋ, ಭಾರತವು ಬ್ಲಡ್ ಮನಿ ನೀಡಿ ರಷ್ಯಾದಿಂದ ತೈಲ ಖರೀದಿಸುತ್ತಿದೆ. ರಷ್ಯಾದಿಂದ ತೈಲ ಖರೀದಿಸುವ ಮೂಲಕ ಬ್ರಾಹ್ಮಣರು ಶ್ರೀಮಂತರಾಗುತ್ತಿದ್ದಾರೆ ಎಂದು ಹೇಳಿದ್ದಾರೆ. ಅಮೆರಿಕ ಏನೇ ಮಾತನಾಡಿದರೂ ತಲೆ ಕೆಡಿಸಿಕೊಳ್ಳದ ಭಾರತ ಜಿಎಸ್‌ಟಿ ದರವನ್ನು ಪರಿಷ್ಕರಿಸಿತು ಮತ್ತು ಬೇರೆ ದೇಶಗಳ ಜೊತೆ ವ್ಯಾಪಾರ ಮಾತುಕತೆ ನಡೆಸುತ್ತಿದೆ.
ಟ್ರಂಪ್‌ಗೆ ಭಾರತದ ಮೇಲೆ ಸಿಟ್ಯಾಕೆ?
ಟ್ರಂಪ್ ಸಿಟ್ಟಿಗೆ ಹಲವು ಕಾರಣಗಳನ್ನು ನೀಡಬಹುದು. ಭಾರತ ವಿಶ್ವದಲ್ಲೇ ಅತಿ ಹೆಚ್ಚು ಟ್ಯಾರಿಫ್ ಹಾಕುವ ದೇಶ ಎಂದು ಟ್ರಂಪ್ ಮೊದಲ ಅವಧಿಯಲ್ಲೇ ದೂರಿದ್ದರು. ಎರಡನೇಯದ್ದಾಗಿ ಭಾರತ ಈಗ ಮೊದಲಿನಂತೆ ಇಲ್ಲ. ಚೀನಾದಂತೆ ಉತ್ಪದನಾ ವಲಯ ದೇಶವಾಗಿ ನಿಧಾನವಾಗಿ ಬದಲಾಗುತ್ತಿದೆ. ಅಮೆರಿಕ ಮತ್ತು ಯರೋಪಿಯನ್ ಯೂನಿಯನ್‌ಗಳು ಮೊದಲಿನಿಂದಲೂ ಭಾರತ ಬಡ ದೇಶ ಎಂದು ಹೇಳುತ್ತಾ ಬಂದಿದ್ದವು. ಆದರೆ ಈಗ ಭಾರತ ವಿಶ್ವದ ನಾಲ್ಕನೇ ಅತಿ ದೊಡ್ಡ ಆರ್ಥಿಕತೆಯನ್ನು ಹೊಂದಿದ ದೇಶವಾಗಿ ಬದಲಾಗಿದೆ. ಅಷ್ಟೇ ಅಲ್ಲೇ ವಿಶ್ವದ ಜಿಡಿಪಿ ಬೆಳವಣಿಗೆಯಲ್ಲಿ ಭಾರತ ನಿರಂತರವಾಗಿ ಮೊದಲ ಸ್ಥಾನದಲ್ಲೇ ಮುನ್ನಡೆಯುತ್ತಿದೆ. ಇದನ್ನು ಅರಗಿಸಿಕೊಳ್ಳಲು ಅಮೆರಿಕಕ್ಕೆ ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕೆ ಭಾರತವನ್ನು ಮತ್ತೊಂದು ಚೀನಾ ಆಗಲು ನಾನು ಬಿಡುವುದಿಲ್ಲ. ಅಮೆರಿಕದ ಕಂಪನಿಗಳು ಅಮೆರಿಕದಲ್ಲಿ ಹೂಡಿಕೆ ಮಾಡಿ ಉದ್ಯೋಗ ಸೃಷ್ಟಿ ಮಾಡಬೇಕೆಂಬ ಬೇಡಿಕೆಯನ್ನು ಟ್ರಂಪ್ ಮುಂದಿಟ್ಟಿದ್ದಾರೆ.
ಇನ್ನೊಂದು ಮುಖ್ಯ ಕಾರಣ ಆಪರೇಷನ್ ಸಿಂಧೂರ ಕಾರ್ಯಾಚರಣೆ. ಆಪರಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಭಾರತ ಪಾಕಿಸ್ತಾನದ 11 ವಾಯುನೆಲೆಗಳ ಮೇಲೆ ದಾಳಿ ನಡೆಸಿತ್ತು. ಇದರಲ್ಲಿ ಮುಖ್ಯವಾಗಿ ರಾವಲ್ಪಿಂಡಿ ಬಳಿಯ ನೂರ್ ಖಾನ್ ವಾಯುನೆಲೆಯ ಮೇಲೆ ದಾಳಿ ನಡೆಸಿದ್ದು ಅಮೆರಿಕಕ್ಕೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಮೆರಿಕ ನಿರ್ಮಿತ ಎಫ್16 ಯುದ್ಧ ವಿಮಾನಗಳಿದ್ದ ಈ ನೆಲೆಯ ಮೇಲೆ ಭಾರತ ದಾಳಿ ಮಾಡಿತ್ತು. ದಾಳಿಯಿಂದಾಗಿ ಹಲವು ಎಫ್16 ಯುದ್ಧ ವಿಮಾನಗಳಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ. ಅಷ್ಟೇ ಅಲ್ಲದೇ ಇದನ್ನು ಅಮೆರಿಕದ ಅನಧಿಕೃತ ವಾಯು ನೆಲೆ ಎಂದೇ ಕರೆಯಲಾಗುತ್ತದೆ.
ಕೆಲ ರಕ್ಷಣಾ ವಿಶ್ಲೇಷಕರ ಪ್ರಕಾರ, ಎರಡನೇ ಮಹಾಯುದ್ಧದ ಸಮಯದಲ್ಲಿ ಜಪಾನ್ ಅಮೆರಿಕದ ಪರ್ಲ್ ಹರ್ಬರ್ ನೌಕಾ ನೆಲೆಯ ಮೇಲೆಯ ದಾಳಿ ನಡೆಸಿತ್ತು. ಈ ದಾಳಿಯ ನಂತರ ಅಮೆರಿಕ ನಿರ್ಮಿತ ಯುದ್ಧ ವಿಮಾನಗಳ ಮೇಲೆ ನಡೆದ ಭೀಕರ ದಾಳಿ ಇದು ಎಂಬ ವಿಶ್ಲೇಷಣೆ ಕೇಳಿ ಬಂದಿದೆ. ಭಾರತ ಮತ್ತು ಪಾಕ್ ನಡುವಿನ ಯುದ್ಧ ನಿಲ್ಲಿಸಲು ನಾನು ಕಾರಣ ಎಂದು ಟ್ರಂಪ್ ಹೇಳುತ್ತಾ ಬಂದಿದ್ದಾರೆ. ಆದರೆ ಭಾರತ ಇಲ್ಲಿಯವರೆಗೆ ಟ್ರಂಪ್‌ಗೆ ಯಾವುದೇ ಕ್ರೆಡಿಟ್ ನೀಡಿಲ್ಲ. ಆದರೆ ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದಕ್ಕೆ ಟ್ರಂಪ್ ಹೆಸರನ್ನು ನೊಬೆಲ್ ಪ್ರಶಸ್ತಿಗೆ ಶಿಫಾರಸು ಮಾಡಿದೆ.
ಪ್ರಧಾನಿ ಮೋದಿ ಜಿ7 ರಾಷ್ಟ್ರಗಳ ಶೃಂಗಸಭೆಯಲ್ಲಿ ಭಾಗಿಯಾಗಲು ಕೆನಡಾಗೆ ತೆರಳಿದ್ದರು. ಈ ಸಂದರ್ಭದಲ್ಲಿ ಟ್ರಂಪ್ ಮೋದಿ ಅವರನ್ನು ಅಮೆರಿಕಕ್ಕೆ ಬರುವಂತೆ ಆಹ್ವಾನ ನೀಡಿದ್ದರು. ಆದರೆ ಮೋದಿ ಪೂರ್ವ ನಿಗದಿತ ಕಾರ್ಯಕ್ರಮಗಳು ಇರುವ ಕಾರಣ ಬರಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು. ಆದರೆ ಟ್ರಂಪ್ ಆಹ್ವಾನ ನೀಡುವಾಗ ಪಾಕ್ ಸೇನಾ ಮುಖ್ಯಸ್ಥ ಆಸೀಫ್ ಮುನೀರ್ ಸಹ ಅಮೆರಿಕದಲ್ಲೇ ಇದ್ದರು. ಒಂದು ವೇಳೆ ಅಮೆರಿಕಕ್ಕೆ ತೆರಳಿದ್ದರೆ ಮೋದಿ ಮತ್ತು ಮುನೀರ್ ಜೊತೆ ನಿಂತು ಯುದ್ಧ ನಿಲ್ಲಿಸಿದ್ದು ನಾನು ಎಂದು ಪೋಸ್ ಕೊಡಲು ಟ್ರಂಪ್ ಮುಂದಾಗಿದ್ದರು. ಆದರೆ ಮೋದಿ ನಯವಾಗಿ ಟ್ರಂಪ್ ಆಹ್ವಾನವನ್ನು ತಿರಸ್ಕರಿಸಿದ್ದರು. ಇದಕ್ಕೆ ಉದಾಹರಣೆ ಎಂಬಂತೆ ಅಜರ್‌ಬೈಜನ್ ಮತ್ತು ಅರ್ಮೇನಿಯಾದ ಮಧ್ಯೆ ಕಿತ್ತಾಟ ನಡೆದಾಗ ಟ್ರಂಪ್ ಈ ಎರಡು ದೇಶಗಳ ಮುಖ್ಯಸ್ಥರನ್ನು ಶ್ವೇತ ಭವನಕ್ಕೆ ಕರೆಸಿ ಮಾತನಾಡಿದ್ದರು. ರಷ್ಯಾ- ಉಕ್ರೇನ್ ಮಧ್ಯೆ ಕದನ ವಿರಾಮಕ್ಕೆ ಸಂಬಂಧಿಸಿದಂತೆ ಪುಟಿನ್ ಜೊತೆ ಕರೆ ಮಾಡುವಾಗ ಯುರೋಪಿನ ನಾಯಕರನ್ನು ತನ್ನ ನಿವಾಸಕ್ಕೆ ಟ್ರಂಪ್ ಕರೆಸಿ ನಾನು ಬಾಸ್ ಎಂಬಂತೆ ವರ್ತಿಸಿದ್ದರು.
ಭಾರತದ ಜೊತೆಗಿನ ವ್ಯಾಪಾರ ಮಾತುಕತೆ ವಿಫಲವಾದ ನಂತರ ಟ್ರಂಪ್ ನಾಲ್ಕು ಬಾರಿ ಮೋದಿ ಅವರಿಗೆ ಕರೆ ಮಾಡಿದ್ದರು. ಆದರೆ ಮೋದಿ ಅವರು ಟ್ರಂಪ್ ಕರೆಯನ್ನು ತಿರಸ್ಕರಿಸಿದ್ದರು ಎಂದು ವರದಿಯಾಗಿದೆ. ಈ ಎಲ್ಲಾ ಕಾರಣಕ್ಕೆ ಟ್ರಂಪ್ ಭಾರತದ ವಿರುದ್ಧ ಸಿಟ್ಟಾಗಿರಬಹುದು ಎನ್ನಲಾಗುತ್ತಿದೆ.
ಈಗ ಭಾರತದ ಜಪ ಯಾಕೆ?
ಅಣುಬಾಂಬು ಸ್ಫೋಟ ಮಾಡಿದ್ದಕ್ಕೆ ಸಿಟ್ಟಾದ ಅಮೆರಿಕ ನಿರ್ಬಂಧ ಹೇರಿದ್ದರಿಂದ ಭಾರತ ರಷ್ಯಾದ ಕಡೆ ವಾಲಿತ್ತು. ಆದರೆ 2000ದ ಬಳಿಕ ಭಾರತ ಮತ್ತು ಅಮೆರಿಕ ಸಂಬಂಧ ನಿಧಾನವಾಗಿ ಸುಧಾರಣೆಯಾಗತೊಡಗಿತು. ಅದರಲ್ಲೂ ಮೋದಿ ಅವರ ಅವಧಿಯಲ್ಲಿ ಒಬಾಮಾ ಭಾರತಕ್ಕೆ ಬಂದಿದ್ದರು. ಅಷ್ಟೇ ಅಲ್ಲದೇ ಟ್ರಂಪ್ ಭಾರತಕ್ಕೆ ಆಗಮಿಸಿ ಅಹಮದಾಬಾದ್‌ನಲ್ಲಿ ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಉದ್ಘಾಟಿಸಿದ್ದರು. ಮೋದಿ ಅವರು ಟ್ರಂಪ್ ಅವರ ಪರ ಅಮೆರಿಕದಲ್ಲಿ ಪ್ರಚಾರ ಸಹ ನಡೆಸಿದ್ದರು. ಭಾರತ ಮತ್ತು ಅಮೆರಿಕದ ಸಂಬಂಧ ಉತ್ತಮವಾಗುತ್ತಿರುವ ಸಮಯದಲ್ಲೇ ಟ್ರಂಪ್ ಸುಂಕ ಸಮರ ಹೇರಿದ್ದರು.
ಸುಂಕ ಸಮರದ ಬಳಿಕ ಯಾರೂ ನೀರಿಕ್ಷೆ ಮಾಡದ ರೀತಿಯಲ್ಲಿ ಭಾರತ, ಚೀನಾ ಒಂದಾಗಿದೆ. ಸದ್ಯ ವಿಶ್ವದಲ್ಲಿ ಸದ್ಯ ಅಮೆರಿಕಕ್ಕೆ ಸಡ್ಡು ಹೊಡೆಯಬಲ್ಲ ಸಾಮರ್ಥ್ಯ ಇರುವ ದೇಶ ಯಾವುದು ಎಂದರೆ ಅದು ಚೀನಾ ಮಾತ್ರ. ಇನ್ನೊಂದು ಕಡೆ ಏಷ್ಯಾದಲ್ಲಿ ಚೀನಾಗೆ ಪ್ರತಿಸ್ಪರ್ಧಿಯಾಗಬಲ್ಲ ದೇಶ ಯಾವುದು ಎಂದರೆ ಅದು ಭಾರತ. ಹೀಗಾಗಿ ಭಾರತದ ಜೊತೆ ಅಮೆರಿಕದ ಸಂಬಂಧ ಸುಧಾರಿಸಿತ್ತು. ಆದರೆ ಟ್ರಂಪ್ ನೀತಿಯಿಂದಾಗಿ ಭಾರತ ಅಮೆರಿಕದ ಸಂಬಂಧ ಈಗ ಹಾಳಾಗಿದೆ.
ಭಾರತ, ಚೀನಾ, ರಷ್ಯಾದ ನಾಯಕರು ಒಂದಾಗಿ ಮಾತುಕತೆ ನಡೆಸಿದ ಬಳಿಕ ಅಮೆರಿಕದ ಮಾಜಿ ಅಧಿಕಾರಿಗಳು ಟ್ರಂಪ್ ನೀತಿಯನ್ನು ಪ್ರತಿನಿತ್ಯ ಟೀಕಿಸುತ್ತಿದ್ದಾರೆ. ರಷ್ಯಾ, ಚೀನಾಕ್ಕಿಂತಲೂ ಸದ್ಯ ಭಾರತ ನಮಗೆ ಅಗತ್ಯವಿದೆ. ಭಾರತ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದೆ. ಭಾರತವನ್ನು ನಾವು ಕಳೆದುಕೊಂಡರೆ ದೊಡ್ಡ ಮಾರುಕಟ್ಟೆಯನ್ನು ಕಳೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡುತ್ತಿದ್ದಾರೆ.
ಅಮೆರಿಕದವರು ಭಾರತದ ಪರ ಮಾತನಾಡಲು ಕಾರಣ ಸಹ ಇದೆ. ವಿಶ್ವದ ಆರ್ಥಿಕತೆಯಲ್ಲಿ ಅಮೆರಿಕ ನಂಬರ್ ಒನ್ ಹೌದು. ಆದರೆ ವಿಶ್ವದ ಜನಸಂಖ್ಯೆಯಲ್ಲಿ ಭಾರತ, ಚೀನಾ, ರಷ್ಯಾದ ರಾಷ್ಟ್ರಗಳ ಜನಸಂಖ್ಯೆ ಶೇ.34 ರಷ್ಟಿದೆ. ಅಮೆರಿಕದ ಜನಸಂಖ್ಯೆ 34 ಕೋಟಿ ಇದ್ದರೆ ಭಾರತದಲ್ಲಿ 144 ಕೋಟಿ, ಚೀನಾದಲ್ಲಿ 143 ಕೋಟಿ, ರಷ್ಯಾದಲ್ಲಿ 14.6 ಕೋಟಿ ಜನರಿದ್ದಾರೆ. ಅಂದರೆ ಅಮೆರಿಕ ಜನಸಂಖ್ಯೆಯ 9 ಪಟ್ಟು ಜನಸಂಖ್ಯೆ ಈ ದೇಶಗಳಲ್ಲಿ ಇದೆ. ಹಿಂದೆ ಜನಸಂಖ್ಯೆಯನ್ನು ನಾವು ಶಾಪ ಎಂದುಕೊಂಡಿದ್ದೆವು. ಆದರೆ ಈಗ ಜನಸಂಖ್ಯೆಯೇ ನಮ್ಮ ಶಕ್ತಿಯಾಗಿದೆ. ಅತಿ ದೊಡ್ಡ ಗ್ರಾಹಕ ಮಾರುಕಟ್ಟೆ ಭಾರತ ಮತ್ತು ಚೀನಾದಲ್ಲಿದೆ. ಭಾರತ ಮತ್ತು ಚೀನಾ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಗಳಾಗಿದ್ದೇವೆ. ಆದರೆ ತೈಲವನ್ನು ನಾವು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತೇವೆ. ಆದರೆ ಈಗ ತೈಲಕ್ಕೂ ನಮಗೆ ರಷ್ಯಾದಂತಹ ಸ್ನೇಹಿತ ಸಿಕ್ಕಿದ್ದಾನೆ.
ಅಮೆರಿಕ ಮತ್ತು ಯುರೋಪ್ ದೇಶಗಳು ವಿಶ್ವವನ್ನು ಹೇಗೆ ಬೇಕಾದರೂ ಆಡಿಸಬಹುದು ಎಂದು ಅಹಂಕಾರದಿಂದ ವರ್ತಿಸುತ್ತಿದ್ದವು. ಆದರೆ ರಷ್ಯಾ ಉಕ್ರೇನ್ ಯುದ್ಧದಿಂದ ಈ ದೇಶಗಳಿಗೂ ನಮ್ಮ ಆಟ ಇನ್ನುಮುಂದೆ ನಡೆಯುವುದಿಲ್ಲ ಎನ್ನುವುದು ಗೊತ್ತಾಗಿದೆ. ರಷ್ಯಾದ ಖಾತೆಯನ್ನು ಫ್ರೀಜ್ ಮಾಡಿದಾಗ ರಷ್ಯಾದ ಆರ್ಥಿಕತೆ ಪತನವಾಗಿ ಯುದ್ಧದಲ್ಲಿ ಸೋಲಬಹುದು ಎಂಬ ವಿಶ್ಲೇಷಣೆ ಕೇಳಿ ಬಂದಿತ್ತು. ಆದರೆ ಆದರೆ ಕಥೆ ಬದಲಾಗಿದ್ದು ಭಾರತ ಮತ್ತು ಚೀನಾ ರಷ್ಯಾದಿಂದ ಕಚ್ಚಾ ತೈಲವನ್ನು ಖರೀದಿಸಿತು. ಪರಿಣಾಮ ಆರ್ಥಿಕತೆ ಅಷ್ಟೊಂದು ಸಮಸ್ಯೆಯಾಗಲಿಲ್ಲ ಮತ್ತು ವಿಶ್ವದ ಕಚ್ಚಾ ತೈಲ ಬೆಲೆಯೂ ಏರಲಿಲ್ಲ.
ಒಂದು ವೇಳೆ ಅಮರಿಕ ಯುರೋಪ್ ಒತ್ತಡಕ್ಕೆ ಮಣಿದು ರಷ್ಯಾದಿಂದ ಕಚ್ಚಾ ತೈಲ ಖರೀದಿಯನ್ನು ನಿಲ್ಲಿಸಿದ್ದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಜಾಸ್ತಿಯಾಗಿ ಒಂದು ಬ್ಯಾರೆಲ್ ಕಚ್ಚಾ ತೈಲ ದರ 150 ರಿಂದ 200 ಡಾಲರ್‌ಗೆ ಏರಿಕೆಯಾಗುವ ಸಾಧ್ಯತೆಯಿತ್ತು. ಆದರೆ ಭಾರತ, ಚೀನಾದ ಪ್ರಯತ್ನದಿಂದ ಕಚ್ಚಾ ತೈಲ ದರ ನಿಯಂತ್ರಣದಲ್ಲಿದೆ. ಭಾರತ ತನ್ನ ಮಾತನ್ನು ಕೇಳುವುದಿಲ್ಲ ಎನ್ನುವುದು ತಿಳಿಯುತ್ತಿದ್ದಂತೆ ಟ್ರಂಪ್ ಈಗ ಸ್ವಲ್ಪ ಸಾಫ್ಟ್ ಆದಂತೆ ಕಾಣುತ್ತಿದೆ.
ಅಮೆರಿಕವನ್ನು ನಂಬಬಹುದೇ?
ಈಗ ಏನೋ ಟ್ರಂಪ್ ಮೋದಿ ನನ್ನ ಮಿತ್ರ ಎಂದು ಹೇಳುತ್ತಿದ್ದರೂ ಶ್ವೇತ ಭವನದ ಅಧಿಕಾರಿಗಳು ಭಾರತವನ್ನು ಗುರಿಯಾಗಿಸಿ ಹೇಳಿಕೆ ನೀಡುತ್ತಿದ್ದಾರೆ. ಇನ್ನೊಂದು ಕಡೆ ಟ್ರಂಪ್ ಯುರೋಪ್ ದೇಶಗಳಿಗೆ ಭಾರತದಿಂದ ಆಮದಾಗುವ ವಸ್ತುಗಳಿಗೆ 100% ತೆರಿಗೆ ವಿಧಿಸುವಂತೆ ಹೇಳಿರುವುದಾಗಿ ವರದಿಯಾಗಿದೆ.
ಆಪರೇಷನ್ ಸಿಂಧೂರದ ಬಳಿಕ ಟ್ರಂಪ್ ಪಾಕಿಸ್ತಾನಕ್ಕೆ ಆಪ್ತರಾಗಿದ್ದಾರೆ. ತನ್ನ ನಿವಾಸದಲ್ಲೇ ಪಾಕ್ ಸೇನಾ ಮುಖ್ಯಸ್ಥ ಮುನೀರ್‌ಗೆ ಔತಣ ನೀಡಿದ್ದಾರೆ. ಅಷ್ಟೇ ಅಲ್ಲದೇ ಟ್ರಂಪ್ ಕುಟುಂಬದ ಕ್ರಿಪ್ಟೋ ವ್ಯವಹಾರ ನಡೆಸಲು ಪಾಕ್ ಸರ್ಕಾರ ಸಹ ಒಪ್ಪಿಗೆ ನೀಡಿದೆ. ಹೀಗಾಗಿ ಟ್ರಂಪ್ ತನಗೆ ಏನು ಲಾಭ ಸಿಗುತ್ತೆ ಅದನ್ನು ನೋಡಿಕೊಂಡು ವ್ಯವಹಾರ ನಡೆಸುತ್ತಾರೆ. ಹಾಗೆ ನೋಡಿದರೆ ವ್ಯಾಪಾರ ವಹಿವಾಟಿನಲ್ಲಿ ಭಾರತದಿಂದ ಅಮೆರಿಕಕ್ಕೆ ಹೆಚ್ಚಿನ ವಸ್ತುಗಳು ರಫ್ತಾಗುತ್ತದೆ. ಈ ಕಾರಣಕ್ಕೆ ಟ್ರಂಪ್ ಹಾಲಿನ ಉತ್ಪನ್ನ ಮತ್ತು ಕೃಷಿ ಉತ್ಪನ್ನಗಳನ್ನು ಭಾರತದ ಮಾರುಕಟ್ಟೆಗೆ ನುಗ್ಗಿಸಲು ಬಹಳ ಪ್ರಯತ್ನ ಪಟ್ಟಿದ್ದರು. ಆದರೆ ಸರ್ಕಾರ ಅಮೆರಿಕದ ಒತ್ತಡಕ್ಕೆ ಬಗ್ಗಿರಲಿಲ್ಲ.
ಆಪರೇಷನ್ ಸಿಂಧೂರದ ಬಗ್ಗೆ ಭಾರತ ಅಧಿಕೃತವಾಗಿ ನಿರ್ಧಾರ ಪ್ರಕಟಿಸುವ ಮೊದಲೇ ಟ್ರಂಪ್ ಕದನ ವಿರಾಮ ನಡೆದಿದೆ. ನನ್ನಿಂದಾಗಿ ಅಣ್ವಸ್ತ್ರ ಹೊಂದಿದ ಎರಡು ದೇಶಗಳ ಕಾದಾಟ ನಿಂತಿದೆ ಎಂದು ಹಲವು ಬಾರಿ ಹೇಳಿದ್ದಾರೆ. ಟ್ರಂಪ್ ಮಾತಿಗೆ ಪಾಕ್ ಧ್ವನಿಗೂಡಿಸಿದ್ದರೆ ಭಾರತ ಪಾಕ್ ಮನವಿಯ ಮೇರೆಗೆ ಕದನ ವಿರಾಮ ಘೋಷಣೆಯಾಗಿದೆ ಎಂದು ಹೇಳಿದೆ. ಸದ್ಯ ಟ್ರಂಪ್ ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ಸ್ನೇಹಿತ ಎಂದು ಈಗ ಕರೆದರೂ ಕೆಲ ದಿನಗಳ ಹಿಂದೆ ಭಾರತವನ್ನ ಡೆಡ್ ಎಕಾನಮಿ ಎಂದು ಟ್ರಂಪ್ ಕರೆದು ವ್ಯಂಗ್ಯವಾಡಿದ್ದರು. ನಂಬಿಕೆ ಇದ್ದಲ್ಲಿ ವಿಶ್ವಾಸ ಇರುತ್ತದೆ. ಆದರೆ ಟ್ರಂಪ್ ಅವರ ಮೇಲೆ ಇಟ್ಟಿದ್ದ ನಂಬಿಕೆ ಹೋಗಿದೆ. ಹೀಗಾಗಿ ಭಾರತ ಅದರಲ್ಲೂ ಟ್ರಂಪ್ ಅವಧಿಯಲ್ಲಿ ಅಮೆರಿಕದ ಜೊತೆ ವ್ಯವಹಾರ ನಡೆಸುವಾಗ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ.